Bible Languages

Indian Language Bible Word Collections

Bible Versions

Books

Deuteronomy Chapters

Deuteronomy 32 Verses

Bible Versions

Books

Deuteronomy Chapters

Deuteronomy 32 Verses

1 “ಆಕಾಶವೇ, ನಾನು ಹೇಳುವುದನ್ನು ಕೇಳು. ಭೂಮಿಯೇ, ನನ್ನ ಬಾಯಿಯ ಮಾತುಗಳನ್ನು ಆಲಿಸು.
2 ನನ್ನ ಬೋಧನೆಯು ವೃಷ್ಟಿಯೋಪಾದಿ ಬರುವುದು. ನೆಲದ ಮೇಲೆ ಬೀಳುವ ಇಬ್ಬನಿಯಂತಿರುವುದು; ಮೃದುವಾದ ಹುಲ್ಲಿನ ಮೇಲೆ ಬೀಳುವ ಹದವಾದ ಮಳೆಯಂತಿರುವುದು; ಹಸಿರು ಸಸಿಗಳ ಮೇಲೆ ಬೀಳುವ ಮಳೆಯ ಹನಿಯಂತಿರುವುದು.
3 ಯೆಹೋವನ ಹೆಸರಿನಲ್ಲಿ ಮಾತಾಡುವಂತೆ ಮಾಡಿದ ದೇವರಿಗೆ ಸ್ತೋತ್ರ!
4 ಯೆಹೋವನ ಕಾರ್ಯವು ನಿಷ್ಕಳಂಕವಾದದ್ದು. ಯಾಕೆಂದರೆ ಆತನ ಮಾರ್ಗವೆಲ್ಲವೂ ಸರಿಯಾದದ್ದೇ. ದೇವರು ಸತ್ಯವಂತನೂ ನಂಬಿಗಸ್ತನೂ ಆಗಿದ್ದಾನೆ. ಆತನು ಒಳ್ಳೆಯವನೂ ಪ್ರಾಮಾಣಿಕನೂ ಆಗಿದ್ದಾನೆ.
5 ನೀವು ದ್ರೋಹಿಗಳೇ, ನೀವು ಆತನ ಮಕ್ಕಳಲ್ಲ. ನಿಮ್ಮ ಪಾಪಗಳು ಆತನನ್ನು ಮಲಿನ ಮಾಡುವವು. ನೀವು ಡೊಂಕಾದ ಸುಳ್ಳುಗಾರರು.
6 ಹೀಗೆ ಆತನು ನಿಮಗೆ ಮಾಡಿದ ಒಳ್ಳೆಯದಕ್ಕೆ ಉಪಕಾರ ತೋರಿಸುವಿರಾ? ಇಲ್ಲ! ನೀವು ಬುದ್ಧಿಹೀನರಾಗಿದ್ದೀರಿ. ಯೆಹೋವನು ನಿಮ್ಮ ತಂದೆಯಾಗಿದ್ದಾನೆ. ಆತನೇ ನಿಮ್ಮನ್ನು ನಿರ್ಮಿಸಿದಾತನು. ಆತನೇ ನಿಮ್ಮನ್ನು ಉಂಟುಮಾಡಿದಾತನು. ಆತನೇ ಆಧಾರ ನೀಡುವಾತನು.
7 ಹಿಂದೆ ಏನಾಯಿತೆಂದು ಜ್ಞಾಪಕಕ್ಕೆ ತಂದುಕೊಳ್ಳಿರಿ. ಬಹಳ ವರ್ಷಗಳ ಹಿಂದೆ ನಡೆದದ್ದನ್ನು ಜ್ಞಾಪಕ ಮಾಡಿಕೊಳ್ಳಿರಿ. ನಿಮ್ಮ ತಂದೆಗಳನ್ನು ಕೇಳಿ, ಅವರು ಹೇಳುವರು. ನಿಮ್ಮ ಹಿರಿಯರನ್ನು ವಿಚಾರಿಸಿ, ಅವರು ಹೇಳುವರು.
8 ಪರಲೋಕದಲ್ಲಿರುವ ದೇವರು ಭೂಮಿಯ ಮೇಲಿದ್ದ ಜನರನ್ನು ಪ್ರತ್ಯೇಕಿಸಿದನು. ಪ್ರತಿಯೊಂದು ಜನಾಂಗಕ್ಕೆ ಅದರದೇ ಆದ ದೇಶವನ್ನು ಕೊಟ್ಟನು. ಅದಕ್ಕೆ ಮೇರೆಯನ್ನು ಆತನು ಮಾಡಿಕೊಟ್ಟನು. ಇಸ್ರೇಲರಲ್ಲಿ ಜನರೆಷ್ಟು ಮಂದಿ ಇದ್ದಾರೋ ಅಷ್ಟು ಜನಾಂಗಗಳಿವೆ.
9 ಯೆಹೋವನ ಪಾಲು ಆತನ ಜನರೇ. ಇಸ್ರೇಲನ ವಂಶಸ್ಥರು ದೇವಜನರಾಗಿದ್ದಾರೆ.
10 ಮರುಭೂಮಿಯಲ್ಲಿ ಯೆಹೋವನು ಇಸ್ರೇಲನನ್ನು ಕಂಡನು. ಅದು ಬರಿದಾದ ಗಾಳಿ ಬೀಸುತ್ತಿದ್ದ ಸ್ಥಳವಾಗಿತ್ತು. ಯೆಹೋವನು ಅದನ್ನು ಸುತ್ತುವರಿದು ಇಸ್ರೇಲನ್ನು ಸಂರಕ್ಷಿಸಿದನು; ತನ್ನ ಕಣ್ಣುಗುಡ್ಡೆಯಂತೆ ಅವರನ್ನು ಕಾಪಾಡಿದನು.
11 ಇಸ್ರೇಲರಿಗೆ ಯೆಹೋವನು ಹದ್ದಿನಂತಿರುವನು! ಹದ್ದು ತನ್ನ ಮರಿಗಳಿಗೆ ಹಾರಲು ಕಲಿಸಲು ಗೂಡಿನಿಂದ ಕೆಳಕ್ಕೆ ತಳ್ಳುವುದು. ಮರಿಗಳು ಕೆಳಗೆ ಬೀಳದಂತೆ ಅವುಗಳ ಜೊತೆಯಲ್ಲಿ ಹಾರಾಡುವುದು. ಅವುಗಳು ಬೀಳುವಾಗ ತನ್ನ ರಕ್ಕೆಯನ್ನು ಚಾಚಿ ಬೀಳದಂತೆ ಮಾಡುವದು. ನಂತರ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವುದು. ಯೆಹೋವನು ಅದರಂತೆಯೇ.
12 ಯೆಹೋವನೇ ಇಸ್ರೇಲನ್ನು ನಡೆಸಿದನು. ಅನ್ಯದೇವರು ಸಹಾಯ ಮಾಡಲಿಲ್ಲ.
13 ಬೆಟ್ಟಗುಡ್ಡಗಳ ಪ್ರಾಂತ್ಯವನ್ನು ವಶಪಡಿಸಲು ಇಸ್ರೇಲನ್ನು ನಡೆಸಿದನು. ಹೊಲದ ಬೆಳೆಯನ್ನು ಇಸ್ರೇಲ್ ಕೊಯಿಲು ಮಾಡಿದನು. ಬಂಡೆಯಿಂದ ಜೇನನ್ನು ಯೆಹೋವನು ಇಸ್ರೇಲಿಗೆ ಕೊಟ್ಟನು. ಗಟ್ಟಿಯಾದ ಬಂಡೆಯಿಂದ ಎಣ್ಣೆಯು ಹೊರಡುವಂತೆ ಮಾಡಿದನು.
14 ಯೆಹೋವನು ಇಸ್ರೇಲಿಗೆ ಹಿಂಡಿನಿಂದ ಬೆಣ್ಣೆಯನ್ನೂ ಹಾಲನ್ನೂ ಕೊಟ್ಟನು. ಆತನು ಕೊಬ್ಬಿದ ಕುರಿಮರಿಗಳನ್ನೂ ಆಡುಗಳನ್ನೂ ಬಾಷಾನಿನ ಅತ್ಯುತ್ತಮವಾದ ಟಗರುಗಳನ್ನೂ ಕೊಟ್ಟನು. ಜೊತೆಗೆ ಉತ್ತಮವಾದ ಗೋಧಿಯನ್ನೂ ಕೊಟ್ಟನು. ಇಸ್ರೇಲಿನ ಜನರು ದ್ರಾಕ್ಷಿಯ ಕೆಂಪು ರಸದಿಂದ ಮಾಡಿದ ದ್ರಾಕ್ಷಾರಸವನ್ನು ಕುಡಿದರು.
15 ಆದರೆ ಯೆಶುರೂನು ಕೊಬ್ಬಿದನು; ಕೊಬ್ಬಿದ ಹೋರಿಯಂತೆ ಒದ್ದನು; ಅವನು ಚೆನ್ನಾಗಿ ತಿಂದು ಕೊಬ್ಬಿ ಊದಿಕೊಂಡನು; ತನ್ನ ನಿರ್ಮಾಣಿಕನಾದ ಯೆಹೋವನನ್ನು ತೊರೆದನು; ತನ್ನನ್ನು ಸಂರಕ್ಷಿಸಿದ ಬಂಡೆಯಿಂದ ಓಡಿಹೋದನು;
16 ದೇವಜನರು ಯೆಹೋವನಿಗೆ ಈರ್ಷೆಯನ್ನು ಉಂಟುಮಾಡಿದರು. ಅವರು ಇತರ ದೇವರುಗಳನ್ನು ಪೂಜಿಸಿದರು; ಅಸಹ್ಯ ವಿಗ್ರಹಗಳನ್ನು ಅವರು ಪೂಜಿಸಿದರು. ಅದು ಯೆಹೋವನನ್ನು ಕೋಪಗೊಳಿಸಿತು.
17 ಅವರು ದೆವ್ವಗಳಿಗೆ ಯಜ್ಞವನ್ನರ್ಪಿಸಿದರು. ಅವುಗಳು ನಿಜ ದೇವರುಗಳಲ್ಲ. ಅವುಗಳು ಮಾಡಲ್ಪಟ್ಟ ದೇವರುಗಳೆಂದು ಅವರಿಗೆ ಗೊತ್ತಿರಲಿಲ್ಲ. ಅವುಗಳು ಕೈಯಿಂದ ಮಾಡಲ್ಪಟ್ಟ ದೇವರುಗಳು. ಅವರ ಪೂರ್ವಿಕರಿಗೆ ತಿಳಿಯದಂಥ ದೇವರುಗಳು.
18 ನೀವು ನಿಮ್ಮನ್ನು ನಿರ್ಮಿಸಿದ ಬಂಡೆಯಂತಿರುವ ದೇವರನ್ನು ತೊರೆದುಬಿಟ್ಟಿರಿ; ನಿಮಗೆ ಪ್ರಾಣವನ್ನು ಕೊಟ್ಟ ದೇವರನ್ನು ನೀವು ಮರೆತುಬಿಟ್ಟಿರಿ.
19 ಯೆಹೋವನು ಇದನ್ನು ನೋಡಿ ಕೋಪಗೊಂಡನು. ಆತನ ಮಕ್ಕಳೇ ಆತನನ್ನು ಸಿಟ್ಟಿಗೆಬ್ಬಿಸಿದರು.
20 ಆಗ ಯೆಹೋವನು, ‘ನಾನು ಅವರಿಗೆ ವಿಮುಖನಾಗುವೆನು. ಆಗ ಅವರಿಗೇನು ಸಂಭವಿಸುವುದೋ ನೋಡೋಣ. ಅವರು ಎದುರುಬೀಳುವ ಜನರಾಗಿದ್ದಾರೆ. ಅವರು ತಮ್ಮ ಪಾಠಗಳನ್ನು ಕಲಿಯದ ಮಕ್ಕಳಂತಿದ್ದಾರೆ.
21 ಅವರು ದೆವ್ವಗಳನ್ನು ದೇವರನ್ನಾಗಿ ಮಾಡಿ ನನ್ನಲ್ಲಿ ಈರ್ಷೆಯನ್ನು ಉಂಟುಮಾಡಿದರು. ಆ ವಿಗ್ರಹಗಳು ನಿಜವಾದ ದೇವರುಗಳಲ್ಲ! ಅವರು ಪ್ರಯೋಜನವಿಲ್ಲದ ವಿಗ್ರಹಗಳನ್ನು ಮಾಡಿ ನನ್ನನ್ನು ಸಿಟ್ಟಿಗೆಬ್ಬಿಸಿದರು. ಆದುದರಿಂದ ನಿಜವಾದ ಜನಾಂಗವಲ್ಲದವರಿಂದ ನಾನು ಅವರಲ್ಲಿ ಈರ್ಷೆಯನ್ನು ಉಂಟು ಮಾಡುವೆನು. ಮೂರ್ಖ ಜನಾಂಗದಿಂದ ಅವರನ್ನು ಸಿಟ್ಟಿಗೆಬ್ಬಿಸುವೆನು.
22 ನನ್ನ ಕೋಪವು ಬೆಂಕಿಯಂತೆ ದಹಿಸುವುದು; ಪಾತಾಳವನ್ನು ಸುಡುವುದು. ಭೂಮಿಯನ್ನೂ ಅದರಲ್ಲಿರುವ ಸಕಲ ವಸ್ತುಗಳನ್ನೂ ಸುಡುವುದು. ಪರ್ವತಗಳ ಬುಡದ ಕೆಳಗೂ ದಹಿಸುವುದು.
23 ನಾನು ಇಸ್ರೇಲಿಗೆ ಸಂಕಟವನ್ನು ಬರಮಾಡುವೆನು. ನನ್ನ ಬಾಣಗಳನ್ನೆಲ್ಲಾ ಅದಕ್ಕೆ ಬಿಡುವೆನು.
24 ಹಸಿವೆಯಿಂದ ಅವರು ಕ್ಷೀಣವಾಗುವರು; ಭಯಂಕರ ವ್ಯಾಧಿಯಿಂದ ಅವರು ನಾಶವಾಗುವರು. ಕಾಡುಪ್ರಾಣಿಗಳನ್ನು ಅವರ ಮಧ್ಯೆ ಕಳುಹಿಸುವೆನು. ವಿಷಸರ್ಪಗಳೂ ಹಲ್ಲಿಗಳೂ ಅವರನ್ನು ಕಚ್ಚುವವು.
25 ರಸ್ತೆಗಳಲ್ಲಿ ಸಿಪಾಯಿಗಳು ಅವರನ್ನು ಕೊಲ್ಲುವರು. ಅವರ ಮನೆಗಳಲ್ಲಿ ಭಯಂಕರ ಸಂಗತಿಗಳು ನಡೆಯುವವು. ಯುವಕಯುವತಿಯರನ್ನೂ ಸಿಪಾಯಿಗಳು ಕೊಲ್ಲುವರು, ಮುದುಕರನ್ನೂ ಎಳೆಗೂಸುಗಳನ್ನೂ ಸಂಹರಿಸುವರು.
26 ನಾನು ಇಸ್ರೇಲರನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು ಯೋಚಿಸಿದೆನು. ಲೋಕದಲ್ಲಿ ಅವರ ಹೆಸರು ಉಳಿಯದಂತೆ ಮಾಡುವೆನು ಎಂದು ನೆನಸಿದೆನು.
27 ಆದರೆ ಅವರ ವೈರಿಗಳು ಏನು ಹೇಳುತ್ತಾರೆಂಬುದು ನನಗೆ ಗೊತ್ತಿದೆ. ವೈರಿಯು ಅರ್ಥಮಾಡಿಕೊಳ್ಳುವುದಿಲ್ಲ, ಅವರಿಗೆ ವಿಷಯವು ತಿಳಿಯದು. ಅವರು ಜಂಭದಿಂದ ಹೀಗೆ ಹೇಳುವರು, “ಯೆಹೋವನು ಇಸ್ರೇಲನ್ನು ನಾಶಮಾಡಲಿಲ್ಲ. ನಾವು ನಮ್ಮ ಬಲದಿಂದಲೇ ಅವರನ್ನು ಬಡಿದುಹಾಕಿದೆವು.”
28 ಇಸ್ರೇಲರು ಬುದ್ಧಿಹೀನರಾಗಿದ್ದಾರೆ; ಅವರಿಗೇನೂ ತಿಳಿಯುವುದಿಲ್ಲ.
29 ಅವರು ಬುದ್ಧಿವಂತರಾಗಿದ್ದಲ್ಲಿ ಅವರಿಗೆ ಏನು ಸಂಭವಿಸುವುದೆಂದು ಅವರು ತಿಳಿಯುತ್ತಿದ್ದರು.
30 ಒಬ್ಬನು ಸಾವಿರ ಮಂದಿಯನ್ನು ಓಡಿಸಬಲ್ಲನೇ? ಇಬ್ಬರು ಹತ್ತು ಸಾವಿರ ಮಂದಿಯನ್ನು ಓಡಿಸುವರೇ? ಯೆಹೋವನು ಅವರನ್ನು ಅವರ ಶತ್ರುಗಳಿಗೆ ಒಪ್ಪಿಸುವಾಗ ಹಾಗೆಯೇ ಆಗುವುದು, ಅವರ ಬಂಡೆಯಾದ ದೇವರು ಅವರನ್ನು ಗುಲಾಮರನ್ನಾಗಿ ಮಾರುವನು;
31 ನಮ್ಮ ವೈರಿಗಳ ಬಂಡೆಯು ನಮ್ಮ ಬಂಡೆಯಂತೆ ಬಲಶಾಲಿಯಲ್ಲ. ವೈರಿಗಳಿಗೂ ಇದು ಗೊತ್ತಿದೆ.
32 ಅವರ ಹೊಲಗಳೂ ದ್ರಾಕ್ಷಾಲತೆಗಳೂ ಸೊದೋಮ್ ಗೊಮೋರಗಳಂತೆ ನಾಶ ಮಾಡಲ್ಪಡುವುವು.
33 ಅವರ ದ್ರಾಕ್ಷೆಯು ವಿಷದಂತೆಯೂ ಅವರ ದ್ರಾಕ್ಷಾರಸವು ಹಾವಿನ ವಿಷದಂತೆಯೂ ಕಹಿಯಾಗಿವೆ.
34 ‘ಯೆಹೋವನು ಹೀಗನ್ನುತ್ತಾನೆ: ‘ಆ ಶಿಕ್ಷೆಯನ್ನು ನಾನು ಜೋಪಾನವಾಗಿಟ್ಟಿದ್ದೇನೆ. ಅದನ್ನು ನಾನು ನನ್ನ ಉಗ್ರಾಣದಲ್ಲಿ ಸುರಕ್ಷಿತವಾಗಿರಿಸಿದ್ದೇನೆ.
35 ಅವರ ದುಷ್ಕಾರ್ಯಗಳಿಗಾಗಿ ನಾನು ಅವರನ್ನು ಶಿಕ್ಷಿಸುವೆನು. ಅವರು ಜಾರಿ ಕೆಟ್ಟಕಾರ್ಯಗಳನ್ನು ಮಾಡಿದಾಗ ನಾನು ಅವರನ್ನು ಶಿಕ್ಷಿಸುವೆನು. ಅವರ ಮಹಾಸಂಕಟ ಕಾಲವು ಹತ್ತಿರವೇ ಇದೆ. ಅವರಿಗೋಸ್ಕರ ಸಿದ್ಧವಾಗಿರುವ ಶಿಕ್ಷೆಯು ಬೇಗನೆ ಬರುತ್ತದೆ.’
36 ಯೆಹೋವನು ತನ್ನ ಜನರಿಗೆ ನ್ಯಾಯ ತೀರಿಸುವನು. ಅವರು ಆತನ ಸೇವಕರಾಗಿದ್ದಾರೆ. ಆತನು ಅವರಿಗೆ ಕರುಣೆ ತೋರಿಸುವನು. ಅವರ ಬಲವು ಕುಂದುವಂತೆ ಮಾಡುವನು. ಗುಲಾಮರಾಗಿರಲಿ ಸ್ವತಂತ್ರರಾಗಿರಲಿ ಅವರನ್ನು ಆತನು ನಿಸ್ಸಹಾಯಕರನ್ನಾಗಿ ಮಾಡುವನು.
37 ಆಗ ಯೆಹೋವನು ಇಂತೆನ್ನುವನು: ‘ನಿಮ್ಮ ಸುಳ್ಳುದೇವರುಗಳೆಲ್ಲಿ? ನಿಮ್ಮ ಸಂರಕ್ಷಣೆಗಾಗಿ ನೀವು ಆಶ್ರಯಿಸಿಕೊಂಡಿದ್ದ ‘ಬಂಡೆ’ ಎಲ್ಲಿ?
38 ನಿಮ್ಮ ಯಜ್ಞಗಳ ಕೊಬ್ಬನ್ನು ಆ ಸುಳ್ಳುದೇವರುಗಳು ತಿಂದುಬಿಟ್ಟವು. ನೀವು ಅರ್ಪಿಸಿದ ದ್ರಾಕ್ಷಾರಸವನ್ನು ಕುಡಿದುಬಿಟ್ಟವು. ಆ ದೇವರುಗಳೆದ್ದು ನಿಮಗೆ ಸಹಾಯಮಾಡಲಿ. ಅವುಗಳು ನಿಮ್ಮನ್ನು ಸಂರಕ್ಷಿಸಲಿ.
39 ನಾನೇ ದೇವರು, ನನ್ನ ಹೊರತು ಬೇರೆ ದೇವರಿಲ್ಲ. ಜನರಿಗೆ ಮರಣವನ್ನು ಜೀವವನ್ನೂ ಕೊಡುವವನು ನಾನೇ. ಅವರಿಗೆ ಗಾಯ ಮಾಡುವವನೂ ನಾನೇ, ಅದನ್ನು ಗುಣಮಾಡುವವನೂ ನಾನೇ. ನನ್ನ ಶಕ್ತಿಯ ಹಿಡಿತದಿಂದ ಇನ್ನೊಬ್ಬನನ್ನು ರಕ್ಷಿಸಲು ಯಾರಿಗೂ ಸಾಧ್ಯವಿಲ್ಲ.
40 ನನ್ನ ಕೈಗಳನ್ನು ಆಕಾಶದ ಕಡೆಗೆತ್ತಿ ವಚನ ಕೊಡುತ್ತೇನೆ. ನಾನು ನಿತ್ಯಕಾಲಕ್ಕೆ ಜೀವಿಸುವುದು ಎಷ್ಟು ಸತ್ಯವೋ ಅದೇರೀತಿ ಇವೆಲ್ಲವೂ ನೆರವೇರುವವು.
41 ಥಳಥಳಿಸುವ ನನ್ನ ಖಡ್ಗವನ್ನು ನಾನು ಹದಮಾಡುವೆನು. ನನ್ನ ವೈರಿಗಳನ್ನು ಶಿಕ್ಷಿಸಲು ನಾನದನ್ನು ಉಪಯೋಗಿಸುವೆನು. ನಾನು ಅವರಿಗೆ ಯೋಗ್ಯವಾದ ದಂಡನೆಯನ್ನು ಕೊಡುವೆನು ಎಂದು ನಾನು ಆಣೆಯಿಟ್ಟು ಹೇಳುತ್ತೇನೆ.
42 ನನ್ನ ವೈರಿಗಳು ಕೊಲ್ಲಲ್ಪಡುವರು ಮತ್ತು ಸೆರೆಯಾಳುಗಳಾಗಿ ಒಯ್ಯಲ್ಪಡುವರು. ನನ್ನ ಬಾಣಗಳು ಅವರ ರಕ್ತದಿಂದ ಮುಚ್ಚಲ್ಪಟ್ಟಿವೆ. ನನ್ನ ಖಡ್ಗವು ಅವರ ಸೈನಿಕರ ರುಂಡ ಹಾರಿಸುವುದು.
43 ಭೂಲೋಕವೆಲ್ಲಾ ದೇವಜನರಿಗಾಗಿ ಸಂತೋಷಿಸುವದು; ಯಾಕೆಂದರೆ ಆತನು ಅವರನ್ನು ಸಾಯಿಸುವನು; ತನ್ನ ಸೇವಕರನ್ನು ಸಂಹರಿಸುವವರನ್ನು ಶಿಕ್ಷಿಸುವನು; ತನ್ನ ವೈರಿಗಳಿಗೆ ತಕ್ಕ ದಂಡನೆ ಕೊಡುವನು. ತನ್ನ ದೇಶವನ್ನೂ ತನ್ನ ಜನರನ್ನೂ ಶುದ್ಧಿ ಮಾಡುವನು.”
44 ಮೋಶೆಯು ಈ ಹಾಡಿನ ಎಲ್ಲಾ ಪದಗಳನ್ನು ಇಸ್ರೇಲರು ಕೇಳುವಂತೆ ಹೇಳಿದನು. ನೂನನ ಮಗನಾದ ಯೆಹೋಶುವನು ಮೋಶೆಯ ಸಂಗಡ ಇದ್ದನು.
45 ಮೋಶೆಯು ಜನರಿಗೆ ಬೋಧಿಸಿದ ಬಳಿಕ
46 ಹೀಗೆ ಹೇಳಿದನು: “ನಾನು ಈ ದಿನ ಹೇಳಿದ ಎಲ್ಲಾ ಆಜ್ಞೆಗಳನ್ನು ಅನುಸರಿಸಲು ಜಾಗರೂಕರಾಗಿರಿ. ಅವುಗಳನ್ನು ನಿಮ್ಮ ಮಕ್ಕಳಿಗೂ ತಿಳಿಸಿ; ಕಟ್ಟಳೆಗಳನ್ನು ಸಂಪೂರ್ಣವಾಗಿ ಕೈಗೊಳ್ಳುವಂತೆ ಅವರಿಗೆ ಬೋಧಿಸಿರಿ, ಕಲಿಸಿರಿ.
47 ಈ ಬೋಧನೆಗಳು ಮುಖ್ಯವಾದವುಗಳಲ್ಲವೆಂದು ತಿಳಿಯಬೇಡಿ. ಅವು ನಿಮ್ಮ ಜೀವವಾಗಿವೆ. ನೀವು ತೆಗೆದುಕೊಳ್ಳಲು ಸಿದ್ಧರಾಗಿರುವ ಜೋರ್ಡನ್ ನದಿಯ ಆಚೆಕಡೆಯಲ್ಲಿರುವ ದೇಶದಲ್ಲಿ ಈ ಉಪದೇಶಗಳ ಮೂಲಕ ಬಹುಕಾಲ ಬದುಕುವಿರಿ.”
48 ಅದೇ ದಿನದಲ್ಲಿ ಯೆಹೋವನು ಮೋಶೆಯೊಂದಿಗೆ ಮಾತನಾಡಿ,
49 “ಮೋವಾಬ್ ಪ್ರಾಂತ್ಯದಲ್ಲಿರುವ ಅಬಾರೀಮ್ ಬೆಟ್ಟದ ಸಾಲಿಗೆ ಹೋಗಿ ಅಲ್ಲಿ ನೆಬೋ ಬೆಟ್ಟವನ್ನೇರು. ಇದು ಯೆರಿಕೋ ಕೋಟೆಗೆ ಎದುರಾಗಿ ಇದೆ. ಅಲ್ಲಿಂದ ನಾನು ಇಸ್ರೇಲರಿಗೆ ಕೊಡುವ ಕಾನಾನ್ ದೇಶವನ್ನು ನೀನು ನೋಡುವಿ.
50 ನಿನ್ನ ಅಣ್ಣನಾದ ಆರೋನನು ಹೋರ್ ಬೆಟ್ಟದಲ್ಲಿ ಸತ್ತುಹೋದಂತೆಯೇ ನೀನೂ ನೆಬೋ ಬೆಟ್ಟದ ಮೇಲೆ ಸಾಯುವೆ.
51 ಯಾಕೆಂದರೆ ನೀವಿಬ್ಬರೂ ನನಗೆ ವಿರುದ್ಧವಾಗಿ ಪಾಪಮಾಡಿದಿರಿ. ಚಿನ್ ಮರುಭೂಮಿಯಲ್ಲಿರುವ ಕಾದೇಶ್ ಬಳಿಯಲ್ಲಿದ್ದ ಮೆರೀಬಾ ಎಂಬ ಸ್ಥಳದ ನೀರಿನ ಬಳಿಯಲ್ಲಿ ನೀನು ಜನರ ಮುಂದೆ ನನ್ನನ್ನು ಅವಮಾನಪಡಿಸಿದೆ. ನೀನು ನನ್ನನ್ನು ಮಹಾಪವಿತ್ರನೆಂದು ಗೌರವಿಸಬೇಕಿತ್ತು, ಆದರೆ ನೀನು ಗೌರವಿಸಲಿಲ್ಲ.
52 ಆದುದರಿಂದ ನಾನು ಇಸ್ರೇಲರಿಗೆ ಕೊಡುವ ದೇಶವನ್ನು ನೀನು ನೋಡುವೆ ಆದರೆ ಅದನ್ನು ಪ್ರವೇಶಿಸುವುದಿಲ್ಲ.”

Deuteronomy 32:1 Kannada Language Bible Words basic statistical display

COMING SOON ...

×

Alert

×