1
|
ನಾನು ಕ್ರಿಸ್ತನ ಮಾದರಿಯನ್ನು ಅನುಸರಿಸುವಂತೆ ನೀವೂ ನನ್ನ ಮಾದರಿಯನ್ನು ಅನುಸರಿಸಿರಿ. ಅಧಿಕಾರಕ್ಕೆ ಅಧೀನರಾಗಿರಿ. |
2
|
ನೀವು ಎಲ್ಲಾ ವಿಷಯಗಳಲ್ಲಿ ನನ್ನನ್ನು ಜ್ಞಾಪಿಸಿಕೊಳುವುದರಿಂದ ನಿಮ್ಮನ್ನು ಹೊಗಳುತ್ತೇನೆ. ನಾನು ನಿಮಗೆ ಕೊಟ್ಟ ಉಪದೇಶಗಳನ್ನು ನೀವು ಸೂಕ್ಷ್ಮವಾಗಿ ಅನುಸರಿಸುತ್ತಿದ್ದೀರಿ. |
3
|
ಆದರೆ ನೀವು ಈ ವಿಷಯವನ್ನೂ ಅರ್ಥಮಾಡಿಕೊಳ್ಳಬೇಕೆಂಬುದು ನನ್ನ ಆಸೆ. ಪ್ರತಿಯೊಬ್ಬ ಪುರುಷನಿಗೂ ಕ್ರಿಸ್ತನು ಶಿರಸ್ಸಾಗಿದ್ದಾನೆ; ಸ್ತ್ರೀಗೆ ಪುರಷನು ಶಿರಸ್ಸಾಗಿದ್ದಾನೆ; ಕ್ರಿಸ್ತನಿಗೆ ದೇವರು ಶಿರಸ್ಸಾಗಿದ್ದಾನೆ. |
4
|
ಪುರುಷನು ಪ್ರವಾದಿಸುವಾಗ ಅಥವಾ ಪ್ರಾರ್ಥಿಸುವಾಗ ತನ್ನ ತಲೆಯ ಮೇಲೆ ಮುಸುಕು ಹಾಕಿಕೊಂಡರೆ ಅದು ಅವನ ಶಿರಸ್ಸಾದ ಕ್ರಿಸ್ತನಿಗೆ ಅಪಮಾನಕರವಾಗಿದೆ. |
5
|
ಆದರೆ ಸ್ತ್ರೀಯು ಪ್ರಾರ್ಥಿಸುವಾಗ ಅಥವಾ ಪ್ರವಾದಿಸುವಾಗ ತನ್ನ ತಲೆಗೆ ಮುಸುಕನ್ನು ಹಾಕಿಕೊಂಡಿರಬೇಕು. ಆಕೆಯು ತನ್ನ ತಲೆಗೆ ಮುಸುಕು ಹಾಕಿಲ್ಲದಿದ್ದರೆ, ಅದು ಆಕೆಯ ಶಿರಸ್ಸಾದ ಪುರುಷನಿಗೆ ಅಪಮಾನಕರವಾಗಿದೆ. ತಲೆಯನ್ನು ಬೋಳಿಸಿಕೊಂಡಿರುವ ಸ್ತ್ರೀಗೂ ಅವಳಿಗೂ ಯಾವ ವ್ಯತ್ಯಾಸವಿಲ್ಲ. |
6
|
ಸ್ತ್ರೀಯು ತನ್ನ ತಲೆಗೆ ಮುಸುಕು ಹಾಕಿಕೊಳ್ಳದಿದ್ದರೆ, ಆಕೆಯು ತನ್ನ ತಲೆಯನ್ನು ಬೋಳಿಸಿಕೊಳ್ಳಲಿ. ತಲೆಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ ತಲೆಯನ್ನು ಬೋಳಿಸಿಕೊಳ್ಳುವುದಾಗಲಿ ಸ್ತ್ರೀಗೆ ಅಪಮಾನಕರವಾಗಿದೆ. ಆದ್ದರಿಂದ ಆಕೆ ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು. |
7
|
ಆದರೆ ಪುರುಷನು ತನ್ನ ತಲೆಗೆ ಮುಸುಕು ಹಾಕಿಕೊಳ್ಳಬಾರದು. ಎಕೆಂದರೆ, ಪುರುಷನು ದೇವರ ಸ್ವರೂಪವಾಗಿದ್ದಾನೆ ಮತ್ತು ದೇವರ ಪ್ರಭಾವವಾಗಿದ್ದಾನೆ. ಆದರೆ ಸ್ತ್ರೀಯು ಪುರುಷನ ಪ್ರಭಾವವಾಗಿದ್ದಾಳೆ. |
8
|
ಪುರುಷನು ಸ್ತ್ರೀಯಿಂದ ಬಂದಿಲ್ಲ: ಸ್ತ್ರೀಯು ಪುರುಷನಿಂದ ಬಂದಳು. |
9
|
ಪುರುಷನು ಸೃಷ್ಟಿಸಲ್ಪಟ್ಟದ್ದು ಸ್ತ್ರೀಗೋಸ್ಕರವಲ್ಲ. ಆದರೆ ಸ್ತ್ರೀಯು ಪುರುಷನಿಗೋಸ್ಕರ ಸೃಷ್ಟಿಸಲ್ಪಟ್ಟಳು. |
10
|
ಆದಕಾರಣವೇ, ಸ್ತ್ರೀಯು ತಾನು ಅಧಿಕಾರದ ಅಧೀನದಲ್ಲಿರುವುದನ್ನು ಸೂಚಿಸಲು ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು. ದೇವದೂತರ ನಿಮಿತ್ತವಾಗಿಯೂ ಸ್ತ್ರೀ ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು. |
11
|
ಆದರೆ ಪ್ರಭುವಿನ ದೃಷ್ಟಿಯಲ್ಲಿ ಸ್ತ್ರೀಯು ಪುರುಷನಿಗೆ ಎಷ್ಟು ಮುಖ್ಯವೋ ಪುರುಷನೂ ಸ್ತ್ರೀಗೆ ಅಷ್ಟೇ ಮುಖ್ಯ. |
12
|
ಏಕೆಂದರೆ ಸ್ತ್ರೀಯು ಪುರುಷನಿಂದ ಬಂದದ್ದು ಸತ್ಯ. ಆದರೆ ಪುರುಷನು ಸಹ ಸ್ತ್ರೀಯ ಮೂಲಕವಾಗಿ ಹುಟ್ಟುತ್ತಾನೆ. ನಿಜವಾಗಿ ಸಮಸ್ತವೂ ದೇವರಿಂದಲೇ ಬರುತ್ತದೆ. |
13
|
ಹೀಗಿರಲಾಗಿ, ಸ್ತ್ರೀಯು ತನ್ನ ತಲೆಗೆ ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥಿಸುವುದು ಸರಿಯೋ? ನೀವೇ ತೀರ್ಮಾನಿಸಿರಿ. |
14
|
ಮನುಷ್ಯನ ಸ್ವಭಾವವೇ ತಿಳಿಸುವಂತೆ ಉದ್ದನೆಯ ಕೂದಲನ್ನು ಹೊಂದಿರುವುದು ಪುರುಷನಿಗೆ ಅವಮಾನಕರವಾಗಿದೆ. |
15
|
ಆದರೆ ಉದ್ದನೆಯ ಕೂದಲನ್ನು ಹೊಂದಿರುವುದು ಸ್ತ್ರೀಗೆ ಗೌರವಯುತವಾಗಿದೆ. ಉದ್ದನೆಯ ಕೂದಲನ್ನು ಸ್ತ್ರೀಯ ತಲೆಗೆ ಮುಸುಕನ್ನಾಗಿ ಕೊಡಲಾಗಿದೆ. |
16
|
ಕೆಲವು ಜನರು ಇದರ ಬಗ್ಗೆ ಇನ್ನೂ ವಾದಮಾಡ ಬಯಸಬಹುದು. ಆದರೆ ಈ ಸಂಪ್ರದಾಯವು ನಮ್ಮಲ್ಲಾಗಲಿ ದೇವರ ಸಭೆಗಳಲ್ಲಾಗಲಿ ಇಲ್ಲ. |
17
|
ಈಗ ನಾನು ನಿಮಗೆ ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ನಿಮ್ಮ ಸಭಾಕೂಟಗಳು ನಿಮಗೆ ಒಳ್ಳೆಯದನ್ನು ಮಾಡುವುದಕ್ಕಿಂತಲೂ ಹೆಚ್ಚು ಕೇಡುಗಳನ್ನೇ ಮಾಡುತ್ತವೆ. |
18
|
ಮೊದಲನೆಯದಾಗಿ, ನೀವು ಸಭೆಯಾಗಿ ಸೇರಿಬರುವಾಗ ನಿಮ್ಮಲ್ಲಿ ಪಂಗಡಗಳಿರುವುದಾಗಿ ಕೇಳಿದ್ದೇನೆ. ಇದು ನಿಜವೆಂದು ಸ್ವಲ್ಪಮಟ್ಟಿಗೆ ನಂಬುತ್ತೇನೆ. |
19
|
(ನಿಮ್ಮಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ನಿಮ್ಮಲ್ಲಿ ಯಾರು ನಿಜವಾಗಿಯೂ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.) |
20
|
ನೀವೆಲ್ಲರೂ ಒಟ್ಟಾಗಿ ಸೇರಿದಾಗ ನೀವು ಮಾಡುವಂಥದ್ದು ನಿಜವಾಗಿಯೂ ಪ್ರಭುವಿನ ರಾತ್ರಿಭೋಜನವಲ್ಲ. |
21
|
ಏಕೆಂದರೆ, ನೀವು ಊಟ ಮಾಡುವಾಗ, ಇತರರಿಗೋಸ್ಕರ ಕಾಯದೆ ಪ್ರತಿಯೊಬ್ಬರು ತಮ್ಮಷ್ಟಕ್ಕೆ ತಾವೇ ಊಟ ಮಾಡುತ್ತಾರೆ. ಕೆಲವು ಜನರಲ್ಲಿ ಊಟಮಾಡಲು ಸಾಕಷ್ಟು ಆಹಾರ ಇರುವುದಿಲ್ಲ. ಇನ್ನು ಕೆಲವರಲ್ಲಿ ತಿಂದು, ಕುಡಿದು ಮತ್ತರಾಗುವಷ್ಟು ಆಹಾರವಿರುತ್ತದೆ. |
22
|
ನೀವು ನಿಮ್ಮ ಸ್ವಂತ ಮನೆಗಳಲ್ಲಿ ತಿನ್ನಬಹುದು, ಕುಡಿಯಬಹುದು. ದೇವರ ಸಭೆಯು ಮುಖ್ಯವಾದದ್ದಲ್ಲವೆಂದು ನೀವು ಯೋಚಿಸುವಂತೆ ತೋರುತ್ತದೆ. ನೀವು ಬಡವರನ್ನು ನಾಚಿಕೆಗೆ ಗುರಿಮಾಡುತ್ತೀರಿ. ನಾನು ನಿಮಗೆ ಏನು ಹೇಳಲಿ? ನೀವು ಮಾಡುತ್ತಿರುವ ಈ ಕಾರ್ಯಕ್ಕೋಸ್ಕರ ನಾನು ನಿಮ್ಮನ್ನು ಹೊಗಳಬೇಕೇ? ನಾನು ನಿಮ್ಮನ್ನು ಹೊಗಳುವುದಿಲ್ಲ. |
23
|
ನಾನು ಪ್ರಭುವಿನಿಂದ ಹೊಂದಿಕೊಂಡದ್ದನ್ನೇ ನಿಮಗೆ ಉಪದೇಶಿಸಿದೆನು. ಅದೇನೆಂದರೆ: ಯೇಸುವನ್ನು ಕೊಲ್ಲುವುದಕ್ಕಾಗಿ ಒಪ್ಪಿಸಿಕೊಟ್ಟ ರಾತ್ರಿಯಲ್ಲಿ, ಆತನು ರೊಟ್ಟಿಯನ್ನು ತೆಗೆದುಕೊಂಡು, |
24
|
ಅದಕ್ಕಾಗಿ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು, "ಇದು ನನ್ನ ದೇಹ; ಇದನ್ನು ನಿಮಗೋಸ್ಕರ ಕೊಡಲಾಗಿದೆ. ನನ್ನನ್ನು ನೆನಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿರಿ” ಎಂದು ಹೇಳಿದನು. |
25
|
ಅದೇ ರೀತಿಯಲ್ಲಿ ಅವರು ಊಟ ಮಾಡಿದ ಮೇಲೆ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, "ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಯನ್ನು ಈ ದ್ರಾಕ್ಷಾರಸ ಸೂಚಿಸುತ್ತದೆ. ಈ ಹೊಸ ಒಡಂಬಡಿಕೆ ನನ್ನ ರಕ್ತದಿಂದ ಆರಂಭವಾಗುತ್ತದೆ. ನೀವು ಇದನ್ನು ಕುಡಿಯುವಾಗಲೆಲ್ಲಾ ನನ್ನನ್ನು ನೆನಸಿಕೊಳ್ಳವವರಾಗಿದ್ದೀರಿ” ಎಂದು ಹೇಳಿದನು. |
26
|
ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಕುಡಿಯುವಾಗಲೆಲ್ಲಾ ಪ್ರಭುವಿನ ಮರಣವನ್ನು ಆತನು ಬರುವ ತನಕ ಪ್ರಚುರಪಡಿಸುತ್ತೀರಿ. |
27
|
ಹೀಗಿರಲಾಗಿ ಒಬ್ಬನು ಪ್ರಭುವಿನ ರೊಟ್ಟಿಯನ್ನು ತಿನ್ನುವಾಗ, ಪಾತ್ರೆಯಲ್ಲಿ ಕುಡಿಯುವಾಗ ಇವುಗಳ ನಿಜವಾದ ಅರ್ಥವನ್ನು ಕಾರ್ಯಗಳ ಮೂಲಕ ತೋರ್ಪಡಿಸಬೇಕು, ಇಲ್ಲವಾದರೆ ಅವನು ಪ್ರಭುವಿನ ದೇಹಕ್ಕೂ ರಕ್ತಕ್ಕೂ ದೋಷಿಯಾಗುತ್ತಾನೆ. |
28
|
ಪ್ರತಿಯೊಬ್ಬ ವ್ಯಕ್ತಿಯು ರೊಟ್ಟಿಯನ್ನು ತಿನ್ನುವುದಕ್ಕಿಂತಲೂ ಪಾತ್ರೆಯಲ್ಲಿ ಕುಡಿಯುವುದಕ್ಕಿಂತಲೂ ಮುಂಚಿತವಾಗಿ ತನ್ನ ಹೃದಯವನ್ನು ಪರಿಶೀಲಿಸಿಕೊಳ್ಳಬೇಕು. |
29
|
ಯಾವನಾದರೂ ಪ್ರಭುವಿನ ದೇಹವೆಂದು ಗುರುತಿಸದೆ ರೊಟ್ಟಿಯನ್ನು ತಿಂದರೆ ಮತ್ತು ದ್ರಾಕ್ಷಾರಸವನ್ನು ಕುಡಿದರೆ ಅವನು ತಿಂದದ್ದಕ್ಕೂ ಕುಡಿದದ್ದಕ್ಕೂ ದೋಷಿಯೆಂಬ ತೀರ್ಪಿಗೆ ಒಳಗಾಗುತ್ತಾನೆ. |
30
|
ಆದಕಾರಣವೇ, ನಿಮ್ಮ ಸಭೆಯಲ್ಲಿರುವ ಅನೇಕರು ರೋಗಿಗಳೂ ಬಲಹೀನರೂ ಆಗಿದ್ದಾರೆ ಮತ್ತು ಅನೇಕರು ಸತ್ತು ಹೋದರು. |
31
|
ಆದರೆ ನಮ್ಮನ್ನು ನಾವೇ ಪರಿಶೋಧಿಸಿಕೊಂಡರೆ ನ್ಯಾಯತೀರ್ಪಿಗೆ ಒಳಗಾಗುವುದಿಲ್ಲ. |
32
|
ಆದರೆ ಪ್ರಭುವು ನಮಗೆ ತೀರ್ಪು ಮಾಡುವಾಗ, ನಮಗೆ ಸರಿಯಾದ ಮಾರ್ಗವನ್ನು ತೋರಿಸುವುದಕ್ಕಾಗಿಯೂ ಈ ಲೋಕದ ಇತರ ಜನರೊಂದಿಗೆ ನಮಗೆ ಅಪರಾಧಿಗಳೆಂಬ ತೀರ್ಪಾಗದಂತೆಯೂ ಆತನು ನಮ್ಮನ್ನು ಶಿಕ್ಷಿಸುತ್ತಾನೆ. |
33
|
ಆದ್ದರಿಂದ ನನ್ನ ಪ್ರಿಯ ಸಹೋದರ ಸಹೋದರಿಯರೇ, ನೀವು ಊಟ ಮಾಡುವುದಕ್ಕಾಗಿ ಒಟ್ಟಾಗಿ ಸೇರುವಾಗ ಒಬ್ಬರಿಗೊಬ್ಬರು ಕಾದುಕೊಂಡಿರಿ. |
34
|
ಒಬ್ಬ ವ್ಯಕ್ತಿಯು ಹಸಿವೆಗೊಂಡಿದ್ದರೆ, ಅವನು ಮನೆಯಲ್ಲಿ ಊಟ ಮಾಡಲಿ. ನೀವು ಹೀಗೆ ಮಾಡಿದರೆ, ನಿಮ್ಮ ಸಭಾಕೂಟವು ನಿಮ್ಮ ಮೇಲೆ ನ್ಯಾಯತೀರ್ಪನ್ನು ಬರಮಾಡುವುದಿಲ್ಲ. ಉಳಿದ ವಿಷಯಗಳ ಬಗ್ಗೆ ನೀವು ಏನು ಮಾಡಬೇಕೆಂಬುದನ್ನು ನಾನು ನಿಮ್ಮಲ್ಲಿಗೆ ಬಂದಾಗ ತಿಳಿಸಿಕೊಡುತ್ತೇನೆ. |
1-Corinthians 11:16 Kannada Language Bible Words basic statistical display
COMING SOON ...