Bible Languages

Indian Language Bible Word Collections

Bible Versions

Books

Deuteronomy Chapters

Deuteronomy 22 Verses

Bible Versions

Books

Deuteronomy Chapters

Deuteronomy 22 Verses

1 “ನಿಮ್ಮ ನೆರೆಯವನ ಕಟ್ಟಿರುವ ದನವಾಗಲಿ ಕುರಿಯಾಗಲಿ ಹಗ್ಗ ಬಿಚ್ಚಿಕೊಂಡಿರುವುದನ್ನು ನೀವು ಕಂಡರೆ ಅದನ್ನು ನಿರ್ಲಕ್ಷಿಸದೆ, ಕೂಡಲೇ ಅದನ್ನು ಅದರ ಧಣಿಯ ಬಳಿಗೆ ಅಟ್ಟಿಕೊಂಡು ಹೋಗಬೇಕು.
2 ಆ ಪಶುವಿನ ಧಣಿ ಯಾರೆಂದು ನಿಮಗೆ ಗೊತ್ತಾಗದಿದ್ದರೆ ಅಥವಾ ಅವನು ನಿಮಗೆ ತುಂಬಾ ದೂರದಲ್ಲಿದ್ದರೆ ಅದರ ಧಣಿಯು ಅದನ್ನು ಹುಡುಕಿಕೊಂಡು ಬರುವ ತನಕ ನೀವು ಪಶುವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು. ಅವನು ಬಂದಾಗ ಅದನ್ನು ಹಿಂದಿರುಗಿಸಬೇಕು.
3 ನಿಮ್ಮ ನೆರೆಯವನ ಕತ್ತೆಯ ವಿಷಯದಲ್ಲಿಯೂ ಬಟ್ಟೆಯ ವಿಷಯದಲ್ಲಿಯೂ ಇದೇ ನಿಯಮ ಅನ್ವಯಿಸುತ್ತದೆ.
4 “ನಿಮ್ಮ ನೆರೆಯವನ ಕತ್ತೆಯಾಗಲಿ ಹಸುವಾಗಲಿ ದಾರಿಯಲ್ಲಿ ಬಿದ್ದಿರುವುದನ್ನು ನೋಡಿದರೂ ನೋಡದಂತೆ ಹೋಗದೆ ಅದಕ್ಕೆ ಏಳಲು ಸಹಾಯ ಮಾಡಬೇಕು.
5 “ಹೆಂಗಸು ಗಂಡಸರ ಬಟ್ಟೆ ಧರಿಸಿಕೊಳ್ಳಬಾರದು, ಗಂಡಸು ಹೆಂಗಸರ ಬಟ್ಟೆ ಧರಿಸಬಾರದು. ಇದು ಯೆಹೋವನ ದೃಷ್ಟಿಯಲ್ಲಿ ಅಸಹ್ಯ.
6 “ನೀವು ದಾರಿಯಲ್ಲಿ ಹೋಗುತ್ತಿರುವಾಗ ನೆಲದ ಮೇಲಾಗಲಿ ಮರದಲ್ಲಿಯಾಗಲಿ ಗೂಡು ಕಟ್ಟಿಕೊಂಡು ಅದರೊಳಗೆ ತಾಯಿ ಪಕ್ಷಿಯು ತನ್ನ ಮೊಟ್ಟೆಗಳೊಂದಿಗೆ ಇಲ್ಲವೆ ಮರಿಗಳೊಂದಿಗೆ ಇರುವುದನ್ನು ಕಂಡಾಗ ನೀವು ಮರಿಗಳೊಂದಿಗೆ ತಾಯಿಪಕ್ಷಿಯನ್ನು ಹಿಡಿದು ಕೊಂಡೊಯ್ಯಬಾರದು.
7 ನೀವು ತಾಯಿಪಕ್ಷಿಯನ್ನು ಬಿಟ್ಟು ಮರಿಪಕ್ಷಿಗಳನ್ನು ಕೊಂಡೊಯ್ಯಬಹುದು. ಈ ನಿಯಮಗಳನ್ನು ನೀವು ಪಾಲಿಸಿದರೆ ನೀವು ಬಹುಕಾಲ ಬದುಕುವಿರಿ ಮತ್ತು ನಿಮಗೆ ಶುಭವಾಗುವುದು.
8 “ನೀವು ಮನೆ ಕಟ್ಟುವಾಗ ಅದರ ಮೇಲ್ಛಾವಣಿಯ ಸುತ್ತಲೂ ಅರ್ಧ ಗೋಡೆಯನ್ನು ಕಟ್ಟಬೇಕು. ಹೀಗೆ ಮಾಡದೆಹೋದರೆ ಯಾರಾದರೂ ಮೇಲ್ಛಾವಣಿಯಿಂದ ಕೆಳಗೆ ಬಿದ್ದು ಸತ್ತಲ್ಲಿ ಅವನ ಸಾವಿಗೆ ನೀವು ಕಾರಣರಾಗುವಿರಿ.
9 “ನೀವು ಧಾನ್ಯವನ್ನು ಮತ್ತು ದ್ರಾಕ್ಷಾಲತೆಗಳನ್ನು ಒಂದೇ ಹೊಲದಲ್ಲಿ ಬೆಳೆಸಬಾರದು. ಯಾಕೆಂದರೆ ಅವೆರಡೂ ಚೆನ್ನಾಗಿ ಬೆಳೆಯದೆ ಫಲ ಕೊಡದೆ ಹೋಗುವುದು.
10 “ಕತ್ತೆಯನ್ನೂ ಹಸುವನ್ನೂ ಒಟ್ಟಿಗೆ ನೊಗಕ್ಕೆ ಕಟ್ಟಿ ನೆಲವನ್ನು ಉಳಬಾರದು.
11 “ನಾರುಮಡಿಯನ್ನೂ ಉಣ್ಣೆಯನ್ನೂ ಮಿಶ್ರವಾಗಿ ನೇಯ್ದ ಬಟ್ಟೆಯನ್ನು ತೊಡಬಾರದು.
12 “ನೂಲಿನಿಂದ ಮಾಡಿದ ಗೊಂಡೆಗಳನ್ನು ನಿಮ್ಮ ನಿಲುವಂಗಿಗಳ ನಾಲ್ಕು ಮೂಲೆಗಳಿಗೆ ಕಟ್ಟಬೇಕು.
13 “ಒಬ್ಬ ಪುರುಷನು ಒಬ್ಬ ಸ್ತ್ರೀಯನ್ನು ಮದುವೆಯಾಗಿ ಆಕೆಯೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡಿದ್ದು ಆಮೇಲೆ ಆಕೆಯನ್ನು ಇಷ್ಟಪಡದೆ,
14 ‘ನಾನು ಈಕೆಯನ್ನು ಮದುವೆಯಾದಾಗ ಈಕೆಯು ಕನ್ಯೆಯಲ್ಲವೆಂದು ನನಗೆ ತಿಳಿದುಬಂತು’ ಎಂದು ಜನರಿಗೆ ಸುಳ್ಳು ಹೇಳಿ ಆಕೆಯ ಮೇಲೆ ಸುಳ್ಳು ಅಪರಾಧ ಹೊರಿಸಿದರೆ,
15 ಹುಡುಗಿಯ ತಂದೆತಾಯಿಗಳು ಊರಿನ ಹಿರಿಯರ ಮುಂದೆ ಆಕೆಯು ಕನ್ನಿಕೆಯಾಗಿದ್ದಳೆಂದು ರುಜುವಾತುಪಡಿಸಬೇಕು.
16 ಹುಡುಗಿಯ ತಂದೆಯು ಹಿರಿಯರಿಗೆ, ‘ನನ್ನ ಮಗಳನ್ನು ಇವನಿಗೆ ಹೆಂಡತಿಯನ್ನಾಗಿ ಕೊಟ್ಟೆನು. ಆದರೆ ಈಗ ಅವನು ಆಕೆಯನ್ನು ದ್ವೇಷಿಸಿ ಬೇಡವೆನ್ನುತ್ತಾನೆ.
17 ಅವನು ನನ್ನ ಮಗಳ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾನೆ. ‘ಆಕೆಯಲ್ಲಿ ಕನ್ನಿಕೆಯ ಗುರುತು ಇರಲಿಲ್ಲ’ ಎಂದು ಹೇಳುತ್ತಿದ್ದಾನೆ, ಆದರೆ ನನ್ನ ಮಗಳು ಮದುವೆಗಿಂತ ಮುಂಚೆ ಪುರುಷ ಸಂಪರ್ಕ ಮಾಡಲಿಲ್ಲವೆಂಬುದಕ್ಕೆ ಇದೇ ಗುರುತು’ ಎಂದು ಹೇಳಿ ರಕ್ತದ ಕಲೆಗಳಿರುವ ಬಟ್ಟೆಯನ್ನು ತೋರಿಸಬೇಕು.
18 ಆಗ ಊರಿನ ಹಿರಿಯರು ಆ ಮನುಷ್ಯನಿಗೆ ಶಿಕ್ಷೆ ವಿಧಿಸಬೇಕು.
19 ಹಿರಿಯರು ಅವನಿಂದ ನಲವತ್ತು ತೊಲೆ ಬೆಳ್ಳಿಯನ್ನು ಹುಡುಗಿಯ ತಂದೆಗೆ ಕೊಡಿಸಬೇಕು. ಯಾಕೆಂದರೆ ಒಬ್ಬ ಇಸ್ರೇಲಿನ ಹುಡುಗಿಗೆ ಅವನು ಅವಮಾನಪಡಿಸಿದ ಕಾರಣ ಆ ಹುಡುಗಿಯು ಅವನ ಹೆಂಡತಿಯಾಗಿಯೇ ಬಾಳಬೇಕು. ಅವನು ಆಕೆಯನ್ನು ಎಂದಿಗೂ ವಿವಾಹವಿಚ್ಛೇದನೆ ಮಾಡಬಾರದು.
20 “ಆದರೆ ಹುಡುಗಿಯ ಗಂಡನು ಆಕೆಯ ಬಗ್ಗೆ ಹೇಳಿದ್ದು ಸತ್ಯವಾಗಿದ್ದರೆ, ಹುಡುಗಿಯ ತಂದೆತಾಯಂದಿರ ಬಳಿ ಆಕೆಯು ಪುರುಷ ಸಂಪರ್ಕವಿಲ್ಲದವಳಾಗಿದ್ದಳು ಎಂಬುದಕ್ಕೆ ಪುರಾವೆ ಇಲ್ಲದಿದ್ದಲ್ಲಿ
21 ಊರಹಿರಿಯರು ಆ ಹುಡುಗಿಯನ್ನು ಆಕೆಯ ತಂದೆಯ ಮನೆಬಾಗಿಲಿಗೆ ತರಬೇಕು. ಅಲ್ಲಿ ಊರಜನರು ಆಕೆಯನ್ನು ಕಲ್ಲೆಸೆದು ಸಾಯಿಸಬೇಕು. ಯಾಕೆಂದರೆ ಆಕೆಯು ಇಸ್ರೇಲಿನಲ್ಲಿ ನಾಚಿಕೆಕರವಾದ ಕೃತ್ಯವನ್ನು ನಡೆಸಿದ್ದಾಳೆ; ತನ್ನ ತಂದೆಯ ಮನೆಯಲ್ಲಿದ್ದುಕೊಂಡು ವೇಶ್ಯಾವೃತ್ತಿ ನಡಿಸಿದ್ದಾಳೆ. ಅಂಥಾ ಪಾಪವನ್ನು ನೀವು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
22 “ಒಬ್ಬ ಮನುಷ್ಯನು ಇನ್ನೊಬ್ಬ ಮನುಷ್ಯನ ಹೆಂಡತಿಯ ಜೊತೆಗೆ ಲೈಂಗಿಕ ಸಂಬಂಧವನ್ನಿಟ್ಟಿದ್ದರೆ ಅವರಿಬ್ಬರನ್ನೂ ಸಾಯಿಸಬೇಕು. ಆ ಕೆಡುಕನ್ನು ನೀವು ಇಸ್ರೇಲಿನಿಂದ ತೆಗೆದುಹಾಕಬೇಕು.
23 “ಒಬ್ಬನು ಇನ್ನೊಬ್ಬನಿಗೆ ನಿಶ್ಚಿತಾರ್ಥವಾದ ಕನ್ನಿಕೆಯೊಬ್ಬಳನ್ನು ಸಂಧಿಸಿ ಅವಳನ್ನು ಕೂಡಿದರೆ,
24 ನಗರದ ಬಾಗಿಲಿನ ಬಳಿಯಿರುವ ಸಾರ್ವಜನಿಕ ಸ್ಥಳಕ್ಕೆ ನೀವು ಅವರಿಬ್ಬರನ್ನು ಕರೆದುಕೊಂಡು ಬಂದು ಅವರಿಬ್ಬರನ್ನೂ ಕಲ್ಲೆಸೆದು ಕೊಲ್ಲಬೇಕು. ನೀವು ಆ ಪುರುಷನನ್ನು ಕೊಲ್ಲಬೇಕು. ಏಕೆಂದರೆ ಅವನು ಮತ್ತೊಬ್ಬನ ಹೆಂಡತಿಯನ್ನು ಲೈಂಗಿಕವಾಗಿ ಹಿಂಸಿಸಿದನು. ನೀವು ಆ ಸ್ತ್ರೀಯನ್ನು ಕೊಲ್ಲಬೇಕು; ಯಾಕೆಂದರೆ ಆಕೆಯು ನಗರದಲ್ಲಿದ್ದರೂ ಸಹಾಯಕ್ಕಾಗಿ ಕೂಗಿಕೊಳ್ಳಲಿಲ್ಲ. ಆ ಕೆಡುಕನ್ನು ನೀವು ನಿಮ್ಮ ಜನರಿಂದ ತೆಗೆದುಹಾಕಬೇಕು.
25 “ಆದರೆ ಒಬ್ಬನು ಮತ್ತೊಬ್ಬನಿಗೆ ನಿಶ್ಚಿತಾರ್ಥವಾಗಿರುವ ಕನ್ನಿಕೆಯೊಬ್ಬಳನ್ನು ಹೊಲದಲ್ಲಿ ಕಂಡು ಆಕೆಯನ್ನು ಬಲಾತ್ಕಾರವಾಗಿ ಕೂಡಿದರೆ, ಅವನನ್ನು ಮಾತ್ರ ಕೊಲ್ಲಬೇಕು.
26 ಆ ಹುಡುಗಿಗೆ ನೀವು ಏನನ್ನೂ ಮಾಡಬಾರದು. ಆಕೆ ಶಿಕ್ಷೆಗೆ ಅರ್ಹಳಾಗುವಂಥ ಕಾರ್ಯವೇನೂ ಮಾಡಲಿಲ್ಲ. ಒಬ್ಬನು ತನ್ನ ಸ್ನೇಹಿತನ ಮೇಲೆ ಆಕ್ರಮಣ ಮಾಡಿ ಕೊಂದಂತೆಯಷ್ಟೇ.
27 ಆ ಮನುಷ್ಯನು ನಿಶ್ಚಿತಾರ್ಥವಾದ ಹುಡುಗಿಯನ್ನು ಹೊಲದಲ್ಲಿ ಒಬ್ಬಳೇ ಇರುವುದನ್ನು ಕಂಡು ಆಕೆಯ ಮೇಲೆ ಬಿದ್ದನು. ಆಕೆಯು ಸಹಾಯಕ್ಕಾಗಿ ಕೂಗಿಕೊಂಡಾಗ ಸಹಾಯ ಮಾಡಲು ಹತ್ತಿರದಲ್ಲಿ ಯಾರೂ ಇರಲಿಲ್ಲ. ಆದುದರಿಂದ ಆಕೆಯು ಶಿಕ್ಷಿಸಲ್ಪಡಬಾರದು.
28 “ಒಬ್ಬನು ನಿಶ್ಚಿತಾರ್ಥವಾಗಿಲ್ಲದ ಒಬ್ಬ ಕನ್ನಿಕೆಯನ್ನು ಕಂಡು ಆಕೆಯನ್ನು ಬಲಾತ್ಕಾರದಿಂದ ಕೂಡುವುದನ್ನು ಬೇರೆಯವರು ಕಂಡರೆ
29 ಅವನು ಹುಡುಗಿಯ ತಂದೆಗೆ ಇಪ್ಪತ್ತು ತೊಲ ಬೆಳ್ಳಿಯನ್ನು ಕೊಟ್ಟು ಆಕೆಯನ್ನು ತನ್ನ ಹೆಂಡತಿಯನ್ನಾಗಿ ತೆಗೆದುಕೊಳ್ಳಬೇಕು. ಅವನು ಆಕೆಯನ್ನು ಮದುವೆಗಿಂತ ಮುಂಚೆ ಕೂಡಿದ್ದರಿಂದ ಅವನು ಆಕೆಯನ್ನು ಎಂದಿಗೂ ಬಿಟ್ಟುಬಿಡಬಾರದು.
30 “ಒಬ್ಬನು ತನ್ನ ತಂದೆಯ ಹೆಂಡತಿಯನ್ನು ಕೂಡಿ ತಂದೆಗೆ ಅವಮಾನ ಮಾಡಬಾರದು.”

Deuteronomy 22:1 Kannada Language Bible Words basic statistical display

COMING SOON ...

×

Alert

×