English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Numbers Chapters

Numbers 23 Verses

1 ಬಿಳಾಮನು ಬಾಲಾಕನಿಗೆ, “ಇಲ್ಲಿ ನೀನು ಏಳು ಯಜ್ಞವೇದಿಕೆಗಳನ್ನು ನನಗೆ ಕಟ್ಟಿಸಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ನನಗೆ ಸಿದ್ಧಪಡಿಸು” ಅಂದನು.
2 ಬಾಲಾಕನು ಹಾಗೆಯೇ ಮಾಡಿದನು. ಬಾಲಾಕನೂ ಬಿಳಾಮನೂ ಪ್ರತಿಯೊಂದು ಯಜ್ಞವೇದಿಕೆಯ ಮೇಲೆ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದಾಗ,
3 ಬಿಳಾಮನು ಬಾಲಾಕನಿಗೆ, “ನೀನು ಸರ್ವಾಂಗಹೋಮ ಮಾಡಿದ ಸ್ಥಳದಲ್ಲೇ ಇರು. ನಾನು ಸ್ವಲ್ಪದೂರ ಹೋಗಿ ಬರುತ್ತೇನೆ. ಒಂದುವೇಳೆ ಯೆಹೋವನು ನನ್ನನ್ನು ಸಂಧಿಸಲು ಬರಬಹುದು. ಆತನು ನನಗೆ ಪ್ರಕಟಿಸುವುದನ್ನು ನಿನಗೆ ತಿಳಿಸುವೆನು” ಎಂದು ಹೇಳಿ ಮರವಿಲ್ಲದ ಒಂದು ದಿಣ್ಣೆಗೆ ಹೋದನು.
4 ದೇವರು ಬಿಳಾಮನಿಗೆ ಎದುರಾಗಿ ಬಂದಾಗ ಬಿಳಾಮನು ಆತನಿಗೆ, “ನಾನು ಏಳು ಯಜ್ಞವೇದಿಕೆಗಳನ್ನು ಕಟ್ಟಿಸಿ ಒಂದೊಂದು ಪೀಠದಲ್ಲಿ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದ್ದೇನೆ” ಎಂದು ಹೇಳಿದನು.
5 ಆಗ ಯೆಹೋವನು ಬಿಳಾಮನಿಗೆ ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ತಿರುಗಿಹೋಗಿ ಹೀಗೆ ಹೇಳಬೇಕು” ಎಂದು ಆಜ್ಞಾಪಿಸಿದನು.
6 ಬಿಳಾಮನು ಬಾಲಾಕನ ಬಳಿಗೆ ತಿರುಗಿಬಂದಾಗ ಬಾಲಾಕನು ಯಜ್ಞವೇದಿಕೆಯ ಬಳಿಯಲ್ಲಿ ನಿಂತಿದ್ದನು. ಮೋವಾಬ್ಯರ ಪ್ರಧಾನರೆಲ್ಲರೂ ಅವನೊಡನೆ ನಿಂತಿದ್ದರು.
7 ಆಗ ಬಿಳಾಮನು ಹೀಗೆ ಹೇಳಿದನು: “ಮೋವಾಬ್ಯರ ಅರಸನಾದ ಬಾಲಾಕನು ನನ್ನನ್ನು ಅರಾಮಿನ ಪೂರ್ವ ದಿಕ್ಕಿನ ಬೆಟ್ಟಗಳಿಂದ ನನ್ನನ್ನು ಕರೆಸಿದನು. ‘ನೀನು ಬಂದು ನನಗೋಸ್ಕರ ಯಾಕೋಬ್ಯರನ್ನು ಶಪಿಸು; ಇಸ್ರೇಲರ ವಿರುದ್ಧ ಮಾತನಾಡು’ ಎಂದು ಬಾಲಾಕನು ಹೇಳಿದನು.
8 ಆದರೆ ದೇವರು ಅವರನ್ನು ಆಶೀರ್ವದಿಸಿರುವಾಗ ನಾನು ಅವರನ್ನು ಶಪಿಸಲು ಆಗುವುದಿಲ್ಲ. ಯೆಹೋವನು ಅವರ ಮೇಲೆ ನಾಶನವನ್ನು ಬರಮಾಡಲಿಲ್ಲ. ಆದ್ದರಿಂದ ನಾಶನವು ಅವರ ಮೇಲೆ ಇಳಿದುಬರುವಂತೆ ಮಾಡಲು ನನಗೆ ಸಾಧ್ಯವಿಲ್ಲ.
9 ಬೆಟ್ಟದ ಶಿಖರದಿಂದ ಅವರನ್ನು ನಾನು ನೋಡಿದೆನು; ಗುಡ್ಡದಿಂದ ಅವರನ್ನು ಕಂಡೆನು. ಅವರು ತಮ್ಮನ್ನು ಇತರ ಜನಾಂಗಗಳಿಗಿಂತ ಬೇರೆಯಾದವರು ಎಂದು ಪರಿಗಣಿಸಿಕೊಂಡಿದ್ದಾರೆ.
10 ಧೂಳಿನಷ್ಟು ಅಸಂಖ್ಯವಾದ ಯಾಕೋಬ್ಯರನ್ನು ಲೆಕ್ಕಿಸುವುದಕ್ಕೆ ಯಾರಿಂದಾದೀತು; ಇಸ್ರೇಲರ ಕಾಲು ಭಾಗವನ್ನಾದರೂ ಯಾರೂ ಲೆಕ್ಕಿಸಲಾರರು. ಸಜ್ಜನರಾದ ಅವರು ಸಾಯುವ ರೀತಿಯಲ್ಲೇ ನಾನೂ ಸಾಯಲು ಬಯಸುವೆ. ಅವರಿಗುಂಟಾಗುವ ಅಂತ್ಯ ನನಗೂ ಉಂಟಾಗಲಿ.”
11 ಬಾಲಾಕನು ಬಿಳಾಮನಿಗೆ, “ಇದೇನು ನೀನು ನನಗೆ ಮಾಡಿದ್ದು! ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಸಿದೆನು. ನೀನು ಅವರನ್ನು ಶಪಿಸದೆ ಆಶೀರ್ವಾದವನ್ನೇ ಮಾಡಿಬಿಟ್ಟೆ” ಎಂದು ಹೇಳಿದನು.
12 ಅದಕ್ಕೆ ಬಿಳಾಮನು, “ಯೆಹೋವನು ನನಗೆ ತಿಳಿಸುವುದನ್ನು ನಾನು ಹೇಳಬಾರದೇ?” ಎಂದು ಕೇಳಿದನು.
13 ಆಗ ಬಾಲಾಕನು, “ದಯಮಾಡಿ ನನ್ನೊಂದಿಗೆ ಇನ್ನೊಂದು ಸ್ಥಳಕ್ಕೆ ಬಾ; ಅಲ್ಲಿಂದ ಅವರನ್ನು ನೋಡಬಹುದು. ಆದರೆ ಅವರೆಲ್ಲರೂ ಕಾಣಿಸದೆ ಕಡೇ ಭಾಗವು ಮಾತ್ರ ಕಾಣಿಸುವುದು. ಅಲ್ಲಿಂದ ನನಗೋಸ್ಕರ ಅವರನ್ನೇ ಶಪಿಸಬೇಕು” ಎಂದು ಹೇಳಿದನು.
14 ಹೀಗೆ ಬಾಲಾಕನು ಬಿಳಾಮನನ್ನು “ಕಾವಲುಗಾರರ ಬೆಟ್ಟಗಳು” ಎಂಬ ಸ್ಥಳಕ್ಕೆ ಕರೆದುಕೊಂಡು ಹೋದನು. ಇದು ಪಿಸ್ಗಾ ಪರ್ವತಶ್ರೇಣಿಯ ತುದಿಯಲ್ಲಿತ್ತು. ಅಲ್ಲಿಯೂ ಏಳು ಯಜ್ಞವೇದಿಕೆಗಳನ್ನು ಕಟ್ಟಿಸಿ ಪ್ರತಿಯೊಂದು ವೇದಿಕೆಯಲ್ಲಿ ಒಂದು ಹೋರಿಯನ್ನು ಮತ್ತು ಒಂದು ಟಗರನ್ನು ಸರ್ವಾಂಗಹೋಮವಾಗಿ ಸಮರ್ಪಿಸಿದನು.
15 ಬಿಳಾಮನು ಬಾಲಾಕನಿಗೆ, “ನೀನು ನಿನ್ನ ಯಜ್ಞವೇದಿಕೆಯ ಬಳಿಯಲ್ಲಿರು. ನಾನು ಆ ಕಡೆ ಹೋಗಿ ಯೆಹೋವನನ್ನು ಸಂಧಿಸುವೆನು” ಎಂದು ಹೇಳಿದನು.
16 ಯೆಹೋವನು ಬಿಳಾಮನಿಗೆ ಎದುರಾಗಿ ಬಂದು ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ಹೋಗಿ ಹೀಗೆ ಹೇಳಬೇಕು” ಅಂದನು.
17 ಬಿಳಾಮನು ಬಾಲಾಕನ ಬಳಿಗೆ ಬಂದಾಗ ಅವನು ಇನ್ನೂ ಯಜ್ಞಪೀಠದ ಬಳಿಯಲ್ಲಿ ನಿಂತಿದ್ದನು. ಮೋವಾಬ್ಯರ ಪ್ರಧಾನರು ಅವನ ಸಂಗಡ ಇದ್ದರು. ಬಾಲಾಕನು, “ಯೆಹೋವನು ಏನು ಹೇಳಿದ್ದಾನೆ?” ಎಂದು ಕೇಳಿದನು.
18 ಆಗ ಬಿಳಾಮನು ಈ ಸಂಗತಿಗಳನ್ನು ಹೇಳಿದನು, “ಬಾಲಾಕನೇ, ಎದ್ದುನಿಂತು ನಾನು ಹೇಳುವುದನ್ನು ಕೇಳು. ಚಿಪ್ಪೋರನ ಮಗನಾದ ಬಾಲಾಕನೇ, ಕೇಳು:
19 ದೇವರು ಮನುಷ್ಯನಲ್ಲ; ಆತನು ಸುಳ್ಳಾಡುವುದಿಲ್ಲ. ದೇವರು ಮಾನವನಲ್ಲ; ಆತನ ಉದ್ದೇಶಗಳು ಬದಲಾಗುವುದಿಲ್ಲ. ಯೆಹೋವನು ತಾನು ಮಾಡುತ್ತೇನೆಂದು ಹೇಳಿದರೆ, ಅದನ್ನು ಮಾಡಿಯೇ ಮಾಡುತ್ತಾನೆ. ಯೆಹೋವನು ವಾಗ್ದಾನ ಮಾಡಿದರೆ, ಅದನ್ನು ನೆರವೇರಿಸುತ್ತಾನೆ.
20 ಆ ಜನರನ್ನು ಆಶೀರ್ವದಿಸಬೇಕೆಂದು ಯೆಹೋವನು ನನಗೆ ಆಜ್ಞಾಪಿಸಿದನು; ಯೆಹೋವನು ಅವರನ್ನು ಆಶೀರ್ವದಿಸಿದ್ದಾನೆ. ಅದನ್ನು ಬದಲಾಯಿಸಲು ನನಗೆ ಸಾಧ್ಯವಿಲ್ಲ.
21 ಯಾಕೋಬನ ಜನರಲ್ಲಿ ಯಾವ ದೋಷವೂ ಇಲ್ಲ. ಇಸ್ರೇಲಿನ ಜನರಲ್ಲಿ ಯಾವ ಆಪತ್ತು ಕಾಣುತ್ತಿಲ್ಲ. ಯೆಹೋವನೇ ಅವರ ದೇವರು. ಆತನು ಅವರೊಂದಿಗಿದ್ದಾನೆ.
22 ದೇವರು ಅವರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ಅವರು ಕಾಡು ಕೋಣದಂತೆ ಬಲಿಷ್ಠರಾಗಿದ್ದಾರೆ.
23 ನಿಜವಾಗಿಯೂ ಯಾಕೋಬನ ಜನರ ಮಧ್ಯದಲ್ಲಿ ಶಕುನ ನೋಡುವವರು ಇಲ್ಲ. ಇಸ್ರೇಲಿನಲ್ಲಿ ಕಣಿ ಹೇಳುವವರು ಇಲ್ಲ. ಜನರು, ಯಾಕೋಬನ ಮತ್ತು ಇಸ್ರೇಲರ ಬಗ್ಗೆ ಹೀಗೆ ಹೇಳುವರು: ‘ದೇವರು ಮಾಡಿದ ಮಹಾಕಾರ್ಯಗಳನ್ನು ನೋಡಿರಿ!’
24 ಆ ಜನರು ಪ್ರಾಯಸಿಂಹದಂತೆ ಬಲಿಷ್ಠರು. ಅವರು ಸಿಂಹದಂತೆ ಹೋರಾಡುತ್ತಾರೆ. ಆ ಸಿಂಹ ತನ್ನ ವೈರಿಯನ್ನು ತಿಂದುಬಿಡುವತನಕ ವಿಶ್ರಮಿಸುವುದಿಲ್ಲ. ಆ ಸಿಂಹವು ತನಗೆ ಬಲಿಯಾದವರ ರಕ್ತವನ್ನು ಹೀರುವವರೆಗೆ ಎಂದಿಗೂ ವಿಶ್ರಮಿಸುವುದಿಲ್ಲ.”
25 ಆಗ ಬಾಲಾಕನು ಬಿಳಾಮನಿಗೆ, “ನೀನು ಅವರನ್ನು ಶಪಿಸಲೂ ಬೇಡ, ಆಶೀರ್ವದಿಸಲೂ ಬೇಡ” ಎಂದು ಹೇಳಿದನು.
26 ಅದಕ್ಕೆ ಬಿಳಾಮನು, “ಯೆಹೋವನು ಹೇಳುವುದನ್ನೇ ನಾನು ಮಾಡುತ್ತೇನೆ ಎಂದು ನಾನು ನಿನಗೆ ಮೊದಲೇ ಹೇಳಲಿಲ್ಲವೆ?” ಅಂದನು.
27 ಆಮೇಲೆ ಬಾಲಾಕನು ಬಿಳಾಮನಿಗೆ, “ಸರಿ, ಇನ್ನೊಂದು ಸ್ಥಳಕ್ಕೆ ಬಾ. ಒಂದುವೇಳೆ ನೀನು ಅವರನ್ನು ಶಪಿಸಬೇಕೆಂದು ದೇವರು ಅಪೇಕ್ಷೆಪಡಬಹುದು” ಎಂದು ಹೇಳಿದನು.
28 ಬಾಲಾಕನು ಬಿಳಾಮನನ್ನು “ಪೆಗೋರ್” ಬೆಟ್ಟದ ತುದಿಗೆ ಕರೆದುಕೊಂಡು ಹೋದನು. ಆ ಬೆಟ್ಟದ ಮೇಲಿಂದ ಕೆಳಗಿರುವ ಮರುಭೂಮಿಯು ಕಾಣಿಸುತ್ತದೆ.
29 ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿಯೂ ಏಳು ಯಜ್ಞವೇದಿಕೆಗಳನ್ನು ಕಟ್ಟಿಸಿ ಏಳು ಹೋರಿಗಳನ್ನು ಮತ್ತು ಏಳು ಟಗರುಗಳನ್ನು ಸಿದ್ಧಪಡಿಸು” ಎಂದು ಹೇಳಿದನು.
30 ಬಾಲಾಕನು ಅವನ ಅಪ್ಪಣೆಯ ಮೇರೆಗೆ ಪ್ರತಿಯೊಂದನ್ನು ಮಾಡಿ ಪ್ರತಿಯೊಂದು ಪೀಠದಲ್ಲಿ ಒಂದು ಹೋರಿಯನ್ನು ಮತ್ತು ಒಂದು ಟಗರನ್ನು ಸರ್ವಾಂಗಹೋಮವಾಗಿ ಅರ್ಪಿಸಿದನು.
×

Alert

×