English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Ezekiel Chapters

Ezekiel 30 Verses

1 ತಿರುಗಿ ಯೆಹೋವನ ಸಂದೇಶ ನನಗೆ ಬಂತು, ಆತನು ಹೇಳಿದ್ದೇನೆಂದರೆ:
2 “ನರಪುತ್ರನೇ, ನನ್ನ ಪರವಾಗಿ ಮಾತನಾಡು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ’ ಎಂದು ಹೇಳು. “ ‘ಅಳುತ್ತಾ, “ಭಯಂಕರ ದಿವಸಗಳು ಬರುತ್ತವೆ” ಎಂದು ಹೇಳು.
3 ಆ ದಿನವು ಹತ್ತಿರ ಬಂತು! ಹೌದು, ದೇವರು ನ್ಯಾಯತೀರಿಸುವ ದಿನ ಹತ್ತಿರ ಬಂತು. ಅದು ಮೋಡ ಕವಿದ ದಿನವಾಗಿರುವುದು. ಅದು ಜನಾಂಗಗಳಿಗೆ ನ್ಯಾಯತೀರಿಸುವ ಸಮಯ.
4 ಈಜಿಪ್ಟಿಗೆ ವಿರುದ್ಧವಾಗಿ ಒಂದು ಖಡ್ಗವು ಬರುವದು! ಈಜಿಪ್ಟ್ ಬೀಳುವಾಗ ಇಥಿಯೋಪ್ಯವು ಭಯದಿಂದ ನಡುಗುವದು. ಬಾಬಿಲೋನಿನ ಸೈನ್ಯವು ಈಜಿಪ್ಟಿನವರನ್ನು ಸೆರೆ ಹಿಡಿದುಕೊಂಡು ಹೋಗುವದು. ಈಜಿಪ್ಟಿನ ಅಡಿಪಾಯಗಳು ಒಡೆದುಹೋಗುವವು.
5 “ ‘ಅನೇಕ ದೇಶಗಳವರು ಈಜಿಪ್ಟಿನವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇಥಿಯೋಪ್ಯ, ಪೂಟ್, ಲೂದ್, ಅರೇಬಿಯ, ಲಿಬ್ಯ ಮತ್ತು ಇಸ್ರೇಲಿನ ಜನರು [*ಇಸ್ರೇಲಿನ ಜನರು ಅಕ್ಷರಶಃ, “ಒಪ್ಪಂದ ದೇಶದ ಜನರು.”] ಇವರೆಲ್ಲರೂ ನಾಶವಾಗುವರು.
6 “ ‘ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು: ಈಜಿಪ್ಟಿಗೆ ಸಹಾಯ ಮಾಡುವವನು ಬೀಳುವನು. ಅವಳು ಹೆಮ್ಮೆಪಡುವ ಸಾಮರ್ಥ್ಯ ಅಂತ್ಯವಾಗುವದು. ಈಜಿಪ್ಟಿನಲ್ಲಿರುವ ಜನರು ರಣರಂಗದಲ್ಲಿ ಮಿಗ್ದೋಲ್‌ನಿಂದ ಹಿಡಿದು ಅಸಾಬನ್ ತನಕ ಸಾಯುವರು. ಇದು ನನ್ನ ಒಡೆಯನಾದ ಯೆಹೋವನ ನುಡಿ.
7 ನಾಶಮಾಡಲ್ಪಟ್ಟ ಬೇರೆ ದೇಶಗಳನ್ನು ಈಜಿಪ್ಟ್ ಸೇರಿಕೊಳ್ಳುವುದು. ಈಜಿಪ್ಟ್ ಬಂಜರು ದೇಶಗಳಲ್ಲೊಂದಾಗುವುದು. ಬಾಬಿಲೋನಿನ ಸೈನ್ಯವು ಈಜಿಪ್ಟಿನ ಮೇಲೆ ಯುದ್ಧಮಾಡುವದು
8 ಈಜಿಪ್ಟಿನಲ್ಲಿ ನಾನು ಹೊತ್ತಿಸಿದ ಬೆಂಕಿಯು ಅದರ ಸಹಾಯಕರನ್ನು ದಹಿಸುವದು. ಆಗ ನಾನು ಯೆಹೋವನೆಂದು ಅವರು ತಿಳಿಯುವರು.
9 “ ‘ಆ ಸಮಯದಲ್ಲಿ, ನಾನು ಸಂದೇಶವಾಹಕರನ್ನು ಕಳುಹಿಸುವೆನು. ಅವರು ಇಥಿಯೋಪ್ಯಕ್ಕೆ ಹಡಗಿನಲ್ಲಿ ಪ್ರಯಾಣ ಮಾಡಿ ಕೆಟ್ಟ ಸುದ್ದಿಯನ್ನು ಒಯ್ಯುವರು. ಇಥಿಯೋಪ್ಯ ಈಗ ಸುರಕ್ಷಿತವಾಗಿರುವುದು. ಆದರೆ ಈಜಿಪ್ಟ್ ಶಿಕ್ಷಿಸಲ್ಪಟ್ಟಾಗ ಇಥಿಯೋಪ್ಯದ ಜನರು ಭಯದಿಂದ ನಡುಗುವರು. ಆ ಸಮಯವು ಬರುವದು.’ ”
10 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ; “ಈಜಿಪ್ಟಿನ ಜನರನ್ನು ನಾಶಮಾಡುವುದಕ್ಕಾಗಿ ನಾನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಉಪಯೋಗಿಸುವೆನು.
11 ಎಲ್ಲಾ ಜನಾಂಗಗಳಿಗಿಂತ ನೆಬೂಕದ್ನೆಚ್ಚರನು ಮತ್ತು ಅವನ ಸಿಪಾಯಿಗಳು ಅತ್ಯಂತ ಕ್ರೂರಿಗಳು. ಈಜಿಪ್ಟನ್ನು ನಾಶಮಾಡಲು ಅವರನ್ನು ಕರೆಹಿಸುವೆನು. ಅವರು ತಮ್ಮ ಖಡ್ಗಗಳನ್ನು ಒರೆಯಿಂದ ತೆಗೆದು ಈಜಿಪ್ಟಿಗೆ ವಿರುದ್ಧವಾಗಿ ಉಪಯೋಗಿಸುವರು ಮತ್ತು ದೇಶವನ್ನು ಸತ್ತ ಹೆಣಗಳಿಂದ ತುಂಬಿಸುವರು.
12 ನೈಲ್ ನದಿಯನ್ನು ನಾನು ಒಣನೆಲವನ್ನಾಗಿ ಮಾಡುವೆನು. ಆ ಒಣನೆಲವನ್ನು ನಾನು ಕೆಟ್ಟ ಜನರಿಗೆ ಮಾರುವೆನು. ಆ ದೇಶವನ್ನು ಬಂಜರು ಭೂಮಿಯನ್ನಾಗಿ ಮಾಡಲು ನಾನು ಪರದೇಶಸ್ಥರನ್ನು ಉಪಯೋಗಿಸುವೆನು. ನನ್ನ ಒಡೆಯನಾದ ಯೆಹೋವನು ಮಾತನಾಡಿದ್ದಾನೆ.”
13 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಈಜಿಪ್ಟಿನಲ್ಲಿರುವ ವಿಗ್ರಹಗಳನ್ನು ನಾನು ನಾಶಮಾಡುವೆನು. ಮೆಂಫೀಸಿನ ವಿಗ್ರಹಗಳನ್ನು ತೆಗೆದುಬಿಡುವೆನು. ಈಜಿಪ್ಟಿನಲ್ಲಿ ಇನ್ನು ಮುಂದೆ ರಾಜನಿರನು. ಅವರಲ್ಲಿ ಭಯವನ್ನು ಹುಟ್ಟಿಸುವೆನು.
14 ಪತ್ರೋಸನ್ನು ನಾನು ಬರಿದಾಗಿ ಮಾಡುವೆನು. ಸೋನಿನಲ್ಲಿ ಬೆಂಕಿಯನ್ನುಟುಮಾಡುವೆನು. ತೆಬೆಸವನ್ನು ನಾನು ಶಿಕ್ಷಿಸುವೆನು.
15 ಈಜಿಪ್ಟಿನ ಕೋಟೆಯಾಗಿರುವ ಸೀನ್ ಪ್ರಾಂತ್ಯದ ಮೇಲೆ ನನ್ನ ಕೋಪವನ್ನು ಸುರಿಸುವೆನು. ತೆಬೆಸದ ಜನರನ್ನು ನಾನು ನಾಶಮಾಡುವೆನು.
16 ಈಜಿಪ್ಟಿನಲ್ಲಿ ಬೆಂಕಿಯನ್ನುಟುಮಾಡುವೆನು. ಸೀನ್ ನಗರವು ಭಯದಿಂದ ಕಂಗೆಡುವದು. ಸೈನಿಕರು ತೆಬೆಸವನ್ನು ಧಾಳಿ ಮಾಡುವರು. ತೆಬೆಸದಲ್ಲಿ ಪ್ರತಿದಿವಸವೂ ಸಂಕಟವಿರುವುದು.
17 ಒನ್ ಮತ್ತು ಪೀಬೆಸೆತಿನ ಯುವಕರು ಯುದ್ಧದಲ್ಲಿ ಹತರಾಗುವರು. ಆ ನಗರದ ಜನರು ಹಿಡಿಯಲ್ಪಟ್ಟು ಒಯ್ಯಲ್ಪಡುವರು.
18 ನಾನು ಈಜಿಪ್ಟಿನ ನೊಗವನ್ನು ಮುರಿದಾಗ ತಹಪನೇಸ್‌ನಲ್ಲಿ ಕತ್ತಲೆಯ ದಿನವಾಗಿರುವುದು. ಈಜಿಪ್ಟಿನ ಅಧಿಕಾರಕ್ಕೆ ಅಂತ್ಯ ಬರುವುದು. ಈಜಿಪ್ಟಿನ ಮೇಲೆ ಮೋಡವು ಕವಿಯುವುದು. ಅದರ ಪಟ್ಟಣಗಳ ಜನರು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು.
19 ನಾನು ಈಜಿಪ್ಟನ್ನು ಶಿಕ್ಷಿಸುವಾಗ ನಾನೇ ಒಡೆಯನಾದ ಯೆಹೋವನು ಎಂದು ಅವರು ತಿಳಿಯುವರು.”
20 ಸೆರೆಹಿಡಿಯಲ್ಪಟ್ಟ ಹನ್ನೊಂದನೆಯ ವರ್ಷದ ಮೊದಲನೇ ತಿಂಗಳಿನ ಏಳನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ,
21 “ನರಪುತ್ರನೇ, ನಾನು ಈಜಿಪ್ಟಿನ ರಾಜನಾದ ಫರೋಹನ ಕೈಯ ಬಲವನ್ನು ಮುರಿದಿದ್ದೇನೆ. ಯಾರೂ ಅವನನ್ನು ಶೂಶ್ರೂಷೆ ಮಾಡಲಾರರು. ಅದು ಗುಣವಾಗದು. ಅವನ ಕೈಗೆ ಖಡ್ಗ ಹಿಡಿದುಕೊಳ್ಳುವಷ್ಟೂ ಬಲವಿರದು.”
22 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ, “ನಾನು ಈಜಿಪ್ಟಿನ ರಾಜನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಅವನ ಎರಡು ಕೈಗಳನ್ನೂ ಮುರಿಯುವೆನು. ಒಂದು ಕೈ ಮುರಿಯಲ್ಪಟ್ಟಿತ್ತು. ಇನ್ನೊಂದು ಸರಿಯಾಗಿದ್ದ ಕೈಯೂ ಮುರಿಯಲ್ಪಡುವದು. ಅವನ ಕೈಯಿಂದ ಖಡ್ಗವು ಬೀಳುವಂತೆ ಮಾಡುವೆನು.
23 ಈಜಿಪ್ಟಿನ ಜನರನ್ನು ದೇಶಾಂತರ ಚದರಿಸಿಬಿಡುವೆನು.
24 ಬಾಬಿಲೋನಿನ ರಾಜನ ಕೈಗಳನ್ನು ನಾನು ಬಲಪಡಿಸುವೆನು. ನನ್ನ ಖಡ್ಗವನ್ನು ನಾನು ಅವನ ಕೈಯಲ್ಲಿಡುವೆನು. ಆದರೆ ಫರೋಹನ ಕೈಗಳನ್ನು ನಾನು ಮುರಿಯುವೆನು. ಆಗ ನೋವಿನಿಂದ ಫರೋಹನು ಕಿರುಚುವನು. ಒಬ್ಬ ಸಾಯುವ ಮನುಷ್ಯನು ಕಿರುಚುವಂತೆ ಆ ಶಬ್ದವು ಇರುವುದು.
25 ನಾನು ಬಾಬಿಲೋನಿನ ರಾಜನ ಕೈಗಳನ್ನು ಬಲಪಡಿಸುವೆನು. ಫರೋಹನ ಕೈಗಳು ಜೋಲುಬೀಳುವವು. ಆಗ ಅವರು ನಾನೇ ಯೆಹೋವನೆಂದು ತಿಳಿಯುವರು. “ನನ್ನ ಖಡ್ಗವನ್ನು ನಾನು ಬಾಬಿಲೋನ್ ರಾಜನ ಕೈಗಳಲ್ಲಿ ಇಡುವೆನು. ಆಗ ಅವನು ಈಜಿಪ್ಟಿನ ಕಡೆಗೆ ಅದನ್ನು ಚಾಚುವನು.
26 ನಾನು ಈಜಿಪ್ಟಿನ ಜನರನ್ನು ದೇಶಾಂತರ ಚದರಿಸಿಬಿಡುವೆನು. ಆಗ ನಾನು ಯೆಹೋವನೆಂದು ಅವರು ತಿಳಿದುಕೊಳ್ಳುವರು.”
×

Alert

×