ಜೆರುಸಲೇಮನ್ನು ಹೀಗೆ ವಶಪಡಿಸಿಕೊಳ್ಳಲಾಯಿತು: ಚಿದ್ಕೀಯನು ಯೆಹೂದದ ರಾಜನಾಗಿ ಆಳುತ್ತಿದ್ದ ಒಂಭತ್ತನೇ ವರ್ಷದ ಹತ್ತನೆಯ ತಿಂಗಳಿನಲ್ಲಿ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ತನ್ನ ಇಡೀ ಸೈನ್ಯದೊಂದಿಗೆ ಜೆರುಸಲೇಮಿನ ಮೇಲೆ ಧಾಳಿ ಮಾಡಿದನು. ಅದನ್ನು ವಶಪಡಿಸಿಕೊಳ್ಳುವದಕ್ಕಾಗಿ ಅವನು ಆ ನಗರವನ್ನು ಮುತ್ತಿದನು.
ಆಗ ಬಾಬಿಲೋನಿನ ಎಲ್ಲಾ ರಾಜ್ಯಾಧಿಕಾರಿಗಳು ಜೆರುಸಲೇಮ್ ನಗರವನ್ನು ಪ್ರವೇಶಿಸಿದರು. ಅವರು ಒಳಗೆ ಬಂದು ಮಧ್ಯ ದ್ವಾರದಲ್ಲಿ ಕುಳಿತುಕೊಂಡರು. ಅವರು ಯಾರೆಂದರೆ: ಸಮ್ಗರ್ ನೆಬೋದದ ಅಧಿಪತಿಯಾದ ನೇರ್ಗಲ್ ಸರೆಚರ್; ಇನ್ನೊಬ್ಬ ದೊಡ್ಡ ಅಧಿಕಾರಿಯಾದ ಸೆರ್ಸೆಕೀಮ್ ಮತ್ತು ಬೇರೆಬೇರೆ ದೊಡ್ಡ ಅಧಿಕಾರಿಗಳು ಕೂಡ ಅಲ್ಲಿದ್ದರು.
ಯೆಹೂದದ ರಾಜನಾದ ಚಿದ್ಕೀಯನು ಬಾಬಿಲೋನಿನ ಆ ಅಧಿಕಾರಿಗಳನ್ನು ನೋಡಿದನು. ಅವನು ಮತ್ತು ಅವನ ಜೊತೆಗಿದ್ದ ಸೈನಿಕರು ಓಡಿಹೋದರು. ಅವರು ರಾತ್ರಿಯಲ್ಲಿ ಜೆರುಸಲೇಮ್ ನಗರವನ್ನು ಬಿಟ್ಟು ರಾಜನ ಉದ್ಯಾನದ ಮಾರ್ಗವಾಗಿ ಹೊರಗೆ ಹೋದರು. ಅವರು ಎರಡು ಗೋಡೆಗಳ ಮಧ್ಯದಲ್ಲಿದ್ದ ಬಾಗಿಲಿನಿಂದ ಹೊರಗೆ ಬಂದು ಮರುಭೂಮಿಯ ಕಡೆಗೆ ಹೊರಟರು.
ಆದರೆ ಬಾಬಿಲೋನಿನ ಸೈನಿಕರು ಚಿದ್ಕೀಯ ಮತ್ತು ಅವನ ಸೈನಿಕರನ್ನು ಬೆನ್ನಟ್ಟಿದರು. ಕಸ್ದೀಯರ ಸೈನಿಕರು ಜೆರಿಕೊವಿನ ಬಯಲಿನಲ್ಲಿ ಚಿದ್ಕೀಯನನ್ನು ಬಂಧಿಸಿ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಲ್ಲಿಗೆ ತೆಗೆದುಕೊಂಡು ಹೋದರು. ಆಗ ನೆಬೂಕದ್ನೆಚ್ಚರನು ಹಮಾತ್ ಸೀಮೆಯ “ರಿಬ್ಲ”ದಲ್ಲಿದ್ದನು. ಆ ಸ್ಥಳದಲ್ಲಿಯೇ ನೆಬೂಕದ್ನೆಚ್ಚರನು ಚಿದ್ಕೀಯನ ಬಗ್ಗೆ ತನ್ನ ನಿರ್ಣಯವನ್ನು ಪ್ರಕಟಿಸಿದನು.
ರಿಬ್ಲದಲ್ಲಿ ಬಾಬಿಲೋನಿನ ರಾಜನು ಚಿದ್ಕೀಯನ ಕಣ್ಣೆದುರಿನಲ್ಲಿಯೇ ಅವನ ಗಂಡುಮಕ್ಕಳನ್ನು ಕೊಲ್ಲಿಸಿದನು. ಚಿದ್ಕೀಯನು ನೋಡುತ್ತಿದ್ದಂತೆಯೇ ನೆಬೂಕದ್ನೆಚ್ಚರನು ಯೆಹೂದದ ಎಲ್ಲಾ ರಾಜಾಧಿಕಾರಿಗಳನ್ನು ಕೊಲ್ಲಿಸಿದನು.
ಬಾಬಿಲೋನಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನನೆಂಬವನು ಜೆರುಸಲೇಮಿನಲ್ಲಿ ಉಳಿದ ಜನರನ್ನು ಹಿಡಿದು ಬಂಧಿಗಳನ್ನಾಗಿ ಮಾಡಿದ್ದನು. ಅವರನ್ನು ಅವನು ಬಾಬಿಲೋನಿಗೆ ತೆಗೆದುಕೊಂಡು ಹೋದನು. ಈ ಮೊದಲೆ ಅವನಿಗೆ ಶರಣಾಗತರಾದವರನ್ನೂ ಸಹ ನೆಬೂಜರದಾನನು ಬಂಧಿಗಳನ್ನಾಗಿ ಮಾಡಿದನು. ಅವನು ಜೆರುಸಲೇಮಿನ ಉಳಿದವರೆಲ್ಲರನ್ನು ಬಂಧಿಗಳನ್ನಾಗಿ ಮಾಡಿ ಬಾಬಿಲೋನಿಗೆ ತೆಗೆದುಕೊಂಡು ಹೋದನು.
ಆದರೆ ಬಾಬಿಲೋನ್ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನನು ಯೆಹೂದದ ಕೆಲ ಬಡಜನರನ್ನು ಅಲ್ಲಿಯೇ ಬಿಟ್ಟನು. ಆ ಜನಗಳಿಗೆ ಯಾವ ಆಸ್ತಿಪಾಸ್ತಿ ಇದ್ದಿರಲಿಲ್ಲ. ಆದ್ದರಿಂದ ಅಂದು ನೆಬೂಜರದಾನನು ಯೆಹೂದದ ಆ ಬಡಜನರಿಗೆ ದ್ರಾಕ್ಷಿತೋಟಗಳನ್ನು ಮತ್ತು ಹೊಲಗಳನ್ನು ಕೊಟ್ಟನು.
ರಾಜನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನ್, ಬಾಬಿಲೋನಿನ ಸೈನ್ಯದ ಒಬ್ಬ ಮುಖ್ಯ ಅಧಿಕಾರಿಯಾದ ನೆಬೂಷಜ್ಜಾನ್, ದೊಡ್ಡ ಅಧಿಕಾರಿಯಾದ ನೇರ್ಗಲ್ ಸರೆಚರ್ ಮತ್ತು ಬಾಬಿಲೋನಿನ ಇನ್ನುಳಿದ ಸೈನ್ಯಾಧಿಕಾರಿಗಳು ಯೆರೆಮೀಯನನ್ನು ಹುಡುಕಲು ಜನರನ್ನು ಕಳುಹಿಸಿದರು.
ಅವರು ಯೆರೆಮೀಯನನ್ನು ಕಾರಾಗೃಹದ ಅಂಗಳದಿಂದ ಹೊರಗೆ ಕರೆದು ತಂದರು. ಬಾಬಿಲೋನಿನ ಆ ಸೈನ್ಯಾಧಿಕಾರಿಗಳು ಯೆರೆಮೀಯನನ್ನು ಗೆದಲ್ಯನ ವಶಕ್ಕೆ ಕೊಟ್ಟರು. ಗೆದಲ್ಯನು ಅಹೀಕಾಮನ ಮಗ ಮತ್ತು ಅಹೀಕಾಮನು ಶಾಫಾನನ ಮಗನಾಗಿದ್ದನು. ಯೆರೆಮೀಯನನ್ನು ಮನೆಗೆ ಕರೆದುಕೊಂಡು ಹೋಗಬೇಕೆಂದು ಗೆದಲ್ಯನಿಗೆ ಆಜ್ಞಾಪಿಸಲಾಯಿತು. ಅದರಂತೆ ಯೆರೆಮೀಯನನ್ನು ಮನೆಗೆ ಕರೆದುಕೊಂಡು ಹೋಗಲಾಯಿತು; ಅವನು ತನ್ನ ಜನರೊಂದಿಗೆ ವಾಸಿಸತೊಡಗಿದನು.
“ಯೆರೆಮೀಯನೇ, ಹೋಗಿ ಇಥಿಯೋಪಿಯದವನಾದ ಎಬೆದ್ಮೆಲೆಕನಿಗೆ ಈ ಸಂದೇಶವನ್ನು ಕೊಡು: ‘ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನ್ನುತ್ತಾನೆ: ಜೆರುಸಲೇಮ್ ನಗರದ ಬಗ್ಗೆ ನಾನು ಕೊಟ್ಟ ಸಂದೇಶಗಳು ಬೇಗ ಕಾರ್ಯರೂಪಕ್ಕೆ ಬರುತ್ತವೆ. ನನ್ನ ಸಂದೇಶ ಕಾರ್ಯರೂಪಕ್ಕೆ ಬರುವುದು ಕೇಡುಗಳ ಮೂಲಕವೇ ಹೊರತು ಒಳ್ಳೆಯದರ ಮೂಲಕವಲ್ಲ. ಎಲ್ಲವೂ ನನ್ನ ಸಂದೇಶದಂತೆ ನಡೆಯುವುದನ್ನು ನೀನು ಕಣ್ಣಾರೆ ನೋಡುವೆ.
ಎಬೆದ್ಮೆಲೆಕನೇ, ನಾನು ನಿನ್ನನ್ನು ರಕ್ಷಿಸುವೆನು. ನೀನು ಖಡ್ಗಕ್ಕೆ ಆಹುತಿಯಾಗುವದಿಲ್ಲ. ನೀನು ತಪ್ಪಿಸಿಕೊಂಡು ಬಂದುಕುವೆ. ನೀನು ನನ್ನಲ್ಲಿ ನಂಬಿಕೆ ಇಟ್ಟುಕೊಂಡಿದ್ದೇ ಇದಕ್ಕೆ ಕಾರಣ’ ” ಇದು ಯೆಹೋವನ ನುಡಿ.