“ ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ಕೊಲೆಗಾರರ ಪಟ್ಟಣವಾದ ಜೆರುಸಲೇಮಿಗೆ ಆಪತ್ತು ಬರುವುದು. ಕೊಲೆಗಾರರ ನಗರಕ್ಕೆ ಕೇಡಾಗುವದು. ಜೆರುಸಲೇಮು ಕಿಲುಬು ಹಿಡಿದ ಹಂಡೆಯಂತಿದೆ. ಆ ಕಿಲುಬಿನ ಕಲೆಯನ್ನು ತೆಗೆಯಲಾಗುವುದೇ ಇಲ್ಲ. ಆ ಹಂಡೆಯು ಅಶುದ್ಧವಾಗಿರುವುದರಿಂದ ಅದರೊಳಗಿರುವ ಮಾಂಸವನ್ನೆಲ್ಲಾ ಹೊರಗೆ ತೆಗೆದುಬಿಡು. ಆ ಮಾಂಸವನ್ನು ನೀನಾಗಲಿ ಯಾಜಕರಾಗಲಿ ತಿನ್ನಕೂಡದು.
ಜೆರುಸಲೇಮು ಕಿಲುಬು ಹಿಡಿದ ಹಂಡೆಯಂತಿದೆ. ಯಾಕೆಂದರೆ ಆಕೆ ಸುರಿಸಿದ ರಕ್ತದ ಕಲೆಗಳು ಇನ್ನೂ ಇವೆ. ಆಕೆಯು ಆ ರಕ್ತವನ್ನು ನೆಲದ ಮೇಲೆ ಸುರಿಯದೆ ಬಂಡೆಯ ಮೇಲೆ ಸುರಿದು ಅದಕ್ಕೆ ಮಣ್ಣನ್ನೂ ಮುಚ್ಚಲಿಲ್ಲ.
ಆಕೆಯು ಸುರಿಸಿದ ರಕ್ತವು ಬರಿದಾದ ಬಂಡೆಯ ಮೇಲೆ ಮುಚ್ಚಲ್ಪಡದಂತೆ ನಾನೇ ಮಾಡಿದೆನು. ನಿರಪರಾಧಿಗಳನ್ನು ಆಕೆ ಕೊಂದದ್ದಕ್ಕೆ ಜನರು ಕೋಪಗೊಂಡು ಆಕೆಯನ್ನು ದಂಡಿಸಲೆಂದು ನಾನು ಹೀಗೆ ಮಾಡಿದೆನು.
“ ‘ನಿನ್ನ ವಿರುದ್ಧ ನನಗಿರುವ ಕೋಪ ತೃಪ್ತಿಗೊಳ್ಳುವ ತನಕ ನೀನು ಮತ್ತೆಂದಿಗೂ ಶುದ್ಧಳಾಗುವುದಿಲ್ಲ. ನಿನ್ನನ್ನು ತೊಳೆದು ಕಲೆಗಳನ್ನು ತೆಗೆಯಲು ನನಗೆ ಮನಸ್ಸಿತ್ತು. ಆದರೆ ಕಲೆಗಳು ಹೋಗಲಿಲ್ಲ. ಆದ್ದರಿಂದ ನಿನ್ನ ಮೇಲಿನ ನನ್ನ ಕೋಪವು ತಣ್ಣಗಾಗುವ ತನಕ ನಾನು ನಿನ್ನನ್ನು ತೊಳೆಯುವುದೇ ಇಲ್ಲ.
“ ‘ನಾನೇ ಯೆಹೋವನು. ನಿನಗೆ ಶಿಕ್ಷೆಯು ಬರುವದು ಎಂದು ನಾನು ಹೇಳಿದರೆ ಅದು ಬರುವಂತೆ ನಾನು ಮಾಡುವೆನು. ನಾನು ದಂಡನೆಯನ್ನು ತಡೆಹಿಡಿಯುವುದಿಲ್ಲ. ನಾನು ನಿನ್ನನ್ನು ಬಿಟ್ಟುಬಿಡುವುದಿಲ್ಲ. ಅದರ ಬಗ್ಗೆ ನನ್ನ ಮನಸ್ಸನ್ನು ನಾನು ಮಾರ್ಪಡಿಸುವುದಿಲ್ಲ. ನಿನ್ನ ಕೆಟ್ಟಕಾರ್ಯಗಳಿಗಾಗಿ ನಾನು ನಿನ್ನನ್ನು ಶಿಕ್ಷಿಸುವೆನು.’ ನನ್ನ ಒಡೆಯನಾದ ಯೆಹೋವನು ಇದನ್ನು ನುಡಿದಿದ್ದಾನೆ.”
“ನರಪುತ್ರನೇ, ನೀನು ನಿನ್ನ ಹೆಂಡತಿಯನ್ನು ಬಹಳವಾಗಿ ಪ್ರೀತಿಸುತ್ತಿ. ಆದರೆ ನಾನು ಆಕೆಯನ್ನು ನಿನ್ನಿದ ತೆಗೆದು ಬಿಡುವೆನು. ನಿನ್ನ ಹೆಂಡತಿಯು ಫಕ್ಕನೆ ತೀರಿಹೋಗುವಳು. ಆದರೆ ನೀನು ನಿನ್ನ ದುಃಖವನ್ನು ಪ್ರದರ್ಶಿಸಬಾರದು. ನೀನು ಗಟ್ಟಿಯಾಗಿ ರೋಧಿಸಬಾರದು. ಅಳಬೇಡ ಅಥವಾ ಕಣ್ಣೀರು ಸುರಿಸಬೇಡ.
ಮೌನವಾಗಿ ನರಳಾಡು. ನಿನ್ನ ಸತ್ತ ಹೆಂಡತಿಗಾಗಿ ಗಟ್ಟಿಯಾಗಿ ರೋಧಿಸಬೇಡ. ನೀನು ಯಾವಾಗಲೂ ತೊಡುವ ಬಟ್ಟೆಯನ್ನು ತೊಟ್ಟುಕೋ. ಮುಂಡಾಸವನ್ನು ಕಟ್ಟಿಕೋ. ಕಾಲಿಗೆ ಕೆರವನ್ನು ಮೆಟ್ಟಿಕೋ, ನಿನ್ನ ದುಃಖವನ್ನು ತೋರಿಸಲು ಮೀಸೆಯನ್ನು ಮುಚ್ಚಿಕೊಳ್ಳಬೇಡ. ಮರಣದ ಊಟವನ್ನು ಮಾಡದಿರು.”
ಆತನು ಹೇಳಿದ್ದೇನೆಂದರೆ: ಇಸ್ರೇಲ್ ಜನರಿಗೆ ಹೇಳು: ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ಇಗೋ, ನನ್ನ ಪವಿತ್ರಾಲಯವನ್ನು ಹಾಳುಮಾಡುವೆನು. ನೀವು ಆ ಸ್ಥಳದ ಬಗ್ಗೆ ಹೆಮ್ಮೆಯುಳ್ಳವರಾಗಿದ್ದು ಸ್ತುತಿಗೀತೆಗಳನ್ನು ಹಾಡುತ್ತೀರಿ. ಅದು ಶಕ್ತಿ ದೊರಕುವ ಸ್ಥಳ. ನೀವು ಆ ಆಲಯವನ್ನು ನೋಡುತ್ತಾ ಆನಂದಿಸುತ್ತೀರಿ; ಅದನ್ನು ಬಹಳವಾಗಿ ಪ್ರೀತಿಸುತ್ತೀರಿ. ಆದರೆ ನಾನು ಅದನ್ನು ಕೆಡವಿಬಿಡುವೆನು. ನೀವು ಬಿಟ್ಟುಹೋಗುವ ನಿಮ್ಮ ಮಕ್ಕಳು ಯುದ್ಧದಲ್ಲಿ ಸಾಯುವರು.
ನಾನು ನನ್ನ ಸತ್ತ ಹೆಂಡತಿಗೆ ಮಾಡಿದಂತೆಯೇ ನೀವೂ ಮಾಡುವಿರಿ. ನಿಮ್ಮ ದುಃಖವನ್ನು ತೋರಿಸಲು ನೀವು ನಿಮ್ಮ ಮೀಸೆಯನ್ನು ಮುಚ್ಚಿಕೊಳ್ಳುವುದಿಲ್ಲ. ಯಾರಾದರೂ ಸತ್ತಾಗ, ಗೋಳಾಡುವವರು ತಿನ್ನುವ ಆಹಾರವನ್ನು ನೀವು ತಿನ್ನುವುದಿಲ್ಲ.
ನೀವು ನಿಮ್ಮ ಮುಂಡಾಸವನ್ನು ಧರಿಸಿಕೊಂಡು ಕಾಲಿಗೆ ಕೆರವನ್ನು ಹಾಕಿಕೊಳ್ಳುವಿರಿ. ನೀವು ನಿಮ್ಮ ದುಃಖವನ್ನು ತೋರಿಸಿಕೊಳ್ಳುವುದಿಲ್ಲ. ನೀವು ಅಳುವದೂ ಇಲ್ಲ. ಆದರೆ ನೀವು ನಿಮ್ಮ ಪಾಪಗಳ ದೆಸೆಯಿಂದ ಕೃಶರಾಗುವಿರಿ. ನೀವು ಒಬ್ಬರಿಗೊಬ್ಬರು ದುಃಖದ ಶಬ್ದಗಳನ್ನು ಮಾಡುವಿರಿ.
ಯೆಹೆಜ್ಕೇಲನು ನಿಮಗೆ ಒಬ್ಬ ಮಾದರಿಯಾಗಿದ್ದಾನೆ. ಆತನು ಮಾಡಿದ ಹಾಗೆ ನೀವೂ ಮಾಡುವಿರಿ. ನಿಮ್ಮ ಶಿಕ್ಷಾ ಸಮಯವು ಹತ್ತಿರ ಬಂದಿದೆ. ನಾನು ಒಡೆಯನಾದ ಯೆಹೋವನೆಂದು ಆಗ ನೀವು ತಿಳಿಯುವಿರಿ.’ ”
(25-26) ಆತನು ಹೇಳಿದ್ದೇನೆಂದರೆ: “ನರಪುತ್ರನೇ, ನಾನು ಬಲಿಷ್ಠವಾದ ಆಲಯವನ್ನು ಜನರಿಂದ ತೆಗೆದುಬಿಡುವೆನು. ಆ ಸುಂದರ ಸ್ಥಳವು ಅವರಿಗೆ ಆನಂದವನ್ನು ಕೊಡುತ್ತಿದೆ. ಆ ಸ್ಥಳವನ್ನು ನೋಡಲು ಅವರು ಆತುರಪಡುವರು. ಆದರೆ ನಾನು ಆಲಯವನ್ನೂ ಮತ್ತು ಅವರ ಮಕ್ಕಳನ್ನೂ ಆ ಜನರಿಂದ ತೆಗೆದುಬಿಡುವೆನು. ಆ ದಿನದಂದು, ಪಾರಾದವನು ನಿನ್ನ ಬಳಿಗೆ ಬಂದು ನಾಶನದ ಕುರಿತಾದ ಕೆಟ್ಟ ಸುದ್ದಿಯನ್ನು ನಿನಗೆ ತಿಳಿಸುವನು.
ಆ ಸಮಯದಲ್ಲಿ ನಿನಗೆ ಆ ಮನುಷ್ಯನೊಂದಿಗೆ ಮಾತನಾಡಲಾಗುವುದು. ನೀನು ಆಮೇಲೆ ಎಂದಿಗೂ ಮೌನವಾಗಿರುವುದಿಲ್ಲ. ಈ ರೀತಿಯಾಗಿ ನೀನು ಅವರಿಗೆ ಒಂದು ಮಾದರಿಯಾಗುವಿ. ನಾನು ಯೆಹೋವನೆಂದು ಆಗ ಅವರು ತಿಳಿಯುವರು.”