ನಿಮ್ಮ ಮಧ್ಯದಲ್ಲಿ ಲೈಂಗಿಕ ಪಾಪವಿದೆಯೆಂದು ಜನರು ನಿಜವಾಗಿಯೂ ಹೇಳುತ್ತಿದ್ದಾರೆ. ದೇವರನ್ನು ತಿಳಿದಿಲ್ಲದ ಜನರ ನಡುವೆಯೂ ಇಲ್ಲದಂಥ ಕೆಟ್ಟ ಬಗೆಯ ಲೈಂಗಿಕ ಪಾಪ ಅದಾಗಿದೆ. ನಿಮ್ಮಲ್ಲಿ ಒಬ್ಬನು ತನ್ನ ತಂದೆಯ ಪತ್ನಿಯನ್ನೇ ಇಟ್ಟುಕೊಂಡಿದ್ದಾನೆಂದು ಜನರು ಹೇಳುತ್ತಿದ್ದಾರೆ.
ನನ್ನ ದೇಹ ನಿಮ್ಮೊಂದಿಗೆ ಇಲ್ಲದಿದ್ದರೂ ನಾನು ಆತ್ಮದಲ್ಲಿ ನಿಮ್ಮೊಂದಿಗಿದ್ದೇನೆ. ಆ ಪಾಪ ಮಾಡಿದ ವ್ಯಕ್ತಿಗೆ ನಾನು ಆಗಲೇ ತೀರ್ಪು ಮಾಡಿದ್ದೇನೆ. ನಾನು ಅಲ್ಲಿದ್ದಿದ್ದರೆ ಯಾವ ತೀರ್ಪನ್ನು ಕೊಡುತ್ತಿದ್ದೆನೋ ಅದೇ ತೀರ್ಪನ್ನು ಕೊಟ್ಟಿದ್ದೇನೆ.
ಹಳೆಯ ಹುಳಿಯನ್ನೆಲ್ಲಾ (ಪಾಪ) ತೆಗೆದುಹಾಕಿರಿ. ಆಗ ನೀವು ಹೊಸ ಹಿಟ್ಟಾಗುವಿರಿ. ನೀವು ನಿಜವಾಗಿಯೂ ಹುಳಿರಹಿತವಾದ ಪಸ್ಕದ ರೊಟ್ಟಿಯಾಗಿದ್ದೀರಿ. ಹೌದು, ನಮ್ಮ ಪಸ್ಕದ ಕುರಿಮರಿಯಾದ ಕ್ರಿಸ್ತನು ಆಗಲೇ ಕೊಲ್ಲಲ್ಪಟ್ಟಿದ್ದಾನೆ.
ಆದ್ದರಿಂದ ನಾವು ಪಸ್ಕದ ಊಟ ಮಾಡೋಣ. ದುಷ್ಟತನ ಮತ್ತು ಕೆಡುಕತನ ಎಂಬ ಹಳೆಯ ಹುಳಿಯಿಂದ ಕೂಡಿರುವ ರೊಟ್ಟಿಯನ್ನು ನಾವು ತಿನ್ನದೆ ಹುಳಿರಹಿತವಾದ ರೊಟ್ಟಿಯನ್ನು ತಿನ್ನೋಣ. ಸರಳತೆ ಮತ್ತು ಸತ್ಯತೆ ಇವುಗಳೇ ಆ ಹುಳಿರಹಿತ ರೊಟ್ಟಿ.
ಆದರೆ ಈ ಲೋಕದ ಪಾಪಿಷ್ಠ ಜನರ ಸಹವಾಸವನ್ನು ನೀವು ಮಾಡಕೂಡದೆಂಬ ಅರ್ಥದಲ್ಲಿ ನಾನು ಅದನ್ನು ಬರೆದಿರಲಿಲ್ಲ. ಈ ಲೋಕದ ಜನರು ಲೈಂಗಿಕ ಪಾಪ ಮಾಡುತ್ತಾರೆ; ಅವರು ಸ್ವಾರ್ಥಿಗಳಾಗಿದ್ದಾರೆ; ಒಬ್ಬರಿಗೊಬ್ಬರು ಮೋಸ ಮಾಡುತ್ತಾರೆ; ವಿಗ್ರಹಗಳನ್ನು ಪೂಜಿಸುತ್ತಾರೆ. ಆ ಜನರಿಂದ ದೂರವಿರಬೇಕಾದರೆ, ನೀವು ಈ ಲೋಕವನ್ನೇ ಬಿಟ್ಟು ಹೋಗಬೇಕಾಗುತ್ತದೆ.
ಆದರೆ ಕ್ರಿಸ್ತನಲ್ಲಿ ತನ್ನನ್ನು ಸಹೋದರನೆಂದು ಹೇಳಿಕೊಳ್ಳುವವನು ಲೈಂಗಿಕ ಪಾಪ ಮಾಡುವವನಾಗಿದ್ದರೆ, ಸ್ವಾರ್ಥಿಯಾಗಿದ್ದರೆ, ವಿಗ್ರಹಗಳನ್ನು ಪೂಜಿಸುವವನಾಗಿದ್ದರೆ, ಜನರಿಗೆ ಕೆಟ್ಟ ಮಾತುಗಳನ್ನಾಡುವವನಾಗಿದ್ದರೆ, ಮದ್ಯಪಾನ ಮಾಡಿ ಮತ್ತನಾಗುವವನಾಗಿದ್ದರೆ, ಜನರಿಗೆ ಮೋಸ ಮಾಡುವವನಾಗಿದ್ದರೆ, ಅವನ ಸಹವಾಸ ಮಾಡಬಾರದು; ಅವನೊಂದಿಗೆ ಊಟವನ್ನು ಸಹ ಮಾಡಬಾರದು.
(12-13) ಸಭೆಗೆ ಸೇರಿಲ್ಲದ ಜನರಿಗೆ ತೀರ್ಪು ಮಾಡುವುದು ನನ್ನ ಕೆಲಸವಲ್ಲ. ಅವರಿಗೆ ದೇವರೇ ತೀರ್ಪು ಮಾಡುವನು. ಆದರೆ ಸಭೆಗೆ ಸೇರಿರುವ ಜನರಿಗೆ ನೀವು ತೀರ್ಪು ಮಾಡಬೇಕು. “ದುಷ್ಟನನ್ನು ಸಭೆಯಿಂದ ಹೊರಗೆ ಹಾಕಿ” [✡ಉಲ್ಲೇಖನ: ಧರ್ಮೋಪದೇಶ. 22:21, 24.] ಎಂದು ಪವಿತ್ರ ಗ್ರಂಥ ಹೇಳುತ್ತದೆ.