1
|
ಬಿಳಾಮನು ಬಾಲಾಕನಿಗೆ, “ಇಲ್ಲಿ ನೀನು ಏಳು ಯಜ್ಞವೇದಿಕೆಗಳನ್ನು ನನಗೆ ಕಟ್ಟಿಸಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ನನಗೆ ಸಿದ್ಧಪಡಿಸು” ಅಂದನು. |
2
|
ಬಾಲಾಕನು ಹಾಗೆಯೇ ಮಾಡಿದನು. ಬಾಲಾಕನೂ ಬಿಳಾಮನೂ ಪ್ರತಿಯೊಂದು ಯಜ್ಞವೇದಿಕೆಯ ಮೇಲೆ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದಾಗ, |
3
|
ಬಿಳಾಮನು ಬಾಲಾಕನಿಗೆ, “ನೀನು ಸರ್ವಾಂಗಹೋಮ ಮಾಡಿದ ಸ್ಥಳದಲ್ಲೇ ಇರು. ನಾನು ಸ್ವಲ್ಪದೂರ ಹೋಗಿ ಬರುತ್ತೇನೆ. ಒಂದು ವೇಳೆ ಯೆಹೋವನು ನನ್ನನ್ನು ಸಂಧಿಸಲು ಬರಬಹುದು. ಆತನು ನನಗೆ ಪ್ರಕಟಿಸುವುದನ್ನು ನಿನಗೆ ತಿಳಿಸುವೆನು” ಎಂದು ಹೇಳಿ ಮರವಿಲ್ಲದ ಒಂದು ದಿಣ್ಣೆಗೆ ಹೋದನು. |
4
|
ದೇವರು ಬಿಳಾಮನಿಗೆ ಎದುರಾಗಿ ಬಂದಾಗ ಬಿಳಾಮನು ಆತನಿಗೆ, “ನಾನು ಏಳು ಯಜ್ಞವೇದಿಕೆಗಳನ್ನು ಕಟ್ಟಿಸಿ ಒಂದೊಂದು ಪೀಠದಲ್ಲಿ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದ್ದೇನೆ” ಎಂದು ಹೇಳಿದನು. |
5
|
ಆಗ ಯೆಹೋವನು ಬಿಳಾಮನಿಗೆ ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ತಿರುಗಿಹೋಗಿ ಹೀಗೆ ಹೇಳಬೇಕು” ಎಂದು ಆಜ್ಞಾಪಿಸಿದನು. |
6
|
ಬಿಳಾಮನು ಬಾಲಾಕನ ಬಳಿಗೆ ತಿರುಗಿಬಂದಾಗ ಬಾಲಾಕನು ಯಜ್ಞವೇದಿಕೆಯ ಬಳಿಯಲ್ಲಿ ನಿಂತಿದ್ದನು. ಮೋವಾಬ್ಯರ ಪ್ರಧಾನರೆಲ್ಲರೂ ಅವನೊಡನೆ ನಿಂತಿದ್ದರು. |
7
|
ಆಗ ಬಿಳಾಮನು ಹೀಗೆ ಹೇಳಿದನು: “ಮೋವಾಬ್ಯರ ಅರಸನಾದ ಬಾಲಾಕನು ನನ್ನನ್ನು ಅರಾಮಿನ ಪೂರ್ವ ದಿಕ್ಕಿನ ಬೆಟ್ಟಗಳಿಂದ ನನ್ನನ್ನು ಕರೆಸಿದನು. “ನೀನು ಬಂದು ನನಗೋಸ್ಕರ ಯಾಕೋಬ್ಯರನ್ನು ಶಪಿಸು; ಇಸ್ರೇಲರ ವಿರುದ್ಧ ಮಾತನಾಡು” ಎಂದು ಬಾಲಾಕನು ಹೇಳಿದನು. |
8
|
ಆದರೆ ದೇವರು ಅವರನ್ನು ಆಶೀರ್ವದಿಸಿರುವಾಗ ನಾನು ಅವರನ್ನು ಶಪಿಸಲು ಆಗುವುದಿಲ್ಲ. ಯೆಹೋವನು ಅವರ ಮೇಲೆ ನಾಶನವನ್ನು ಬರಮಾಡಲಿಲ್ಲ. ಆದ್ದರಿಂದ ನಾಶನವು ಅವರ ಮೇಲೆ ಇಳಿದುಬರುವಂತೆ ಮಾಡಲು ನನಗೆ ಸಾಧ್ಯವಿಲ್ಲ. |
9
|
ಬೆಟ್ಟದ ಶಿಖರದಿಂದ ಅವರನ್ನು ನಾನು ನೋಡಿದೆನು; ಗುಡ್ಡದಿಂದ ಅವರನ್ನು ಕಂಡೆನು. ಅವರು ತಮ್ಮನ್ನು ಇತರ ಜನಾಂಗಗಳಿಗಿಂತ ಬೇರೆಯಾದವರು ಎಂದು ಪರಿಗಣಿಸಿಕೊಂಡಿದ್ದಾರೆ. |
10
|
ಧೂಳಿನಷ್ಟು ಅಸಂಖ್ಯವಾದ ಯಾಕೋಬ್ಯರನ್ನು ಲೆಕ್ಕಿಸುವುದಕ್ಕೆ ಯಾರಿಂದಾದೀತು; ಇಸ್ರೇಲರ ಕಾಲು ಭಾಗವನ್ನಾದರೂ ಯಾರೂ ಲೆಕ್ಕಿಸಲಾರರು. ಸಜ್ಜನರಾದ ಅವರು ಸಾಯುವ ರೀತಿಯಲ್ಲೇ ನಾನೂ ಸಾಯಲು ಬಯಸುವೆ. ಅವರಿಗುಂಟಾಗುವ ಅಂತ್ಯ ನನಗೂ ಉಂಟಾಗಲಿ.” |
11
|
ಬಾಲಾಕನು ಬಿಳಾಮನಿಗೆ, “ಇದೇನು ನೀನು ನನಗೆ ಮಾಡಿದ್ದು! ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಸಿದೆನು. ನೀನು ಅವರನ್ನು ಶಪಿಸದೆ ಆಶೀರ್ವಾದವನ್ನೇ ಮಾಡಿಬಿಟ್ಟೆ” ಎಂದು ಹೇಳಿದನು. |
12
|
ಅದಕ್ಕೆ ಬಿಳಾಮನು, “ಯೆಹೋವನು ನನಗೆ ತಿಳಿಸುವುದನ್ನು ನಾನು ಹೇಳಬಾರದೇ?” ಎಂದು ಕೇಳಿದನು. |
13
|
ಆಗ ಬಾಲಾಕನು, “ದಯಮಾಡಿ ನನ್ನೊಂದಿಗೆ ಇನ್ನೊಂದು ಸ್ಥಳಕ್ಕೆ ಬಾ; ಅಲ್ಲಿಂದ ಅವರನ್ನು ನೋಡಬಹುದು. ಆದರೆ ಅವರೆಲ್ಲರೂ ಕಾಣಿಸದೆ ಕಡೇ ಭಾಗವು ಮಾತ್ರ ಕಾಣಿಸುವುದು. ಅಲ್ಲಿಂದ ನನಗೋಸ್ಕರ ಅವರನ್ನೇ ಶಪಿಸಬೇಕು” ಎಂದು ಹೇಳಿದನು. |
14
|
ಹೀಗೆ ಬಾಲಾಕನು ಬಿಳಾಮನನ್ನು “ಕಾವಲುಗಾರರ ಬೆಟ್ಟಗಳು” ಎಂಬ ಸ್ಥಳಕ್ಕೆ ಕರೆದುಕೊಂಡು ಹೋದನು. ಇದು ಪಿಸ್ಗಾ ಪರ್ವತಶ್ರೇಣಿಯ ತುದಿಯಲ್ಲಿತ್ತು. ಅಲ್ಲಿಯೂ ಏಳು ಯಜ್ಞವೇದಿಕೆಗಳನ್ನು ಕಟ್ಟಿಸಿ ಪ್ರತಿಯೊಂದು ವೇದಿಕೆಯಲ್ಲಿ ಒಂದು ಹೋರಿಯನ್ನು ಮತ್ತು ಒಂದು ಟಗರನ್ನು ಸರ್ವಾಂಗಹೋಮವಾಗಿ ಸಮರ್ಪಿಸಿದನು. |
15
|
ಬಿಳಾಮನು ಬಾಲಾಕನಿಗೆ, “ನೀನು ನಿನ್ನ ಯಜ್ಞವೇದಿಕೆಯ ಬಳಿಯಲ್ಲಿರು. ನಾನು ಆ ಕಡೆ ಹೋಗಿ ಯೆಹೋವನನ್ನು ಸಂಧಿಸುವೆನು” ಎಂದು ಹೇಳಿದನು. |
16
|
ಯೆಹೋವನು ಬಿಳಾಮನಿಗೆ ಎದುರಾಗಿ ಬಂದು ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ಹೋಗಿ ಹೀಗೆ ಹೇಳಬೇಕು” ಅಂದನು. |
17
|
ಬಿಳಾಮನು ಬಾಲಾಕನ ಬಳಿಗೆ ಬಂದಾಗ ಅವನು ಇನ್ನೂ ಯಜ್ಞಪೀಠದ ಬಳಿಯಲ್ಲಿ ನಿಂತಿದ್ದನು. ಮೋವಾಬ್ಯರ ಪ್ರಧಾನರು ಅವನ ಸಂಗಡ ಇದ್ದರು. ಬಾಲಾಕನು, “ಯೆಹೋವನು ಏನು ಹೇಳಿದ್ದಾನೆ?” ಎಂದು ಕೇಳಿದನು. |
18
|
ಆಗ ಬಿಳಾಮನು ಈ ಸಂಗತಿಗಳನ್ನು ಹೇಳಿದನು, “ಬಾಲಾಕನೇ, ಎದ್ದುನಿಂತು ನಾನು ಹೇಳುವುದನ್ನು ಕೇಳು. ಚಿಪ್ಪೋರನ ಮಗನಾದ ಬಾಲಾಕನೇ, ಕೇಳು: |
19
|
ದೇವರು ಮನುಷ್ಯನಲ್ಲ; ಆತನು ಸುಳ್ಳಾಡುವುದಿಲ್ಲ. ದೇವರು ಮಾನವನಲ್ಲ; ಆತನ ಉದ್ದೇಶಗಳು ಬದಲಾಗುವುದಿಲ್ಲ. ಯೆಹೋವನು ತಾನು ಮಾಡುತ್ತೇನೆಂದು ಹೇಳಿದರೆ, ಅದನ್ನು ಮಾಡಿಯೇ ಮಾಡುತ್ತಾನೆ. ಯೆಹೋವನು ವಾಗ್ದಾನ ಮಾಡಿದರೆ, ಅದನ್ನು ನೆರವೇರಿಸುತ್ತಾನೆ. |
20
|
ಆ ಜನರನ್ನು ಆಶೀರ್ವದಿಸಬೇಕೆಂದು ಯೆಹೋವನು ನನಗೆ ಆಜ್ಞಾಪಿಸಿದನು; ಯೆಹೋವನು ಅವರನ್ನು ಆಶೀರ್ವದಿಸಿದ್ದಾನೆ. ಅದನ್ನು ಬದಲಾಯಿಸಲು ನನಗೆ ಸಾಧ್ಯವಿಲ್ಲ. |
21
|
ಯಾಕೋಬನ ಜನರಲ್ಲಿ ಯಾವ ದೋಷವೂ ಇಲ್ಲ. ಇಸ್ರೇಲಿನ ಜನರಲ್ಲಿ ಯಾವ ಆಪತ್ತು ಕಾಣುತ್ತಿಲ್ಲ. ಯೆಹೋವನೇ ಅವರ ದೇವರು. ಆತನು ಅವರೊಂದಿಗಿದ್ದಾನೆ. |
22
|
ದೇವರು ಅವರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ಅವರು ಕಾಡುಎತ್ತಿನಷ್ಟು ಬಲಿಷ್ಠರಾಗಿದ್ದಾರೆ. |
23
|
ನಿಜವಾಗಿಯೂ ಯಾಕೋಬನ ಜನರ ಮಧ್ಯದಲ್ಲಿ ಶಕುನ ನೋಡುವವರು ಇಲ್ಲ. ಇಸ್ರೇಲಿನಲ್ಲಿ ಕಣಿ ಹೇಳುವವರು ಇಲ್ಲ. ಜನರು ಯಾಕೋಬನ ಮತ್ತು ಇಸ್ರೇಲರ ಬಗ್ಗೆ ಹೀಗೆ ಹೇಳುವನು: “ದೇವರು ಮಾಡಿದ ಮಹಾ ಕಾರ್ಯಗಳನ್ನು ನೋಡಿರಿ!” |
24
|
ಆ ಜನರು ಪ್ರಾಯಸಿಂಹದಂತೆ ಬಲಿಷ್ಠರು. ಅವರು ಸಿಂಹದಂತೆ ಹೋರಾಡುತ್ತಾರೆ. ಆ ಸಿಂಹ ತನ್ನ ವೈರಿಯನ್ನು ತಿಂದುಬಿಡುವತನಕ ವಿಶ್ರಮಿಸುವುದಿಲ್ಲ. ಆ ಸಿಂಹವು ತನಗೆ ಬಲಿಯಾದವರ ರಕ್ತವನ್ನು ಹೀರುವವರೆಗೆ ಎಂದಿಗೂ ವಿಶ್ರಮಿಸುವುದಿಲ್ಲ.” |
25
|
ಆಗ ಬಾಲಾಕನು ಬಿಳಾಮನಿಗೆ, “ನೀನು ಅವರನ್ನು ಶಪಿಸಲೂ ಬೇಡ, ಆಶೀರ್ವದಿಸಲೂ ಬೇಡ” ಎಂದು ಹೇಳಿದನು. |
26
|
ಅದಕ್ಕೆ ಬಿಳಾಮನು, “ಯೆಹೋವನು ಹೇಳುವುದನ್ನೇ ನಾನು ಮಾಡುತ್ತೇನೆ ಎಂದು ನಾನು ನಿನಗೆ ಮೊದಲೇ ಹೇಳಲಿಲ್ಲವೆ?” ಅಂದನು. |
27
|
ಆಮೇಲೆ ಬಾಲಾಕನು ಬಿಳಾಮನಿಗೆ, “ಸರಿ, ಇನ್ನೊಂದು ಸ್ಥಳಕ್ಕೆ ಬಾ. ಒಂದು ವೇಳೆ ನೀನು ಅವರನ್ನು ಶಪಿಸಬೇಕೆಂದು ದೇವರು ಅಪೇಕ್ಷೆಪಡಬಹುದು” ಎಂದು ಹೇಳಿದನು. |
28
|
ಬಾಲಾಕನು ಬಿಳಾಮನನ್ನು “ಪೆಗೋರ್” ಬೆಟ್ಟದ ತುದಿಗೆ ಕರೆದುಕೊಂಡು ಹೋದನು. ಆ ಬೆಟ್ಟದ ಮೇಲಿಂದ ಕೆಳಗಿರುವ ಮರುಭೂಮಿಯು ಕಾಣಿಸುತ್ತದೆ. |
29
|
ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿಯೂ ಏಳು ಯಜ್ಞವೇದಿಕೆಗಳನ್ನು ಕಟ್ಟಿಸಿ ಏಳು ಹೋರಿಗಳನ್ನು ಮತ್ತು ಏಳು ಟಗರುಗಳನ್ನು ಸಿದ್ಧಪಡಿಸು” ಎಂದು ಹೇಳಿದನು. |
30
|
ಬಾಲಾಕನು ಅವನ ಅಪ್ಪಣೆಯ ಮೇರೆಗೆ ಪ್ರತಿಯೊಂದನ್ನು ಮಾಡಿ ಪ್ರತಿಯೊಂದು ಪೀಠದಲ್ಲಿ ಒಂದು ಹೋರಿಯನ್ನು ಮತ್ತು ಒಂದು ಟಗರನ್ನು ಸರ್ವಾಂಗಹೋಮವಾಗಿ ಅರ್ಪಿಸಿದನು. |
Numbers 23:1 Kannada Language Bible Words basic statistical display
COMING SOON ...