1
|
ಬಳಿಕ ಯೋಬನು ಹೀಗೆ ಉತ್ತರಕೊಟ್ಟನು: |
2
|
“ಇನ್ನೆಷ್ಟರವರೆಗೆ ನೀವು ನನ್ನನ್ನು ನೋಯಿಸುವಿರಿ? ನಿಮ್ಮ ಮಾತುಗಳಿಂದ ನನ್ನನ್ನು ಜಜ್ಜುವಿರಿ? |
3
|
ಇದುವರೆಗೆ ನೀವು ನನ್ನನ್ನು ಹತ್ತಾರು ಸಲ ಅವಮಾನ ಮಾಡಿರುವಿರಿ. ನೀವು ನಾಚಿಕೆಯಿಲ್ಲದೆ ನನ್ನನ್ನು ಎದುರಿಸುತ್ತೀರಿ! |
4
|
ಒಂದುವೇಳೆ ನಾನು ಪಾಪಮಾಡಿದ್ದರೂ ಆ ತಪ್ಪು ನನ್ನದೇ. |
5
|
ನಿಮ್ಮನ್ನು ನನಗಿಂತಲೂ ಉತ್ತಮರೆಂದು ತೋರಿಸಿಕೊಳ್ಳಬೇಕೆಂದಿದ್ದೀರಿ; ನನ್ನ ತೊಂದರೆಗಳೇ ನನ್ನನ್ನು ದೋಷಿಯೆಂದು ನಿರೂಪಿಸುತ್ತವೆಯೆಂದು ಭಾವಿಸಿಕೊಂಡಿದ್ದೀರಿ. |
6
|
ಆದರೆ ನನ್ನನ್ನು ದೋಷಿಯೋ ಎಂಬಂತೆ ಮಾಡಿದಾತನು ದೇವರೇ. ಆತನು ನನಗೆ ವಿರೋಧವಾಗಿ ಬಲೆಯನ್ನು ಒಡ್ಡಿದ್ದಾನೆ. |
7
|
‘ನನಗೆ ಹಿಂಸೆಯಾಗುತ್ತಿದೆ’ ಎಂದು ಕೂಗಿಕೊಂಡರೂ ನನಗೆ ಯಾರೂ ಉತ್ತರ ಕೊಡುತ್ತಿಲ್ಲ. ನಾನು ಸಹಾಯಕ್ಕಾಗಿ ಗಟ್ಟಿಯಾಗಿ ಕೂಗಿಕೊಂಡರೂ ನ್ಯಾಯ ದೊರೆಯುತ್ತಿಲ್ಲ. |
8
|
ದೇವರು ನನ್ನ ಮಾರ್ಗವನ್ನು ಮುಚ್ಚಿಬಿಟ್ಟಿದ್ದಾನೆ; ಆದ್ದರಿಂದ ನಾನು ಮುಂದೆ ಹೋಗಲಾರೆ. ಆತನು ನನ್ನ ಮಾರ್ಗವನ್ನು ಕತ್ತಲೆಯಲ್ಲಿ ಮರೆಮಾಡಿದ್ದಾನೆ. |
9
|
ದೇವರು ನನ್ನ ಗೌರವವನ್ನು ತೆಗೆದುಹಾಕಿದ್ದಾನೆ. ಆತನು ನನ್ನ ತಲೆಯಿಂದ ಕಿರೀಟವನ್ನು ತೆಗೆದುಹಾಕಿದ್ದಾನೆ. |
10
|
ನಾನು ಸಾಯುವತನಕ ದೇವರು ನನ್ನನ್ನು ಎಲ್ಲಾ ಕಡೆಗಳಿಂದಲೂ ಅಪ್ಪಳಿಸಿ ಕೆಡುವುತ್ತಿದ್ದಾನೆ. ಬೇರುಗಳ ಸಹಿತ ಕೀಳಲ್ಪಟ್ಟ ಮರದ ಹಾಗೆ ಆತನು ನನ್ನ ನಿರೀಕ್ಷೆಯನ್ನು ತೆಗೆದುಹಾಕಿದ್ದಾನೆ. |
11
|
ದೇವರ ಕೋಪವು ನನಗೆ ವಿರೋಧವಾಗಿ ಉರಿಯುತ್ತಿದೆ. ಆತನು ನನ್ನನ್ನು ತನ್ನ ಶತ್ರುವೆಂದು ಪರಿಗಣಿಸಿದ್ದಾನೆ. |
12
|
ನನ್ನ ಮೇಲೆ ಆಕ್ರಮಣಮಾಡಲು ದೇವರು ತನ್ನ ಸೈನ್ಯವನ್ನು ಕಳುಹಿಸಿದ್ದಾನೆ. ಅವರು ನನಗೆ ವಿರುದ್ಧವಾಗಿ ದಿಬ್ಬಹಾಕಿದ್ದಾರೆ. ಅವರು ನನ್ನ ಗುಡಾರದ ಸುತ್ತಲೂ ಪಾಳೆಯ ಮಾಡಿಕೊಂಡಿದ್ದಾರೆ. |
13
|
“ನನ್ನ ಸಹೋದರರು ನನ್ನನ್ನು ತೊರೆದುಬಿಡುವಂತೆ ದೇವರು ಮಾಡಿದ್ದಾನೆ. ನಾನು ನನ್ನ ಸ್ನೇಹಿತರಿಗೆಲ್ಲಾ ಅಪರಿಚಿತನಾಗಿದ್ದೇನೆ. |
14
|
ನನ್ನ ಸಂಬಂಧಿಕರು ನನ್ನನ್ನು ತೊರೆದುಬಿಟ್ಟರು. ನನ್ನ ಸ್ನೇಹಿತರು ನನ್ನನ್ನು ಮರೆತುಬಿಟ್ಟರು. |
15
|
ನನ್ನ ಮನೆಯಲ್ಲಿರುವ ಸಂದರ್ಶಕರೂ ನನ್ನ ದಾಸಿಯರೂ ನನ್ನನ್ನು ಅಪರಿಚಿತನಂತೆ ಮತ್ತು ಪರದೇಶಿಯಂತೆ ಕಾಣುತ್ತಾರೆ. |
16
|
ನಾನು ನನ್ನ ಸೇವಕನನ್ನು ಕರೆದರೂ ಅವನು ನನಗೆ ಉತ್ತರಿಸುವುದಿಲ್ಲ. ನಾನು ಸಹಾಯಕ್ಕಾಗಿ ಬೇಡಿಕೊಂಡರೂ ನನ್ನ ಸೇವಕನು ಉತ್ತರ ಕೊಡುವುದಿಲ್ಲ. |
17
|
ನನ್ನ ಹೆಂಡತಿಗೂ ನನ್ನ ಉಸಿರು ಅಸಹ್ಯವಾಗಿದೆ. ನನ್ನ ಸ್ವಂತ ಮಕ್ಕಳೂ ನನ್ನನ್ನು ಕಂಡು ಹೇಸಿಗೆ ಪಡುತ್ತಾರೆ. |
18
|
ಚಿಕ್ಕಮಕ್ಕಳೂ ನನ್ನನ್ನು ಗೇಲಿಮಾಡುತ್ತಾರೆ; ನನ್ನನ್ನು ಕಂಡಾಗ ನಗುತ್ತಾರೆ. |
19
|
ನನ್ನನ್ನು ನೋಡಿ ನನ್ನ ಆಪ್ತಸ್ನೇಹಿತರೂ ಅಸಹ್ಯ ಪಡುತ್ತಾರೆ. ನಾನು ಯಾರನ್ನು ಪ್ರೀತಿಸಿದೆನೊ ಅವರೂ ನನಗೆ ವಿರೋಧವಾಗಿ ಎದ್ದಿದ್ದಾರೆ. |
20
|
‘ನನ್ನ ಶಕ್ತಿಯೆಲ್ಲಾ ಕಳೆದುಹೋಗಿದೆ. ನಾನು ಅಸ್ಥಿಪಂಜರದಂತೆ ಆಗಿರುವೆ. ನನ್ನಲ್ಲಿ ಸ್ವಲ್ಪ ಜೀವ ಮಾತ್ರ ಉಳಿದುಕೊಂಡಿದೆ. |
21
|
“ನನ್ನ ಸ್ನೇಹಿತರೇ, ಕರುಣಿಸಿರಿ, ನೀವಾದರೂ ನನ್ನನ್ನು ಕರುಣಿಸಿರಿ. ದೇವರ ಹಸ್ತವು ನನ್ನನ್ನು ಹೊಡೆದಿದೆ. |
22
|
ದೇವರು ಹಿಂಸಿಸುವಂತೆ ನೀವೂ ನನ್ನನ್ನು ಯಾಕೆ ಹಿಂಸಿಸುತ್ತೀರಿ? ನೀವು ಹಿಂಸೆಪಡಿಸಿದ್ದು ಸಾಕಾಗಲಿಲ್ಲವೇ? |
23
|
“ನನ್ನ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು ಬರೆದಿಟ್ಟರೆ ಎಷ್ಟೋ ಒಳ್ಳೆಯದು. ಸುರುಳಿಯಲ್ಲಿ ಬರೆದಿಟ್ಟರೆ ಅದೆಷ್ಟೋ ಮೇಲು. |
24
|
ನನ್ನ ಮಾತುಗಳನ್ನು ಸೀಸದ ಹಲಗೆಯ ಮೇಲೆಯೂ ಬಂಡೆಯ ಮೇಲೆಯೂ ಕೆತ್ತಿದರೆ ಎಷ್ಟೋ ಒಳ್ಳೆಯದು. ಆಗ ಅವು ಶಾಶ್ವತವಾಗಿರುತ್ತವೆ. |
25
|
ಜೀವಸ್ವರೂಪನಾದ ಒಬ್ಬನು ನನ್ನ ಪರವಾಗಿ ವಾದಿಸುತ್ತಾನೆಂದು ನನಗೆ ಗೊತ್ತಿದೆ; ಕೊನೆಯಲ್ಲಿ, ಆತನು ಭೂಮಿಯ ಮೇಲೆ ನಿಂತುಕೊಂಡು ನನಗೋಸ್ಕರ ವಾದಿಸುವನು. |
26
|
ನನ್ನ ಚರ್ಮವು ನಾಶವಾದ ಮೇಲೆಯೂ ನಾನು ಈ ದೇಹದಲ್ಲಿ ದೇವರನ್ನು ನೋಡುವೆನು. |
27
|
ನಾನು ಕಣ್ಣಾರೆ ದೇವರನ್ನು ನೋಡುವೆನು. ಬೇರೆ ಯಾರೂ ಅಲ್ಲದೆ ನಾನೇ ಆತನನ್ನು ನೋಡುವೆನು. ಈ ನಿರೀಕ್ಷೆಯಿಂದ ನನ್ನ ಹೃದಯವು ಉಲ್ಲಾಸಗೊಂಡಿದೆ. |
28
|
‘ನಾವು ಯೋಬನಿಗೆ ತೊಂದರೆಕೊಡೋಣ! ಅವನನ್ನು ದೂಷಿಸಲು ಕಾರಣವೊಂದನ್ನು ಹುಡುಕೋಣ’ ಎಂದು ನೀವು ಹೇಳಬಹುದು. |
29
|
ಆದರೆ ನೀವೇ ಖಡ್ಗಕ್ಕೆ ಭಯಪಡಬೇಕಾಗಿದೆ! ಯಾಕಂದರೆ ದೇವರು ದೋಷಿಗಳನ್ನು ಖಡ್ಗದಿಂದ ದಂಡಿಸುತ್ತಾನೆ; ನ್ಯಾಯತೀರ್ಪಿನ ಕಾಲ ಉಂಟೆಂದು ಆಗ ನಿಮಗೆ ತಿಳಿಯುವುದು.” |
Job 19:1 Kannada Language Bible Words basic statistical display
COMING SOON ...