ಯೆಹೋಯಾಕೀಮನು ಯೋಷೀಯನ ಮಗ. ಯೆಹೋಯಾಕೀಮನು ಯೆಹೂದದ ರಾಜನಾದ ನಾಲ್ಕನೇ ವರ್ಷದಲ್ಲಿ ಪ್ರವಾದಿಯಾದ ಯೆರೆಮೀಯನು ನೇರೀಯನ ಮಗನಾದ ಬಾರೂಕನಿಗೆ ಹೀಗೆ ಹೇಳಿದನು. ಬಾರೂಕನು ಅದನ್ನು ಒಂದು ಸುರುಳಿಯ ಮೇಲೆ ಬರೆದನು. ಯೆರೆಮೀಯನು ಬಾರೂಕನಿಗೆ ಹೇಳಿದ್ದು ಹೀಗೆ:
“ ‘ಬಾರೂಕನೇ, ನನಗೆ ತುಂಬ ತೊಂದರೆಯಾಗಿದೆ. ನನ್ನ ನೋವಿನೊಂದಿಗೆ ಯೆಹೋವನು ನನಗೆ ದುಃಖವನ್ನು ಕೊಟ್ಟಿದ್ದಾನೆ. ನಾನು ಬಹಳ ದಣಿದಿದ್ದೇನೆ. ನನ್ನ ಸಂಕಟಗಳಿಂದ ಸೊರಗಿ ಹೋಗಿದ್ದೇನೆ. ವಿಶ್ರಾಂತಿಯನ್ನು ಕಾಣಲೂ ನನಗೆ ಸಾಧ್ಯವಿಲ್ಲ” ಎಂದು ಹೇಳಿರುವೆ.
ಯೆರೆಮೀಯನೇ, ‘ಯೆಹೋವನು ಹೀಗೆ ಹೇಳುತ್ತಾನೆಂದು ಬಾರೂಕನಿಗೆ ತಿಳಿಸು. ನಾನು ಕಟ್ಟಿದ್ದನ್ನು ಕೆಡಿಸುತ್ತೇನೆ. ನಾನು ನೆಟ್ಟಿದ್ದನ್ನು ಕಿತ್ತು ಎಸೆಯುತ್ತೇನೆ. ನಾನು ಈ ರೀತಿ ಯೆಹೂದದಲ್ಲಿ ಎಲ್ಲಾ ಕಡೆಗೂ ಮಾಡುತ್ತೇನೆ.
ಬಾರೂಕನೇ, ನೀನು ದೊಡ್ಡ ಪದವಿಯನ್ನು ನಿರೀಕ್ಷಿಸುತ್ತಿರುವೆ. ಆದರೆ ನೀನು ಅದನ್ನು ನಿರೀಕ್ಷಿಸಬೇಡ. ಏಕೆಂದರೆ ನಾನು ಎಲ್ಲರಿಗೆ ಭಯಂಕರವಾದ ಸಂಗತಿಗಳನ್ನು ಬರಮಾಡುವೆನು.’ ಯೆಹೋವನು ಹೀಗೆ ಹೇಳಿದನು, ‘ನೀನು ಅನೇಕ ಸ್ಥಳಗಳಿಗೆ ಹೋಗಬೇಕಾಗಬಹುದು. ಅದರೆ ನೀನು ಎಲ್ಲಿ ಹೋದರೂ ಪ್ರಾಣ ಉಳಿಸಿಕೊಂಡು ಪಾರಾಗುವಂತೆ ನಾನು ಮಾಡುತ್ತೇನೆ.’ ”