ಆಗ ಆತ್ಮವು ನನ್ನನ್ನು ಯೆಹೋವನಾಲಯದ ಪೂರ್ವದ ಬಾಗಿಲಿಗೆ ಕೊಂಡೊಯ್ಯಿತು. ಬಾಗಿಲಿನ ಪ್ರವೇಶ ಸ್ಥಳದಲ್ಲಿ ನಾನು ಇಪ್ಪತ್ತೈದು ಮಂದಿ ಜನರನ್ನು ನೋಡಿದೆನು. ಅವರಲ್ಲಿ ಅಜ್ಜೂರನ ಮಗನಾದ ಯಾಜನ್ಯನನ್ನು, ಬೆನಾಯನ ಮಗನಾದ ಪೆಲತ್ಯನನ್ನು ನಾನು ನೋಡಿದೆನು. ಅವರಿಬ್ಬರು ಜನರಿಗೆ ನಾಯಕರಾಗಿದ್ದರು.
ಆಗ ಯೆಹೋವನ ಆತ್ಮನು ನನ್ನ ಮೇಲೆ ಬಂದನು. ಆತನು ಹೇಳಿದ್ದೇನೆಂದರೆ, “ಯೆಹೋವನು ಹೀಗೆ ಹೇಳುತ್ತಾನೆಂದು ಆ ಜನರಿಗೆ ತಿಳಿಸು: ಇಸ್ರೇಲ್ ಮನೆತನವೇ, ನೀನು ದೊಡ್ಡದೊಡ್ಡ ವಿಷಯಗಳನ್ನು ಆಲೋಚಿಸುತ್ತೀ. ನೀನು ಏನೂ ಯೋಚಿಸುತ್ತೀ ಎಂದ ನಾನು ಬಲ್ಲೆನು.
ಆಗ ನಾನು ಯೆಹೋವನು ಎಂದು ನೀವು ತಿಳಿಯುವಿರಿ. ನನ್ನ ಆಜ್ಞೆಗೆ ನೀವು ಅವಿಧೇಯರಾದಿರಿ. ನನ್ನ ಕಟ್ಟಳೆಗಳಿಗೆ ನೀವು ವಿಧೇಯರಾಗಲಿಲ್ಲ. ನಿಮ್ಮ ಸುತ್ತಲೂ ಇರುವ ಜನಾಂಗಗಳಂತೆ ಇರಲು ನೀವು ನಿರ್ಧರಿಸಿರುತ್ತೀರಿ.”
ನಾನು ದೇವರ ಪರವಾಗಿ ಮಾತನಾಡುವದನ್ನು ನಿಲ್ಲಿಸಿದ ಕೂಡಲೇ, ಬೆನಾಯನ ಮಗನಾದ ಪೆಲತ್ಯನು ಸತ್ತನು. ನಾನು ನೆಲದ ಮೇಲೆ ಬಗ್ಗಿ, “ನನ್ನ ಒಡೆಯನಾದ ಯೆಹೋವನೇ, ನೀನು ಇಸ್ರೇಲಿನಲ್ಲಿ ಅಳಿದುಳಿದವರನ್ನು ಸಂಪೂರ್ಣವಾಗಿ ನಾಶಮಾಡುವಿಯೋ?” ಎಂದು ಗಟ್ಟಿಯಾಗಿ ಕೂಗಿಕೊಂಡೆನು.
“ನರಪುತ್ರನೇ, ಜೆರುಸಲೇಮಿನಲ್ಲಿ ವಾಸವಾಗಿರುವ ಜನರು ನಿನ್ನ ಸಹೋದರರ, ನಿನ್ನ ಸ್ವಂತ ಸಂಬಂಧಿಕರ ಮತ್ತು ಇಡೀ ಇಸ್ರೇಲ್ ವಂಶದವರ ಬಗ್ಗೆ ಈಗ ಮಾತಾಡುತ್ತಿದ್ದಾರೆ. ‘ಅವರು, ಯೆಹೋವನಿಂದ ದೂರವಾಗಿದ್ದಾರೆ. ಈ ದೇಶವು ನಮಗೆ ನಮ್ಮ ಸ್ವಂತ ಆಸ್ತಿಯಾಗಿ ಕೊಡಲ್ಪಟ್ಟಿದೆ’ ಎಂದು ಅವರು ಹೇಳುತ್ತಾರೆ.
“ಆದ್ದರಿಂದ ಜನರಿಗೆ ಹೀಗೆ ಹೇಳು: ನಮ್ಮ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ‘ನಾನು ನನ್ನ ಜನರನ್ನು ಬಹುದೂರದಲ್ಲಿರುವ ಜನಾಂಗಗಳ ಮಧ್ಯಕ್ಕೆ ಹೋಗುವಂತೆ ಮಾಡಿದ್ದು ನಿಜ. ನಾನು ಅನೇಕ ದೇಶಗಳಲ್ಲಿ ಅವರನ್ನು ಚದರಿಸಿರುತ್ತೇನೆ. ಅವರು ಪರದೇಶಗಳಲ್ಲಿರುವಾಗ ಸ್ವಲ್ಪಕಾಲ ನಾನೇ ಅವರಿಗೆ ದೇವಾಲಯವಾಗಿರುವೆನು.
ಆದ್ದರಿಂದ ಹೀಗೆ ಹೇಳು: ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ನಿಮ್ಮನ್ನು ಜನಾಂಗಗಳಿಂದ ಒಟ್ಟುಗೂಡಿಸುವೆನು; ನೀವು ಚದರಿಸಲ್ಪಟ್ಟಿರುವ ದೇಶಗಳಿಂದ ನಾನು ನಿಮ್ಮನ್ನು ಒಟ್ಟುಗೂಡಿಸುವೆನು; ಮತ್ತು ನಾನು ನಿಮಗೆ ಇಸ್ರೇಲ್ ದೇಶವನ್ನು ಕೊಡುವೆನು.
ಆಗ ಅವರು ನನ್ನ ಆಜ್ಞಾವಿಧಿಗಳಿಗೆ ವಿಧೇಯರಾಗುವರು. ನಾನು ಹೇಳುವದನ್ನು ಅವರು ಮಾಡುವರು. ಅವರು ನಿಜವಾಗಿಯೂ ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು.’ ” ಯೆಹೋವನ ಮಹಿಮೆ ಜೆರುಸಲೇಮ್‌ನ್ನು ಬಿಟ್ಟಿದ್ದು
ಆಮೇಲೆ ದೇವರು ಹೇಳಿದ್ದೇನೆಂದರೆ: “ಆದರೆ ಈಗ ಅವರ ಹೃದಯವು ಆ ಹೊಲಸು ವಿಗ್ರಹಗಳಿಗೆ ಸೇರಿದ್ದಾಗಿದೆ. ಅವರು ಮಾಡಿದ ದುಷ್ಟತನಕ್ಕೆ ನಾನು ಅವರನ್ನು ಶಿಕ್ಷಿಸಲೇಬೇಕಾಗಿದೆ.” ನನ್ನ ಒಡೆಯನಾದ ಯೆಹೋವನು ಈ ಸಂಗತಿಗಳನ್ನು ತಿಳಿಸಿದನು.
ಆಗ ಆತ್ಮವು ನನ್ನನ್ನು ಆಕಾಶಕ್ಕೆ ಎತ್ತಿ ಬಾಬಿಲೋನ್ ದೇಶಕ್ಕೆ ಮರಳಿ ತಂದಿತು. ಸೆರೆ ಒಯ್ಯಲ್ಪಟ್ಟಿದ್ದ ಜನರ ಮಧ್ಯೆ ನಾನು ಬಂದೆನು. ದೇವಾರಾತ್ಮವು ಕೊಟ್ಟ ದರ್ಶನದಲ್ಲಿ ನಾನು ಆ ಎಲ್ಲಾ ವಿಷಯಗಳನ್ನು ಕಂಡೆನು. ಬಳಿಕ, ನಾನು ಕಂಡ ಆ ದರ್ಶನವು ನನ್ನನ್ನು ಬಿಟ್ಟುಹೋಯಿತು.