1
|
ಯಾಕೋಬನು ಕಾನಾನ್ ದೇಶದಲ್ಲಿ ನೆಲೆಸಿದನು. ಅವನ ತಂದೆ ಆ ದೇಶದಲ್ಲೇ ವಾಸವಾಗಿದ್ದನು. |
2
|
ಯಾಕೋಬನ ಕುಟುಂಬದ ಚರಿತ್ರೆಯಿದು: ಯೋಸೇಫನು ಹದಿನೇಳು ವರ್ಷದ ಯೌವನಸ್ಥನಾಗಿದ್ದನು. ಆಡುಕುರಿಗಳನ್ನು ಸಾಕುವುದು ಅವನ ಕಸುಬಾಗಿತ್ತು. ತನ್ನ ಅಣ್ಣಂದಿರೊಡನೆ ಅಂದರೆ ಬಿಲ್ಹಾ ಮತ್ತು ಜಿಲ್ಪಾ ಎಂಬ ತನ್ನ ಮಲತಾಯಿಗಳ ಮಕ್ಕಳೊಡನೆ ಯೋಸೇಫನು ಆಡುಕುರಿಗಳನ್ನು ಮೇಯಿಸುತ್ತಿದ್ದನು. ಅವರೇನಾದರೂ ಕೆಟ್ಟದ್ದನ್ನು ಮಾಡಿದರೆ ಯೋಸೇಫನು ತಂದೆಗೆ ತಿಳಿಸುತ್ತಿದ್ದನು. |
3
|
ಇಸ್ರೇಲನು ತುಂಬ ಮುಪ್ಪಿನವನಾಗಿದ್ದಾಗ ಯೋಸೇಫನು ಹುಟ್ಟಿದ್ದರಿಂದ ಇಸ್ರೇಲನು ತನ್ನ ಬೇರೆ ಗಂಡುಮಕ್ಕಳಿಗಿಂತಲೂ ಹೆಚ್ಚಾಗಿ ಯೋಸೇಫನನ್ನು ಪ್ರೀತಿಸಿದನು. ಯಾಕೋಬನು ತನ್ನ ಮಗನಿಗೆ ಸುಂದರವಾದ ನಿಲುವಂಗಿಯನ್ನು ಮಾಡಿಸಿ ಕೊಟ್ಟಿದ್ದನು. |
4
|
ತಮ್ಮ ತಂದೆಗೆ ಯೋಸೇಫನ ಮೇಲೆ ಹೆಚ್ಚು ಪ್ರೀತಿಯಿರುವುದನ್ನು ಗಮನಿಸಿದ ಯೋಸೇಫನ ಅಣ್ಣಂದಿರು ಯೋಸೇಫನನ್ನು ದ್ವೇಷಿಸತೊಡಗಿ ಅವನೊಡನೆ ಸ್ನೇಹಭಾವದಿಂದ ಮಾತಾಡುತ್ತಿರಲಿಲ್ಲ. |
5
|
ಒಂದು ದಿನ ಯೋಸೇಫನು ವಿಶೇಷವಾದ ಕನಸನ್ನು ಕಂಡನು. ಯೋಸೇಫನು ಈ ಕನಸನ್ನು ತನ್ನ ಅಣ್ಣಂದಿರಿಗೆ ತಿಳಿಸಿದಾಗ ಅವರು ಅವನನ್ನು ಮತ್ತಷ್ಟು ದ್ವೇಷಿಸತೊಡಗಿದರು. |
6
|
ಯೋಸೇಫನು ಅವರಿಗೆ, “ನನಗೆ ಒಂದು ಕನಸಾಯಿತು. |
7
|
ನಾವೆಲ್ಲರು ಹೊಲದಲ್ಲಿ ಗೋಧಿಯ ಸಿವುಡುಗಳನ್ನು ಕಟ್ಟುತ್ತಿದ್ದೆವು. ಆಗ ನನ್ನ ಸಿವುಡು ಎದ್ದುನಿಂತಿತು; ನನ್ನ ಸಿವುಡಿನ ಸುತ್ತಲೂ ನಿಮ್ಮ ಸಿವುಡುಗಳೆಲ್ಲಾ ಎದ್ದುನಿಂತುಕೊಂಡು ನನ್ನ ಸಿವುಡಿಗೆ ಅಡ್ಡಬಿದ್ದವು” ಎಂದು ಹೇಳಿದನು. |
8
|
ಅವನ ಅಣ್ಣಂದಿರು, “ನೀನು ರಾಜನಾಗಿ ನಮ್ಮನ್ನು ಆಳುವೆ ಎಂಬುದು ಇದರ ಅರ್ಥವೆಂದು ನಿನ್ನ ಆಲೋಚನೆಯೋ?” ಎಂದು ಪ್ರಶ್ನಿಸಿ ಆ ಕನಸಿನ ನಿಮಿತ್ತ ಅವನನ್ನು ಮತ್ತಷ್ಟು ದ್ವೇಷಿಸತೊಡಗಿದರು. |
9
|
ಆಮೇಲೆ ಯೋಸೇಫನಿಗೆ ಮತ್ತೊಂದು ಕನಸಾಯಿತು. ಯೋಸೇಫನು ಈ ಕನಸಿನ ಬಗ್ಗೆಯೂ ತನ್ನ ಅಣ್ಣಂದಿರಿಗೆ ತಿಳಿಸಿದನು. ಯೋಸೇಫನು ಅವರಿಗೆ, “ನನಗೆ ಮತ್ತೊಂದು ಕನಸಾಯಿತು. ಸೂರ್ಯ, ಚಂದ್ರ ಮತ್ತು ಹನ್ನೊಂದು ನಕ್ಷತ್ರಗಳು ನನಗೆ ಅಡ್ಡಬೀಳುವುದನ್ನು ಕಂಡೆನು” ಎಂದು ಹೇಳಿದನು. |
10
|
ಯೋಸೇಫನು ತನ್ನ ತಂದೆಗೂ ಸಹ ಈ ಕನಸಿನ ಬಗ್ಗೆ ತಿಳಿಸಿದನು. ಆದರೆ ಅವನ ತಂದೆ ಅವನನ್ನು ಗದರಿಸಿ, “ಇದೆಂಥಾ ಕನಸು? ನಾನೂ ನಿನ್ನ ತಾಯಿಯೂ ಮತ್ತು ನಿನ್ನ ಸಹೋದರರೂ ನಿನಗೆ ಅಡ್ಡಬೀಳುತ್ತೇವೆಂದು ನಂಬುತ್ತೀಯೋ?” ಎಂದು ಕೇಳಿದನು. |
11
|
ಯೋಸೇಫನ ಅಣ್ಣಂದಿರಿಗೆ ಅವನ ಮೇಲೆ ಹೊಟ್ಟೆಕಿಚ್ಚು ಹೆಚ್ಚಾಯಿತು. ಆದರೆ ಯೋಸೇಫನ ತಂದೆಯು ಆ ಕನಸುಗಳ ಬಗ್ಗೆ ಆಶ್ಚರ್ಯಚಕಿತನಾಗಿ ಆಲೋಚಿಸತೊಡಗಿದನು. |
12
|
ಒಂದು ದಿನ ಯೋಸೇಫನ ಅಣ್ಣಂದಿರು ತಮ್ಮ ತಂದೆಯ ಆಡುಕುರಿಗಳನ್ನು ಕಾಯಲು ಶೆಕೆಮಿಗೆ ಹೋದರು. |
13
|
ಇಸ್ರೇಲನು ಯೋಸೇಫನಿಗೆ, “ಶೆಕೆಮಿಗೆ ಹೋಗು. ನಿನ್ನ ಅಣ್ಣಂದಿರು ಅಲ್ಲಿ ನನ್ನ ಆಡುಕುರಿಗಳನ್ನು ಮೇಯಿಸುತ್ತಿದ್ದಾರೆ” ಎಂದು ಹೇಳಿದನು. ಯೋಸೇಫನು, “ಸರಿ ಹೋಗುವೆನು” ಎಂದು ಉತ್ತರಿಸಿದನು. |
14
|
ಇಸ್ರೇಲನು, “ನಿನ್ನ ಅಣ್ಣಂದಿರ ಮತ್ತು ಆಡುಕುರಿಗಳ ಕ್ಷೇಮವನ್ನು ವಿಚಾರಿಸಿಕೊಂಡು ಬಂದು ನನಗೆ ತಿಳಿಸು” ಎಂದು ಹೇಳಿ ಅವನನ್ನು ಹೆಬ್ರೋನಿನ ಕಣಿವೆಯಿಂದ ಶೆಕೆಮಿಗೆ ಕಳುಹಿಸಿಕೊಟ್ಟನು. |
15
|
ಶೆಕೆಮಿನಲ್ಲಿ ದಾರಿತಪ್ಪಿ ಯೋಸೇಫನು ಹೊಲಗಳಲ್ಲಿ ಅಲೆದಾಡುತ್ತಿರಲು ಅವನನ್ನು ಕಂಡ ಒಬ್ಬನು, “ಏನು ಹುಡುಕುತ್ತಿರುವೆ?” ಎಂದು ಕೇಳಿದನು. |
16
|
ಯೋಸೇಫನು, “ನನ್ನ ಅಣ್ಣಂದಿರನ್ನು ಹುಡುಕುತ್ತಿದ್ದೇನೆ. ಅವರು ತಮ್ಮ ಆಡುಕುರಿಗಳನ್ನು ಎಲ್ಲಿ ಮೇಯಿಸುತ್ತಿದ್ದಾರೆ?” ಎಂದು ಕೇಳಿದನು. |
17
|
ಅದಕ್ಕೆ ಅವನು, “ಅವರು ಇಲ್ಲಿಂದ ಹೊರಟುಹೋದರು. ದೋತಾನಿಗೆ ಹೋಗೋಣ ಎಂದು ಅವರು ಮಾತಾಡಿಕೊಳ್ಳುವುದನ್ನು ನಾನು ಕೇಳಿದೆ” ಎಂದು ಹೇಳಿದನು. ಆದುದರಿಂದ ಯೋಸೇಫನು ಅವರನ್ನು ಹುಡುಕುತ್ತಾ ಹೋಗಿ ದೋತಾನಿನಲ್ಲಿ ಅವರನ್ನು ಕಂಡನು. |
18
|
ಯೋಸೇಫನನ್ನು ಬಹುದೂರದಿಂದಲೇ ಕಂಡ ಅವನ ಅಣ್ಣಂದಿರು ಅವನನ್ನು ಕೊಲ್ಲಲು ಒಂದು ಉಪಾಯ ಮಾಡಿದರು. |
19
|
ಅವರು ಒಬ್ಬರಿಗೊಬ್ಬರು, “ಅಗೋ, ಅಲ್ಲಿ ಬರುತ್ತಿದ್ದಾನೆ ಕನಸುಗಾರನಾದ ಯೋಸೇಫ. |
20
|
ಅವನನ್ನು ಕೊಲ್ಲಲು ಇದೇ ತಕ್ಕ ಸಮಯ. ಅವನನ್ನು ಕೊಂದು ನೀರಿಲ್ಲದ ಬಾವಿಯೊಳಗೆ ದಬ್ಬಿ, ಕ್ರೂರ ಪ್ರಾಣಿಯೊಂದು ಅವನನ್ನು ತಿಂದುಬಿಟ್ಟಿತೆಂದು ನಮ್ಮ ತಂದೆಗೆ ಹೇಳೋಣ. ಆಗ ಅವನ ಕನಸುಗಳೆಲ್ಲ ಹೇಗೆ ನಿಜವಾಗುತ್ತವೊ ನೋಡೋಣ” ಎಂದು ಮಾತಾಡಿಕೊಂಡರು. |
21
|
ಆದರೆ ರೂಬೇನನು ಅವರಿಗೆ, “ಅವನನ್ನು ಕೊಲ್ಲಬೇಡಿ; |
22
|
ಅರಣ್ಯದಲ್ಲಿರುವ ಬರಿದಾದ ಬಾವಿಗೆ ಅವನನ್ನು ನೂಕಿಬಿಡಿ; ಆದರೆ ಅವನಿಗೆ ನೋವು ಮಾಡಬೇಡಿ” ಎಂದು ಹೇಳಿದನು. ತರುವಾಯ ಯೋಸೇಫನನ್ನು ಬಾವಿಯಿಂದ ಮೇಲೆತ್ತಿ ತಂದೆಗೆ ಅವನನ್ನು ಒಪ್ಪಿಸಬೇಕೆಂಬುದೇ ರೂಬೇನನ ಅಪೇಕ್ಷೆಯಾಗಿತ್ತು. |
23
|
ಯೋಸೇಫನು ಬಂದಾಗ ಅವನ ಅಣ್ಣಂದಿರು ಅವನನ್ನು ಹಿಡಿದು ಅವನ ನಿಲುವಂಗಿಯನ್ನು ಹರಿದುಹಾಕಿ |
24
|
ನೀರಿಲ್ಲದ ಒಂದು ಬಾವಿಯೊಳಗೆ ತಳ್ಳಿದರು. |
25
|
ಯೋಸೇಫನು ಬಾವಿಯೊಳಗಿದ್ದಾಗ, ಅವನ ಅಣ್ಣಂದಿರು ಊಟಕ್ಕೆ ಕುಳಿತುಕೊಂಡರು. ಅವರು ಕಣ್ಣೆತ್ತಿ ನೋಡಿದಾಗ ಗಿಲ್ಯಾದಿನಿಂದ ಈಜಿಪ್ಟಿಗೆ ಹೋಗುತ್ತಿದ್ದ ವ್ಯಾಪಾರಿಗಳನ್ನು ಕಂಡರು. ಅವರ ಒಂಟೆಗಳು ಅನೇಕ ಬಗೆಯ ಸಾಂಬಾರ ಪದಾರ್ಥಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ಹೊತ್ತುಕೊಂಡು ಹೋಗುತ್ತಿದ್ದವು. |
26
|
ಆದ್ದರಿಂದ ಯೆಹೂದನು ತನ್ನ ಸಹೋದರರಿಗೆ, “ನಾವು ನಮ್ಮ ತಮ್ಮನನ್ನು ಕೊಂದು ಅವನ ಮರಣವನ್ನು ಮರೆಮಾಡಿದರೆ ನಮಗಾಗುವ ಲಾಭವೇನು? |
27
|
ಈ ವ್ಯಾಪಾರಿಗಳಿಗೆ ನಾವು ಅವನನ್ನು ಮಾರಿದರೆ ನಮಗೆ ಹೆಚ್ಚು ಲಾಭವಾಗುವುದು; ಆಮೇಲೆ ನಮ್ಮ ತಮ್ಮನನ್ನು ಕೊಂದ ಅಪರಾಧವೂ ನಮ್ಮ ಮೇಲಿರುವುದಿಲ್ಲ” ಎಂದು ಹೇಳಿದನು. ಅದಕ್ಕೆ ಉಳಿದ ಸಹೋದರರೆಲ್ಲ ಒಪ್ಪಿಕೊಂಡರು. |
28
|
ಮಿದ್ಯಾನಿನ ವ್ಯಾಪಾರಿಗಳು ಸಮೀಪಿಸಿದಾಗ, ಅಣ್ಣಂದಿರು ಯೋಸೇಫನನ್ನು ಬಾವಿಯೊಳಗಿಂದ ಹೊರತೆಗೆದು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು. ವ್ಯಾಪಾರಿಗಳು ಯೋಸೇಫನನ್ನು ಈಜಿಪ್ಟಿಗೆ ಕೊಂಡೊಯ್ದರು. |
29
|
ಆ ಸಮಯದಲ್ಲಿ ರೂಬೇನನು ತನ್ನ ಸಹೋದರರೊಡನೆ ಇರಲಿಲ್ಲ. ಅವರು ಯೋಸೇಫನನ್ನು ಮಾರಿದ್ದು ಅವನಿಗೆ ಗೊತ್ತಿರಲಿಲ್ಲ. ರೂಬೇನನು ಬಾವಿಗೆ ಹಿಂತಿರುಗಿ ಬಂದಾಗ, ಯೋಸೇಫನನ್ನು ಅಲ್ಲಿ ಕಾಣದೆ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನು. |
30
|
ರೂಬೇನನು ತನ್ನ ಸಹೋದರರ ಬಳಿಗೆ ಹೋಗಿ, “ಹುಡುಗನು ಬಾವಿಯೊಳಗೆ ಇಲ್ಲ. ಈಗ ನಾನೇನು ಮಾಡಲಿ?” ಎಂದು ಕೇಳಿದನು. |
31
|
ಬಳಿಕ ಅವರು ಒಂದು ಆಡನ್ನು ಕತ್ತರಿಸಿ ಆಡಿನ ರಕ್ತವನ್ನು ಯೋಸೇಫನ ಸುಂದರವಾದ ನಿಲುವಂಗಿಯ ಮೇಲೆ ಹಾಕಿದರು. |
32
|
ಬಳಿಕ ಆ ನಿಲುವಂಗಿಯನ್ನು ತಮ್ಮ ತಂದೆಯ ಬಳಿಗೆ ತೆಗೆದುಕೊಂಡು ಹೋಗಿ, “ನಾವು ಈ ನಿಲುವಂಗಿಯನ್ನು ಕಂಡೆವು. ಇದು ಯೋಸೇಫನ ನಿಲುವಂಗಿಯೋ?” ಎಂದು ಕೇಳಿದರು. |
33
|
ತಂದೆಯು ಆ ನಿಲುವಂಗಿಯನ್ನು ನೋಡಿ ಅದನ್ನು ಗುರುತಿಸಿ, “ಹೌದು, ಇದು ಯೋಸೇಫನದೇ. ಯಾವುದೊ ಕ್ರೂರ ಪ್ರಾಣಿಯ ಬಾಯಿಗೆ ತುತ್ತಾದನು” ಎಂದು ಹೇಳಿ |
34
|
ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಸುತ್ತಿಕೊಂಡು ಬಹುದಿನಗಳವರೆಗೆ ದುಃಖಪಟ್ಟನು. |
35
|
ಯಾಕೋಬನ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಎಷ್ಟೇ ಸಂತೈಸಿದರೂ ಯಾಕೋಬನಿಗೆ ಆದರಣೆಯಾಗಲಿಲ್ಲ. ಯಾಕೋಬನು ಅವರಿಗೆ, “ನಾನು ಸಾಯುವ ತನಕ ನನ್ನ ಮಗನಿಗಾಗಿ ದುಃಖಪಡುವೆ” ಎಂದು ಹೇಳಿ ದುಃಖಿಸುತ್ತಲೇ ಇದ್ದನು. |
36
|
ಮಿದ್ಯಾನಿನ ವ್ಯಾಪಾರಿಗಳು ಯೋಸೇಫನನ್ನು ಈಜಿಷ್ಟಿನಲ್ಲಿ ಮಾರಿದರು. ಅವರು ಅವನನ್ನು ಫರೋಹನ ಕಾವಲುಗಾರರಿಗೆ ನಾಯಕನಾಗಿದ್ದ ಪೋಟೀಫರನಿಗೆ ಮಾರಿದರು. |
Genesis 37:35 Kannada Language Bible Words basic statistical display
COMING SOON ...