“ನರಪುತ್ರನೇ, ನನ್ನ ಪರವಾಗಿ ಗೋಗನಿಗೆ ವಿರುದ್ಧವಾಗಿ ಹೇಳು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆಂದು ಅವನಿಗೆ ಹೇಳು: ‘ಗೋಗನೇ, ನೀನು ಮೆಷೆಕ್ ಮತ್ತು ತೂಬಲ್ ದೇಶಗಳ ಪ್ರಮುಖ ನಾಯಕನು. ಆದರೆ ನಾನು ನಿನಗೆ ವಿರುದ್ಧವಾಗಿದ್ದೇನೆ.
ನೀನು ಇಸ್ರೇಲಿನ ಪರ್ವತದಲ್ಲಿ ಸಾಯುವೆ, ನೀನೂ, ನಿನ್ನ ಎಲ್ಲಾ ಸೈನ್ಯ, ನಿನ್ನೊಂದಿಗೆ ಬಂದಿದ್ದ ಇತರ ದೇಶದವರೆಲ್ಲಾ ರಣರಂಗದಲ್ಲಿ ಸಾಯುವರು. ನಿಮ್ಮ ಹೆಣಗಳನ್ನು ಆಕಾಶದ ಸಕಲ ಮಾಂಸಹಾರಿ ಪಕ್ಷಿಗಳಿಗೂ, ಕಾಡುಪ್ರಾಣಿಗಳಿಗೂ ಆಹಾರವಾಗಿ ಕೊಡುವೆನು.
ದೇವರು ಹೇಳಿದ್ದೇನೆಂದರೆ, “ನಾನು ಮಾಗೋಗ್ ಮತ್ತು ಕಡಲ ತೀರದಲ್ಲಿ ವಾಸಿಸುವ ಜನರ ಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ. ತಾವು ಸುರಕ್ಷಿತವಾಗಿದ್ದೇವೆ ಎಂದು ಅವರು ನೆನಸುತ್ತಾರೆ. ಆದರೆ ನಾನು ಯೆಹೋವನು ಎಂದು ಅವರಿಗೆ ತಿಳಿಯುವದು.
ನನ್ನ ಜನರಾದ ಇಸ್ರೇಲರಲ್ಲಿ ನನ್ನ ಪವಿತ್ರನಾಮವನ್ನು ಪ್ರಸಿದ್ಧಿಪಡಿಸುವೆನು. ಅವರು ನನ್ನ ಪವಿತ್ರ ನಾಮವನ್ನು ಇನ್ನು ಮುಂದೆ ಅವಮಾನಕ್ಕೆ ಗುರಿಪಡಿಸುವದಿಲ್ಲ. ರಾಜ್ಯಗಳೆಲ್ಲಾ ನಾನು ಯೆಹೋವನೆಂದು ಅರಿತುಕೊಳ್ಳುವರು. ನಾನೇ ಇಸ್ರೇಲಿನ ಪವಿತ್ರನಾದ ದೇವರು ಎಂದು ತಿಳಿಯುವರು.
“ಆ ಸಮಯದಲ್ಲಿ ಇಸ್ರೇಲಿನ ನಗರಗಳಲ್ಲಿ ವಾಸಿಸುವ ಜನರು ಹೊರಗೆ ಬಯಲಿಗೆ ಹೋಗುವರು. ಅಲ್ಲಿ ಅವರು ವೈರಿಗಳ ಆಯುಧಗಳನ್ನು ಕೂಡಿಸಿ ಸುಟ್ಟುಬಿಡುವರು. ಎಲ್ಲಾ ಬಿಲ್ಲುಬಾಣಗಳನ್ನು, ಗುರಾಣಿ, ಬರ್ಜಿ, ಗದೆಗಳನ್ನೆಲ್ಲಾ ಬೆಂಕಿಯಲ್ಲಿ ಹಾಕುವರು. ಏಳು ವರ್ಷಗಳ ತನಕ ಈ ಆಯುಧಗಳನ್ನು ಸೌದೆಯಾಗಿ ಉಪಯೋಗಿಸುವರು.
ಆದ್ದರಿಂದ ಅವರಿಗೆ ಅಡವಿಯಿಂದ ಮತ್ತು ಬಯಲಿನಿಂದ ಸೌದೆಯನ್ನು ತೆಗೆಯುವ ಅವಶ್ಯಕತೆ ಇರುವದಿಲ್ಲ. ಅವರು ಸತ್ತ ಸೈನಿಕರಿಂದ ಬೆಲೆಬಾಳುವ ವಸ್ತುಗಳನ್ನು ದೋಚುವರು. ತಮ್ಮಿಂದ ದೋಚಿದ ಸೈನಿಕರಿಂದ ಅವರು ದೋಚುವರು.” ಇದು ಒಡೆಯನಾದ ಯೆಹೋವನ ನುಡಿ.
ದೇವರು ಹೇಳಿದ್ದೇನೆಂದರೆ, “ಆ ಸಮಯದಲ್ಲಿ ಗೋಗನನ್ನು ಹೂಣಿಡಲು ನಾನು ಇಸ್ರೇಲಿನಲ್ಲಿ ಸ್ಥಳವನ್ನು ಆರಿಸುತ್ತೇನೆ. ಇವನನ್ನು ಮೃತ್ಯುಸಮುದ್ರದ ಪೂರ್ವದಲ್ಲಿರುವ ‘ಪ್ರಯಾಣಿಕರ ಕಣಿವೆ’ [*ಪ್ರಯಾಣಿಕರ ಕಣಿವೆ “ಅರಾಬಾ” ಎಂಬ ಪದದ ಮೇಲೆ ಇಲ್ಲಿ ಶಬ್ದ ಚಮತ್ಕಾರವನ್ನು ಬಳಸಲಾಗಿದೆ. “ಅರಾಬ” ಎಂದರೆ ಮರುಭೂಮಿ. “ಅವರಿಮ್” ಎಂದರೆ ಪ್ರಯಾಣಿಕರು ಕಣಿವೆಯನ್ನು ಸಮಾಧಿಸ್ಥಳವನ್ನಾಗಿ ಪರಿವರ್ತಿಸಿದ್ದುದರಿಂದ ಭೂಮಿಯು ಅಶುದ್ಧವಾಗುತ್ತಿದ್ದ ಕಾರಣದಿಂದ ಪ್ರಯಾಣಿಕರು ಆ ಸ್ಥಳವನ್ನು ಸುತ್ತಿಕೊಂಡು ಹೋಗಬೇಕಾಗುತ್ತಿತ್ತು.] ಯಲ್ಲಿ ಸಮಾಧಿ ಮಾಡಲಾಗುವುದು. ಅದು ಪ್ರವಾಸಿಗಳಿಗೆ ಅಡ್ಡಿಯಾಗುವದು. ಯಾಕೆಂದರೆ ಗೋಗನೂ ಅವನ ಸೈನ್ಯವೂ ಅಲ್ಲಿ ಹೂಣಿಡಲ್ಪಡುವವು. ಆ ಸ್ಥಳ ‘ಗೋಗ್ ಸೈನ್ಯದ ತಗ್ಗು’ ಎಂಬ ಹೊಸ ಹೆಸರಿನಿಂದ ಕರೆಯಲ್ಪಡುವದು.
“ಹೆಣಗಳನ್ನು ಹೂಳಿಟ್ಟು ದೇಶವನ್ನು ಶುದ್ಧಗೊಳಿಸುವ ಕೆಲಸಗಾರರಿಗೆ ಖಾಯಂ ಕೆಲಸ ಕೊಡಲಾಗುವದು. ಅವರು ದೇಶದಲ್ಲೆಲ್ಲಾ ಹೆಣಗಳನ್ನು ಹುಡುಕಿ ತೆಗೆಯುವರು. ಅವರಿಗೆ ಏಳು ತಿಂಗಳು ಬೇಕಾಗುವುದು.
ಅವರಲ್ಲೊಬ್ಬನಿಗೆ ಒಂದು ಎಲುಬು ನೋಡಸಿಕ್ಕಿದರೆ ಅವನು ಅಲ್ಲಿ ಒಂದು ಗುರುತನ್ನಿಡುವನು. ಹೂಣಿಡುವವರು ಬಂದು ಆ ಎಲುಬನ್ನು ತೆಗೆದು ಗೋಗನ ಸೈನ್ಯದ ತಗ್ಗಿನಲ್ಲಿ ಹೂಣಿಡುವ ತನಕ ಆ ಗುರುತು ಅಲ್ಲಿಯೇ ಇರುವದು.
ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ನರಪುತ್ರನೇ, ಎಲ್ಲಾ ಪಕ್ಷಿಗಳಿಗೂ ಕಾಡುಪ್ರಾಣಿಗಳಿಗೂ ಹೀಗೆ ಹೇಳು: ‘ನೀವೆಲ್ಲಾ ಕೂಡಿ ಬನ್ನಿರಿ. ನಾನು ನಿಮಗಾಗಿ ಇಸ್ರೇಲಿನ ಪರ್ವತಗಳಲ್ಲಿ ಮಾಡುವ ಮಹಾಯಜ್ಞಕ್ಕೆ ಎಲ್ಲಾ ಕಡೆಯಿಂದಲೂ ನೆರೆದುಬಂದು ಮಾಂಸವನ್ನು ತಿಂದು ರಕ್ತವನ್ನು ಕುಡಿಯಿರಿ.
ದೇವರು ಹೇಳಿದ್ದೇನೆಂದರೆ, “ನಾನು ಮಾಡಿದ್ದನ್ನು ಇತರ ದೇಶಗಳವರು ನೋಡುವಂತೆ ಮಾಡುವೆನು. ಆಗ ಆ ದೇಶದವರು ನನ್ನನ್ನು ಗೌರವಿಸಲು ಪ್ರಾರಂಭಿಸುವರು. ಆ ಶತ್ರುವಿಗೆದುರಾಗಿ ನನ್ನ ಸಾಮರ್ಥ್ಯ ತೋರಿಸಿದುದನ್ನು ಅವರು ನೋಡುವರು.
ಎಲ್ಲಾ ಜನಾಂಗಗಳವರಿಗೆ ನಾನು ಯಾಕೆ ಇಸ್ರೇಲರು ಸೆರೆಹಿಡಿಯಲ್ಪಟ್ಟು ಚದರಿಹೋಗುವಂತೆ ಮಾಡಿದೆನು ಎಂದು ತಿಳಿಯುವರು. ನನ್ನ ಜನರು ನನಗೆ ವಿರುದ್ಧವಾಗಿ ತಿರುಗಿ ಬಿದ್ದರು. ಆಗ ನಾನು ಅವರಿಂದ ದೂರ ಹೋದೆನು. ಅವರ ವೈರಿಗಳು ಅವರನ್ನು ಸೋಲಿಸುವಂತೆ ಮಾಡಿದೆನು. ಆದ್ದರಿಂದ ಅವರು ರಣರಂಗದಲ್ಲಿ ಮಡಿದರು.
ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಈಗ ನಾನು ಯಾಕೋಬನ ವಂಶದವರನ್ನು ಸೆರೆಯಿಂದ ಬಿಡಿಸಿ ಹಿಂದಕ್ಕೆ ತರುವೆನು. ಇಸ್ರೇಲಿನ ಜನಾಂಗದವರ ಮೇಲೆಲ್ಲಾ ನನ್ನ ದಯೆ ಇರುವದು. ನನ್ನ ಪವಿತ್ರನಾಮದ ಸಲುವಾಗಿ ಅವರನ್ನು ಉದ್ಧರಿಸುವೆನು.
ಬೇರೆಬೇರೆ ದೇಶಗಳಿಂದ ನಾನು ನನ್ನ ಜನರನ್ನು ಹಿಂದಕ್ಕೆ ತರಿಸುವೆನು. ಅವರ ಶತ್ರುಗಳ ದೇಶದಿಂದ ನಾನು ಅವರನ್ನು ಒಟ್ಟುಗೂಡಿಸುವೆನು. ಆಗ ಅನೇಕ ಜನಾಂಗಗಳು ನಾನು ಎಷ್ಟು ಪವಿತ್ರನೆಂದು ಅರಿತುಕೊಳ್ಳುವರು.
ನಾನು ಅವರ ಒಡೆಯನಾದ ಯೆಹೋವನೆಂದು ತಿಳಿಯುವರು. ಯಾಕೆಂದರೆ ನಾನು, ಅವರನ್ನು ಅವರ ಸಬದೇಶವನ್ನು ಬಿಟ್ಟು ಸೆರೆಹಿಡಿಯಲ್ಪಟ್ಟವರಾಗಿ ಬೇರೆ ದೇಶಗಳಿಗೆ ಹೋಗುವಂತೆ ಮಾಡಿದೆನು. ಆಮೇಲೆ ತಿರುಗಿ ಅವರನ್ನು ಒಟ್ಟುಗೂಡಿಸಿ ಅವರ ದೇಶಕ್ಕೆ ಹಿಂದಕ್ಕೆ ಕರೆಸಿದೆನು.