ಅವರು ಯೇಸುವಿನ ಮೇಲೆ ದೋಷಾರೋಪಣೆ ಮಾಡತೊಡಗಿದರು. ಅವರು ಪಿಲಾತನಿಗೆ, “ಈ ಮನುಷ್ಯನು ನಮ್ಮ ಜನರನ್ನು ತಪ್ಪುದಾರಿಗೆ ನಡೆಸುವ ಸಂಗತಿಗಳನ್ನು ಹೇಳುತ್ತಿದ್ದನು. ನಾವು ಸೀಸರನಿಗೆ ತೆರಿಗೆ ಕೊಡಬಾರದೆಂದೂ ಇವನು ಹೇಳುತ್ತಿದ್ದನು. ಅಲ್ಲದೆ ಇವನು ತನ್ನನ್ನು ಕ್ರಿಸ್ತನೆಂಬ ಅರಸನೆಂದು ಹೇಳಿಕೊಳ್ಳುತ್ತಾನೆ. ಆದ್ದರಿಂದ ನಾವು ಇವನನ್ನು ಬಂಧಿಸಿದೆವು” ಎಂದು ಹೇಳಿದರು.
ಹೆರೋದನು ಯೇಸುವನ್ನು ನೋಡಿದಾಗ ಬಹಳ ಸಂತೋಷಪಟ್ಟನು. ಏಕೆಂದರೆ ಅವನು ಯೇಸುವಿನ ಬಗ್ಗೆ ಎಲ್ಲವನ್ನೂ ಕೇಳಿದ್ದನು ಮತ್ತು ಬಹಳ ಕಾಲದಿಂದ ಆತನಿಂದ ಒಂದು ಅದ್ಭುತಕಾರ್ಯವನ್ನು ನೋಡಬೇಕೆಂದಿದ್ದನು.
ಆಗ ಹೆರೋದನು ಮತ್ತು ಅವನ ಸೈನಿಕರು ಯೇಸುವನ್ನು ನೋಡಿ ಗೇಲಿಮಾಡಿದರು. ಅವರು ಯೇಸುವಿಗೆ ರಾಜನ ಬಟ್ಟೆ ಉಡಿಸಿ ಹಾಸ್ಯ ಮಾಡಿದರು. ಬಳಿಕ ಹೆರೋದನು ಯೇಸುವನ್ನು ಪಿಲಾತನ ಬಳಿಗೆ ತಿರುಗಿ ಕಳುಹಿಸಿಕೊಟ್ಟನು.
ಅವರಿಗೆ, “ನೀವು ಈ ಮನುಷ್ಯನನ್ನು (ಯೇಸುವನ್ನು) ನನ್ನ ಬಳಿಗೆ ಕರೆದುಕೊಂಡು ಬಂದಿರಿ. ಇವನು ಜನರನ್ನು ತಪ್ಪುದಾರಿಗೆ ನಡೆಸುತ್ತಿದ್ದಾನೆ ಎಂದು ಹೇಳಿದಿರಿ. ಆದರೆ ನಾನು ನಿಮ್ಮೆಲ್ಲರ ಮುಂದೆ ಇವನನ್ನು ವಿಚಾರಣೆ ಮಾಡಿದೆನು. ಆದರೆ ನಾನು ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ. ನಿಮ್ಮ ದೋಷಾರೋಪಣೆಗಳು ಇವನಿಗೆ ಅನ್ವಯಿಸುವುದಿಲ್ಲ.
ಇದಲ್ಲದೆ ಹೆರೋದನು ಸಹ ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ. ಹೆರೋದನು ಯೇಸುವನ್ನು ನಮ್ಮ ಬಳಿಗೆ ಮತ್ತೆ ಕಳುಹಿಸಿದನು. ನೋಡಿರಿ, ಯೇಸು ಯಾವ ತಪ್ಪನ್ನೂ ಮಾಡಿಲ್ಲ. ಅವನಿಗೆ ಮರಣದಂಡನೆ ಆಗಬಾರದು.
[*ಕೆಲವು ಗ್ರೀಕ್ ಪ್ರತಿಗಳಲ್ಲಿ 17ನೇ ವಚನವನ್ನು ಸೇರಿಸಲಾಗಿದೆ. ಅದರಲ್ಲಿ, “ಪ್ರತಿವರ್ಷ ಪಸ್ಕಹಬ್ಬದ ಸಮಯದಲ್ಲಿ ಪಿಲಾತನು ಜನರಿಗೆ ಒಬ್ಬ ಕೈದಿಯನ್ನು ಬಿಡುಗಡೆ ಮಾಡಬೇಕಾಗಿತ್ತು” ಎಂದು ಬರೆದದೆ.]
ಮೂರನೇ ಸಲ ಪಿಲಾತನು ಜನರಿಗೆ, “ಏಕೆ? ಆತನು ಏನು ತಪ್ಪುಮಾಡಿದನು? ಆತನು ತಪ್ಪಿತಸ್ಥನಲ್ಲ. ಆತನನ್ನು ಕೊಲ್ಲಿಸುವುದಕ್ಕೆ ನನಗೆ ಯಾವ ಕಾರಣವೂ ಕಾಣಿಸುವುದಿಲ್ಲ. ಆದ್ದರಿಂದ ಆತನನ್ನು ಸ್ವಲ್ಪ ಶಿಕ್ಷಿಸಿ ಬಿಟ್ಟುಬಿಡುತ್ತೇನೆ” ಎಂದು ಹೇಳಿದನು.
ಬರಬ್ಬನನ್ನು ಬಿಡುಗಡೆ ಮಾಡಬೇಕೆಂದು ಜನರು ಕೇಳಿಕೊಂಡರು. ದಂಗೆ ಎಬ್ಬಿಸಿದ್ದರಿಂದ ಮತ್ತು ಕೊಲೆಮಾಡಿದ್ದರಿಂದ ಬರಬ್ಬನು ಸೆರೆಮನೆಯಲ್ಲಿದ್ದನು. ಪಿಲಾತನು ಬರಬ್ಬನನ್ನು ಬಿಡುಗಡೆ ಮಾಡಿ, ಯೇಸುವನ್ನು ಕೊಲ್ಲಿಸುವುದಕ್ಕೆ ಜನರಿಗೆ ಒಪ್ಪಿಸಿದನು. ಜನರ ಬಯಕೆಯೂ ಇದೇ ಆಗಿತ್ತು.
(ಮತ್ತಾಯ 27:32-44; ಮಾರ್ಕ 15:21-32; ಯೋಹಾನ 19:17-19) ಸೈನಿಕರು ಯೇಸುವನ್ನು ಕೊಲ್ಲಲು ಕರೆದೊಯ್ಯುವಾಗ ಹೊಲದಿಂದ ಪಟ್ಟಣದೊಳಗೆ ಬರುತ್ತಿದ್ದ ಸೀಮೋನ ಎಂಬವನನ್ನು ಕಂಡರು. ಸೀಮೋನನು ಸಿರೇನ್ ಪಟ್ಟಣದವನು. ಯೇಸುವಿನ ಶಿಲುಬೆಯನ್ನು ಹೊತ್ತುಕೊಂಡು ಯೇಸುವಿನ ಹಿಂದೆ ಬರುವಂತೆ ಸೈನಿಕರು ಸೀಮೋನನನ್ನು ಬಲವಂತ ಮಾಡಿದರು.
ಜೀವನ ಸುಖಕರವಾಗಿರುವಾಗ ಜನರು ಈ ರೀತಿ ವರ್ತಿಸಿದರೆ, ಜೀವನ ಕಷ್ಟಕರವಾದಾಗ ಏನು ಮಾಡುವರು?” [†ಜೀವನ … ಮಾಡುವರು ಅಕ್ಷರಶಃ, “ನೀವು ಇದನ್ನು ಮರ ಹಸಿರಾಗಿರುವಾಗ ಮಾಡಿದರೆ, ಒಣಗಿದಲ್ಲಿ ಏನಾಗುವುದು.” ] ಎಂದು ಹೇಳಿದನು.
ಯೇಸುವನ್ನು ಮತ್ತು ಇಬ್ಬರು ದುಷ್ಕರ್ಮಿಗಳನ್ನು ಅವರು “ಕಪಾಲ”ವೆಂಬ ಸ್ಥಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸೈನಿಕರು ಯೇಸುವನ್ನೂ ಆ ದುಷ್ಕರ್ಮಿಗಳನ್ನೂ ಶಿಲುಬೆಗಳಿಗೆ ಜಡಿದರು. ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿಯೂ ಇನ್ನೊಬ್ಬನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದರು.
ಯೇಸು, “ತಂದೆಯೇ, ಇವರನ್ನು ಕ್ಷಮಿಸು. ಇವರಿಗೆ ತಾವು ಮಾಡುತ್ತಿರುವುದು ತಿಳಿದಿಲ್ಲ” ಎಂದು ಪ್ರಾರ್ಥಿಸಿದನು. ಸೈನಿಕರು ಚೀಟುಹಾಕಿ ಯೇಸುವಿನ ಬಟ್ಟೆಗಳು ಯಾರಿಗೆ ಸೇರಬೇಕೆಂದು ತೀರ್ಮಾನಿಸಿದರು.
ಜನರು ನೋಡುತ್ತಾ ಅಲ್ಲಿ ನಿಂತಿದ್ದರು. ಯೆಹೂದ್ಯನಾಯಕರು ಯೇಸುವನ್ನು ನೋಡಿ ಗೇಲಿಮಾಡಿದರು. ಅವರು, “ಇವನು ದೇವರಿಂದ ಆರಿಸಲ್ಪಟ್ಟ ಕ್ರಿಸ್ತನಾಗಿದ್ದರೆ ತನ್ನನ್ನು ರಕ್ಷಿಸಿಕೊಳ್ಳಲಿ. ಇವನು ಬೇರೆಯವರನ್ನು ರಕ್ಷಿಸಿದನಲ್ಲವೇ?” ಅಂದರು.
ಆಮೇಲೆ ಯೇಸು, “ತಂದೆಯೇ, ನನ್ನ ಆತ್ಮವನ್ನು ನಿನಗೆ ಒಪ್ಪಿಸುತ್ತೇನೆ” [‡ತಂದೆಯೇ … ಒಪ್ಪಿಸುತ್ತೇನೆ ಅಕ್ಷರಶಃ, “ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸುತ್ತೇನೆ.” ಉಲ್ಲೇಖನ: ಕೀರ್ತನೆ. 31:5.] ಎಂದು ಮಹಾಧ್ವನಿಯಿಂದ ಕೂಗಿ ಪ್ರಾಣಬಿಟ್ಟನು.
(ಮತ್ತಾಯ 27:57-61; ಮಾರ್ಕ 15:42-47; ಯೋಹಾನ 19:38-42) (50-51) ಅರಿಮಥಾಯ ಎಂಬುದು ಯೆಹೂದ್ಯರ ಒಂದು ಊರು. ಯೋಸೇಫನು ಇದರ ನಿವಾಸಿ. ಇವನು ಒಳ್ಳೆಯ ಧಾರ್ಮಿಕ ವ್ಯಕ್ತಿಯಾಗಿದ್ದನು. ದೇವರ ರಾಜ್ಯದ ಆಗಮನವನ್ನು ಇವನು ನಿರೀಕ್ಷಿಸಿದ್ದನು. ಯೋಸೇಫನು ಯೆಹೂದ್ಯರ ಹಿರಿಸಭೆಯ ಸದಸ್ಯನಾಗಿದ್ದನು. ಆದರೆ ಬೇರೆ ಯೆಹೂದ್ಯ ನಾಯಕರು ಯೇಸುವನ್ನು ಕೊಲ್ಲಲು ತೀರ್ಮಾನಿಸಿದಾಗ ಇವನು ಅದಕ್ಕೆ ಒಪ್ಪಲಿಲ್ಲ.
ಬಳಿಕ ಆ ಸ್ತ್ರೀಯರು ಯೇಸುವಿನ ದೇಹಕ್ಕೆ ಹಚ್ಚಲು ಪರಿಮಳದ್ರವ್ಯಗಳನ್ನು ಸಿದ್ಧಮಾಡುವುದಕ್ಕಾಗಿ ಹೊರಟುಹೋದರು. ಸಬ್ಬತ್ ದಿನದಲ್ಲಿ ಅವರು ವಿಶ್ರಮಿಸಿಕೊಂಡರು. ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಸಬ್ಬತ್‌ದಿನದಂದು ಜನರೆಲ್ಲರೂ ವಿಶ್ರಾಂತಿ ತೆಗೆದುಕೊಳ್ಳಬೇಕಿತ್ತು.