ನೀನು ಏನು ಹೇಳಬೇಕೆಂದರೆ, ‘ಜೆರುಸಲೇಮಿಗೆ ನನ್ನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ನಿನ್ನ ಇತಿಹಾಸವನ್ನು ನೋಡು. ನೀನು ಕಾನಾನ್‌ನಲ್ಲಿ ಜನಿಸಿರುತ್ತೀ. ನಿನ್ನ ತಂದೆಯು ಅಮೋರಿಯನು, ನಿನ್ನ ತಾಯಿ ಹಿತ್ತಿಯಳು.
ಜೆರುಸಲೇಮೇ, ನೀನು ಹುಟ್ಟಿದ ಆ ದಿವಸದಲ್ಲಿ ನಿನ್ನ ಹೊಕ್ಕಳ ನಾಳವನ್ನು ಕೊಯ್ಯಲು ಯಾರೂ ಇದ್ದಿಲ್ಲ. ನಿನ್ನ ಮೈಯನ್ನು ನೀರು ಹಾಕಿ ಯಾರೂ ತೊಳೆದು ಶುದ್ಧಮಾಡಿಲ್ಲ. ನಿನ್ನನ್ನು ಯಾರೂ ಉಪ್ಪಿನಿಂದ ಉಜ್ಜಿಲ್ಲ. ಯಾರೂ ನಿನಗೆ ಬಟ್ಟೆ ಸುತ್ತಲಿಲ್ಲ.
ಇವುಗಳಲ್ಲಿ ಯಾವುದನ್ನೇ ಮಾಡಲು ನಿನಗೋಸ್ಕರ ಯಾರೂ ಸಾಕಷ್ಟು ಮರುಕಪಡಲಿಲ್ಲ. ಜೆರುಸಲೇಮೇ, ನೀನು ಜನಿಸಿದ ದಿನದಲ್ಲಿ ನಿನಗೆ ಜನ್ಮವಿತ್ತವರು ನಿನ್ನನ್ನು ಹೊರಗೆ ಬಯಲಿನಲ್ಲಿ ಎಸೆದುಬಿಟ್ಟರು. ನೀನು ತಿರಸ್ಕರಿಸಲ್ಪಟ್ಟಿದ್ದೆ.
“ ‘ಆಗ ನಾನು (ದೇವರು) ಆ ಮಾರ್ಗವಾಗಿ ಹಾದುಹೋಗುವಾಗ ನೀನು ರಕ್ತಮಯವಾಗಿ ಹೊರಳಾಡುತ್ತಾ ಬಿದ್ದಿದ್ದೆ. ಆಗ ನಾನು “ಜೀವಿಸು” ಅಂದೆನು. ಹೌದು, ನೀನು ರಕ್ತದಲ್ಲಿ ಮುಳುಗಿದ್ದೀ. ಆಗ ನಾನು “ಜೀವಿಸು” ಅಂದೆನು.
ನಾನು, ಹೊಲದಲ್ಲಿ ಸಸಿಯು ಹೇಗೆ ಬೆಳೆಯುತ್ತದೋ ಹಾಗೆಯೇ ನೀನು ಬೆಳೆಯಲು ಸಹಾಯ ಮಾಡಿದೆನು. ನೀನು ಬೆಳೆಯುತ್ತಾ ಯೌವನದ ಹೊಸ್ತಿಲಲ್ಲಿ ಕಾಲಿಟ್ಟ ಹೆಂಗಸಿನಂತಾದೆ. ನಿನಗೆ ಮುಟ್ಟು ಪ್ರಾರಂಭವಾಯಿತು. ನಿನ್ನ ಸ್ತನಗಳು ಬೆಳೆದವು. ಕೂದಲುಗಳು ಬೆಳೆದವು. ಆದರೂ ನೀನು ಬಟ್ಟೆಯಿಲ್ಲದವಳಾಗಿ ಬೆತ್ತಲೆಯಾಗಿದ್ದೆ.
ನಾನು ಮತ್ತೆ ಹಾದುಹೋಗುವಾಗ ನಿನ್ನನ್ನು ನೋಡಲಾಗಿ ನೀನು ಸಂಭೋಗಿಸಲು ತಯಾರಾಗಿದ್ದೆ. ನಾನು ನನ್ನ ಹೊದಿಕೆಯನ್ನು ನಿನ್ನ ಮೇಲೆ ಹಾಕಿ ನಿನ್ನ ಬೆತ್ತಲೆ ದೇಹವನ್ನು ಮುಚ್ಚಿದೆನು. ನಿನ್ನನ್ನು ವಿವಾಹವಾಗಲು ಮಾತುಕೊಟ್ಟೆನು. ನಾನು ನಿನ್ನೊಡನೆ ಒಡಂಬಡಿಕೆ ಮಾಡಿಕೊಂಡೆನು. ಆಗ ನೀನು ನನ್ನವಳಾದೆ.’ ” ಇದು ನನ್ನ ಒಡೆಯನಾದ ಯೆಹೋವನ ನುಡಿ.
ನಿನಗೆ ಅಂದವಾದ ಉಡುಪನ್ನು ಕೊಟ್ಟು ಕಾಲಿಗೆ ನಯವಾದ ಚರ್ಮದ ಕೆರಗಳನ್ನು ಕೊಟ್ಟೆನು. ನಿನ್ನ ತಲೆಗೆ ನಾರುಮಡಿಯ ತಲೆಕಟ್ಟನ್ನು ಕೊಟ್ಟೆನು ಮತ್ತು ನಿನಗೆ ರೇಷ್ಮೆಯ ಬಟ್ಟೆಯನ್ನು ಹೊದಿಸಿದೆನು.
ನಿನ್ನ ಚಿನ್ನ, ಬೆಳ್ಳಿ, ಆಭರಣ, ನಾರುಮಡಿ, ರೇಷ್ಮೆ ಮತ್ತು ಕಸೂತಿ ಹಾಕಿದ ಬಟ್ಟೆಗಳಲ್ಲಿ ನೀನು ಸುಂದರಳಾಗಿ ಕಾಣಿಸುತ್ತಿದ್ದೆ. ನೀನು ಉತ್ತಮವಾದ ಆಹಾರವನ್ನು ಊಟ ಮಾಡಿದೆ: ಉತ್ತಮ ಗೋಧಿಹಿಟ್ಟು, ಜೇನುತುಪ್ಪ ಮತ್ತು ಆಲೀವ್ ಎಣ್ಣೆ. ನೀನು ಅತ್ಯಂತ ಸುಂದರಿಯಾದೆ. ಮತ್ತು ನೀನು ರಾಣಿಯಾಗಿದ್ದೆ.
ಹೌದು, ನೀನು ನಿನ್ನ ಸಂಪೂರ್ಣವಾದ ಸೌಂದರ್ಯಕ್ಕಾಗಿ ಜನಾಂಗಗಳ ಮಧ್ಯದಲ್ಲಿ ಹೆಸರು ವಾಸಿಯಾಯಿತು. ಯಾಕೆಂದರೆ ನಾನು ನಿನ್ನನ್ನು ಅತ್ಯಂತ ಸೌಂದರ್ಯವತಿಯನ್ನಾಗಿ ಮಾಡಿದೆನು.’ ” ಇವುಗಳನ್ನು ನನ್ನ ಒಡೆಯನಾದ ಯೆಹೋವನು ಹೇಳಿದನು.
ದೇವರು ಹೀಗೆಂದನು: “ನೀನು ನಿನ್ನ ಸೌಂದರ್ಯದ ಮೇಲೆ ಭರವಸೆ ಉಳ್ಳವಳಾಗಿದ್ದೆ. ನಿನ್ನ ಪ್ರಖ್ಯಾತಿಯಿಂದಾಗಿ ನನಗೆ ಅಪನಂಬಿಗಸ್ತಳಾದಿ. ನಿನ್ನನ್ನು ಹಾದುಹೋಗುವ ಪ್ರತಿವ್ಯಕ್ತಿಯೊಂದಿಗೆ ನೀನು ವೇಶ್ಯೆಯಂತೆ ನಡೆದುಕೊಂಡಿ. ನೀನು ನಿನ್ನನ್ನು ಅವರಿಗೊಪ್ಪಿಸಿದಿ.
ನೀನು ನಿನ್ನ ಬಟ್ಟೆಗಳಲ್ಲಿ ಕೆಲವನ್ನು ತೆಗೆದುಕೊಂಡು ನಿನ್ನ ಪೂಜಿಸುವ ಸ್ಥಳಗಳನ್ನು ವರ್ಣರಂಜಿತವನ್ನಾಗಿ ಮಾಡಿದೆ ಮತ್ತು ಆ ಸ್ಥಳಗಳಲ್ಲಿ ನೀನು ಸೂಳೆಯಂತೆ ವರ್ತಿಸಿದೆ. ಹಾದುಹೋಗುವ ಪ್ರತಿಯೊಬ್ಬ ಗಂಡಸಿಗೂ ನೀನು ನಿನ್ನನ್ನು ಒಪ್ಪಿಸಿಕೊಟ್ಟೆ.
ನಾನು ನಿನಗೆ ರೊಟ್ಟಿ, ಜೇನು ಮತ್ತು ಎಣ್ಣೆಯನ್ನು ಕೊಟ್ಟಿದ್ದೆನು. ಆದರೆ ನೀನು ಆ ಆಹಾರವನ್ನು ಮೂರ್ತಿಗಳಿಗೆ ಕೊಟ್ಟೆ. ಆ ಸುಳ್ಳು ದೇವರುಗಳನ್ನು ಮೆಚ್ಚಿಸುವದಕ್ಕೋಸ್ಕರ ನೀನು ಅವುಗಳನ್ನು ಸುಗಂಧವಾಸನೆಯ ಕಾಣಿಕೆಯಂತೆ ಅರ್ಪಿಸಿದೆ.” ನನ್ನ ಒಡೆಯನಾದ ಯೆಹೋವನು ಈ ಸಂಗತಿಗಳನ್ನು ಹೇಳಿದನು.
ದೇವರು ಹೇಳಿದ್ದೇನೆಂದರೆ, “ನನ್ನ ಮಕ್ಕಳಾಗಿದ್ದ ನಿನ್ನ ಪುತ್ರಪುತ್ರಿಯರನ್ನು ನೀನು ತೆಗೆದುಕೊಂಡು ಅವರನ್ನು ಆಹಾರವನ್ನಾಗಿ ವಿಗ್ರಹಗಳಿಗೆ ಯಜ್ಞ ಅರ್ಪಿಸಿದೆ. ನಿನ್ನ ಸೂಳೆತನವು ಸಾಕಾಗಿರಲಿಲ್ಲವೇ?
ನಿನ್ನ ಅಸಹ್ಯಕೃತ್ಯಗಳನ್ನೂ ಸೂಳೆಯಂತೆ ವರ್ತಿಸುತ್ತಿರುವುದನ್ನೂ ನಿನ್ನ ಎಳೆತನದ ಸಮಯವನ್ನೂ ಮತ್ತು ನಿನ್ನ ಸ್ವಂತ ರಕ್ತದಲ್ಲಿ ಬೆತ್ತಲೆಯಾಗಿ ಹೊರಳಾಡುತ್ತಿದ್ದುದನ್ನೂ ನೀನು ಮರೆತುಬಿಟ್ಟೆ.
“ನೀನು ಎಲ್ಲಾ ದುಷ್ಕೃತ್ಯಗಳನ್ನು ಮಾಡಿದ ನಂತರ ಸುಳ್ಳು ದೇವರುಗಳಿಗಾಗಿ ಎತ್ತರವಾದ ಸ್ಥಳಗಳಲ್ಲಿ ಹೆಚ್ಚು ಪೂಜಾಸ್ಥಳಗಳನ್ನು ಮಾಡಿದೆ. ಪ್ರತಿಯೊಂದು ರಸ್ತೆಯ ಚೌಕಗಳಲ್ಲಿ ಅನ್ಯದೇವರುಗಳಿಗಾಗಿ ಪೂಜಾಸ್ಥಳಗಳನ್ನು ಮಾಡಿದೆ.
ಪ್ರತೀ ರಸ್ತೆಯ ಪ್ರಾರಂಭದಲ್ಲಿ ಅಂಥಾ ಪೂಜಾಸ್ಥಳಗಳನ್ನು ನಿರ್ಮಿಸಿದ್ದೀ. ನೀನು ನಿನ್ನ ಸೌಂದರ್ಯವನ್ನು ಹಾಳುಮಾಡಿಕೊಂಡಿ. ನೀನು ಅಸಹ್ಯವಾದ ಕಾರ್ಯಗಳನ್ನು ಮಾಡಲು ನಿನ್ನ ಸೌಂದರ್ಯವನ್ನು ಬಳಸಿಕೊಂಡೆ. ಹಾದಿಯಲ್ಲಿ ಹೋಗುವ ಪ್ರತಿಯೊಬ್ಬ ಗಂಡಸಿಗೂ ನೀನು ಲೈಂಗಿಕ ತೃಪ್ತಿ ನೀಡಿ ನಿನ್ನ ಸೂಳೆತನವನ್ನು ಹೆಚ್ಚಿಸಿಕೊಂಡೆ.
ಆಗ ನಾನು ನಿನ್ನನ್ನು ಶಿಕ್ಷಿಸಿದೆನು. ನಾನು ನಿನಗೆ ಕೊಟ್ಟ ದೇಶದಿಂದ ಸ್ವಲ್ಪ ಭಾಗವನ್ನು ಕಿತ್ತುಕೊಂಡೆನು. ನಿನ್ನ ಶತ್ರುಗಳಾದ ಫಿಲಿಷ್ಟಿಯರ ಹೆಣ್ಣುಮಕ್ಕಳು ನಿನ್ನೊಂದಿಗೆ ತಮಗೆ ಇಷ್ಟ ಬಂದಂತೆ ವರ್ತಿಸಲುಬಿಟ್ಟೆನು. ನಿನ್ನ ಕೆಟ್ಟಕಾರ್ಯಗಳನ್ನು ನೋಡಿ ಅವರೂ ಅಚ್ಚರಿಗೊಂಡರು.
ದೇವರು ಹೇಳಿದ್ದೇನೆಂದರೆ, “ಆದರೆ ನೀನು ವೇಶ್ಯೆಯ ಹಾಗೆ ಪೂರ್ಣವಾಗಿರಲಿಲ್ಲ. ನೀನು ಎತ್ತರದ ಪೂಜಾಸ್ಥಳಗಳನ್ನು ಪ್ರತೀ ರಸ್ತೆಯ ಪ್ರಾರಂಭದಲ್ಲಿಯೂ ಯಜ್ಞವೇದಿಕೆಗಳನ್ನು ಪ್ರತಿ ರಸ್ತೆಯ ಮೂಲೆಗಳಲ್ಲಿಯೂ ಕಟ್ಟಿಸಿರುವೆ. ಆ ಎಲ್ಲಾ ಪುರುಷರೊಂದಿಗೆ ನೀನು ಸಂಭೋಗಿಸಿರುವೆ. ಆದರೆ ಸೂಳೆಯಂತೆ ಅವರಿಂದ ನೀನು ಹಣ ತೆಗೆದುಕೊಳ್ಳಲಿಲ್ಲ.
ವೇಶ್ಯೆಯರು ತಮ್ಮೊಡನೆ ಕೂಡುವದಕ್ಕಾಗಿ ಪುರುಷರಿಂದ ಹಣ ವಸೂಲಿ ಮಾಡುವರು. ಆದರೆ ನಿನ್ನ ಪ್ರಿಯತಮರಿಗೆ ನೀನೇ ಹಣವನ್ನು ಕೊಟ್ಟಿರುವೆ. ನಿನ್ನೊಂದಿಗೆ ಸಂಭೋಗ ಮಾಡಲು ನೀನೇ ಅವರಿಗೆ ಹಣವನ್ನು ಕೊಟ್ಟಿರುವೆ.
ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನಿನ್ನ ಅತಿಯಾದ ಶರೀರದಾಶೆಯಿಂದಾಗಿ, ನಿನ್ನ ಬೆತ್ತಲೆಯ ದೇಹವನ್ನು ನೋಡಿ ನಿನ್ನೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಲು ನೀನು ನಿನ್ನ ಪ್ರಿಯತಮರಿಗೂ, ನಿನ್ನ ಹೊಲಸು ದೇವರುಗಳಿಗೂ ಅವಕಾಶ ಮಾಡಿಕೊಟ್ಟೆ. ನೀನು ನಿನ್ನ ಮಕ್ಕಳನ್ನು ಕೊಂದು ಅವರ ರಕ್ತವನ್ನು ಸುರಿಸಿರುವೆ. ಇದು ಆ ಹೊಲಸು ದೇವರುಗಳಿಗೆ ನೀನು ಕೊಟ್ಟ ದಾನ.
ಈ ಕಾರಣದಿಂದ, ನೀನು ಸುಖ ಕೊಟ್ಟಿರುವ ನಿನ್ನ ಎಲ್ಲಾ ಪ್ರಿಯರನ್ನು ಅಂದರೆ ಈಗಿನ ಪ್ರಿಯರನ್ನು ಮತ್ತು ನೀನು ತಿರಸ್ಕರಿಸಿರುವ ಹಿಂದಿನ ಪ್ರಿಯರನ್ನೂ ಒಟ್ಟಾಗಿ ಸೇರಿಸಿ, ನಿನ್ನ ಬೆತ್ತಲೆತನವನ್ನು ಅವರು ನೋಡುವಂತೆ ಮಾಡುವೆನು. ಅವರು ನಿನ್ನನ್ನು ಪೂರ್ತಿಯಾಗಿ ನೋಡುವರು.
ಆ ನಿನ್ನ ಪ್ರಿಯತಮರಿಗೆ ನಿನ್ನನ್ನು ಬಿಟ್ಟುಕೊಡುವೆನು. ಅವರು ನಿನ್ನ ದಿಬ್ಬಗಳನ್ನು ನಾಶಮಾಡುವರು ಮತ್ತು ಪೂಜಾಯಜ್ಞವೇದಿಕೆಗಳನ್ನು ಕೆಡವಿಹಾಕುವರು. ನಿನ್ನ ಬಟ್ಟೆಗಳನ್ನು ಕಿತ್ತುಕೊಳ್ಳುವರು ಮತ್ತು ಚಂದವಾದ ಆಭರಣಗಳನ್ನು ತೆಗೆದುಕೊಂಡು ಹೋಗುವರು. ಮತ್ತು ನಿನ್ನನ್ನು ಬೆತ್ತಲೆಯಾಗಿ ಮಾಡುವರು.
ಬಳಿಕ, ಅನೇಕ ಸ್ತ್ರೀಯರು ನೋಡಲೆಂದು ನಿನ್ನ ಮನೆಗಳನ್ನು ಸುಟ್ಟು, ನಿನ್ನನ್ನು ದಂಡಿಸುವರು. ನೀನು ಸೂಳೆಯಂತೆ ಜೀವಿಸುವದನ್ನು ನಾನು ನಿಲ್ಲಿಸುವೆನು. ನೀನು ನಿನ್ನ ಪ್ರಿಯತಮರಿಗೆ ಹಣ ಕೊಡುವದನ್ನು ನಿಲ್ಲಿಸುತ್ತೇನೆ.
ಇವೆಲ್ಲಾ ಯಾಕೆ ಸಂಭವಿಸಬೇಕು? ಯಾಕೆಂದರೆ ನೀನು ಎಳೆಯವಳಾಗಿದ್ದಾಗ ಏನು ಸಂಭವಿಸಿತೆಂದು ಮರೆತುಬಿಟ್ಟಿರುವೆ. ನೀನು ಕೆಟ್ಟಕೆಲಸಗಳನ್ನು ಮಾಡಿ ನಾನು ಕೋಪಿಸಿಕೊಳ್ಳುವಂತೆ ಮಾಡಿರುವೆ. ಆದ್ದರಿಂದ ಆ ಕೆಟ್ಟಕಾರ್ಯ ಮಾಡಿದ್ದಕ್ಕಾಗಿ ನಿನ್ನನ್ನು ಶಿಕ್ಷಿಸಬೇಕಾಗಿ ಬಂತು. ನೀನು ಅದಕ್ಕಿಂತಲೂ ಭಯಂಕರಕೃತ್ಯ ನಡಿಸಲು ಯೋಜನೆ ಹಾಕಿಕೊಂಡಿರುವೆ.” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.
ನೀನು ನಿನ್ನ ತಾಯಿಯ ಮಗಳು. ನೀನು ನಿನ್ನ ಗಂಡನನ್ನು ಮತ್ತು ಮಕ್ಕಳನ್ನು ತಿರಸ್ಕರಿಸಿರುವೆ. ನೀನು ನಿನ್ನ ಸಹೋದರಿಯಂತಿರುವೆ. ನೀವು ನಿಮ್ಮ ಗಂಡಂದಿರನ್ನೂ ಮಕ್ಕಳನ್ನೂ ತಿರಸ್ಕರಿಸಿದಿರಿ. ನೀವು ನಿಮ್ಮನ್ನು ಹೆತ್ತವರ ತರಹ ಇದ್ದೀರಿ. ನಿಮ್ಮ ತಾಯಿ ಹಿತ್ತಿಯಳಾಗಿದ್ದಳು. ನಿಮ್ಮ ತಂದೆಯು ಅಮೋರಿಯದವನಾಗಿದ್ದನು.
ನಿನ್ನ ಅಕ್ಕ ಸಮಾರ್ಯಳು. ಆಕೆಯು ನಿನ್ನ ಉತ್ತರ ದಿಕ್ಕಿನಲ್ಲಿ ತನ್ನ ಹೆಣ್ಣು ಮಕ್ಕಳೊಂದಿಗೆ (ಪಟ್ಟಣಗಳು) ವಾಸ ಮಾಡಿದ್ದಳು. ನಿನ್ನ ತಂಗಿಯು ಸೊದೋಮಳು. ಆಕೆ ನಿನ್ನ ದಕ್ಷಿಣದಲ್ಲಿ ತನ್ನ ಹೆಣ್ಣುಮಕ್ಕಳೊಂದಿಗೆ (ಪಟ್ಟಣಗಳು) ವಾಸಿಸಿದ್ದಳು.
ದೇವರು ಹೇಳಿದ್ದೇನೆಂದರೆ, “ನಿನ್ನ ತಂಗಿ ಸೊದೋಮ್ ಮತ್ತು ಆಕೆಯ ಹೆಣ್ಣುಮಕ್ಕಳು ಕೊಬ್ಬಿದ ಕಣ್ಣುಳ್ಳವರಾಗಿದ್ದರು. ಅವರಿಗೆ ತಿನ್ನಲು ಬೇಕಾದಷ್ಟಿತ್ತು. ಅವರು ಶಾಂತಿಕರವಾದ ಸುಭದ್ರತೆಯಲ್ಲಿ ಜೀವಿಸಿದರು. ಅವರು ಬಡವರಿಗೆ ಸಹಾಯ ಮಾಡಲಿಲ್ಲ.
ದೇವರು ಹೇಳಿದ್ದೇನೆಂದರೆ: “ನೀನು ಮಾಡಿದ ದುಷ್ಕೃತ್ಯಗಳ ಅರ್ಧದಷ್ಟು ಸಮಾರ್ಯವು ಮಾಡಿತ್ತು. ಸಮಾರ್ಯದವರಿಗಿಂತಲೂ ಹೆಚ್ಚಾದ ಭಯಂಕರಕೃತ್ಯಗಳನ್ನು ನೀನು ಮಾಡಿರುವೆ. ನಿನ್ನ ಅಕ್ಕತಂಗಿಯರಿಗಿಂತ ಹೆಚ್ಚಾಗಿ ನೀನು ದುಷ್ಕೃತ್ಯಗಳನ್ನು ಮಾಡಿರುವೆ. ಸಮಾರ್ಯ ಮತ್ತು ಸೊದೋಮ್ ನಿನ್ನೊಂದಿಗೆ ಹೋಲಿಸಿ ನೋಡಿದರೆ ಅವು ಒಳ್ಳೆಯ ಪಟ್ಟಣಗಳಂತೆ ತೋರಿಬರುತ್ತವೆ.
ಆದ್ದರಿಂದ ನಿನ್ನ ಅವಮಾನವನ್ನು ನೀನು ಸಹಿಸಿಕೊಳ್ಳಬೇಕು. ನಿನಗಿಂತ ನಿನ್ನ ಸಹೋದರಿಯರು ನೀತಿವಂತರಂತೆ ತೋರುತ್ತಾರೆ. ಯಾಕೆಂದರೆ ನಿನ್ನ ಪಾಪಗಳು ಬಹಳ ಅಸಹ್ಯವಾಗಿದ್ದವು. ಆದ್ದರಿಂದ ನಿನಗೆ ಅವಮಾನವಾಗಲೇಬೇಕು; ನೀನು ನಾಚಿಕೆಯನ್ನು ಅನುಭವಿಸಲೇಬೇಕು ಯಾಕೆಂದರೆ ನೀನು ನಿನ್ನ ಸಹೋದರಿಯರನ್ನು ನಿರಪರಾಧಿಗಳಾಗಿ ಕಾಣುವಂತೆ ಮಾಡಿರುವೆ.”
ದೇವರು ಹೇಳಿದ್ದೇನೆಂದರೆ: “ಸೊದೋಮ್ ಮತ್ತು ಅದರ ಸುತ್ತಲೂ ಇದ್ದ ನಗರಗಳನ್ನು ನಾನು ನಾಶಮಾಡಿದೆನು. ನಾನು ಸಮಾರ್ಯವನ್ನು ನಾಶಮಾಡಿದೆನು. ಮತ್ತು ಜೆರುಸಲೇಮೇ, ನಾನು ನಿನ್ನನ್ನು ನಾಶಮಾಡುವೆ. ಆದರೆ ನಾನು ತಿರುಗಿ ಆ ಪಟ್ಟಣಗಳನ್ನು ಕಟ್ಟುವೆನು. ಜೆರುಸಲೇಮೇ, ನಾನು ನಿನ್ನನ್ನೂ ಕಟ್ಟುವೆನು.
ಈಗಿನಂತೆ, ನಿನ್ನ ದುಷ್ಟತನವು ಹೊರಬರುವುದಕ್ಕಿಂತ ಮೊದಲು ನೀನು ಅದನ್ನು ಮಾಡಿದೆ. ಈಗ ಎದೋಮಿನ ಹೆಣ್ಣುಮಕ್ಕಳು (ಪಟ್ಟಣಗಳು) ಮತ್ತು ಆಕೆಯ ನೆರೆಯವರು ನಿನ್ನನ್ನು ಗೇಲಿ ಮಾಡುವರು. ಫಿಲಿಷ್ಟಿಯರ ಹೆಣ್ಣುಮಕ್ಕಳು ಸಹ ನಿನ್ನನ್ನು ಗೇಲಿ ಮಾಡುವರು. ನಿನ್ನ ಸುತ್ತಲೂ ಇರುವವರು ನಿನ್ನನ್ನು ಕಡೆಗಾಣಿಸುವರು.
ಈ ಮಾತುಗಳನ್ನು ನನ್ನ ಒಡೆಯನಾದ ಯೆಹೋವನು ಹೇಳಿದನು. “ನೀನು ಮಾಡಿರುವದನ್ನು ನಾನೂ ನಿನಗೆ ಮಾಡುವೆನು. ನೀನು ನಿನ್ನ ಮದುವೆ ಒಡಂಬಡಿಕೆಯನ್ನು ಮುರಿದುಬಿಟ್ಟೆ. ನಮ್ಮ ಒಡಂಬಡಿಕೆಗೆ ನೀನು ಮಹತ್ವ ಕೊಡಲಿಲ್ಲ.
ನಿನ್ನ ಅಕ್ಕತಂಗಿಯಂದಿರನ್ನು ನಾನು ನಿನ್ನ ಬಳಿಗೆ ತಂದು ಅವರನ್ನು ನಿನ್ನ ಮಕ್ಕಳನ್ನಾಗಿ ಮಾಡುವೆನು. ಅದು ನಮ್ಮ ಒಡಂಬಡಿಕೆಯಲ್ಲಿಲ್ಲದಿದ್ದರೂ ನಾನು ಅದನ್ನು ನಿನಗಾಗಿ ಮಾಡುವೆನು. ಆಗ ನೀನು ಮಾಡಿದ ಭಯಂಕರ ಸಂಗತಿಗಳನ್ನು ಜ್ಞಾಪಕಕ್ಕೆ ತಂದು ನೀನು ನಾಚಿಕೊಳ್ಳುವಿ.
ಹೀಗಿರಲು, ನಿನ್ನ ಕಾರ್ಯಗಳನ್ನೆಲ್ಲಾ ನಾನು ಕ್ಷಮಿಸುವಾಗ, ನೀನು ಅವುಗಳನ್ನು ಜ್ಞಾಪಿಸಿಕೊಂಡು ನಾಚಿಕೆಪಡುವೆ. ಅಹಂಕಾರದಿಂದ ಮಾತನಾಡಲು ಮತ್ತೊಮ್ಮೆ ಬಾಯಿ ತೆರೆಯಲಾಗದಂತೆ ನೀನು ಬಹಳವಾಗಿ ಅವಮಾನಿತಳಾಗುವೆ.” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.