Bible Languages

Indian Language Bible Word Collections

Bible Versions

Books

Numbers Chapters

Numbers 6 Verses

Bible Versions

Books

Numbers Chapters

Numbers 6 Verses

1 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
2 “ಈ ಸಂಗತಿಗಳನ್ನು ಇಸ್ರೇಲರಿಗೆ ಹೇಳು: ಯಾವ ಪುರುಷನಾಗಲಿ ಸ್ತ್ರೀಯಾಗಲಿ ನಾಜೀರವ್ರತವನ್ನು ಮಾಡುವುದರ ಮೂಲಕ ತನ್ನನ್ನು ಪ್ರತಿಷ್ಠಿಸಿಕೊಂಡರೆ, ಯೆಹೋವನಿಗೋಸ್ಕರ ಹರಕೆ ಮಾಡಿಕೊಂಡರೆ,
3 ಆ ಸಮಯದಲ್ಲಿ ಅವನು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯಬಾರದು; ದ್ರಾಕ್ಷಾರಸದ ಹುಳಿಯನ್ನಾಗಲಿ ಬೇರೆ ಮದ್ಯದ ಹುಳಿಯನ್ನಾಗಲಿ ಕುಡಿಯಬಾರದು; ದ್ರಾಕ್ಷಿಯ ಹಣ್ಣಿನಿಂದ ಮಾಡಿದ ಯಾವ ಪಾನವನ್ನೂ ಕುಡಿಯಬಾರದು; ಹಸಿ ಅಥವಾ ಒಣ ದ್ರಾಕ್ಷಿಯನ್ನು ಸಹ ತಿನ್ನಬಾರದು;
4 ಅವನು ಹರಕೆ ಮಾಡಿಕೊಂಡಿರುವ ದಿನಗಳಲ್ಲಿ ದ್ರಾಕ್ಷಾಲತೆಯಿಂದ ಉತ್ಪನ್ನವಾಗುವ ಯಾವದನ್ನೂ ತಿನ್ನಬಾರದು. ಅವನು ದ್ರಾಕ್ಷಿಯ ಬೀಜವನ್ನಾಗಲಿ ಸಿಪ್ಪೆಯನ್ನಾಗಲಿ ತಿನ್ನಬಾರದು.
5 “ಅವನ ವ್ರತದ ಕಾಲದಲ್ಲಿ ಕ್ಷೌರದ ಕತ್ತಿಯು ಅವನ ತಲೆಯನ್ನು ಸೋಂಕಬಾರದು. ಯೆಹೋವನಿಗೋಸ್ಕರ ಪ್ರತಿಷ್ಠಿತವಾದ ತನ್ನ ಕಾಲವನ್ನು ಪೂರ್ಣಗೊಳಿಸುವ ತನಕ ಅವನು ಪರಿಶುದ್ಧನಾಗಿರಬೇಕು. ತನ್ನ ವ್ರತದ ದಿನಗಳು ಮುಗಿಯುವ ತನಕ ಅವನು ಕೂದಲನ್ನು ಬೆಳೆಸಿಕೊಳ್ಳಬೇಕು.
6 “ಅವನು ಯೆಹೋವನಿಗೋಸ್ಕರ ಹರಕೆ ಮಾಡಿಕೊಂಡ ಕಾಲವೆಲ್ಲಾ, ಯಾವ ಶವದ ಬಳಿಗೆ ಹೋಗಕೂಡದು.
7 ಅವನ ತಂದೆ, ತಾಯಿ, ಸಹೋದರ, ಸಹೋದರಿ ಸತ್ತರೂ ಅವನು ಅವರ ಹೆಣವನ್ನು ಮುಟ್ಟಬಾರದು. ಮುಟ್ಟಿದರೆ ಅವನು ಅಶುದ್ಧನಾಗುವನು. ದೇವರಿಗೋಸ್ಕರ ಮೀಸಲಾಗಿರುವ ಅವನ ಕೂದಲು ಅವನ ತಲೆಯನ್ನು ಮುಚ್ಚಿಕೊಂಡಿರುತ್ತದೆ; ಆದ್ದರಿಂದ ಅವನು ಪರಿಶುದ್ಧನಾಗಿರಬೇಕು.
8 ಅವನು ತನ್ನನ್ನು ಪ್ರತಿಷ್ಠಿಸಿಕೊಂಡ ದಿನಗಳಲ್ಲೆಲ್ಲಾ ಅವನು ಯೆಹೋವನಿಗೆ ಪವಿತ್ರನಾಗಿರಬೇಕು.
9 “ಯಾವನಾದರೂ ಇದ್ದಕ್ಕಿದ್ದಂತೆ ಅವನ ಬಳಿಯಲ್ಲೇ ಸತ್ತದ್ದರಿಂದ ತಾನು ಪ್ರತಿಷ್ಠಿಸಿಕೊಂಡ ತಲೆಕೂದಲು ಅಪವಿತ್ರವಾದರೆ ಏಳನೆಯ ದಿನದಲ್ಲಿ ತಲೆಯನ್ನು ಕ್ಷೌರ ಮಾಡಿಸಿಕೊಳ್ಳಬೇಕು.
10 ಬಳಿಕ ಎಂಟನೆಯ ದಿನದಲ್ಲಿ ಅವನು ಎರಡು ಕಾಡು ಪಾರಿವಾಳವನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿಯಿರುವ ಯಾಜಕನಿಗೆ ತಂದುಕೊಡಬೇಕು.
11 ಆಗ ಯಾಜಕನು ಒಂದನ್ನು ದೋಷಪರಿಹಾರಕ ಯಜ್ಞವಾಗಿಯೂ ಇನ್ನೊಂದನ್ನು ಸರ್ವಾಂಗಹೋಮವಾಗಿಯೂ ಅರ್ಪಿಸುವನು. ಅವನಿಗೆ ಹೆಣವು ಸೋಂಕಿ ಅಶುದ್ಧನಾದದ್ದರಿಂದ ಈ ಸರ್ವಾಂಗಹೋಮವು ಅವನಿಗೆ ಪ್ರಾಯಶ್ಚಿತ್ತ ಯಜ್ಞವಾಗಿದೆ. ಆ ಸಮಯದಲ್ಲಿ, ಅವನು ತನ್ನ ತಲೆಕೂದಲನ್ನು ಯೆಹೋವನಿಗೆ ಕಾಣಿಕೆಯಾಗಿ ಮತ್ತೆ ಹರಕೆ ಮಾಡುವನು.
12 ಅವನು ಮತ್ತೊಮ್ಮೆ ನಿರ್ದಿಷ್ಟ ಕಾಲದವರೆಗೆ ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಳ್ಳಬೇಕೆಂಬುದೇ ಇದರರ್ಥ. ಅವನು ಒಂದು ವರ್ಷದ ಕುರಿಮರಿಯನ್ನು ತಂದು ಅದನ್ನು ದೋಷಪರಿಹಾರಕ ಯಜ್ಞಕ್ಕಾಗಿ ಕೊಡಬೇಕು. ಶವವು ಅವನನ್ನು ಅಶುದ್ಧನನ್ನಾಗಿ ಮಾಡಿದ್ದರಿಂದ ಮೊದಲಿನ ದಿನಗಳು ಲೆಕ್ಕಿಸಲ್ಪಡುವುದಿಲ್ಲ. ಅವನು ಮತ್ತೊಮ್ಮೆ ಪ್ರತಿಷ್ಠೆಯನ್ನು ಹೊಸದಾಗಿ ಆರಂಭಿಸಬೇಕು.
13 “ನಾಜೀರನು ತನ್ನ ವ್ರತದ ದಿನಗಳು ಮುಗಿದ ನಂತರ, ಮಾಡಬೇಕಾದ ಕ್ರಮ: ಅವನು ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿಗೆ ಬಂದು
14 ಯೆಹೋವನಿಗೆ ತನ್ನ ಸಮರ್ಪಣೆಯನ್ನು ಮಾಡಬೇಕು. ಅವನು ಸಮರ್ಪಿಸಬೇಕಾದದು ಯಾವುವೆಂದರೆ, ಸರ್ವಾಂಗಹೋಮಕ್ಕೆ ದೋಷವಿಲ್ಲದ ಒಂದು ವರ್ಷದ ಗಂಡು ಕುರಿಮರಿ, ದೋಷಪರಿಹಾರ ಯಜ್ಞಕ್ಕಾಗಿ ಯಾವ ದೋಷವಿಲ್ಲದ ಒಂದು ವರುಷದ ಹೆಣ್ಣು ಕುರಿಮರಿ, ಸಮಾಧಾನ ಯಜ್ಞಕ್ಕಾಗಿ ಯಾವ ದೋಷವಿಲ್ಲದ ಒಂದು ಟಗರು ಇವೇ.
15 ಶುದ್ಧವಾದ ಹಿಟ್ಟಿನಿಂದ ಮತ್ತು ಎಣ್ಣೆಯಿಂದ ಮಾಡಿದ ಹುಳಿಯಿಲ್ಲದ ರೊಟ್ಟಿಗಳನ್ನೂ ಎಣ್ಣೆಹಾಕಿ ಮಾಡಿದ ಹುಳಿಯಿಲ್ಲದ ತೆಳುವಾದ ರೊಟ್ಟಿಗಳನ್ನೂ ಒಂದು ಪುಟ್ಟಿತುಂಬಾ ಸಮರ್ಪಿಸಬೇಕು; ಅಲ್ಲದೆ ಮೇಲೆ ವಿವರಿಸಿದ ಯಜ್ಞಗಳೊಡನೆ ಕೊಡಬೇಕಾದ ಧಾನ್ಯದ್ರವ್ಯಗಳನ್ನೂ ಪಾನದ್ರವ್ಯಗಳನ್ನೂ ಸಮರ್ಪಿಸಬೇಕು.
16 ಬಳಿಕ ಯಾಜಕನು ಇವುಗಳನ್ನು ಯೆಹೋವನ ಬಳಿಗೆ ತಂದು ದೋಷಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಮಾಡುವನು.
17 ಯಾಜಕನು ಹುಳಿಯಿಲ್ಲದ ರೊಟ್ಟಿಯಿರುವ ಪುಟ್ಟಿಯನ್ನು ಯೆಹೋವನಿಗೆ ಸಮರ್ಪಿಸುವನು. ಬಳಿಕ ಅವನು ಟಗರನ್ನು ವಧಿಸಿ ಸಮಾಧಾನ ಯಜ್ಞವಾಗಿ ಅರ್ಪಿಸುವನು. ಅವನು ಅದನ್ನು ಧಾನ್ಯಸಮರ್ಪಣೆ ಮತ್ತು ಪಾನದ್ರವ್ಯ ಸಮರ್ಪಣೆಯೊಂದಿಗೆ ಅರ್ಪಿಸುವನು.
18 “ನಾಜೀರವ್ರತವನ್ನು ಆಚರಿಸುತ್ತಿರುವವನು ಯೆಹೋವನಿಗಾಗಿ ಪ್ರತಿಷ್ಠಿಸಿದ್ದ ತಲೆಕೂದಲನ್ನು ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿ ಕ್ಷೌರಮಾಡಿಸಿಕೊಳ್ಳಬೇಕು. ಆ ಕೂದಲನ್ನು ಸಮಾಧಾನ ಯಜ್ಞದ್ರವ್ಯಗಳ ಕೆಳಗಿರುವ ಬೆಂಕಿಯಲ್ಲಿ ಹಾಕಬೇಕು.
19 “ನಾಜೀರನು ತನ್ನ ತಲೆಕೂದಲನ್ನು ಕ್ಷೌರಮಾಡಿಸಿಕೊಂಡ ನಂತರ, ಯಾಜಕನು ಅವನಿಗೆ ಆ ಟಗರಿನ ಬೆಂದ ಮುಂದೊಡೆಯನ್ನೂ ಪುಟ್ಟಿಯಲ್ಲಿನ ಒಂದು ಹುಳಿಯಿಲ್ಲದ ಸಿಹಿರೊಟ್ಟಿಯನ್ನೂ ಒಂದು ಹುಳಿಯಿಲ್ಲದ ತೆಳುವಾದ ರೊಟ್ಟಿಯನ್ನೂ ಅವನ ಕೈಯಲ್ಲಿ ಇಡಬೇಕು.
20 ನೈವೇದ್ಯವಾಗಿ ಅದನ್ನು ಯೆಹೋವನ ಸನ್ನಿಧಿಯಲ್ಲಿ ವಿಶೇಷ ಕಾಣಿಕೆಯಾಗಿ ನಿವಾಳಿಸಬೇಕು. ಇವುಗಳು ಪವಿತ್ರವಾಗಿದ್ದು ಯಾಜಕರ ಪಾಲಾಗುತ್ತವೆ. ಅಲ್ಲದೆ ಮೀಸಲಾಗಿಟ್ಟಿರುವ ನಿವಾಳಿಸಲ್ಪಟ್ಟ ಕಾಣಿಕೆಯ ಎದೆಯ ಭಾಗ ಮತ್ತು ತೊಡೆಯ ಭಾಗ ಸಹ ಯಾಜಕನ ಭಾಗವಾಗಿರುತ್ತದೆ. ಇದರ ನಂತರ ನಾಜೀರನು ದ್ರಾಕ್ಷಾರಸವನ್ನು ಕುಡಿಯಬಹುದು.
21 “ಇದೇ ನಾಜೀರರ ವ್ರತವಿಧಿ. ಅವರು ತಮ್ಮ ವ್ರತ ಪೂರ್ತಿಗಾಗಿ ಯೆಹೋವನಿಗೆ ಸಮರ್ಪಿಸಬೇಕಾದ ಕಾಣಿಕೆ ಇದೇ. ಅವರು ತಮ್ಮ ಶಕ್ತಿಮೀರಿ ಕೊಡಬಹುದು. ಆದರೆ ತಾವು ಕೊಡುತ್ತೇವೆಂದು ಹರಕೆ ಮಾಡಿದಷ್ಟನ್ನು ವ್ರತವಿಧಿಗನುಸಾರವಾಗಿ ಕೊಡಲೇಬೇಕು.”
22 ಯೆಹೋವನು ಮೋಶೆಗೆ ಹೇಳಿದ್ದೇನಂದರೆ:
23 “ನೀನು ಆರೋನನಿಗೂ ಅವನ ಪುತ್ರರಿಗೂ ಹೀಗೆ ಆಜ್ಞಾಪಿಸು: ನೀವು ಇಸ್ರೇಲರನ್ನು ಆಶೀರ್ವದಿಸುವಾಗ ಈ ಪ್ರಕಾರ ಹೇಳಬೇಕು:
24 ಯೆಹೋವನು ನಿಮ್ಮನ್ನು ಆಶೀರ್ವದಿಸಿ ಕಾಪಾಡಲಿ.
25 ಯೆಹೋವನು ನಿಮ್ಮನ್ನು ಕನಿಕರದಿಂದ ನೋಡಿ ನಿಮ್ಮ ಮೇಲೆ ದಯವಿಡಲಿ.
26 ಯೆಹೋವನು ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು ಶಾಂತಿಯನ್ನು ಅನುಗ್ರಹಿಸಲಿ.”
27 ಬಳಿಕ ಯೆಹೋವನು, “ಹೀಗೆ ಆರೋನನೂ ಅವನ ಪುತ್ರರೂ ಇಸ್ರೇಲರನ್ನು ನನ್ನ ಹೆಸರಿನಿಂದ ಆಶೀರ್ವದಿಸುವುದರಿಂದ ನಾನು ಅವರನ್ನು ಆಶೀರ್ವದಿಸುವೆನು” ಎಂದನು.

Numbers 6:1 Kannada Language Bible Words basic statistical display

COMING SOON ...

×

Alert

×