1
|
“ಯೋಬನೇ, ನೀನು ಲಿವ್ಯಾತಾನನನ್ನು ಗಾಳದಿಂದ ಹಿಡಿಯಬಲ್ಲೆಯಾ? ನೀನು ಅದರ ನಾಲಿಗೆಯನ್ನು ಅದುಮಿ ಹಗ್ಗದಿಂದ ಕಟ್ಟಬಲ್ಲೆಯಾ? |
2
|
ಅದರ ಮೂಗಿನ ಮೂಲಕ ಹಗ್ಗವನ್ನಾಗಲಿ ದವಡೆಗಳ ಮೂಲಕ ಕೊಂಡಿಯನ್ನಾಗಲಿ ಹಾಕಬಲ್ಲೆಯಾ? |
3
|
ತನ್ನನ್ನು ಸ್ವತಂತ್ರವಾಗಿ ಬಿಟ್ಟುಕೊಡಬೇಕೆಂದು ಅದು ನಿನ್ನನ್ನು ಬೇಡಿಕೊಳ್ಳುವುದೇ? ಅದು ನಯವಾದ ಪದಗಳಿಂದ ನಿನ್ನೊಂದಿಗೆ ಮಾತಾಡುತ್ತದೆಯೋ? |
4
|
ಅದು ನಿನ್ನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವುದೇ? ಸದಾಕಾಲ ನಿನ್ನ ಸೇವೆಮಾಡುವುದಾಗಿ ವಾಗ್ದಾನ ಮಾಡುವುದೇ? |
5
|
ನೀನು ಪಕ್ಷಿಯೊಂದಿಗೆ ಆಟವಾಡುವಂತೆ ಅದರ ಜೊತೆಯಲ್ಲಿ ಆಟವಾಡುವಿಯಾ? ನಿನ್ನ ದಾಸಿಯರು ಅದರೊಂದಿಗೆ ಆಟವಾಡಲೆಂದು ಹಗ್ಗದಿಂದ ಅದನ್ನು ಕಟ್ಟಿಹಾಕುವಿಯಾ? |
6
|
ಯೋಬನೇ, ಬೆಸ್ತರು ಅದನ್ನು ನಿನ್ನಿಂದ ಕೊಂಡುಕೊಳ್ಳಲು ಪ್ರಯತ್ನಿಸುವರೇ? ಅವರು ಅದನ್ನು ವರ್ತಕರಿಗೆ ಮಾರುವುದಕ್ಕಾಗಿ ತುಂಡುತುಂಡಾಗಿ ಕತ್ತರಿಸುವರೇ? |
7
|
ನೀನು ಭರ್ಜಿಗಳನ್ನು ಎಸೆದು ಅದರ ಚರ್ಮಕ್ಕೂ ತಲೆಗೂ ನಾಟಿಸಬಲ್ಲೆಯಾ? |
8
|
“ಯೋಬನೇ, ನೀನು ಅದರ ಮೇಲೆ ನಿನ್ನ ಕೈಯಿಟ್ಟು ನೋಡು. ಆ ಪ್ರಯಾಸದ ಹೋರಾಟವನ್ನು ನೆನಸಿಕೊಂಡರೆ ಅದನ್ನು ನೀನು ಮುಟ್ಟುವುದೇ ಇಲ್ಲ. |
9
|
ನೀನು ಅದನ್ನು ಸೋಲಿಸಬಹುದೆಂದು ಯೋಚಿಸಿಕೊಂಡಿದ್ದರೆ, ಇನ್ನಾದರೂ ಅದನ್ನು ಮರೆತುಬಿಡು! ಅದನ್ನು ನೋಡಿದರೇ ನಿನಗೆ ಭಯವಾಗುತ್ತದೆ! |
10
|
ಅದನ್ನು ಕೋಪಗೊಳಿಸುವಷ್ಟು ಧೈರ್ಯ ಯಾರಿಗೂ ಇಲ್ಲ. “ಹೀಗಿರುವಲ್ಲಿ ನನಗೆ ವಿರುದ್ಧವಾಗಿ ನಿಂತುಕೊಳ್ಳುವಷ್ಟು ಶಕ್ತಿ ಯಾರಿಗಿದೆ? |
11
|
ನಾನು ಯಾರಿಗೂ ಯಾವ ಸಾಲವನ್ನೂ ತೀರಿಸಬೇಕಿಲ್ಲ. ಆಕಾಶಮಂಡಲದ ಕೆಳಗಿರುವ ಸಮಸ್ತವೂ ನನ್ನದೇ. |
12
|
“ಯೋಬನೇ, ಲಿವ್ಯಾತಾನನ ಅಂಗಗಳನ್ನೂ ಶಕ್ತಿಯನ್ನೂ ಸೊಗಸಾದ ಆಕಾರವನ್ನೂ ನಿನಗೆ ವರ್ಣಿಸುವೆನು. |
13
|
ಯಾವನೂ ಅದರ ಚರ್ಮವನ್ನು ಸುಲಿಯಲಾರನು. ಯಾವನೂ ಅದರ ದವಡೆಗಳಿಗೆ ಚುಚ್ಚಲಾರನು. |
14
|
ಬಲವಂತದಿಂದ ಅದರ ದವಡೆಗಳನ್ನು ತೆರೆಸಲು ಯಾರಿಗೂ ಸಾಧ್ಯವಿಲ್ಲ. ಅದರ ದವಡೆಹಲ್ಲುಗಳು ಜನರನ್ನು ಭಯಗೊಳಿಸುತ್ತವೆ. |
15
|
ಅದರ ಹಿಂಬದಿಯಲ್ಲಿ ಗುರಾಣಿಗಳ ಸಾಲುಗಳು ಒಂದಕ್ಕೊಂದು ಬಿಗಿಯಲ್ಪಟ್ಟು ಮುದ್ರಿತವಾಗಿವೆ. |
16
|
ಗಾಳಿಯೂ ಹಾದುಹೋಗದಂತೆ ಆ ಗುರಾಣಿಗಳು ಜೋಡಿಸಲ್ಪಟ್ಟಿವೆ. |
17
|
ಗುರಾಣಿಗಳು ಒಂದಕ್ಕೊಂದು ಅಂಟಿಕೊಂಡು ಬಿಡಿಸಲು ಅಸಾಧ್ಯವಾಗಿದೆ. |
18
|
ಅದರ ಸೀನಿನ ತುಂತುರುಗಳು ಥಳಥಳಿಸುತ್ತವೆ. ಅದರ ಕಣ್ಣುಗಳು ಮುಂಜಾನೆಯ ಬೆಳಕಿನಂತಿವೆ. |
19
|
ಅದರ ಬಾಯಿಂದ, ಉರಿಯುವ ಕೊಳ್ಳಿಗಳು ಹೊರಬರುತ್ತವೆ. ಬೆಂಕಿಯ ಜ್ವಾಲೆಗಳು ಹಾರುತ್ತವೆ. |
20
|
ಕಾದಮಡಕೆಯ ಕೆಳಗೆ ಉರಿಯುತ್ತಿರುವ ಆಪು ಹುಲ್ಲಿನಿಂದ ಬರುವ ಹೊಗೆಯಂತೆ ಅದರ ಮೂಗಿನಿಂದ ಹೊಗೆಯು ಹಾಯುವುದು. |
21
|
ಅದರ ಉಸಿರು ಇದ್ದಲನ್ನು ಹೊತ್ತಿಸುವುದು; ಜ್ವಾಲೆಗಳು ಅದರ ಬಾಯೊಳಗಿಂದ ಹಾರುವುದು. |
22
|
ಅದರ ಕುತ್ತಿಗೆ ಬಹು ಶಕ್ತಿಯುತವಾಗಿದೆ; ಜನರು ಭಯಗೊಂಡು ಅದರ ಬಳಿಯಿಂದ ಓಡಿಹೋಗುವರು. |
23
|
ಅದರ ಚರ್ಮದಲ್ಲಿ ಯಾವ ಬಲಹೀನತೆಯೂ ಇಲ್ಲ. ಅದು ಕಬ್ಬಿಣದಂತೆ ಗಟ್ಟಿಯಾಗಿದೆ. |
24
|
ಅದರ ಹೃದಯ ಬಂಡೆಯಂತಿದೆ. ಅದಕ್ಕೆ ಭಯವೇ ಇಲ್ಲ. ಬೀಸುವ ಕೆಳಗಲ್ಲಿನಂತೆ ಅದು ಗಟ್ಟಿಯಾಗಿದೆ. |
25
|
ಅದು ಎದ್ದಾಗ ಬಲಿಷ್ಠರು ಭಯಪಡುವರು. ಅದು ತನ್ನ ಬಾಲವನ್ನು ತೂಗಿದರೆ ಅವರು ಓಡಿಹೋಗುವರು. |
26
|
ಅದಕ್ಕೆ ಬಡಿಯುವ ಖಡ್ಗ, ಭರ್ಜಿ ಈಟಿಗಳು ಹಿಂದಕ್ಕೆ ಪುಟಹಾರುತ್ತವೆ. ಯಾವ ಆಯುಧಗಳು ಅದನ್ನು ನೋಯಿಸಲಾರವು! |
27
|
ಅದು ಕಬ್ಬಿಣವನ್ನು ಒಣಹುಲ್ಲಿನಂತೆಯೂ ತಾಮ್ರವನ್ನು ಲೊಡ್ಡುಮರದಂತೆಯೂ ಮುರಿದು ಹಾಕುವುದು. |
28
|
ಬಾಣಗಳೂ ಅದನ್ನು ಓಡಿಸಲಾರವು, ಕವಣಿ ಕಲ್ಲುಗಳೂ ಅದಕ್ಕೆ ಒಣಹುಲ್ಲಿನಂತಿವೆ. |
29
|
ಅದು ತನಗೆ ಬಡಿದ ಮರದ ದೊಣ್ಣೆಯನ್ನು ಹುಲ್ಲುಗಡ್ಡಿಯೆಂದು ಭಾವಿಸಿಕೊಳ್ಳುವುದು. ಮನುಷ್ಯರು ಬಿರುಸಾಗಿ ಎಸೆಯುವ ಭರ್ಜಿಗಳನ್ನು ಕಂಡು ನಗುತ್ತದೆ. |
30
|
ಅದರ ಕೆಳಭಾಗವು ಮಡಕೆಯ ಹರಿತವಾದ ಚೂರುಗಳಂತಿವೆ. ಅದು ನಡೆಯುವಾಗ ಒಕ್ಕಣೆಯ ಸುತ್ತಿಗೆಯಂತೆ ಮಣ್ಣಿನಲ್ಲಿ ಕುಳಿಗಳನ್ನು ಮಾಡುತ್ತದೆ. |
31
|
ಮಡಕೆಯಲ್ಲಿ ಕುದಿಯುತ್ತಿರುವ ನೀರಿನಂತೆಯೂ ಮಡಕೆಯಲ್ಲಿ ಕುದಿಯುತ್ತಿರುವ ಎಣ್ಣೆಯಂತೆಯೂ ಅದು ನೀರನ್ನು ಕುದಿಸುವುದು. |
32
|
ಅದು ಈಜುವಾಗ ಅದರ ಹಿಂದೆ ಒಂದು ದಾರಿಯೇ ನಿರ್ಮಿತವಾಗುವುದು. ಅದು ನೀರನ್ನು ಕಲಕಿ ತನ್ನ ಹಿಂದೆ ಬಿಳಿನೊರೆಯನ್ನು ಉಂಟುಮಾಡುವುದು. |
33
|
ಭೂಮಿಯ ಮೇಲಿರುವ ಯಾವ ಪ್ರಾಣಿಯೂ ಅದರಂತಿಲ್ಲ. ಈ ಪ್ರಾಣಿಯೊಂದೇ ಯಾವುದಕ್ಕೂ ಭಯಪಡದು. |
34
|
ಅತ್ಯಂತ ಗರ್ವಿಷ್ಠ ಪ್ರಾಣಿಗಳನ್ನೂ ಅದು ಕಡೆಗಣಿಸುವುದು. ಅದು ಕ್ರೂರಪ್ರಾಣಿಗಳಿಗೆಲ್ಲಾ ರಾಜನಾಗಿದೆ.” |
Job 41:1 Kannada Language Bible Words basic statistical display
COMING SOON ...