ಅಮ್ಮೋನಿಯರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನ ಮಾತುಗಳನ್ನು ಕೇಳಿರಿ. ಆತನು ಹೇಳುವುದೇನೆಂದರೆ, ನನ್ನ ಪವಿತ್ರಾಲಯವು ಅಪವಿತ್ರಗೊಂಡಾಗಲೂ ಇಸ್ರೇಲ್ ದೇಶವು ನಾಶವಾದಾಗಲೂ ಯೆಹೂದದ ಜನರು ಸೆರೆ ಒಯ್ಯಲ್ಪಟ್ಟಾಗಲೂ ನೀವು ಸಂತೋಷಪಟ್ಟಿರಿ.
ಅದಕ್ಕಾಗಿ ನಾನು ನಿಮ್ಮನ್ನು ಪೂರ್ವದ ಜನರಿಗೆ ಬಿಟ್ಟುಕೊಡುವೆನು. ಅವರು ಬಂದು ನಿಮ್ಮ ದೇಶವನ್ನು ಕಿತ್ತುಕೊಳ್ಳುವರು. ಅವರ ಸೈನ್ಯವು ಬಂದು ನಿಮ್ಮ ದೇಶದೊಳಗೆ ಪಾಳೆಯ ಮಾಡುವದು. ಅವರು ನಿಮ್ಮ ಮಧ್ಯದಲ್ಲಿ ವಾಸಿಸಿ ನಿಮ್ಮ ಹಣ್ಣುಗಳನ್ನು ತಿಂದು ನಿಮ್ಮ ಹಾಲನ್ನು ಕುಡಿಯುವರು.
ಅದಕ್ಕಾಗಿ ನಾನು ನಿಮ್ಮನ್ನು ದಂಡಿಸುವೆನು. ಜನಾಂಗಗಳಿಂದ ನಿಮ್ಮನ್ನು ಕೊಳ್ಳೆ ಹೊಡೆಸಿ ನಿರ್ಮೂಲ ಮಾಡುವೆನು. ದೇಶಗಳೊಳಗಿಂದ ನಿಮ್ಮ ಹೆಸರನ್ನು ಅಳಿಸಿಹಾಕುವೆನು; ನಿಮ್ಮನ್ನು ನಾಶಮಾಡುವೆನು. ನಾನೇ ಯೆಹೋವನೆಂಬುದು ಆಗ ನಿಮಗೆ ತಿಳಿಯುವುದು.’ ”
ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ: “ಎದೋಮ್ಯರು ಯೆಹೂದದ ಜನರು ಮೇಲೆ ಕ್ರೂರವಾದ ಸೇಡನ್ನು ತೀರಿಸಿಕೊಂಡಿದ್ದಾರೆ. ಅವರ ಮೇಲೆ ಸತತವಾಗಿ ಸೇಡು ತೀರಿಸಿಕೊಳ್ಳುವುದರ ಮೂಲಕ ಎದೋಮ್ಯರು ಮಹಾಪರಾಧ ಮಾಡಿದ ದೋಷಿಗಳಾಗಿದ್ದಾರೆ.”
ನಾನು ನನ್ನ ಇಸ್ರೇಲ್ ಜನರನ್ನು ಉಪಯೋಗಿಸಿ ಎದೋಮ್ಯರಿಗೆ ಮುಯ್ಯಿ ತೀರಿಸುವೆನು. ಈ ರೀತಿಯಾಗಿ ಎದೋಮಿನ ಮೇಲಿರುವ ನನ್ನ ಕೋಪವನ್ನು ಇಸ್ರೇಲರು ಅವರಿಗೆ ತೋರಿಸುವರು. ಆಗ ಎದೋಮ್ಯರು ನಾನು ಅವರನ್ನು ಶಿಕ್ಷಿಸಿದ್ದೇನೆಂದು ತಿಳಿದುಕೊಳ್ಳುವರು.” ಇದು ನನ್ನ ಒಡೆಯನಾದ ಯೆಹೋವನ ವಾಕ್ಯ.
ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಫಿಲಿಷ್ಟಿಯರು ಸೇಡನ್ನು ತೀರಿಸಿಕೊಂಡಿದ್ದಾರೆ. ಅವರು ಆವೇಶದಿಂದ ತಿರಸ್ಕರಿಸಿ ಸೇಡನ್ನು ತೀರಿಸಿಕೊಂಡಿದ್ದಾರೆ. ಅವರು ತಮ್ಮ ದೀರ್ಬಕಾಲದ ದೆಬಷದಿಂದ ನಾಶನವು ಬರುವಂತೆ ಮಾಡಿದ್ದಾರೆ.”
ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ನಾನು ಫಿಲಿಷ್ಟಿಯರನ್ನು ಶಿಕ್ಷಿಸುವೆನು, ಹೌದು, ಕೆರೇತದ ಆ ಜನರನ್ನು ನಾಶಮಾಡುವೆನು. ಸಮುದ್ರ ಕರಾವಳಿಯಲ್ಲಿ ವಾಸಿಸುವ ಉಳಿದ ಜನರನ್ನೆಲ್ಲಾ ನಾಶಮಾಡುವೆನು.