Indian Language Bible Word Collections
Job 34:4
Job Chapters
Job 34 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Job Chapters
Job 34 Verses
1
ಎಲೀಹು ತನ್ನ ಮಾತನ್ನು ಮುಂದುವರಿಸಿದನು:
2
“ಜ್ಞಾನಿಗಳೇ, ನನ್ನ ಮಾತುಗಳನ್ನು ಕೇಳಿರಿ. ಜಾಣರೇ, ನನಗೆ ಗಮನಕೊಡಿರಿ.
3
ಕಿವಿಯು ಮಾತುಗಳನ್ನು ವಿವೇಚಿಸುತ್ತದೆ; ನಾಲಿಗೆಯು ಆಹಾರವನ್ನು ರುಚಿನೋಡುತ್ತದೆ.
4
ಅಂತೆಯೇ ನಾವು ಈ ವಾದಗಳನ್ನು ಪರೀಕ್ಷಿಸಿ ನ್ಯಾಯವಾದದ್ದನ್ನೇ ಆರಿಸಿಕೊಳ್ಳೋಣ.
5
ಯೋಬನು ಹೇಳುವುದೇನೆಂದರೆ, ‘ನಾನು ನಿರಪರಾಧಿ. ದೇವರು ನನಗೆ ನ್ಯಾಯದೊರಕಿಸುತ್ತಿಲ್ಲ.
6
ನಾನು ನೀತಿವಂತನಾಗಿದ್ದರೂ ಅಪರಾಧಿಯೆನಿಸಿಕೊಂಡಿದ್ದೇನೆ. ನಾನು ನಿರ್ದೋಷಿಯಾಗಿದ್ದರೂ ಆತನ ಬಾಣದ ಪೆಟ್ಟು ವಿಪರೀತವಾಗಿದೆ.’
7
“ಯೋಬನಿಗೆ ಸಮಾನನು ಯಾರು? ಅವನು ನೀರು ಕುಡಿದಂತೆ ದೇವರನ್ನು ದೂಷಿಸುತ್ತಾನೆ.
8
ಯೋಬನು ದುಷ್ಟರೊಂದಿಗೆ ಸ್ನೇಹದಿಂದಿರುವನು; ಕೆಟ್ಟವರ ಸಂಗಡ ನಡೆದಾಡುವನು.
9
ಯಾಕೆಂದರೆ, ‘ದೇವರಿಗೆ ವಿಧೇಯನಾಗಿರುವವನಿಗೆ ಅದರಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಅವನೇ ಹೇಳಿದ್ದಾನೆ.
10
“ಆದ್ದರಿಂದ ಬುದ್ಧಿವಂತರೇ, ನನ್ನ ಮಾತುಗಳಿಗೆ ಕಿವಿಗೊಡಿ. ದೇವರು ಕೆಟ್ಟದ್ದನ್ನು ಎಂದಿಗೂ ಮಾಡುವುದಿಲ್ಲ. ಸರ್ವಶಕ್ತನಾದ ದೇವರು ಎಂದಿಗೂ ತಪ್ಪು ಮಾಡುವುದಿಲ್ಲ.
11
ಆತನು ಮನುಷ್ಯನಿಗೆ ಅವನ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡುವನು. ಪ್ರತಿಯೊಬ್ಬನು ತನ್ನ ನಡತೆಗೆ ತಕ್ಕಂತೆ ದೇವರಿಂದ ಹೊಂದಿಕೊಳ್ಳುವನು.
12
ಹೌದು, ನಿಜ, ದೇವರು ಕೆಟ್ಟದ್ದನ್ನು ಮಾಡುವುದಿಲ್ಲ; ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕು ಮಾಡುವುದಿಲ್ಲ.
13
ಭೂಲೋಕಕ್ಕೆ ದೇವರನ್ನು ಅಧಿಪತಿಯನ್ನಾಗಿ ಯಾರು ಆರಿಸಿಕೊಂಡರು? ಇಡೀ ಪ್ರಪಂಚದ ಮೇಲಿನ ಜವಾಬ್ದಾರಿಯನ್ನು ದೇವರಿಗೆ ಯಾರು ಕೊಟ್ಟರು?
14
ಆತನು ಸ್ವಾರ್ಥದಲ್ಲಿ ಮನಸ್ಸಿಟ್ಟು, ತನ್ನ ಆತ್ಮವನ್ನೂ ಜೀವದ ಉಸಿರನ್ನೂ ಜನರಿಂದ ತೆಗೆದುಕೊಳ್ಳುವುದಾದರೆ,
15
ಆಗ ಭೂಮಿಯ ಮೇಲಿರುವ ಎಲ್ಲಾ ಜನರು ಸತ್ತುಹೋಗಿ ಧೂಳಾಗುವರು.
16
“ನೀನು ವಿವೇಕಿಯಾಗಿದ್ದರೆ, ನನ್ನ ಮಾತುಗಳಿಗೆ ಕಿವಿಗೊಡು.
17
ನ್ಯಾಯವನ್ನು ದ್ವೇಷಿಸುವವನು ಅಧಿಪತಿಯಾಗುವನೇ? ಯೋಬನೇ, ಬಲಿಷ್ಠನೂ ಒಳ್ಳೆಯವನೂ ಆಗಿರುವ ದೇವರನ್ನು ದೋಷಿಯೆಂಬುದಾಗಿ ತೀರ್ಪುನೀಡಲು ನಿನಗೆ ಸಾಧ್ಯವೇ?
18
‘ನೀವು ಅಯೋಗ್ಯರು!’ ಎಂದು ರಾಜರುಗಳಿಗೆ ಹೇಳುವವನು ದೇವರೊಬ್ಬನೇ. ‘ನೀವು ಕೆಡುಕರು!’ ಎಂದು ನಾಯಕರುಗಳಿಗೆ ಹೇಳುವವನು ದೇವರೇ.
19
ದೇವರಲ್ಲಿ ಸಾಮಾನ್ಯರು ಮತ್ತು ಪ್ರಮುಖರು ಎಂದಾಗಲಿ ಬಡವರು ಮತ್ತು ಶ್ರೀಮಂತರು ಎಂದಾಗಲಿ ಭೇದಭಾವವಿಲ್ಲ. ಯಾಕೆಂದರೆ ಎಲ್ಲರನ್ನೂ ಸೃಷ್ಟಿಮಾಡಿದವನು ದೇವರೇ.
20
ಒಬ್ಬನು ಕ್ಷಣಮಾತ್ರದೊಳಗೆ ಮಧ್ಯರಾತ್ರಿಯಲ್ಲಿ ಸಾಯಬಹುದು. ಜನರು ಕಾಯಿಲೆಯಿಂದ ಸಾಯಬಹುದು. ದುಷ್ಟರು ಸಹ ಯಾವುದೇ ಕಾರಣವಿಲ್ಲದೆ ಸಾಯಬಹುದು.
21
“ಮನುಷ್ಯರ ಕಾರ್ಯಗಳನ್ನು ದೇವರು ಗಮನಿಸುತ್ತಾನೆ. ಅವನ ಪ್ರತಿಯೊಂದು ಹೆಜ್ಜೆ ಆತನಿಗೆ ಗೊತ್ತಿದೆ.
22
ದುಷ್ಟನನ್ನು ದೇವರಿಂದ ಮರೆಮಾಡಬಲ್ಲ ಕತ್ತಲೆಯ ಸ್ಥಳವಾಗಲಿ ಕಾರ್ಗತ್ತಲೆಯ ಸ್ಥಳವಾಗಲಿ ಇಲ್ಲವೇ ಇಲ್ಲ.
23
ದೇವರು ಮನುಷ್ಯರನ್ನು ಪರೀಕ್ಷಿಸಲು ಸಮಯವನ್ನು ಗೊತ್ತು ಪಡಿಸಬೇಕಿಲ್ಲ; ನ್ಯಾಯತೀರ್ಪು ನೀಡಲು ಅವರನ್ನು ತನ್ನ ಮುಂದೆ ಕರೆಸಬೇಕಿಲ್ಲ.
24
ಬಲಿಷ್ಠರು ತಪ್ಪು ಮಾಡಿದಾಗ ದೇವರು ಅವರನ್ನು ವಿಚಾರಿಸದೆ ನಾಶಮಾಡಿ ಅವರ ಸ್ಥಳದಲ್ಲಿ ಬೇರೆಯವರನ್ನು ನೆಲೆಗೊಳಿಸುವನು.
25
ಹೀಗೆ ಆತನು ಅವರ ಕಾರ್ಯಗಳನ್ನು ಲಕ್ಷಿಸಿ, ರಾತ್ರಿಯಲ್ಲಿ ಅವರನ್ನು ಸೋಲಿಸಿ ನಾಶಮಾಡುವನು.
26
ದೇವರು ದುಷ್ಟರನ್ನು ಅವರ ದುಷ್ಕೃತ್ಯಗಳ ನಿಮಿತ್ತ ಬಹಿರಂಗವಾಗಿ ದಂಡಿಸುವನು.
27
ಯಾಕೆಂದರೆ ದುಷ್ಟರು ದೇವರಿಗೆ ವಿಧೇಯರಾಗಲಿಲ್ಲ; ಆತನ ಮಾರ್ಗಗಳನ್ನು ಲಕ್ಷಿಸಲಿಲ್ಲ.
28
ಹೀಗೆ ಬಡವರ ಗೋಳಾಟವು ದೇವರಿಗೆ ಮುಟ್ಟುವಂತೆ ದುಷ್ಟರು ಮಾಡಿದರು. ಆತನು ದಿಕ್ಕಿಲ್ಲದವರ ಕೂಗನ್ನು ಕೇಳಿದನು.
29
ಆದರೆ ದೇವರು ಬಡಜನರಿಗೆ ಸಹಾಯಮಾಡದಿರಲು ನಿರ್ಧರಿಸಿದರೆ, ಆತನನ್ನು ದೋಷಿಯೆಂದು ತೀರ್ಪುಮಾಡುವವನು ಯಾರು? ದೇವರು ತನ್ನ ಮುಖವನ್ನು ಅವರಿಗೆ ಮರೆಮಾಡಿಕೊಂಡರೆ ಆತನನ್ನು ನೋಡಬಲ್ಲವರು ಯಾರು? ಮನುಷ್ಯರನ್ನೂ ಜನಾಂಗಗಳನ್ನೂ ಆಳುವವನು ದೇವರೇ.
30
ದೈವಹೀನನಾದ ರಾಜನು ಜನರನ್ನು ನಾಶನಕ್ಕೆ ನಡೆಸುವುದಾದರೆ ದೇವರು ಅವನನ್ನು ಪದಚ್ಯುತಿಗೊಳಿಸುವನು.
31
“ಮನುಷ್ಯನು ದೇವರಿಗೆ, ‘ನಾನು ದೋಷಿ, ನಾನು ಇನ್ನೆಂದಿಗೂ ಪಾಪ ಮಾಡುವುದಿಲ್ಲ.
32
ದೇವರೇ, ನೀನು ನನಗೆ ಅಗೋಚರವಾಗಿದ್ದರೂ ನೀತಿಮಾರ್ಗವನ್ನು ಬೋಧಿಸು, ನಾನು ತಪ್ಪು ಮಾಡಿದ್ದರೆ ಅದನ್ನು ಮತ್ತೆ ಮಾಡುವುದಿಲ್ಲ’ ಎಂದು ಹೇಳಬಹುದು.
33
ಯೋಬನೇ, ನೀನು ಮಾರ್ಪಾಟಾಗದೆ ದೇವರಿಂದ ಪ್ರತಿಫಲವನ್ನು ಅಪೇಕ್ಷಿಸುವುದೇಕೆ? ಯೋಬನೇ, ಇದು ನಿನ್ನ ನಿರ್ಧಾರ, ನನ್ನದಲ್ಲ. ನಿನ್ನ ಆಲೋಚನೆಯನ್ನು ನನಗೆ ತಿಳಿಸು.
34
ಜ್ಞಾನಿಗಳೂ ಬುದ್ಧಿವಂತರೂ ನನ್ನ ಮಾತುಗಳಿಗೆ ಕಿವಿಗೊಟ್ಟು,
35
‘ಯೋಬನು ತಿಳುವಳಿಕೆಯಿಲ್ಲದೆ ಮಾತಾಡುತ್ತಾನೆ. ಅವನ ಮಾತುಗಳಿಗೆ ಅರ್ಥವೇ ಇಲ್ಲ!’
36
ಯೋಬನಿಗೆ ಪರಿಶೋಧನೆ ನಿರಂತರವಾಗಿದ್ದರೆ ಒಳ್ಳೆಯದು. ಯಾಕೆಂದರೆ ಅವನು ದುಷ್ಟನಂತೆ ಉತ್ತರಿಸುತ್ತಿದ್ದಾನೆ.
37
ಅವನು ತನ್ನ ಪಾಪಕ್ಕೆ ಇನ್ನೂ ಕೂಡಿಸಿಕೊಳ್ಳುತ್ತಿದ್ದಾನೆ; ನಮ್ಮ ಮಧ್ಯದಲ್ಲಿ ತನ್ನ ದುಷ್ಟತನವನ್ನು ಅಧಿಕಮಾಡಿಕೊಳ್ಳುತ್ತಿದ್ದಾನೆ; ದೇವದ್ರೋಹವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ” ಎಂದು ನನಗೆ ಹೇಳುವರು.