(ಮತ್ತಾಯ 24:1-44; ಲೂಕ 21:5-33) ಯೇಸು ದೇವಾಲಯದಿಂದ ಹೊರಡುತ್ತಿರಲು ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ, “ಗುರುವೇ, ನೋಡು! ಈ ದೇವಾಲಯ ಎಂಥಾ ದೊಡ್ಡ ಕಲ್ಲುಗಳಿಂದ ಮಾಡಿದ ಎಂಥಾ ಸುಂದರ ಕಟ್ಟಡಗಳನ್ನು ಹೊಂದಿದೆ” ಎಂದನು.
ಯೇಸು, “ನೀವು ಈ ದೊಡ್ಡ ಕಟ್ಟಡಗಳನ್ನು ನೋಡುತ್ತಿರುವಿರಾ? ಇವುಗಳನ್ನೆಲ್ಲ ನಾಶಪಡಿಸಲಾಗುವುದು. ಪ್ರತಿಯೊಂದು ಕಲ್ಲನ್ನೂ ನೆಲಕ್ಕೆ ಕೆಡವಲಾಗುವುದು. ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಉಳಿಯುವುದಿಲ್ಲ” ಎಂದನು.
ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ಧವನ್ನೂ ಬಹುದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಬಗ್ಗೆ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಭಯಪಡಬೇಡಿ. ಅಂತ್ಯಕಾಲ ಬರುವುದಕ್ಕಿಂತ ಮುಂಚೆ ಈ ಸಂಗತಿಗಳು ನಡೆಯಲೇಬೇಕು.
ಜನಾಂಗಗಳು ಇತರ ಜನಾಂಗಗಳ ವಿರುದ್ಧ ಹೋರಾಡುತ್ತವೆ. ರಾಜ್ಯಗಳು ಇತರ ರಾಜ್ಯಗಳ ವಿರುದ್ಧ ಹೋರಾಡುತ್ತವೆ. ಜನರಿಗೆ ತಿನ್ನಲು ಏನೂ ಆಹಾರವಿಲ್ಲದಂಥ ಕಾಲ ಬರುತ್ತದೆ. ಅನೇಕ ಸ್ಥಳಗಳಲ್ಲಿ ಭೂಕಂಪಗಳಾಗುತ್ತವೆ. ಈ ಸಂಗತಿಗಳು ಪ್ರಸವವೇದನೆಯಂತಿರುತ್ತವೆ.
“ಎಚ್ಚರಿಕೆಯಿಂದಿರಿ! ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮ್ಮನ್ನು ಬಂಧಿಸಿ, ನ್ಯಾಯವಿಚಾರಣೆಗೆ ಕೊಂಡೊಯ್ಯುವರು. ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು. ರಾಜರ ಮತ್ತು ಅಧಿಪತಿಗಳ ಮುಂದೆ ನಿಮ್ಮನ್ನು ನಿಲ್ಲಿಸಿ ನನ್ನ ವಿಷಯದಲ್ಲಿ ಸಾಕ್ಷಿಕೊಡಲು ನಿಮ್ಮನ್ನು ಬಲವಂತಪಡಿಸುವರು.
ನೀವು ಬಂಧಿಸಲ್ಪಟ್ಟು ನ್ಯಾಯವಿಚಾರಣೆಗೆ ಒಳಗಾಗುವಿರಿ. ಆದರೆ ನೀವು ಏನು ಹೇಳಬೇಕೆಂಬುದರ ಬಗ್ಗೆ ಯೋಚಿಸಬೇಡಿ, ಆ ಸಮಯದಲ್ಲಿ ದೇವರು ನಿಮಗೆ ತಿಳಿಸಿಕೊಡುವುದನ್ನೇ ಹೇಳಿರಿ. ಆಗ ಮಾತಾಡುವವರು ನೀವಲ್ಲ, ಪವಿತ್ರಾತ್ಮನೇ.
“ವಿನಾಶವನ್ನು ಉಂಟುಮಾಡುವ ಭಯಂಕರ ವಸ್ತುವನ್ನು ನೀವು ನೋಡುತ್ತೀರಿ. ಇದು ನಿಂತುಕೊಳ್ಳಬಾರದಂಥ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಿರಿ. (ಇದನ್ನು ಓದುವವನು ಇದರ ಅರ್ಥವನ್ನು ತಿಳಿದುಕೊಳ್ಳಬೇಕು) ಆ ಸಮಯದಲ್ಲಿ ಜುದೇಯದಲ್ಲಿರುವ ಜನರು ಬೆಟ್ಟಗಳಿಗೆ ಓಡಿಹೋಗಬೇಕು.
ದೇವರು ಆ ಭಯಂಕರ ಕಾಲವನ್ನು ಕಡಿಮೆಗೊಳಿಸಲು ನಿರ್ಧರಿಸಿದ್ದಾನೆ. ಇಲ್ಲವಾಗಿದ್ದರೆ, ಯಾವ ಮನುಷ್ಯನೂ ಬದುಕಿ ಉಳಿಯಲು ಸಾಧ್ಯವಿಲ್ಲ. ಆದರೆ ದೇವರು ತಾನು ಆರಿಸಿಕೊಂಡ ವಿಶೇಷ ಜನರಿಗೆ ಸಹಾಯ ಮಾಡಲು ಆ ಸಮಯವನ್ನು ಕಡಿಮೆ ಮಾಡುವನು.
“ಅಂಜೂರದ ಮರವು ನಮಗೆ ಒಂದು ಪಾಠವನ್ನು ಕಲಿಸುತ್ತದೆ. ಅಂಜೂರದ ಮರದ ಕೊಂಬೆಗಳು ಹಸಿರಾಗಿ ಮೃದುವಾದಾಗ ಮತ್ತು ಹೊಸ ಎಲೆಗಳು ಬೆಳೆಯಲು ಪ್ರಾರಂಭಿಸಿದಾಗ, ಬೇಸಿಗೆಕಾಲ ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ.
“ತನ್ನ ಮನೆಯನ್ನು ಬಿಟ್ಟು ಪ್ರವಾಸಕ್ಕಾಗಿ ಹೋದ ಮನುಷ್ಯನಿಗೆ ಇದು ಹೋಲಿಕೆಯಾಗಿದೆ. ಅವನು ತನ್ನ ಮನೆಯನ್ನು ನೋಡಿಕೊಳ್ಳುವುದಕ್ಕಾಗಿ ಸೇವಕರಿಗೆ ಒಪ್ಪಿಸಿಕೊಟ್ಟನು. ಅವನು ಪ್ರತಿಯೊಬ್ಬ ಸೇವಕನಿಗೂ ಒಂದೊಂದು ವಿಶೇಷ ಕೆಲಸವನ್ನು ಕೊಟ್ಟು ದ್ವಾರಪಾಲಕನಿಗೆ, ‘ನೀನು ಯಾವಾಗಲೂ ಸಿದ್ಧವಾಗಿರು’ ಎಂದು ಹೇಳಿದನು. ಅಂತೆಯೇ ನಾನೂ ನಿಮಗೆ ಹೇಳುವುದೇನೆಂದರೆ,
ಯಾವಾಗಲೂ ಸಿದ್ಧವಾಗಿರಿ. ಮನೆಯ ಯಜಮಾನನು ಯಾವಾಗ ಹಿಂತಿರುಗಿ ಬರುವನೋ ನಿಮಗೆ ತಿಳಿದಿಲ್ಲ. ಅವನು ಮಧ್ಯಾಹ್ನದಲ್ಲಾಗಲಿ ಮಧ್ಯರಾತ್ರಿಯಲ್ಲಾಗಲಿ ಮುಂಜಾನೆಯಲ್ಲಾಗಲಿ ಸೂರ್ಯೋದಯದಲ್ಲಾಗಲಿ ಬರಬಹುದು.