ಪರಿಣತರಾದ ಜನರಿಗೆ ನಾವು ಜ್ಞಾನವನ್ನೇ ಉಪದೇಶಿಸುತ್ತೇವೆ. ಇದು ಇಹಲೋಕದ ಜ್ಞಾನವೂ ಅಲ್ಲ. ಅಧಿಪತಿಗಳ ಜ್ಞಾನವೂ ಅಲ್ಲ. ಈ ಲೋಕದ ಅಧಿಪತಿಗಳು ತಮ್ಮ ಅಧಿಕಾರವನ್ನು ಕಳೆದುಕೊಳ್ಳುವವರಾಗಿದ್ದಾರೆ.
ನಾವಾದರೋ ದೇವರ ರಹಸ್ಯವಾದ ಜ್ಞಾನವನ್ನೇ ಹೇಳುತ್ತೇವೆ. ಈ ಜ್ಞಾನವನ್ನು ಜನರಿಗೆ ಮರೆಮಾಡಲಾಗಿದೆ. ದೇವರು ನಮ್ಮ ಮಹಿಮೆಗಾಗಿ ಈ ಜ್ಞಾನವನ್ನು ಲೋಕವು ಆರಂಭವಾಗುವುದಕ್ಕಿಂತ ಮೊದಲೇ ಯೋಜಿಸಿದ್ದನು.
ಪವಿತ್ರಗ್ರಂಥದಲ್ಲಿ ಬರೆದಿರುವಂತೆಯೇ ಇದಾಯಿತು: “ದೇವರು ತನ್ನನ್ನು ಪ್ರೀತಿಸುವ ಜನರಿಗೆ ಸಿದ್ಧಪಡಿಸಿರುವುದನ್ನು ಯಾವ ಕಣ್ಣೂ ಕಾಣಲಿಲ್ಲ. ಯಾವ ಕಿವಿಯೂ ಕೇಳಲಿಲ್ಲ. ಯಾವ ವ್ಯಕ್ತಿಯೂ ಊಹಿಸಿಕೊಳ್ಳಲಿಲ್ಲ.” ಯೆಶಾಯ 64:4
ಇದು ಹೇಗೆಂದರೆ: ಒಬ್ಬನ ಆಲೋಚನೆಗಳು ಅವನ ಆಂತರ್ಯದಲ್ಲಿರುವ ಜೀವಾತ್ಮವೊಂದಕ್ಕೆ ಹೊರತು ಬೇರೆ ಯಾರಿಗೂ ತಿಳಿದಿರುವುದಿಲ್ಲ. ಅಂತೆಯೇ, ದೇವರ ಆಲೋಚನೆಗಳು ದೇವರಾತ್ಮನ ಹೊರತು ಬೇರೆ ಯಾರಿಗೂ ತಿಳಿದಿರುವುದಿಲ್ಲ.
ನಾವು ಹೊಂದಿಕೊಂಡದ್ದು ದೇವರಿಂದ ಬಂದ ಪವಿತ್ರಾತ್ಮನನ್ನೇ ಹೊರತು ಪ್ರಾಪಂಚಿಕವಾದ ಆತ್ಮವನ್ನಲ್ಲ. ದೇವರು ನಮಗೆ ಉಚಿತವಾಗಿ ಕೊಟ್ಟಿರುವಂಥವುಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಾವು ಆತನನ್ನು ಹೊಂದಿಕೊಂಡೆವು.
ಆತ್ಮಿಕನಲ್ಲದ ವ್ಯಕ್ತಿಯು ದೇವಾರಾತ್ಮನ ವಿಷಯಗಳನ್ನು ಸ್ವೀಕರಿಸಿಕೊಳ್ಳವುದಿಲ್ಲ. ಅವನು ಆ ವಿಷಯಗಳನ್ನು ಮೂರ್ಖತನವೆಂದು ಯೋಚಿಸುತ್ತಾನೆ. ಅವನು ಪವಿತ್ರಾತ್ಮನ ವಿಷಯಗಳನ್ನು ಅರ್ಥಮಾಡಿಕೊಳ್ಳಲಾರನು; ಏಕೆಂದರೆ ಆ ವಿಷಯಗಳನ್ನು ಆತ್ಮಿಕವಾಗಿ ವಿಚಾರಣೆ ಮಾಡಲು ಮಾತ್ರ ಸಾಧ್ಯ.