Bible Languages

Indian Language Bible Word Collections

Bible Versions

Books

Luke Chapters

Luke 8 Verses

Bible Versions

Books

Luke Chapters

Luke 8 Verses

1 ಮರುದಿನ, ಯೇಸು ಕೆಲವು ನಗರಗಳ ಮತ್ತು ಊರುಗಳ ಮೂಲಕ ಪ್ರಯಾಣ ಮಾಡಿ ಜನರಿಗೆ ಬೋಧಿಸಿದನು ಮತ್ತು ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಿದನು. ಹನ್ನೆರಡು ಮಂದಿ ಅಪೊಸ್ತಲರು ಆತನೊಡನೆ ಇದ್ದರು.
2 ಕೆಲವು ಸ್ತ್ರೀಯರೂ ಆತನೊಡನೆ ಇದ್ದರು. ಈ ಸ್ತ್ರೀಯರು ಆತನಿಂದ ತಮ್ಮ ಕಾಯಿಲೆಗಳಿಂದ ಗುಣಹೊಂದಿದವರೂ ದೆವ್ವಗಳ ಕಾಟದಿಂದ ಬಿಡುಗಡೆ ಹೊಂದಿದವರೂ ಆಗಿದ್ದರು. ಈ ಸ್ತ್ರೀಯರಲ್ಲಿ ಒಬ್ಬಳ ಹೆಸರು ಮರಿಯಳು. ಆಕೆ ಮಗ್ದಲ ಎಂಬ ಊರಿನವಳು. ಯೇಸು ಆಕೆಯನ್ನು ಏಳು ದೆವ್ವಗಳಿಂದ ಬಿಡಿಸಿದನು.
3 ಇದಲ್ಲದೆ ಕೂಜನ (ಹೆರೋದನ ಸಹಾಯಕ) ಹೆಂಡತಿಯಾದ ಯೋಹಾನಳು, ಸುಸನ್ನಳು ಮತ್ತು ಬೇರೆ ಅನೇಕ ಸ್ತ್ರೀಯರು ಇದ್ದರು. ಈ ಸ್ತ್ರೀಯರು ಯೇಸುವಿಗೂ ಆತನ ಅಪೊಸ್ತಲರಿಗೂ ತಮ್ಮ ಸ್ವಂತ ಹಣದಿಂದ ಸಹಾಯ ಮಾಡುತ್ತಿದ್ದರು.
4 ಅನೇಕ ಜನರು ಊರೂರುಗಳಿಂದ ಯೇಸುವಿನ ಬಳಿಗೆ ಸೇರಿಬಂದರು. ಆಗ ಯೇಸು ಅವರಿಗೆ ಈ ಸಾಮ್ಯ ಹೇಳಿದನು:
5 ”ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೊಲಕ್ಕೆ ಹೋದನು. ಬೀಜ ಬಿತ್ತುವಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದು ಜನರ ತುಳಿತಕ್ಕೆ ಸಿಕ್ಕಿಕೊಂಡವು. ಹಕ್ಕಿಗಳು ಬಂದು ಅವುಗಳನ್ನೆಲ್ಲ ತಿಂದುಬಿಟ್ಟವು.
6 ಕೆಲವು ಬೀಜಗಳು ಬಂಡೆಯ ಮೇಲೆ ಬಿದ್ದವು. ಅವುಗಳು ಮೊಳೆಯತೊಡಗಿದರೂ ನೀರಿಲ್ಲದೆ ಒಣಗಿಹೋದವು.
7 ಕೆಲವು ಬೀಜಗಳು ಮುಳ್ಳುಗಿಡಗಳ ಮಧ್ಯೆ ಬಿದ್ದವು. ಅವುಗಳು ಮೊಳೆತರೂ ಮುಳ್ಳುಗಿಡಗಳಿಂದ ಬೆಳೆಯಲಾಗಲಿಲ್ಲ.
8 ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಈ ಬೀಜಗಳು ಮೊಳೆತು ಬೆಳೆದು ನೂರರಷ್ಟು ಹೆಚ್ಚು ಫಲವನ್ನು ಕೊಟ್ಟವು.” ಯೇಸು ಈ ಸಾಮ್ಯವನ್ನು ಹೇಳಿ ಮುಗಿಸಿದ ಮೇಲೆ, “ನನ್ನ ಮಾತನ್ನು ಆಲಿಸುತ್ತಿರುವ ಜನರೇ, ಕೇಳಿರಿ” ಎಂದು ಹೇಳಿದನು.
9 ಶಿಷ್ಯರು ಆತನಿಗೆ, “ಈ ಸಾಮ್ಯದ ಅರ್ಥವೇನು?” ಎಂದು ಕೇಳಿದರು.
10 ಯೇಸು, “ನೀವು ದೇವರ ರಾಜ್ಯದ ಗುಟ್ಟುಗಳನ್ನು ತಿಳಿದುಕೊಳ್ಳಬೇಕೆಂದು ನಿಮ್ಮನ್ನು ಆರಿಸಿಕೊಳ್ಳಲಾಗಿದೆ. ಆದರೆ ಬೇರೆ ಜನರೊಂದಿಗೆ ನಾನು ಸಾಮ್ಯಗಳ ಮೂಲಕ ಮಾತಾಡುತ್ತೇನೆ, ಏಕೆಂದರೆ, ؅ಅವರು ನೋಡಿದರೂ ಕಾಣುವುದಿಲ್ಲ, ಕೇಳಿದರೂ ಗ್ರಹಿಸಿಕೊಳ್ಳುವುದಿಲ್ಲ.؆ಯೆಶಾಯ 6:9
11 ”ಈ ಸಾಮ್ಯದ ಅರ್ಥ ಹೀಗಿದೆ: ಬೀಜವು ದೇವರ ವಾಕ್ಯ.
12 ಕಾಲ್ದಾರಿಯಲ್ಲಿ ಬಿದ್ದ ಬೀಜವೆಂದರೇನು? ದೇವರ ವಾಕ್ಯವನ್ನು ಕೆಲವರು ಕೇಳುತ್ತಾರೆ. ಆದರೆ ಸೈತಾನನು ಬಂದು ಅವರ ಹೃದಯದೊಳಗಿಂದ ಆ ವಾಕ್ಯವನ್ನು ತೆಗೆದುಬಿಡುತ್ತಾನೆ. ಅವರು ಆ ವಾಕ್ಯವನ್ನು ನಂಬದಿರುವುದರಿಂದ ರಕ್ಷಣೆಯನ್ನು ಹೊಂದಲಾರರು.
13 ಬಂಡೆಯ ಮೇಲೆ ಬಿದ್ದ ಬೀಜವೆಂದರೇನು? ಕೆಲವರು ದೇವರ ವಾಕ್ಯ ಕೇಳಿ ಸಂತೋಷದಿಂದ ಸ್ವೀಕರಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಆಳವಾದ ಬೇರುಗಳಿರುವುದಿಲ್ಲ. ಅವರು ಸ್ವಲ್ಪಕಾಲ ಮಾತ್ರವೇ ನಂಬುತ್ತಾರೆ. ಬಳಿಕ ತೊಂದರೆಯೇನಾದರೂ ಬಂದರೆ ತಮ್ಮ ನಂಬಿಕೆಯನ್ನು ಕಳೆದುಕೊಂಡು ದೇವರಿಂದ ದೂರ ಸರಿಯುತ್ತಾರೆ.
14 ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದ ಬೀಜವೆಂದರೇನು? ಕೆಲವರು ದೇವರ ವಾಕ್ಯವನ್ನು ಕೇಳುತ್ತಾರೆ, ಆದರೆ ಈ ಲೋಕದ ಚಿಂತೆಗಳಿಗೂ ಐಶ್ವರ್ಯಗಳಿಗೂ ಭೋಗಗಳಿಗೂ ಅವರು ಅವಕಾಶಕೊಡುವುದರಿಂದ ಅವರು ಬೆಳೆಯರಾರರು; ಎಂದಿಗೂ ಒಳ್ಳೆಯ ಫಲವನ್ನು ಕೊಡಲಾರರು.
15 ಒಳ್ಳೆಯ ನೆಲದಲ್ಲಿ ಬಿದ್ದ ಬೀಜವೆಂದರೇನು? ಒಳ್ಳೆಯದಾದ ಮತ್ತು ಯಥಾರ್ಥವಾದ ಹೃದಯದಿಂದ ದೇವರ ವಾಕ್ಯವನ್ನು ಕೇಳುವ ಜನರೇ ಬೀಜಬಿದ್ದ ಒಳ್ಳೆಯ ನೆಲವಾಗಿದ್ದಾರೆ. ಅವರು ದೇವರ ವಾಕ್ಯಕ್ಕೆ ವಿಧೇಯರಾಗಿ ತಾಳ್ಮೆಯಿಂದ ಒಳ್ಳೆಯ ಫಲವನ್ನು ನೀಡುವರು.
16 ”ಯಾವ ವ್ಯಕ್ತಿಯೂ ದೀಪವನ್ನು ಹಚ್ಚಿ ಅದನ್ನು ಪಾತ್ರೆಯ ಒಳಗಾಗಲಿ ಮಂಚದ ಕೆಳಗಾಗಲಿ ಬಚ್ಚಿಡುವುದಿಲ್ಲ. ಮನೆಯೊಳಗೆ ಬರುವವರಿಗೆ ಸಾಕಷ್ಟು ಬೆಳಕು ದೊರೆಯಲಿ ಎಂದು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾನೆ.
17 ಬೆಳಕಿಗೆ ಬಾರದ ಯಾವ ರಹಸ್ಯವೂ ಇಲ್ಲ; ಬಯಲಿಗೆ ಬಾರದ ಯಾವ ಗುಟ್ಟೂ ಇಲ್ಲ.
18 ಆದುದರಿಂದ ನೀವು ಕಿವಿಗೊಡುವಾಗ ಜಾಗರೂಕರಾಗಿರಿ; ಸ್ವಲ್ಪ ತಿಳುವಳಿಕೆ ಇರುವ ವ್ಯಕ್ತಿಯು ಹೆಚ್ಚು ತಿಳುವಳಿಕೆಯನ್ನು ಹೊಂದುವನು. ಆದರೆ ತಿಳುವಳಿಕೆ ಇಲ್ಲದ ವ್ಯಕ್ತಿಯು ತನಗಿದೆ ಎಂದುಕೊಂಡಿದ್ದ ತಿಳುವಳಿಕೆಯನ್ನೂ ಕಳೆದುಕೊಳ್ಳುವನು.”
19 ಯೇಸುವಿನ ತಾಯಿ ಮತ್ತು ತಮ್ಮಂದಿರು ಆತನನ್ನು ಭೇಟಿಯಾಗಲು ಬಂದರು. ಅಲ್ಲಿ ಬಹಳ ಜನರು ಇದ್ದುದರಿಂದ ಯೇಸುವಿನ ತಾಯಿಯಾಗಲಿ ಆತನ ತಮ್ಮಂದಿರಾಗಲಿ ಆತನ ಬಳಿಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿದ್ದ ಒಬ್ಬನು,
20 ”ನಿನ್ನ ತಾಯಿ ಮತ್ತು ತಮ್ಮಂದಿರು ಹೊರಗೆ ನಿಂತಿದ್ದಾರೆ. ಅವರು ನಿನ್ನನ್ನು ನೋಡಬೇಕೆಂದಿದ್ದಾರೆ” ಎಂದು ಯೇಸುವಿಗೆ ತಿಳಿಸಿದನು.
21 ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ವಿಧೇಯರಾಗುವ ಜನರೇ ನನ್ನ ತಾಯಿ ಮತ್ತು ನನ್ನ ತಮ್ಮಂದಿರು!” ಎಂದು ಉತ್ತರಕೊಟ್ಟನು.
22 ಒಂದು ದಿನ ಯೇಸು ಮತ್ತು ಆತನ ಶಿಷ್ಯರು ದೋಣಿಯಲ್ಲಿ ಹತ್ತಿ ಕುಳಿತುಕೊಂಡರು. ಯೇಸು ಅವರಿಗೆ, “ನಾವು ಸರೋವರದ ಆಚೆದಡಕ್ಕೆ ಹೋಗೋಣ” ಎಂದು ಹೇಳಿದನು. ಅಂತೆಯೇ ಅವರು ಆಚೆದಡಕ್ಕೆ ಹೊರಟರು.
23 ಅವರು ಸರೋವರದ ಮೇಲೆ ದೋಣಿಯಲ್ಲಿ ಹೋಗುತ್ತಿರುವಾಗ ಯೇಸುವಿಗೆ ನಿದ್ದೆ ಹತ್ತಿತು. ಇತ್ತ ಸರೋವರದ ಮೇಲೆ ಬಿರುಗಾಳಿ ಬೀಸತೊಡಗಿತು. ದೋಣಿಯೊಳಗೆ ನೀರು ತುಂಬತೊಡಗಿತು. ದೋಣಿಯಲ್ಲಿದ್ದವರೆಲ್ಲರೂ ಅಪಾಯಕ್ಕೀಡಾದರು.
24 ಆಗ ಶಿಷ್ಯರು ಯೇಸುವಿನ ಬಳಿಗೆ ಹೋಗಿ ಆತನನ್ನು ಎಬ್ಬಿಸಿ, “ಗುರುವೇ! ಗುರುವೇ! ನಾವು ಮುಳುಗಿಹೋಗುತ್ತಿದ್ದೇವೆ!” ಎಂದು ಹೇಳಿದರು. ಕೂಡಲೇ ಯೇಸು ಎದ್ದು, ಆ ಗಾಳಿಗೂ ತೆರೆಗಳಿಗೂ ಆಜ್ಞಾಪಿಸಿದನು. ಆಗ ಬಿರುಗಾಳಿ ನಿಂತಿತು ಮತ್ತು ಸರೋವರ ಶಾಂತವಾಯಿತು.
25 ಯೇಸು ತನ್ನ ಶಿಷ್ಯರಿಗೆ, “ಎಲ್ಲಿ ಹೋಯಿತು ನಿಮ್ಮ ನಂಬಿಕೆ?” ಎಂದು ಕೇಳಿದನು. ಶಿಷ್ಯರು ಭಯಪಟ್ಟರು ಮತ್ತು ವಿಸ್ಮಯಗೊಂಡರು. “ಈತನು ಯಾರಿರಬಹುದು? ಈತನು ಗಾಳಿಗೂ ನೀರಿಗೂ ಆಜ್ಞಾಪಿಸುತ್ತಾನೆ. ಅವು ವಿಧೇಯವಾಗುತ್ತವೆ!” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.
26 ಯೇಸು ಮತ್ತು ಆತನ ಶಿಷ್ಯರು ಗಲಿಲಾಯದಿಂದ ಸರೋವರವನ್ನು ದಾಟಿ, ಗೆರೆಸೇನರ ನಾಡಿಗೆ ಪ್ರಯಾಣ ಮಾಡಿದರು.
27 ಯೇಸು ದೋಣಿಯಿಂದ ಇಳಿದಾಗ, ಆ ಪಟ್ಟಣದ ಮನುಷ್ಯನೊಬ್ಬನು ಯೇಸುವಿನ ಬಳಿಗೆ ಬಂದನು. ಈ ಮನುಷ್ಯನಿಗೆ ದೆವ್ವ ಹಿಡಿದಿತ್ತು. ಬಹಳ ಕಾಲದಿಂದ ಅವನು ಬಟ್ಟೆಯನ್ನೇ ಹಾಕಿಕೊಂಡಿರಲಿಲ್ಲ. ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು.
28 [This verse may not be a part of this translation]
29 [This verse may not be a part of this translation]
30 ”ನಿನ್ನ ಹೆಸರೇನು?” ಎಂದು ಯೇಸು ಕೇಳಿದನು. “ದಂಡು” ಎಂದು ಅವನು ಉತ್ತರಿಸಿದನು. (ಏಕೆಂದರೆ ಅವನೊಳಗೆ ಅನೇಕ ದೆವ್ವಗಳು ಸೇರಿಕೊಂಡಿದ್ದವು.)
31 ತಮ್ಮನ್ನು ಪಾತಾಳಕ್ಕೆ ಕಳುಹಿಸಕೂಡದೆಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು.
32 ಅಲ್ಲಿದ್ದ ಒಂದು ಗುಡ್ಡದ ಮೇಲೆ ಹಂದಿಗಳ ಒಂದು ದೊಡ್ಡ ಗುಂಪು ಮೇಯುತ್ತಿತ್ತು. ಹಂದಿಗಳೊಳಗೆ ಹೋಗಲು ತಮಗೆ ಅನುಮತಿ ಕೊಡಬೇಕೆಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. ಯೇಸು ಅವುಗಳಿಗೆ ಅನುಮತಿಕೊಟ್ಟನು.
33 ಆಗ ದೆವ್ವಗಳು ಆ ಮನುಷ್ಯನಿಂದ ಹೊರಬಂದು ಹಂದಿಗಳೊಳಗೆ ಸೇರಿಕೊಂಡವು. ಆ ಕೂಡಲೇ ಹಂದಿಗಳ ಗುಂಪು ಗುಡ್ಡದ ಕೆಳಗೆ ಓಡಿಹೋಗಿ ಸರೋವರದಲ್ಲಿ ಬಿದ್ದು ಮುಳುಗಿ ಹೋದವು.
34 ಹಂದಿಗಳನ್ನು ಕಾಯುತ್ತಿದ್ದವರು ಓಡಿಹೋಗಿ, ನಡೆದ ಈ ಸಂಗತಿಯನ್ನು ಹೊಲಗಳಲ್ಲಿಯೂ ಊರುಗಳಲ್ಲಿಯೂ ಇದ್ದ ಜನರಿಗೆ ತಿಳಿಸಿದರು.
35 ಅದನ್ನು ನೋಡಲು ಜನರೆಲ್ಲರೂ ಯೇಸುವಿದ್ದಲ್ಲಿಗೆ ಬಂದರು. ಆ ಮನುಷ್ಯನು ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತಿದ್ದುದನ್ನು ಅವರು ನೋಡಿದರು. ಅವನು ಬಟ್ಟೆಗಳನ್ನು ಹಾಕಿಕೊಂಡಿದ್ದನು; ಸ್ವಸ್ಥಬುದ್ಧಿಯುಳ್ಳವನಾಗಿದ್ದನು. ದೆವ್ವಗಳು ಅವನನ್ನು ಬಿಟ್ಟುಹೋಗಿದ್ದವು. ಜನರಿಗೆ ಭಯವಾಯಿತು.
36 ಯೇಸು ಆ ಮನುಷ್ಯನನ್ನು ಗುಣಪಡಿಸಿದ ರೀತಿಯನ್ನು ನೋಡಿದ್ದವರು ಆತನನ್ನು ನೋಡಲು ಬಂದ ಜನರೆಲ್ಲರಿಗೂ ಆ ಘಟನೆಯನ್ನು ವಿವರಿಸಿ ಹೇಳಿದರು.
37 ಜನರು ಯೇಸುವಿಗೆ, “ನೀನು ಇಲ್ಲಿಂದ ಹೊರಟುಹೋಗು” ಎಂದು ಕೇಳಿಕೊಂಡರು. ಏಕೆಂದರೆ ಅವರು ಬಹಳ ಭಯಗೊಂಡಿದ್ದರು. ಆದ್ದರಿಂದ ಯೇಸು ದೋಣಿಯನ್ನು ಹತ್ತಿ ಮತ್ತೆ ಗಲಿಲಾಯಕ್ಕೆ ಹಿಂತಿರುಗಿದನು.
38 ದೆವ್ವಗಳಿಂದ ಬಿಡುಗಡೆಯಾಗಿದ್ದವನು, “ನನ್ನನ್ನು ನಿನ್ನ ಜೊತೆಯಲ್ಲೇ ಕರೆದುಕೊಂಡು ಹೋಗು,” ಎಂದು ಕೇಳಿಕೊಂಡನು.
39 ಅದಕ್ಕೆ ಯೇಸು, “ನಿನ್ನ ಮನೆಗೆ ಹಿಂತಿರುಗಿ ಹೋಗು. ದೇವರು ನಿನಗೆ ಮಾಡಿದ ಉಪಕಾರವನ್ನು ಜನರಿಗೆ ತಿಳಿಸು” ಎಂದು ಹೇಳಿ ಅವನನ್ನು ಕಳುಹಿಸಿದನು. ಆದ್ದರಿಂದ ಆ ಮನುಷ್ಯನು ಅಲ್ಲಿಂದ ಹೊರಟು ಹೋಗಿ ಯೇಸು ತನಗೆ ಮಾಡಿದ ಉಪಕಾರವನ್ನು ಊರಲ್ಲೆಲ್ಲಾ ತಿಳಿಸಿದನು.
40 ಯೇಸು ಗಲಿಲಾಯಕ್ಕೆ ಹಿಂತಿರುಗಿದಾಗ ಜನರು ಆತನನ್ನು ಸ್ವಾಗತಿಸಿದರು. ಪ್ರತಿಯೊಬ್ಬರೂ ಆತನಿಗಾಗಿ ಕಾಯುತ್ತಿದ್ದರು.
41 ಯಾಯಿರನೆಂಬ ಒಬ್ಬ ಮನುಷ್ಯನು ಯೇಸುವಿನ ಬಳಿಗೆ ಬಂದನು. ಅವನು ಸಭಾಮಂದಿರದ ಅಧಿಕಾರಿಯಾಗಿದ್ದನು. ಅವನು ಯೇಸುವಿನ ಪಾದಗಳಿಗೆ ಅಡ್ಡಬಿದ್ದು ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು.
42 ಅವನಿಗೆ ಒಬ್ಬಳೇ ಮಗಳಿದ್ದಳು. ಆಕೆಗೆ ಹನೆರಡು ವರ್ಷ ವಯಸ್ಸಾಗಿತ್ತು. ಆಕೆಯು ಸಾಯುವ ಸ್ಥಿತಿಯಲ್ಲಿದ್ದಳು. ಯೇಸುವು ಯಾಯಿರನ ಮನೆಗೆ ಹೋಗುತ್ತಿದ್ದಾಗ ಜನರು ಆತನ ಸುತ್ತಲೂ ಸೇರಿಬಂದರು.
43 ಹನ್ನೆರಡು ವರ್ಷಗಳಿಂದ ರಕ್ತಸ್ರಾವವಾಗುತ್ತಿದ್ದ ಸ್ತ್ರೀಯೊಬ್ಬಳು ಅಲ್ಲಿದ್ದಳು. ಆಕೆ ತನ್ನಲ್ಲಿದ್ದ ಹಣವನ್ನೆಲ್ಲಾ ವೈದ್ಯರಿಗೆ ಖರ್ಚು ಮಾಡಿದ್ದಳು. ಆದರೆ ಯಾವ ವೈದ್ಯನಿಗೂ ಆಕೆಯನ್ನು ವಾಸಿಮಾಡಲು ಸಾಧ್ಯವಾಗಿರಲಿಲ್ಲ.
44 ಆ ಸ್ತ್ರೀಯು ಯೇಸುವಿನ ಹಿಂದೆ ಬಂದು ಆತನ ನಿಲುವಂಗಿಯ ಕೆಳಭಾಗವನ್ನು ಮುಟ್ಟಿದಳು. ಆ ಕ್ಷಣವೇ ಆಕೆಯ ರಕ್ತಸ್ರಾವ ನಿಂತುಹೋಯಿತು.
45 ಆಗ ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದು ಕೇಳಿದನು. ಜನರೆಲ್ಲರೂ ತಾವು ಮುಟ್ಟಲಿಲ್ಲವೆಂದು ಹೇಳುತ್ತಿರಲು ಪೇತ್ರನು, “ಗುರುವೇ, ಇಷ್ಟೊಂದು ಜನರು ಮೇಲೆ ಬೀಳುತ್ತಾ ನಿನ್ನನ್ನು ನೂಕುತ್ತಿದ್ದಾರಲ್ಲಾ” ಎಂದನು.
46 ಅದಕ್ಕೆ ಯೇಸು, “ಯಾರೋ ಒಬ್ಬರು ನನ್ನನ್ನು ಮುಟ್ಟಿದರು! ನನ್ನಿಂದ ಶಕ್ತಿ ಹೊರಟದ್ದು ನನಗೆ ತಿಳಿಯಿತು” ಎಂದು ಹೇಳಿದನು.
47 ಇನ್ನು ತಾನು ಅಡಗಿಕೊಂಡಿರಲು ಸಾಧ್ಯವಿಲ್ಲವೆಂದು ತಿಳಿದುಕೊಂಡ ಆ ಸ್ತ್ರೀಯು ನಡುಗುತ್ತಾ ಆತನ ಮುಂದೆ ಬಂದು ಅಡ್ಡಬಿದ್ದು ತಾನು ಮುಟ್ಟಿದ್ದಕ್ಕೆ ಕಾರಣವನ್ನು ಎಲ್ಲರ ಎದುರಿನಲ್ಲಿ ತಿಳಿಸಿದಳು. ಅಲ್ಲದೆ ಆತನನ್ನು ಮುಟ್ಟಿದಾಕ್ಷಣವೇ ತನಗೆ ವಾಸಿಯಾಯಿತೆಂದು ಹೇಳಿದಳು.
48 ಯೇಸು ಆಕೆಗೆ, “ಮಗಳೇ, ನೀನು ನಂಬಿದ್ದರಿಂದ ನಿನಗೆ ಸ್ವಸ್ಥವಾಯಿತು. ಸಮಾಧಾನದಿಂದ ಹೋಗು” ಎಂದು ಹೇಳಿದನು.
49 ಯೇಸು ಇನ್ನೂ ಮಾತನಾಡುತ್ತಿದ್ದಾಗ ಸಭಾಮಂದಿರದ ಅಧಿಕಾರಿಯ (ಯಾಯಿರನ) ಮನೆಯಿಂದ ಒಬ್ಬ ವ್ಯಕ್ತಿ ಬಂದು, “ನಿನ್ನ ಮಗಳು ಸತ್ತುಹೋದಳು! ಈಗ ಬೋಧಕನಿಗೆ (ಯೇಸುವಿಗೆ) ತೊಂದರೆ ಕೊಡಬೇಡ” ಎಂದು ಹೇಳಿದನು.
50 ಯೇಸು ಇದನ್ನು ಕೇಳಿ ಯಾಯಿರನಿಗೆ, “ಭಯಪಡಬೇಡ. ನಂಬಿಕೆಯೊಂದಿರಲಿ. ನಿನ್ನ ಮಗಳಿಗೆ ಗುಣವಾಗುವುದು” ಎಂದು ಹೇಳಿದನು.
51 ಯೇಸು ಯಾಯಿರನ ಮನೆಗೆ ಹೋದನು. ಪೇತ್ರ, ಯೋಹಾನ, ಯಾಕೋಬ ಮತ್ತು ಹುಡುಗಿಯ ತಂದೆತಾಯಿಗಳಿಗೆ ಮಾತ್ರ ತನ್ನೊಂದಿಗೆ ಬರಲು ಅನುಮತಿಕೊಟ್ಟನು. ಬೇರೆ ಯಾರೂ ಒಳಗೆ ಬರಕೂಡದೆಂದು ಯೇಸು ತಿಳಿಸಿದನು.
52 ಸತ್ತುಹೋದ ಆ ಬಾಲಕಿಗಾಗಿ ಜನರೆಲ್ಲರೂ ದುಃಖದಿಂದ ಗೋಳಾಡುತ್ತಿದ್ದರು. ಆದರೆ ಯೇಸು ಅವರಿಗೆ, “ಅಳಬೇಡಿ, ಆಕೆ ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ” ಎಂದನು.
53 ಆಗ ಜನರು ಯೇಸುವನ್ನು ಗೇಲಿಮಾಡಿದರು. ಏಕೆಂದರೆ ಆ ಹುಡುಗಿ ಸತ್ತುಹೋದಳೆಂದು ಅವರಿಗೆ ಖಂಡಿತವಾಗಿ ತಿಳಿದಿತ್ತು.
54 ಆದರೆ ಯೇಸು ಆಕೆಯ ಕೈಯನ್ನು ಹಿಡಿದು, “ಮಗು, ಎದ್ದೇಳು!” ಎಂದನು.
55 ಆ ಕೂಡಲೇ ಆಕೆಗೆ ಜೀವ ಬಂದಿತು. ಆಕೆ ಎದ್ದುನಿಂತುಕೊಂಡಳು. ಯೇಸು ಅವರಿಗೆ, “ಆಕೆಗೆ ತಿನ್ನಲು ಏನಾದರೂ ಕೊಡಿರಿ” ಎಂದು ಹೇಳಿದನು.
56 ಬಾಲಕಿಯ ತಂದೆತಾಯಿಗಳು ಬೆರಗಾದರು. ಈ ಘಟನೆಯ ಬಗ್ಗೆ ಯಾರಿಗೂ ತಿಳಿಸಬಾರದೆಂದು ಯೇಸು ಅವರಿಗೆ ಆಜ್ಞಾಪಿಸಿದನು.

Luke 8:1 Kannada Language Bible Words basic statistical display

COMING SOON ...

×

Alert

×