ನಾವು ಸೆರೆಹಿಡಿಯಲ್ಪಟ್ಟ ಇಪ್ಪತ್ತೈದನೆ ವರ್ಷದ ಪ್ರಾರಂಭದ ತಿಂಗಳಿನ (ಅಕ್ಟೋಬರ್) ಹತ್ತನೇ ದಿವಸದಲ್ಲಿ ಯೆಹೋವನ ಆತ್ಮನಿಂದ ಪರವಶನಾದೆನು. ಬಾಬಿಲೋನಿಯರು ಜೆರುಸಲೇಮನ್ನು ವಶಪಡಿಸಿಕೊಂಡ ಹದಿನಾಲ್ಕನೇ ವರ್ಷದಲ್ಲಿ ಇದು ಸಂಭವಿಸಿತು. ಆ ದಿವಸದಲ್ಲಿ ಯೆಹೋವನ ಆತ್ಮನಿಂದ ನಾನು ಪರವಶನಾದೆನು. ಆತನು ನನ್ನನ್ನು ಅಲ್ಲಿಗೆ ದರ್ಶನದಲ್ಲಿ ಕೊಂಡೊಯ್ದನು.
ಆಗ ಅವನು ಹೀಗೆ ಹೇಳಿದನು, “ನರಪುತ್ರನೇ, ನೀನು ನಿನ್ನ ಕಣ್ಣು, ಕಿವಿಗಳನ್ನು ಉಪಯೋಗಿಸು, ಇವೆಲ್ಲವನ್ನೂ ಗಮನಿಸಿ ನನ್ನ ಮಾತುಗಳನ್ನು ಕೇಳು. ನಾನು ತೋರಿಸುವ ಪ್ರತಿಯೊಂದು ವಸ್ತುಗಳ ಮೇಲೆ ಚೆನ್ನಾಗಿ ಲಕ್ಷ್ಯವಿಡು. ಯಾಕೆಂದರೆ ಈ ವಿಷಯಗಳನ್ನು ನಿನಗೆ ತೋರಿಸಬೇಕೆಂದೇ ನಿನ್ನನ್ನು ಇಲ್ಲಿಗೆ ತಂದಿರುವೆ. ನೀನು ನೋಡಿದ್ದೆಲ್ಲವನ್ನೂ ಇಸ್ರೇಲ್ ವಂಶದವರಿಗೆ ತಿಳಿಸಬೇಕು.”
ಆಲಯದ ಹೊರಗಿನಿಂದ ಸುತ್ತಲೂ ಗೋಡೆ ಇರುವದನ್ನು ನಾನು ಕಂಡೆನು. ಅವನ ಕೈಯಲ್ಲಿ ಅಳತೆಯ ಕೋಲಿತ್ತು. ಅದು ಉದ್ದ ಅಳತೆಯಲ್ಲಿ [*ಉದ್ದಅಳತೆ ಅಕ್ಷರಶಃ, “ಒಂದು ಮೊಳ ಮತ್ತು ಒಂದು ಕೈಹಿಡಿ ಉದ್ದ. ಈ ಮೊಳವು 20.67 ಇಂಚುಗಳಿಗೆ ಸಮವಾಗಿದೆ, ಅಥವಾ 52.5 ಸೆಂಟಿಮೀಟರ್‌ಗೆ ಸಮವಾಗಿದೆ.] ಆರು ಮೊಳ [†ಆರು ಮೊಳ 10 ಅಡಿ, 4 ಇಂಚು ಅಥವಾ 3.15 ಮೀಟರ್.ಸಜ್ಜ ಯಜ್ಞವೇದಿಕೆಯ ಸುತ್ತಲೂ ಯಾಜಕರು ನಡೆದು ಹೋಗಲು ಇದ್ದ ಸ್ಥಳ.] ಉದ್ದವಾಗಿತ್ತು. ಅವನು ಗೋಡೆಯ ಅಗಲವನ್ನು ಅಳತೆ ಮಾಡಿದಾಗ, ಅದು ಒಂದು ಕೋಲು ಅಗಲವಾಗಿತ್ತು. ಅವನು ಗೋಡೆಯ ಎತ್ತರವನ್ನು ಅಳತೆ ಮಾಡಿದಾಗ ಅದು ಒಂದು ಕೋಲು ಎತ್ತರವಾಗಿತ್ತು.
ದ್ವಾರಪಾಲಕರ ಕೋಣೆಗಳ ಉದ್ದಗಲವು ಒಂದು ಅಳತೆಕೋಲಿನಷ್ಟಿತ್ತು. ಆ ಕೋಣೆಗಳ ನಡುವೆ ಇದ್ದ ಗೋಡೆಯ ಅಗಲ ಐದು ಮೊಳ ಆಲಯಕ್ಕೆ ಎದುರಾಗಿದ್ದ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಕೂಡಾ ಒಂದು ಅಳತೆ ಕೋಲಿನಷ್ಟಿತ್ತು.
ಪ್ರತೀ ಕಾವಲು ಮನೆಯ ಮೇಲ್ಗಡೆ ಸಣ್ಣ ಕಿಟಕಿಗಳು, ಗೋಡೆ ಮತ್ತು ಜಗಲಿಗಳು ಇದ್ದವು. ಕಿಟಕಿಯ ಅಗಲದ ಭಾಗವು ಪ್ರವೇಶದ್ವಾರಕ್ಕೆ ಮುಖ ಮಾಡಿದ್ದವು. ಪ್ರವೇಶದ್ವಾರದ ಎರಡೂ ಪಕ್ಕದಲ್ಲಿದ್ದ ಗೋಡೆಗಳ ಮೇಲೆ ಖರ್ಜೂರ ವೃಕ್ಷದ ಚಿತ್ರವನ್ನು ಕೆತ್ತಲಾಗಿತ್ತು.
ಆಮೇಲೆ ಅವನು ನನ್ನನ್ನು ಹೊರಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಆ ಪ್ರಾಕಾರದ ಸುತ್ತಲೂ ಮೂವತ್ತು ಕೋಣೆಗಳೂ ನೆಲಗಟ್ಟೂ ಇದ್ದವು. ಆ ಕೋಣೆಗಳು ಗೋಡೆಗೆ ತಾಗಿ ನೆಲಗಟ್ಟಿಗೆ ಮುಖ ಮಾಡಿದ್ದವು.
ಈ ಪ್ರವೇಶದ್ವಾರ, ಅಕ್ಕಪಕ್ಕದಲ್ಲಿದ್ದ ಮೂರು ಕೋಣೆಗಳು ಮತ್ತು ಅದರ ಕೈಸಾಲೆಗಳೆಲ್ಲವೂ ಮೊದಲಿನ ಪ್ರವೇಶದ್ವಾರದಂತೆಯೇ ಅಳತೆಯುಳ್ಳವುಗಳಾಗಿತ್ತು. ಪ್ರವೇಶ ದ್ವಾರವು ಐವತ್ತು ಮೊಳ ಉದ್ದ, ಇಪ್ಪತ್ತೈದು ಮೊಳ ಅಗಲವಿತ್ತು.
ಅದರ ಕಿಟಕಿಗಳು, ಕೈಸಾಲೆ, ಖರ್ಜೂರ ವೃಕ್ಷದ ಕೆತ್ತನೆ ಕೆಲಸಗಳೆಲ್ಲವೂ ಪೂರ್ವದ ಪ್ರವೇಶದ್ವಾರದಂತೆಯೇ ಇದ್ದವು. ಹೊರಗಿನಿಂದ ಪ್ರವೇಶ ದ್ವಾರಕ್ಕೆ ಬರಲು ಏಳು ಮೆಟ್ಟಿಲುಗಳಿದ್ದವು. ಅದರ ಕೈಸಾಲೆಯು ಪ್ರವೇಶದ್ವಾರದ ಒಳಭಾಗದ ಕೊನೆಯಲ್ಲಿತ್ತು.
ಪ್ರಾಕಾರದ ಹೊರಗೆ ಉತ್ತರದ ಪ್ರವೇಶ ದ್ವಾರದಿಂದ ಒಳಗಿನ ಪ್ರಾಕಾರಕ್ಕೆ ಹೋಗಲು ದ್ವಾರವಿತ್ತು. ಇದು ಪೂರ್ವದಲ್ಲಿದ್ದ ದ್ವಾರದಂತಿತ್ತು. ಅವನು ಒಳಗೋಡೆಯ ದ್ವಾರದಿಂದ ಹೊರಗೋಡೆಯ ದ್ವಾರದ ತನಕ ಅಳೆದಾಗ, ದ್ವಾರದಿಂದ ದ್ವಾರಕ್ಕೆ ನೂರು ಮೊಳವಿತ್ತು.
ಆಮೇಲೆ ಅವನು ದಕ್ಷಿಣದ ಗೋಡೆಗೆ ಕರೆದುಕೊಂಡು ಹೋದನು. ಅಲ್ಲಿ ಒಂದು ದ್ವಾರವಿರುವದನ್ನು ಕಂಡೆನು. ಅವನು ಒಳಗಿನ ಗೋಡೆಗಳನ್ನೂ ಕೈಸಾಲೆಯನ್ನೂ ಅಳತೆಮಾಡಿದನು. ಅದರ ಅಳತೆ ಬೇರೆ ಪ್ರವೇಶ ದ್ವಾರಗಳಂತೆ ಇದ್ದವು.
ಒಳಗಿನ ಪ್ರಾಕಾರದ ದಕ್ಷಿಣದಲ್ಲಿ ಒಂದು ದ್ವಾರವಿತ್ತು. ಅವನು ಒಳಗಿನ ಪ್ರಾಕಾರದ ದ್ವಾರದಿಂದ ಹೊರಗಿನ ಪ್ರಾಕಾರದ ದ್ವಾರದ ತನಕ ಅಳತೆ ಮಾಡಿದನು. ದ್ವಾರದಿಂದ ದ್ವಾರಕ್ಕೆ ನೂರು ಮೊಳವಿತ್ತು.
ಆಮೇಲೆ ಅವನು ದಕ್ಷಿಣದ ದ್ವಾರದಿಂದ ಒಳಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಈ ಪ್ರವೇಶದ್ವಾರವನ್ನು ಅಳತೆ ಮಾಡಿದನು. ಇದು ಕೂಡಾ ಒಳಗಿನ ಪ್ರಾಕಾರದ ಬೇರೆ ದ್ವಾರಗಳಂತೆಯೇ ಉದ್ದಗಲವಿತ್ತು.
ಅದರ ಕೋಣೆಗಳು, ಅಕ್ಕಪಕ್ಕದ ಗೋಡೆಗಳು, ಕೈಸಾಲೆ ಎಲ್ಲವೂ ಬೇರೆ ಪ್ರವೇಶದ್ವಾರಗಳ ಪ್ರಕಾರವೇ ಅಳತೆಯಲ್ಲಿದ್ದವು. ದ್ವಾರದ ಸುತ್ತಲೂ ಕಿಟಕಿಗಳಿದ್ದವು. ಆ ದ್ವಾರವು ಐವತ್ತು ಮೊಳ ಉದ್ದ ಇಪ್ಪತ್ತೈದು ಮೊಳ ಅಗಲವಿತ್ತು.
ಹೊರಗಿನ ಪ್ರಾಕಾರದ ಪಕ್ಕದಲ್ಲಿರುವ ಪ್ರವೇಶ ದ್ವಾರದ ಕೊನೆಯಲ್ಲಿ ಕೈಸಾಲೆಯಿತ್ತು. ಖರ್ಜೂರ ವೃಕ್ಷದ ಕೆತ್ತನೆ ಕೆಲಸವು ಅದರ ಗೋಡೆಯ ಮೇಲಿತ್ತು. ಆ ಪ್ರವೇಶ ದ್ವಾರವನ್ನು ಹತ್ತಲು ಎಂಟು ಮೆಟ್ಟಿಲುಗಳಿದ್ದವು.
ಅದರ ಕೋಣೆಗಳು, ಗೋಡೆ, ಕೈಸಾಲೆ ಎಲ್ಲವೂ ಬೇರೆ ಪ್ರವೇಶದ್ವಾರದ ಅಳತೆಯಂತೆ ಇದ್ದವು. ದ್ವಾರದ ಸುತ್ತಲೂ ಕೈಸಾಲೆಯ ಮೇಲೂ ಕಿಟಕಿಗಳಿದ್ದವು. ಆ ಪ್ರವೇಶ ದ್ವಾರವು ಐವತ್ತು ಮೊಳ ಉದ್ದ ಇಪ್ಪತ್ತೈದು ಮೊಳ ಅಗಲವಿತ್ತು.
ಅದರ ಕೈಸಾಲೆ ಹೊರ ಪ್ರಾಕಾರದ ಪಕ್ಕದಲ್ಲಿ ಪ್ರವೇಶ ದ್ವಾರದ ಕೊನೆಯಲ್ಲಿತ್ತು. ದ್ವಾರದ ಎರಡು ಪಕ್ಕಗಳ ಗೋಡೆಗಳಲ್ಲಿ ಖರ್ಜೂರ ವೃಕ್ಷದ ಕೆತ್ತನೆ ಕೆಲಸವಿತ್ತು. ಆ ದ್ವಾರಕ್ಕೇರಲು ಎಂಟು ಮೆಟ್ಟಿಲುಗಳಿದ್ದವು.
ಕೈಸಾಲೆಯು ಹೊರ ಪ್ರಾಕಾರದಲ್ಲಿಯ ದ್ವಾರದ ಕೊನೆಯಲ್ಲಿತ್ತು. ಖರ್ಜೂರ ವೃಕ್ಷದ ಚಿತ್ರವು ಗೋಡೆಗಳ ಎರಡೂ ಕಡೆಯ ಮೇಲೆ ಕೆತ್ತಲ್ಪಟ್ಟಿತ್ತು. ದ್ವಾರವನ್ನು ಮುಟ್ಟಲು ಎಂಟು ಮೆಟ್ಟಿಲುಗಳಿದ್ದವು.
ಸರ್ವಾಂಗಹೋಮಕ್ಕಾಗಿ ಕಲ್ಲಿನಿಂದ ಮಾಡಿದ ನಾಲ್ಕು ಮೇಜುಗಳಿದ್ದವು. ಈ ಮೇಜುಗಳು ಒಂದೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ, ಒಂದು ಮೊಳ ಎತ್ತರ. ಈ ಮೇಜುಗಳ ಮೇಲೆ ಪಶುಗಳನ್ನು ವಧಿಸಲು ಉಪಯೋಗಿಸುವ ಉಪಕರಣಗಳನ್ನು ಯಾಜಕರು ಇಡುತ್ತಿದ್ದರು.
ಒಳಗಿನ ಪ್ರಾಕಾರದಲ್ಲಿ ಎರಡು ಕೋಣೆಗಳಿದ್ದವು. ಒಂದು ಉತ್ತರದ ದ್ವಾರದ ಬಳಿಯಲ್ಲಿ ದಕ್ಷಿಣಕ್ಕೆ ಅಭಿಮುಖವಾಗಿತ್ತು. ಇನ್ನೊಂದು ದಕ್ಷಿಣದ ದ್ವಾರದ ಬಳಿಯಲ್ಲಿದ್ದು ಉತ್ತರಕ್ಕೆ ಅಭಿಮುಖವಾಗಿತ್ತು.
ಆದರೆ ಉತ್ತರಕ್ಕೆ ಅಭಿಮುಖವಾಗಿರುವ ಕೋಣೆಯು ಯಜ್ಞವೇದಿಯಲ್ಲಿ ಕಾರ್ಯವಹಿಸುತ್ತಿರುವ ಯಾಜಕರಿಗಾಗಿ, ಯಾಜಕರೆಲ್ಲರೂ ಲೇವಿ ಕುಲದವರಾಗಿದ್ದಾರೆ. ಎರಡನೇ ಗುಂಪಿನ ಯಾಜಕರು ಚಾದೋಕನ ಸಂತತಿಯವರಾಗಿದ್ದರು. ಅವರು ಮಾತ್ರವೇ ಯಜ್ಞವೇದಿಯಲ್ಲಿ ಯಜ್ಞಾರ್ಪಣೆ ಮಾಡಬಹುದು” ಎಂದು ಹೇಳಿದನು.
ಆಮೇಲೆ ಅವನು ಆಲಯದ ಕೈಸಾಲೆಗೆ ನನ್ನನ್ನು ಕರೆದುಕೊಂಡು ಹೋದನು. ಅದರ ಇಕ್ಕೆಡೆಗಳಲ್ಲಿಯೂ ಇರುವ ಗೋಡೆಗಳನ್ನು ಅವನು ಅಳತೆ ಮಾಡಲಾಗಿ ಗೋಡೆಯು ಐದು ಮೊಳ ದಪ್ಪ, ಮೂರು ಮೊಳ ಅಗಲವಾಗಿತ್ತು. ಅದರ ಮಧ್ಯದ ಸ್ಥಳ ಹದಿನಾಲ್ಕು ಮೊಳವಿತ್ತು.
ಕೈಸಾಲೆಯು ಇಪ್ಪತ್ತು ಮೊಳ ಅಗಲ ಮತ್ತು ಹನ್ನೆರಡು ಮೊಳ ಉದ್ದವಾಗಿತ್ತು. ಆ ಕೈಸಾಲೆಯನ್ನು ಹತ್ತಲು ಹತ್ತು ಮೆಟ್ಟಿಲುಗಳಿದ್ದವು. ಕೈಸಾಲೆಯ ಇಕ್ಕೆಡೆಗಳಲ್ಲಿಯೂ ಗೋಡೆಗಳಿಗೆ ಸ್ತಂಭಗಳಿದ್ದವು.