ಆಮೇಲೆ ಆ ಮನುಷ್ಯನು ನನ್ನನ್ನು ಉತ್ತರದ್ವಾರದ ಮೂಲಕ ಹೊರಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಅವನು ನನ್ನನ್ನು ಪಶ್ಚಿಮದಲ್ಲಿರುವ ಅನೇಕ ಕೋಣೆಗಳಿದ್ದ ಕಟ್ಟಡಕ್ಕೆ ಕರೆದುಕೊಂಡು ಹೋದನು. ಅದು ಇಕ್ಕಟ್ಟಾದ ಸ್ಥಳದ ಪಶ್ಚಿಮದಲ್ಲಿತ್ತು ಮತ್ತು ಕಟ್ಟಡವು ಉತ್ತರ ಭಾಗದಲ್ಲಿತ್ತು.
ಆ ಕಟ್ಟಡವು ಮೂರು ಅಂತಸ್ತಿನಷ್ಟು ಎತ್ತರವಿದ್ದು ಅದಕ್ಕೆ ಅನೇಕ ಮೇಲಂತಸ್ತುಗಳಿದ್ದವು. ಇಪ್ಪತ್ತು ಮೊಳದ ಒಳಗಿನ ಪ್ರಾಕಾರವು ಆಲಯಕ್ಕೂ ಕಟ್ಟಡಕ್ಕೂ ನಡುವೆ ಇತ್ತು. ಎದುರಿನ ಕೋಣೆಗಳು ಹೊರಗಿನ ಪ್ರಾಕಾರದ ನೆಲಗಟ್ಟಿಗೆ ಮುಖಮಾಡಿದ್ದವು.
(5-6) ಈ ಕಟ್ಟಡವು ಮೂರು ಅಂತಸ್ತು ಎತ್ತರವಿದ್ದಾಗ್ಯೂ ಇದಕ್ಕೆ ಹೊರಗಿನ ಪ್ರಾಕಾರಕ್ಕೆ ಇದ್ದಂತೆ ಸ್ತಂಭಗಳಿರಲಿಲ್ಲ. ಮೇಲಿನ ಅಂತಸ್ತಿನ ಕೋಣೆಗಳು, ಮಧ್ಯ ಮತ್ತು ಕೆಳಗಿನ ಅಂತಸ್ತುಗಳ ಕೋಣೆಗಳಿಂದ ಹಿಂದಕ್ಕೆ ಇದ್ದವು. ಮೇಲಿನಂತಸ್ತು, ಮಧ್ಯ ಅಂತಸ್ತಿಗಿಂತ ಕಿರಿದಾಗಿತ್ತು. ಮತ್ತು ಮಧ್ಯ ಅಂತಸ್ತು ಕೆಳಗಿನ ಅಂತಸ್ತಿಗಿಂತ ಅಗಲದಲ್ಲಿ ಕಿರಿದಾಗಿತ್ತು. ಯಾಕೆಂದರೆ ಮೇಲಂತಸ್ತುಗಳು ಆ ಜಾಗವನ್ನು ಆಕ್ರಮಿಸಿದ್ದವು.
ಅವನು ನನಗೆ ಹೀಗೆ ಹೇಳಿದನು, “ನಿಯಮಿತ ಇಕ್ಕಟ್ಟಾದ ಸ್ಥಳದ ಬಳಿಯಲ್ಲಿ ಇರುವ ಉತ್ತರದ ಮತ್ತು ದಕ್ಷಿಣದ ಕೋಣೆಗಳು ಪವಿತ್ರವಾದವುಗಳು. ಅವು ಯೆಹೋವನಿಗೆ ಯಜ್ಞ ಸಮರ್ಪಿಸುವ ಯಾಜಕರಿಗಾಗಿ ಇವೆ. ಅಲ್ಲಿ ಯಾಜಕರು ಅತಿ ಪವಿತ್ರ ಕಾಣಿಕೆಪದಾರ್ಥಗಳನ್ನು ತಿನ್ನುವರು. ಮತ್ತು ಅಲ್ಲಿ ಅತಿ ಪವಿತ್ರ ಕಾಣಿಕೆಗಳನ್ನಿಡುವರು. ಯಾಕೆಂದರೆ ಆ ಸ್ಥಳವು ಪವಿತ್ರವಾದದ್ದು. ಅತಿ ಪವಿತ್ರ ಕಾಣಿಕೆ ಯಾವುವೆಂದರೆ, ಧಾನ್ಯಸಮರ್ಪಣೆ, ಪಾಪಪರಿಹಾರಕಯಜ್ಞ, ದೋಷಪರಿಹಾರಕಯಜ್ಞ, ಸಮಾಧಾನಯಜ್ಞದ ಕಾಣಿಕೆ.
ಈ ಪವಿತ್ರಸ್ಥಳಕ್ಕೆ ಪ್ರವೇಶಿಸುವ ಯಾಜಕರು ತಮ್ಮ ದೀಕ್ಷಾವಸ್ತ್ರಗಳನ್ನು ಅಲ್ಲಿಯೇ ತೆಗೆದಿಟ್ಟು ಹೊರಗಿನ ಪ್ರಾಕಾರಕ್ಕೆ ಹೋಗಬೇಕು. ಯಾಕೆಂದರೆ ಆ ವಸ್ತುಗಳು ಪವಿತ್ರವಾದದ್ದು. ಒಬ್ಬ ಯಾಜಕನು ಇತರ ಜನರು ಇರುವ ಸ್ಥಳಕ್ಕೆ ಹೋಗಬೇಕಿದ್ದಲ್ಲಿ ಅವನು ಕೋಣೆಗೆ ಬಂದು ದೀಕ್ಷಾವಸ್ತ್ರಗಳನ್ನು ತೆಗೆದಿಟ್ಟು ಬೇರೆ ವಸ್ತ್ರಗಳನ್ನು ಹಾಕಿಕೊಂಡು ಹೋಗಬೇಕು.”