ಅಷ್ಟರಲ್ಲಿ ಒಬ್ಬ ಬಡ ವಿಧವೆಯು ಬಂದು ಎರಡು ಚಿಕ್ಕನಾಣ್ಯಗಳನ್ನು ಪೆಟ್ಟಿಗೆಯಲ್ಲಿ [*ಹಣದ ಪೆಟ್ಟಿಗೆ ಜನರು ತಮ್ಮ ಕಾಣಿಕೆಗಳನ್ನು ದೇವರಿಗೆ ಸಮರ್ಪಿಸುವುದಕ್ಕೆ ಯೆಹೂದ್ಯರ ಆರಾಧನೆಯ ಸ್ಥಳದಲ್ಲಿ ಇಡಲ್ಪಟ್ಟ ವಿಶೇಷ ಪೆಟ್ಟಿಗೆ.] ಹಾಕಿದಳು.
ಅದನ್ನು ಕಂಡ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ. ಈ ಬಡ ವಿಧವೆ ಕೇವಲ ಎರಡು ಚಿಕ್ಕ ತಾಮ್ರದ ನಾಣ್ಯಗಳನ್ನು ಕೊಟ್ಟಳು. ಆದರೆ ಆಕೆ ನಿಜವಾಗಿಯೂ, ಆ ಐಶ್ವರ್ಯವಂತರೆಲ್ಲರಿಗಿಂತ ಹೆಚ್ಚು ಕೊಟ್ಟಳು.
ಐಶ್ವರ್ಯವಂತರಿಗೆ ಬೇಕಾದಷ್ಟು ಇದೆ. ಅವರು ಕೇವಲ ತಮಗೆ ಅವಶ್ಯವಿಲ್ಲದ್ದನ್ನು ಕೊಟ್ಟರು. ಈ ಸ್ತ್ರೀ ಬಹಳ ಬಡವಳಾಗಿದ್ದರೂ ತನ್ನಲ್ಲಿ ಇದ್ದದ್ದೆಲ್ಲವನ್ನೂ ಕೊಟ್ಟಳು. ಈಕೆಗೆ ಆ ಹಣದ ಅವಶ್ಯವಿತ್ತು” ಎಂದು ಹೇಳಿದನು.
(ಮತ್ತಾಯ 24:1-14; ಮಾರ್ಕ 13:1-13) ಶಿಷ್ಯರಲ್ಲಿ ಕೆಲವರು ದೇವಾಲಯದ ಕುರಿತು ಮಾತಾಡುತ್ತಾ, “ಇದು ಅಂದವಾದ ಕಲ್ಲುಗಳಿಂದಲೂ ಹರಕೆಯ ಕೊಡುಗೆಗಳಿಂದಲೂ ಎಷ್ಟೊಂದು ಸುಂದರವಾಗಿದೆ!” ಎಂದರು.
ಆದರೆ ಯೇಸು ಅವರಿಗೆ, “ನೀವು ಇಲ್ಲಿ ನೋಡುವಂಥದ್ದೆಲ್ಲವೂ ನಾಶವಾಗುವ ಕಾಲ ಬರುವುದು. ಈ ಕಟ್ಟಡಗಳ ಪ್ರತಿಯೊಂದು ಕಲ್ಲನ್ನು ನೆಲಕ್ಕೆ ಕೆಡವಲಾಗುವುದು. ಇಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲುವುದಿಲ್ಲ!” ಎಂದು ಹೇಳಿದನು.
ಯೇಸು ಅವರಿಗೆ, “ಎಚ್ಚರಿಕೆಯಾಗಿರಿ! ಮೋಸ ಹೋಗಬೇಡಿರಿ. ನನ್ನ ಹೆಸರನ್ನು ಹೇಳುತ್ತಾ ಅನೇಕರು ಬರುವರು. ಅವರು, ‘ನಾನೇ ಕ್ರಿಸ್ತನು’ ಎಂದೂ, ‘ಸರಿಯಾದ ಸಮಯ ಬಂದಿದೆ’ ಎಂದೂ ಹೇಳುವರು. ಆದರೆ ಅವರನ್ನು ಹಿಂಬಾಲಿಸಬೇಡಿರಿ.
“ಆದರೆ ಈ ಎಲ್ಲಾ ಸಂಗತಿಗಳು ಸಂಭವಿಸುವ ಮೊದಲು, ಜನರು ನಿಮ್ಮನ್ನು ಬಂಧಿಸುವರು ಮತ್ತು ಹಿಂಸಿಸುವರು. ಸಭಾಮಂದಿರಗಳಲ್ಲಿ ಜನರು ನಿಮಗೆ ತೀರ್ಪು ನೀಡಿ ಸೆರೆಮನೆಗೆ ಹಾಕುವರು. ರಾಜರ ಮುಂದೆ ಮತ್ತು ರಾಜ್ಯಪಾಲರ ಮುಂದೆ ನಿಮ್ಮನ್ನು ಬಲವಂತವಾಗಿ ನಿಲ್ಲಿಸುವರು. ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮಗೆ ಹೀಗೆಲ್ಲಾ ಮಾಡುವರು.
(ಮತ್ತಾಯ 24:15-21; ಮಾರ್ಕ 13:14-19) “ಜೆರುಸಲೇಮಿನ ಸುತ್ತಲೂ ಸೈನ್ಯಗಳು ಮುತ್ತಿಗೆ ಹಾಕುವುದನ್ನು ನೀವು ನೋಡುವಿರಿ. ಆಗ ಜೆರುಸಲೇಮಿನ ನಾಶನದ ಕಾಲ ಬಂತೆಂದು ನೀವು ತಿಳಿದುಕೊಳ್ಳಿರಿ.
ಆ ಕಾಲದಲ್ಲಿ, ಗರ್ಭಿಣಿ ಸ್ತ್ರೀಯರಿಗೂ ಚಿಕ್ಕ ಕೂಸುಗಳಿರುವವರಿಗೂ ಬಹಳ ಗೋಳಾಟ ಇರುವುದು. ಏಕೆಂದರೆ ಈ ದೇಶವು ಮಹಾವಿಪತ್ತಿಗೆ ಈಡಾಗುವುದು. ದೇವರು ಈ ಜನರ (ಯೆಹೂದ್ಯರ) ವಿಷಯದಲ್ಲಿ ಕೋಪಗೊಂಡಿರುವುದರಿಂದ
ಇವರಲ್ಲಿ ಕೆಲವರು ಸೈನಿಕರಿಂದ ಕೊಲ್ಲಲ್ಪಡುವರು. ಇನ್ನು ಕೆಲವರು ಬಂಧಿತರಾಗಿ ಪರದೇಶಕ್ಕೆ ಒಯ್ಯಲ್ಪಡುವರು. ಅನ್ಯದೇಶೀಯರು ತಮ್ಮ ಕಾಲ ಮುಗಿಯುವ ತನಕ ಪರಿಶುದ್ಧ ಪಟ್ಟಣವಾದ ಜೆರುಸಲೇಮಿನಲ್ಲಿ ನಡೆದಾಡುವರು.
(ಮತ್ತಾಯ 24:29-31; ಮಾರ್ಕ 13:24-27) “ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಲ್ಲಿ ವಿಚಿತ್ರವಾದ ಸೂಚನೆಗಳು ಕಾಣಿಸಿಕೊಳ್ಳುವವು. ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕುತೋಚದೆ ತತ್ತರಿಸಿ ಹೋಗುವವು.
ಈ ಸಂಗತಿಗಳು ಸಂಭವಿಸುವುದಕ್ಕೆ ತೊಡಗುವಾಗ ಭಯಪಡಬೇಡಿರಿ. ಮೇಲೆ ನೋಡಿ ಸಂತೋಷಪಡಿರಿ! ಚಿಂತೆಮಾಡಬೇಡಿರಿ. ಸಂತೋಷಪಡಿರಿ, ಏಕೆಂದರೆ ದೇವರು ನಿಮ್ಮನ್ನು ಬಿಡುಗಡೆಗೊಳಿಸುವ ಕಾಲ ಸಮೀಪವಾಗಿದೆ ಎಂಬುದಕ್ಕೆ ಅವು ಸೂಚನೆಯಾಗಿವೆ.”
ಆದ್ದರಿಂದ ಎಲ್ಲಾ ಸಮಯದಲ್ಲಿಯೂ ಸಿದ್ಧರಾಗಿರಿ. ನಡೆಯಲಿರುವ ಈ ಎಲ್ಲಾ ಸಂಗತಿಗಳನ್ನು ಎದುರಿಸಿ ಸುರಕ್ಷಿತವಾಗಿ ಮುಂದುವರಿಯಲು ಮತ್ತು ಮನುಷ್ಯಕುಮಾರನ ಮುಂದೆ ನಿಲ್ಲಲು ಬೇಕಾದ ಶಕ್ತಿಗಾಗಿ ಪ್ರಾರ್ಥಿಸಿರಿ.”