ನಾನು ನಿನ್ನ ದವಡೆಗೆ ಕೊಕ್ಕೆ ಹಾಕಿ ನಿನ್ನನ್ನು ಸೆರೆಹಿಡಿದುಕೊಂಡು ಬರುವೆನು. ನಿನ್ನೆಲ್ಲಾ ಭೂಸೈನಿಕರನ್ನೂ ನಿನ್ನೆಲ್ಲಾ ಕುದುರೆಗಳನ್ನೂ ನಿನ್ನೆಲ್ಲಾ ರಾಹುತರನ್ನೂ ಬಂಧಿಸಿ ತರುವೆನು. ನಿನ್ನ ಸೈನಿಕರು ಸಮವಸ್ತ್ರಧಾರಿಗಳಾಗಿ ಖೇಡ್ಯಶಿರಸ್ತ್ರಾಣಗಳನ್ನು ತೊಟ್ಟುಕೊಂಡಿರುವಾಗಲೇ ಅವರನ್ನು ಬಂಧಿಸಿ ತರುವೆನು.
ಅಲ್ಲಿ ಗೋಮೆರ್ಯ ರಾಜ್ಯವು ತನ್ನ ಎಲ್ಲಾ ಸಿಪಾಯಿಗಳೊಂದಿಗೆ ಇರುವುದು. ಬಹು ದೂರದ ಉತ್ತರ ದಿಕ್ಕಿನಲ್ಲಿರುವ ತೋಗರ್ಮ ರಾಜ್ಯವೂ ಇದರಲ್ಲಿ ಸೇರಿರುವದು. ಈ ಕೈದಿಗಳ ಸಾಲಿನಲ್ಲಿ ಅನೇಕಾನೇಕ ಮಂದಿ ಇರುವರು.
ಬಹುಕಾಲದ ನಂತರ, ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು. ಅನಂತರದ ವರ್ಷಗಳಲ್ಲಿ, ನೀವು ಯುದ್ಧದಿಂದ ಗುಣಹೊಂದಿರುವ ದೇಶಕ್ಕೆ ಬರುವಿರಿ. ಆ ದೇಶದಲ್ಲಿರುವ ಜನರು ತಾವು ಕಳುಹಿಸಲ್ಪಟ್ಟಿದ್ದ ಅನೇಕ ದೇಶಗಳಿಂದ ಹಿಂತಿರುಗಿ ಬಂದು ಒಟ್ಟಾಗಿ ಸೇರಿದವರಾಗಿದ್ದಾರೆ. ಅವರು ಇಸ್ರೇಲಿನ ಪರ್ವತಗಳಿಗೆ ಮತ್ತೆ ಬರಮಾಡಲ್ಪಟ್ಟರಾಗಿದ್ದಾರೆ. ಹಿಂದಿನ ಕಾಲದಲ್ಲಿ ಅನೇಕ ಸಲ ಈ ಪರ್ವತಗಳು ಹಾಳು ಮಾಡಲ್ಪಟ್ಟಿದ್ದರೂ ಸಹ ಈಗ ಜನರನ್ನು ಮತ್ತೆ ಕರೆದುಕೊಂಡು ಬರಲಾಗಿದೆ ಮತ್ತು ಅವರೆಲ್ಲರೂ ಅಲ್ಲಿ ಸುರಕ್ಷಿತವಾಗಿ ನೆಲೆಸುವರು.
‘ನಾನು ಹೋಗಿ ಇಸ್ರೇಲಿನಲ್ಲಿರುವ ಗೋಡೆಯಿಲ್ಲದ ನಗರಗಳನ್ನು ವಶಮಾಡಿಕೊಳ್ಳುತ್ತೇನೆ; ಅವರು ಶಾಂತಿಯಿಂದ ನೆಲೆಸಿರುತ್ತಾರೆ; ತಾವು ಸುರಕ್ಷಿತರಾಗಿದ್ದೇವೆ ಎಂದುಕೊಂಡಿದ್ದಾರೆ. ಆದರೆ ಅವರನ್ನು ರಕ್ಷಿಸಲು ಅವರ ಪಟ್ಟಣಗಳಿಗೆ ಕೋಟೆಗಳೇ ಇಲ್ಲ. ಅವರ ಹೆಬ್ಬಾಗಿಲಿಗೆ ಚಿಲಕವಿಲ್ಲ. ಅವರಿಗೆ ಬಾಗಿಲು ಸಹ ಇಲ್ಲ.
ನಾನು ಅವರನ್ನು ಸೋಲಿಸಿ ಅವರ ಬಳಿಯಲ್ಲಿರುವ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ದೋಚಿಕೊಳ್ಳುವೆನು. ಹಿಂದೆ ನಾಶವಾಗಿದ್ದು ಈಗ ಜನಭರಿತವಾಗಿರುವ ಆ ನಗರಗಳ ಮೇಲೆ ಯುದ್ಧ ಮಾಡುವೆನು. ಈಗ ಆ ಜನರಿಗೆ ದನಕರುಗಳೂ ಸಬತ್ತುಗಳೂ ಇವೆ. ಅವರು ಲೋಕದ ಕೇಂದ್ರ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಬಲಾಢ್ಯ ದೇಶಗಳು ಬೇರೆ ಬಲಾಢ್ಯ ದೇಶಗಳೊಂದಿಗೆ ಸಂಪರ್ಕಿಸಲು ಇವರ ಮೂಲಕ ಹೋಗಲೇಬೇಕು’ ಎಂದು ನೀನು ಹೇಳಿಕೊಳ್ಳುತ್ತಿರುವೆ.
“ಶೆಬ, ದೆದಾನ್, ತಾರ್ಷೀಷಿನ ವ್ಯಾಪಾರಿಗಳು ಮತ್ತು ಇತರ ವಾಣಿಜ್ಯ ನಗರಗಳ ಜನರು ನಿನ್ನನ್ನು ನೋಡಿ, ‘ನೀನು ಸೂರೆಮಾಡಲು ಬಂದಿರುವಿಯಾ? ಬೆಳ್ಳಿಬಂಗಾರಗಳನ್ನೂ ಪಶುಗಳನ್ನೂ ಬೆಲೆಬಾಳುವ ವಸ್ತುಗಳನ್ನೂ ಕೊಳ್ಳೆಹೊಡೆಯಲು ನಿನ್ನ ಸೈನ್ಯಸಮೇತವಾಗಿ ಬಂದಿರುವೆಯಾ?’ ” ಎಂದು ವಿಚಾರಿಸುವರು.
ದೇವರು ಹೇಳಿದ್ದೇನೆಂದರೆ, “ನರಪುತ್ರನೇ, ನನ್ನ ಪರವಾಗಿ ಗೋಗನಿಗೆ ಹೇಳು, ನನ್ನ ಒಡೆಯನಾಗಿರುವ ಯೆಹೋವನು ಹೀಗೆನ್ನುತ್ತಾನೆ: ‘ನನ್ನ ಜನರು ಸಮಾಧಾನದಿಂದಲೂ ಶಾಂತಿಯಿಂದಲೂ ಜೀವಿಸುತ್ತಿರುವಾಗ ನೀನು ಅವರನ್ನು ವಶ ಮಾಡಲು ಬಂದಿರುವೆ.
ಬಹು ದೂರದ ಉತ್ತರದಿಕ್ಕಿನಲ್ಲಿರುವ ನಿನ್ನ ಸ್ಥಳದಿಂದ ಬರುವೆ. ನೀನು ಬಹಳ ಜನರನ್ನು ನಿನ್ನ ಸಂಗಡ ಕರೆತರುವೆ. ಅವರೆಲ್ಲಾ ಕುದುರೆಗಳ ಮೇಲೆ ಬರುವರು. ನೀವು ಅತಿ ದೊಡ್ಡ ಮತ್ತು ಬಲಾಢ್ಯ ಸೈನ್ಯವಾಗಿರುವಿರಿ.
ನನ್ನ ಜನರಾದ ಇಸ್ರೇಲಿನವರೊಂದಿಗೆ ಯುದ್ಧಕ್ಕೆ ಬರುವಿರಿ. ನೀವು ಕರೀ ಮೋಡದಂತೆ ದೇಶವನ್ನು ಕವಿಯುವಿರಿ. ಆ ಸಮಯ ಬಂದಾಗ ನನ್ನ ದೇಶಕ್ಕೆ ವಿರುದ್ಧವಾಗಿ ಯುದ್ಧ ಮಾಡಲು ನಿಮ್ಮನ್ನು ತರಿಸುವೆನು. ಆಗ ಗೋಗ್ ಮತ್ತು ಅವನೊಂದಿಗಿರುವ ರಾಜ್ಯಗಳು ನಾನು ಎಷ್ಟು ಸಾಮರ್ಥ್ಯಶಾಲಿ ಎಂದು ತಿಳಿದುಕೊಳ್ಳುವರು. ಅವರು ನನ್ನನ್ನು ಗೌರವಿಸಲು ಕಲಿಯುವರು. ನಾನು ಪವಿತ್ರನು ಎಂದು ತಿಳಿಯುವರು. ನಾನು ನಿನಗೇನು ಮಾಡಬೇಕಿದ್ದೇನೆಂದು ಅವರು ಕಾದು ನೋಡುವರು.’ ”
ಇದು ನನ್ನ ಒಡೆಯನಾದ ಯೆಹೋವನ ನುಡಿ: “ಆಗ ನಾನು ನಿನ್ನ ವಿಷಯದಲ್ಲಿ ಹೇಳಿದ್ದು ಜನರು ಜ್ಞಾಪಕಕ್ಕೆ ಬರುವದು. ನಾನು ಇದನ್ನು ನನ್ನ ಸೇವಕರಾದ ಪ್ರವಾದಿಗಳಿಗೆ ತಿಳಿಸಿರುತ್ತೇನೆ ಎಂದು ಅರಿಯುವರು. ಹಿಂದಿನ ಕಾಲದಲ್ಲಿ ಇಸ್ರೇಲ್ ಪ್ರವಾದಿಗಳು ನನ್ನ ಪರವಾಗಿ ಮಾತನಾಡಿ ನೀವು ಅವರ ವಿರುದ್ಧವಾಗಿ ಯುದ್ಧಕ್ಕೆ ಬರುವಿರೆಂದು ಹೇಳಿರುತ್ತೇನೆ ಎಂಬುದನ್ನು ತಮ್ಮ ಜ್ಞಾಪಕಕ್ಕೆ ತರುವರು.”
ಆಗ ಜೀವವುಳ್ಳ ಸಮಸ್ತವೂ ಹೆದರಿಕೆಯಿಂದ ನಡುಗುವವು. ನೀರಿನಲ್ಲಿರುವ ಮೀನುಗಳು, ಆಕಾಶದ ಪಕ್ಷಿಗಳು, ಭೂಮಿಯ ಮೇಲಿರುವ ಪ್ರಾಣಿಗಳು, ನೆಲದ ಮೇಲೆ ಹರಿದಾಡುವವುಗಳೆಲ್ಲಾ ಭೀತಿಯಿಂದ ನಡುಗುವವು. ಪರ್ವತಗಳು ಬಿದ್ದುಹೋಗುವವು, ಪ್ರತಿಯೊಂದು ಗೋಡೆಯು ನೆಲಕ್ಕೆ ಬಿದ್ದು ಹೋಗುವದು.”
ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿನ ಪರ್ವತಗಳಲ್ಲಿ ಗೋಗನಿಗೆ ಭಯಂಕರ ಪರಿಸ್ಥಿತಿ ಉಂಟಾಗುವಂತೆ ಮಾಡುವೆನು. ಅವನ ಸೈನಿಕರು ಭಯಗೊಂಡು ಒಬ್ಬರನ್ನೊಬ್ಬರು ಕತ್ತಿಯಿಂದ ಕೊಲ್ಲುವರು.