ಆಗ ಸಿಂಹಾಸನದಲ್ಲಿ ಕೂತಿದ್ದಾತನು ನಾರುಮಡಿ ಧರಿಸಿದ್ದವನಿಗೆ, “ಕೆರೂಬಿದೂತರ ಕೆಳಗಿರುವ ಚಕ್ರಗಳ ನಡುವೆ ಹೋಗು. ಕೆರೂಬಿಗಳ ನಡುವೆ ಇರುವ ಉರಿಯುವ ಕೆಂಡಗಳನ್ನು ನಿನ್ನ ಅಂಗೈಗಳಲ್ಲಿ ತುಂಬಿಕೊಂಡು ಜೆರುಸಲೇಮ್ ನಗರದ ಮೇಲೆ ಹರಡು” ಎಂದು ಹೇಳಿದನು. ನಾನು ನೋಡುತ್ತಿರಲು ಆ ಮನುಷ್ಯನು ಒಳಗೆ ಹೋದನು.
ಕೆರೂಬಿದೂತರ ರೆಕ್ಕೆಗಳ ಬಡಿತದ ಶಬ್ದವು ಹೊರಗಿನ ಪ್ರಾಕಾರದ ತನಕ ಕೇಳುತ್ತಿತ್ತು. ಅದು ತುಂಬಾ ಗಟ್ಟಿಯಾದ ಶಬ್ದವಾಗಿತ್ತು. ಸರ್ವಶಕ್ತನಾದ ದೇವರು ಮಾತನಾಡುವಾಗ ಆಗುವ ಗುಡುಗಿನ ಶಬ್ದದಂತಿತ್ತು.
ನಾರುಮಡಿ ಧರಿಸಿಕೊಂಡಿದ್ದವನಿಗೆ ದೇವರು, “ಕೆರೂಬಿದೂತರ ಮಧ್ಯದೊಳಗಿಂದ, ಚಕ್ರಗಳ ಮಧ್ಯೆ ಪ್ರವೇಶಿಸಿ ಅಲ್ಲಿಂದ ಉರಿಯುವ ಕೆಂಡಗಳನ್ನು ತೆಗೆದುಕೊ” ಎಂದು ಆಜ್ಞಾಪಿಸಿದಾಗ, ಆ ಮನುಷ್ಯನು ಅಲ್ಲಿಗೆ ಹೋಗಿ ಚಕ್ರಗಳ ಸಮೀಪದಲ್ಲಿ ನಿಂತುಕೊಂಡನು.
ಅವರ ಶರೀರದ ಮೇಲೆಲ್ಲಾ ಕಣ್ಣುಗಳಿದ್ದವು. ಅವರ ಬೆನ್ನಿನ ಮೇಲೆ, ಕೈಗಳ ಮೇಲೆ, ರೆಕ್ಕೆಗಳ ಮೇಲೆ, ಅವರ ಚಕ್ರಗಳ ಮೇಲೆ ಕಣ್ಣುಗಳಿದ್ದವು. ಹೌದು, ಅವರ ನಾಲ್ಕು ಚಕ್ರಗಳ ಮೇಲೂ ಕಣ್ಣುಗಳಿದ್ದವು.
ಕೆರೂಬಿದೂತರು ಗಾಳಿಯಲ್ಲಿ ಹಾರಾಡಿದಾಗ ಚಕ್ರಗಳೂ ಅವರೊಂದಿಗೆ ಹೋದವು. ಅವು ನಿಂತಾಗ ಚಕ್ರಗಳೂ ನಿಂತುಬಿಡುತ್ತಿದ್ದವು. ಯಾಕೆಂದರೆ ಜೀವಿಗಳನ್ನು ಹತೋಟಿಯಲ್ಲಿಡುವ ಆತ್ಮವು ಚಕ್ರಗಳಲ್ಲಿತ್ತು.
ಕೆರೂಬಿದೂತರು ರೆಕ್ಕೆಗಳನ್ನು ಚಾಚಿ ಹಾರಿದವು. ಅವು ಆಲಯವನ್ನು ಬಿಟ್ಟುಹೋಗುವದನ್ನು ನೋಡಿದೆನು. ಚಕ್ರಗಳು ಅವುಗಳೊಂದಿಗೆ ಹೋದವು. ಅವು ಯೆಹೋವನಾಲಯದ ಪೂರ್ವದ ಬಾಗಿಲ ಬಳಿ ನಿಂತವು. ಇಸ್ರೇಲಿನ ದೇವರ ಮಹಿಮೆಯು ಅವುಗಳ ಮೇಲೆ ಇತ್ತು.