ಯೆರೆಮೀಯನು ಬಾಬಿಲೋನಿನಲ್ಲಿದ್ದ ಯೆಹೂದ್ಯ ಸೆರೆಯಾಳುಗಳಿಗೆ, ಅಂದರೆ ಹಿರಿಯನಾಯಕರಿಗೆ, ಯಾಜಕರಿಗೆ, ಪ್ರವಾದಿಗಳಿಗೆ ಮತ್ತು ಇನ್ನುಳಿದ ಸಮಸ್ತ ಜನರಿಗೆ ಪತ್ರವನ್ನು ಕಳುಹಿಸಿದನು. ಇವರನ್ನು ನೆಬೂಕದ್ನೆಚ್ಚರನು ಜೆರುಸಲೇಮಿನಿಂದ ಬಾಬಿಲೋನಿಗೆ ಸೆರೆಯಾಳುಗಳಾಗಿ ಕೊಂಡೊಯ್ದನು.
(ರಾಜನಾದ ಯೆಹೋಯಾಕೀನನನ್ನು, ರಾಜಮಾತೆಯನ್ನು, ಯೆಹೂದದ ಮತ್ತು ಜೆರುಸಲೇಮಿನ ಅಧಿಕಾರಿಗಳನ್ನು, ಮುಂದಾಳುಗಳನ್ನು, ಬಡಗಿಗಳನ್ನು ಮತ್ತು ಕಮ್ಮಾರರನ್ನು ಜೆರುಸಲೇಮಿನಿಂದ ತೆಗೆದುಕೊಂಡು ಹೋದ ಮೇಲೆ ಈ ಪತ್ರವನ್ನು ಕಳಿಸಲಾಯಿತು.)
ಮದುವೆ ಮಾಡಿಕೊಳ್ಳಿರಿ; ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆಯಿರಿ. ನಿಮ್ಮ ಗಂಡುಮಕ್ಕಳಿಗೂ ನಿಮ್ಮ ಹೆಣ್ಣುಮಕ್ಕಳಿಗೂ ಮದುವೆ ಮಾಡಿರಿ. ಅವರಿಗೂ ಗಂಡು ಮತ್ತು ಹೆಣ್ಣು ಮಕ್ಕಳಾಗಲಿ. ಅನೇಕ ಮಕ್ಕಳನ್ನು ಹೆತ್ತು ಬಾಬಿಲೋನಿನಲ್ಲಿ ಬಹುಸಂಖ್ಯಾತರಾಗಿ. ಅಲ್ಪಸಂಖ್ಯಾತರಾಗಬೇಡಿ.
ಅಂತೆಯೇ, ನಾನು ನಿಮ್ಮನ್ನು ಕಳುಹಿಸಿದ ನಗರಕ್ಕೆ ಒಳ್ಳೆಯದನ್ನು ಮಾಡಿರಿ. ನೀವು ವಾಸಮಾಡುತ್ತಿರುವ ನಗರಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಏಕೆಂದರೆ ಆ ನಗರದಲ್ಲಿ ನೆಮ್ಮದಿಯಿದ್ದರೆ ನಿಮಗೂ ನೆಮ್ಮದಿ ಸಿಗುವುದು.”
ಇಸ್ರೇಲರ ದೇವರೂ, ಸರ್ವಶಕ್ತನೂ ಆಗಿರುವ ಯೆಹೋವನು, ಹೀಗೆನ್ನುತ್ತಾನೆ: “ನಿಮ್ಮ ಪ್ರವಾದಿಗಳು ಮತ್ತು ಮಾಟಮಂತ್ರಗಾರರು ನಿಮ್ಮನ್ನು ಮರುಳುಗೊಳಿಸದಿರಲಿ. ಅವರು ನೋಡುವ ಕನಸುಗಳಿಗೆ ಕಿವಿಗೊಡಬೇಡಿ.
ಯೆಹೋವನು ಹೀಗೆನ್ನುತ್ತಾನೆ: “ಬಾಬಿಲೋನ್ ಎಪ್ಪತ್ತು ವರ್ಷಗಳವರೆಗೆ ಬಲಿಷ್ಠವಾಗಿರುವುದು. ಅನಂತರ ನಾನು ಬಾಬಿಲೋನಿನಲ್ಲಿ ವಾಸಮಾಡುತ್ತಿರುವ ನಿಮ್ಮ ಬಳಿಗೆ ಬಂದು ನನ್ನ ವಾಗ್ದಾನದಂತೆ ನಿಮ್ಮನ್ನು ಜೆರುಸಲೇಮಿಗೆ ಮತ್ತೆ ಕರೆದುಕೊಂಡು ಬರುವೆನು.
ನಾನು ನಿಮಗಾಗಿ ಹಾಕಿದ ಯೋಜನೆಗಳು ನನಗೆ ಗೊತ್ತಿರುವುದರಿಂದ ನಾನು ಹೀಗೆ ಹೇಳುತ್ತಿದ್ದೇನೆ.” ಇದು ಯೆಹೋವನ ಸಂದೇಶ. “ನಾನು ನಿಮಗಾಗಿ ಒಳ್ಳೆಯ ಯೋಜನೆಗಳನ್ನು ಹಾಕಿದ್ದೇನೆ. ನಿಮಗೆ ಕೆಟ್ಟದ್ದನ್ನು ಮಾಡುವ ವಿಚಾರ ನನಗಿಲ್ಲ. ನಾನು ನಿಮಗಾಗಿ ಆಶಾದಾಯಕವಾದ ಮತ್ತು ಒಳ್ಳೆಯ ಭವಿಷ್ಯದ ವಿಚಾರಗಳನ್ನಿಟ್ಟುಕೊಂಡಿದ್ದೇನೆ.
ನಾನು ನಿಮಗೆ ದೊರೆಯುವೆನು.” ಇದು ಯೆಹೋವನ ನುಡಿ. “ನಾನು ನಿಮ್ಮನ್ನು ನಿಮ್ಮ ಬಂಧನದಿಂದ ಬಿಡಿಸಿ ಕರೆದುತರುವೆನು. ನಾನು ಈ ಸ್ಥಳವನ್ನು ಬಿಡಲು ನಿಮಗೆ ಒತ್ತಾಯಿಸಿದೆ. ಆದರೆ ನಾನು ನಿಮ್ಮನ್ನು ಕಳುಹಿಸಿದ್ದ ಎಲ್ಲಾ ಜನಾಂಗಗಳಿಂದ ಮತ್ತು ಎಲ್ಲಾ ಸ್ಥಳಗಳಿಂದ ನಿಮ್ಮನ್ನು ಒಟ್ಟುಗೂಡಿಸಿ ಈ ಸ್ಥಳಕ್ಕೆ ಕರೆದು ತರುವೆನು.” ಇದು ಯೆಹೋವನ ನುಡಿ.
ಬಾಬಿಲೋನಿಗೆ ತೆಗೆದುಕೊಂಡು ಹೋಗದ ನಿಮ್ಮ ಆಪ್ತರ ಬಗ್ಗೆ ಯೆಹೋವನು ಹೀಗೆನ್ನುತ್ತಾನೆ. ಈಗ ದಾವೀದನ ಸಿಂಹಾಸನಾರೂಢನಾದ ರಾಜನ ವಿಷಯವಾಗಿಯೂ ಇನ್ನೂ ಜೆರುಸಲೇಮ್ ನಗರದಲ್ಲಿಯೇ ಇರುವ ಜನರ ವಿಷಯವಾಗಿಯೂ ಹೇಳುತ್ತಿರುವೆನು.
ಸರ್ವಶಕ್ತನಾದ ಯೆಹೋವನು ಹೇಳಿದನು: “ಇನ್ನೂ ಜೆರುಸಲೇಮಿನಲ್ಲಿಯೇ ಇದ್ದ ಜನರ ವಿರುದ್ಧ ನಾನು ಬೇಗನೆ ಖಡ್ಗವನ್ನು, ಹಸಿವನ್ನು ಮತ್ತು ಭಯಂಕರವಾದ ವ್ಯಾಧಿಯನ್ನು ಕಳುಹಿಸುವೆನು. ನಾನು ಅವರನ್ನು, ಅತೀ ಕೊಳೆತು ತಿನ್ನಲಾಗದ ಅಂಜೂರದ ಹಣ್ಣುಗಳಂತೆ ಮಾಡುವೆನು.
ಇನ್ನೂ ಜೆರುಸಲೇಮಿನಲ್ಲಿರುವ ಜನರಿಗೆ ಖಡ್ಗ, ಹಸಿವು ಮತ್ತು ಭಯಂಕರವಾದ ವ್ಯಾಧಿಗಳಿಂದೊಡಗೂಡಿ ಬೆನ್ನಟ್ಟುವೆನು. ಆ ಜನರ ದುರ್ಗತಿಯನ್ನು ನೋಡಿ ಭೂಲೋಕದ ಸಮಸ್ತ ರಾಜ್ಯಗಳಿಗೆ ಭಯ ಉಂಟಾಗುವಂತೆ ಮಾಡುವೆನು. ಆ ಜನರನ್ನು ನಾಶಮಾಡುವೆನು. ನಡೆದ ವಿಷಯಗಳ ಬಗ್ಗೆ ಕೇಳಿ ಜನರು ಬೆರಗಾಗಿ ಸಿಳ್ಳುಹಾಕುವರು. ಯಾರಿಗಾದರೂ, ಕೇಡಾಗಲಿ ಎಂದು ಹೇಳಬೇಕಾದರೆ ಜನರು ಅವರ ಉದಾಹರಣೆಯನ್ನು ಕೊಡುವರು. ನಾನು ಅವರನ್ನು ಅಟ್ಟಿದ ಎಲ್ಲೆಡೆಯಲ್ಲಿಯೂ ಜನರು ಅವರನ್ನು ಅವಮಾನಗೊಳಿಸುವರು.
ಜೆರುಸಲೇಮಿನವರು ನನ್ನ ಸಂದೇಶಕ್ಕೆ ಕಿವಿಗೊಟ್ಟಿಲ್ಲವಾದ ಕಾರಣ ನಾನು ಹಾಗೆಲ್ಲ ನಡೆಯುವಂತೆ ಮಾಡುವೆನು” ಇದು ಯೆಹೋವನ ನುಡಿ. “ನಾನು ಮತ್ತೆಮತ್ತೆ ನನ್ನ ಸಂದೇಶವನ್ನು ಅವರಿಗೆ ಕೊಟ್ಟೆ. ಆ ಜನರಿಗೆ ಸಂದೇಶಗಳನ್ನು ಕೊಡುವದಕ್ಕಾಗಿ ನನ್ನ ಸೇವಕರಾದ ಪ್ರವಾದಿಗಳನ್ನು ಉಪಯೋಗಿಸಿಕೊಂಡೆ. ಆದರೆ ಆ ಜನರು ಕೇಳಲಿಲ್ಲ.” ಇದು ಯೆಹೋವನ ನುಡಿ.
ಕೊಲಾಯನ ಮಗನಾದ ಅಹಾಬ ಮತ್ತು ಮಾಸೇಯನ ಮಗನಾದ ಚಿದ್ಕೀಯ ಇವರ ವಿಷಯವಾಗಿ ಸರ್ವಶಕ್ತನಾದ ಯೆಹೋವನು ಹೀಗೆಂದನು: “ಇವರಿಬ್ಬರು ನಿಮಗೆ ಸುಳ್ಳುಪ್ರವಾದನೆ ಮಾಡಿದ್ದಾರೆ. ಅವರ ಸಂದೇಶವು ನನ್ನಿಂದ ಬಂದದ್ದು ಎಂದು ಅವರು ಹೇಳಿದ್ದಾರೆ. ಆದರೆ ಅವರು ಹೇಳಿದ್ದು ಸುಳ್ಳು. ನಾನು ಆ ಇಬ್ಬರು ಪ್ರವಾದಿಗಳನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೆ ಒಪ್ಪಿಸುವೆನು. ನೆಬೂಕದ್ನೆಚ್ಚರನು ಬಾಬಿಲೋನಿನಲ್ಲಿ ಬಂಧಿಯಾಗಿರುವ ನಿಮ್ಮೆಲ್ಲರ ಸಮ್ಮುಖದಲ್ಲಿ ಆ ಇಬ್ಬರು ಪ್ರವಾದಿಗಳನ್ನು ಕೊಲ್ಲುವನು.
ಯೆಹೂದದ ಬಂಧಿಗಳೆಲ್ಲಾ ಬೇರೆಯವರಿಗೆ ಕೇಡಾಗಲಿ ಎಂದು ಕೇಳಿಕೊಳ್ಳುವಾಗ ಆ ಜನರ ಉದಾಹರಣೆ ಕೊಡುವರು. ಆ ಬಂಧಿಗಳು ಹೀಗೆನ್ನುವರು: ‘ಬಾಬಿಲೋನಿನ ರಾಜನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಮತ್ತು ಅಹಾಬನ ಗತಿಯನ್ನು ಯೆಹೋವನು ನಿನಗೆ ತರಲಿ.’
ಆ ಪ್ರವಾದಿಗಳಿಬ್ಬರು ಇಸ್ರೇಲಿನಲ್ಲಿ ಹೆಚ್ಚಿನ ದುರಾಚಾರವನ್ನು ನಡೆಸಿದರು. ಅವರು ತಮ್ಮ ನೆರೆಯವರ ಹೆಂಡತಿಯರೊಂದಿಗೆ ವ್ಯಭಿಚಾರ ಮಾಡಿದರು. ಅವರು ಸುಳ್ಳುಗಳನ್ನು ಹೇಳಿದರು. ಆ ಸುಳ್ಳುಗಳನ್ನು ಯೆಹೋವನಾದ ನನ್ನ ಸಂದೇಶವೆಂದು ಹೇಳಿದರು. ಹಾಗೆ ಮಾಡಲು ನಾನು ಅವರಿಗೆ ಹೇಳಿಲ್ಲ, ಅವರು ಏನು ಮಾಡಿದ್ದಾರೆಂಬುದನ್ನು ನಾನು ಬಲ್ಲೆ. ಅದಕ್ಕೆ ನಾನೇ ಸಾಕ್ಷಿ.” ಇದು ಯೆಹೋವನ ಸಂದೇಶ.
ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುವನು: “ಶೆಮಾಯನೇ, ಜೆರುಸಲೇಮಿನಲ್ಲಿರುವ ಎಲ್ಲಾ ಜನರಿಗೆ ನೀನು ಪತ್ರವನ್ನು ಕಳುಹಿಸಿದೆ. ನೀನು ಮಾಸೇಯನ ಮಗನಾಗಿರುವ ಯಾಜಕನಾದ ಚೆಫನ್ಯನಿಗೂ ಮತ್ತು ಎಲ್ಲಾ ಯಾಜಕರಿಗೂ ಪತ್ರಗಳನ್ನು ಕಳುಹಿಸಿದೆ. ಆ ಪತ್ರಗಳನ್ನು ಯೆಹೋವನ ಆದೇಶದ ಪ್ರಕಾರ ಕಳುಹಿಸದೆ, ನಿನ್ನ ಹೆಸರಿನಿಂದ ಕಳುಹಿಸಿದೆ.
ಶೆಮಾಯನೇ, ನೀನು ಚೆಫನ್ಯನಿಗೆ ಬರೆದ ಪತ್ರದಲ್ಲಿ ಹೀಗೆ ಹೇಳಿರುವೆ: ‘ಚೆಫನ್ಯನೇ, ಯೆಹೋವನು ನಿನ್ನನ್ನು ಯೆಹೋಯಾದನ ಸ್ಥಾನದಲ್ಲಿ ಯಾಜಕನನ್ನಾಗಿ ನೇಮಿಸಿದ್ದಾನೆ. ನೀನು ಯೆಹೋವನ ಆಲಯದ ಮೇಲಿಬಚಾರಕನಾಗಿರುವೆ. ಹುಚ್ಚನಂತೆ ವರ್ತಿಸುವ ಮತ್ತು ಪ್ರವಾದಿಯಂತೆ ನಟಿಸುವ ವ್ಯಕ್ತಿಯನ್ನು ನೀನು ಬಂಧಿಸಬೇಕು, ಅವನಿಗೆ ಕೋಳ ಹಾಕಿ ಕೊರಳಿಗೆ ಕಬ್ಬಿಣದ ಕಂಠಪಟ್ಟಿಯನ್ನು ಹಾಕಬೇಕು.
ಯೆರೆಮೀಯನು ಬಾಬಿಲೋನಿನಲ್ಲಿದ್ದ ನಮಗೆ ಈ ಸಂದೇಶವನ್ನು ಕಳುಹಿಸಿದ್ದಾನೆ: ಬಾಬಿಲೋನಿನಲ್ಲಿರುವ ನೀವು ಅಲ್ಲಿ ಬಹಳ ಕಾಲದವರೆಗೆ ಇರುವಿರಿ. ಆದ್ದರಿಂದ ಮನೆಗಳನ್ನು ಕಟ್ಟಿಕೊಂಡು ಅಲ್ಲಿ ನೆಲೆಸಿರಿ; ತೋಟಗಳನ್ನು ಬೆಳೆಸಿರಿ; ಮತ್ತು ನೀವು ಬೆಳೆದದ್ದನ್ನು ಆಹಾರವನ್ನಾಗಿ ಬಳಸಿರಿ.’ ”
“ಯೆರೆಮೀಯನೇ, ಬಾಬಿಲೋನಿನಲ್ಲಿರುವ ಎಲ್ಲಾ ಬಂಧಿಗಳಿಗೆ ಈ ಸಂದೇಶವನ್ನು ಕಳುಹಿಸು, ‘ನೆಹೆಲಾಮ್ಯನಾದ ಶೆಮಾಯನ ವಿಷಯದಲ್ಲಿ ಯೆಹೋವನು ಹೀಗೆನ್ನುವನು: ಶೆಮಾಯನು ನಿಮಗೆ ಪ್ರವಾದನೆ ಮಾಡಿದ್ದಾನೆ. ಆದರೆ ನಾನು ಅವನನ್ನು ಕಳುಹಿಸಲಿಲ್ಲ. ನೀವು ಸುಳ್ಳನ್ನು ನಂಬುವಂತೆ ಅವನು ಮಾಡಿದ್ದಾನೆ.
ಆದ್ದರಿಂದ ಅವನನ್ನು ನಾನು ತಕ್ಷಣ ದಂಡಿಸುತ್ತೇನೆ. ನಾನು ಅವನ ಕುಟುಂಬವನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. ನಾನು ನನ್ನ ಜನರಿಗಾಗಿ ಮಾಡುವ ಒಳ್ಳೆಯವುಗಳಲ್ಲಿ ಅವನು ಪಾಲು ಹೊಂದುವುದಿಲ್ಲ.’ ” ಇದು ಯೆಹೋವನ ನುಡಿ. “ ‘ಶೆಮಾಯನು, ಜನರನ್ನು ಯೆಹೋವನಾದ ನನ್ನ ವಿರುದ್ಧ ತಿರುಗುವಂತೆ ಮಾಡಿದ್ದರಿಂದ ನಾನು ಅವನನ್ನು ದಂಡಿಸುವೆನು.’ ”