1
|
ಆಗ ಯೋಬನು ಹೀಗೆ ಉತ್ತರಿಸಿದನು: |
2
|
“ನಾನು ಈ ಸಂಗತಿಗಳನ್ನು ಮೊದಲೇ ಕೇಳಿದ್ದೇನೆ, ನೀವೆಲ್ಲರೂ ಕೀಟಲೆ ಮಾಡುವವರೇ ಹೊರತು ಸಂತೈಸುವವರಲ್ಲ. |
3
|
ನಿಮ್ಮ ಒಣ ಮಾತುಗಳಿಗೆ ಕೊನೆಯಿಲ್ಲವೇ? ನೀವು ವಾದ ಮಾಡುತ್ತಲೇ ಇರುವುದೇಕೆ? |
4
|
ನಿಮಗೆ ನನ್ನ ಸ್ಥಿತಿಯು ಬಂದಿದ್ದರೆ ನೀವು ಹೇಳಿದ್ದನ್ನೇ ನಾನು ಹೇಳಬಹುದಾಗಿತ್ತು. ನಿಮಗೆ ವಿರುದ್ಧವಾಗಿ ಜ್ಞಾನದ ಮಾತುಗಳನ್ನು ಹೇಳಿ ನಿಮ್ಮ ವಿಷಯದಲ್ಲಿ ತಲೆಯಾಡಿಸಬಹುದಾಗಿತ್ತು. |
5
|
ಆದರೆ ನಾನು ನಿಮ್ಮನ್ನು ನನ್ನ ಮಾತುಗಳಿಂದ ಪ್ರೋತ್ಸಾಹಿಸಿ ನಿಮ್ಮಲ್ಲಿ ನಿರೀಕ್ಷೆಯನ್ನು ಹುಟ್ಟಿಸಬಹುದಾಗಿತ್ತು. |
6
|
“ಆದರೆ ನನ್ನ ಯಾವ ಮಾತೂ ನನ್ನ ನೋವನ್ನು ನಿವಾರಣೆ ಮಾಡಲಾರದು; ಮೌನವಾಗಿದ್ದರೂ ಅದರಿಂದ ಪ್ರಯೋಜನವೇನೂ ಇಲ್ಲ. |
7
|
ದೇವರೇ, ನೀನು ನನ್ನನ್ನು ನಿಶ್ಯಕ್ತನನ್ನಾಗಿ ಮಾಡಿರುವೆ. ನನ್ನ ಇಡೀ ಕುಟುಂಬವನ್ನು ನಾಶ ಮಾಡಿರುವೆ. |
8
|
ನೀನು ನನ್ನನ್ನು ಮುದುಡಿಹಾಕಿರುವುದು ಎಲ್ಲರಿಗೂ ಕಾಣುತ್ತಿದೆ. ನನ್ನ ದೇಹ ರೋಗಗ್ರಸ್ತವಾಗಿದೆ; ನಾನು ವಿಕಾರವಾಗಿ ಕಾಣುತ್ತಿರುವೆ. ಜನರು ನನ್ನನ್ನು ಅಪರಾಧಿಯೆಂದು ಭಾವಿಸಿಕೊಂಡಿದ್ದಾರೆ. |
9
|
“ದೇವರು ಕೋಪದಿಂದ ನನ್ನ ದೇಹವನ್ನು ಸೀಳಿ ಹಾಕುತ್ತಿದ್ದಾನೆ. ಆತನು ನನ್ನ ಮೇಲೆ ಹಲ್ಲು ಕಡಿಯುತ್ತಿದ್ದಾನೆ. ನನ್ನ ಶತ್ರುವು ದ್ವೇಷದಿಂದ ನನ್ನನ್ನು ನೋಡುತ್ತಿದ್ದಾನೆ. |
10
|
ಜನರು ನನ್ನ ಸುತ್ತಲೂ ಗುಂಪುಕೂಡಿದ್ದಾರೆ; ಅವರು ನನ್ನ ಮುಖಕ್ಕೆ ಹೊಡೆದು ಗೇಲಿ ಮಾಡುತ್ತಿದ್ದಾರೆ. |
11
|
ದೇವರು ನನ್ನನ್ನು ದುಷ್ಟರಿಗೆ ಕೊಟ್ಟುಬಿಟ್ಟಿದ್ದಾನೆ. ನನಗೆ ಕೇಡು ಮಾಡಲು ಕೆಡುಕರಿಗೆ ಬಿಟ್ಟು ಕೊಟ್ಟಿದ್ದಾನೆ. |
12
|
ನಾನು ಸುಖದಿಂದಿದ್ದಾಗ ದೇವರು ನನ್ನನ್ನು ಜಜ್ಜಿ ಹಾಕಿದನು; ನನ್ನ ಕತ್ತು ಹಿಡಿದು ನನ್ನನ್ನು ಚೂರುಚೂರು ಮಾಡಿದನು! ದೇವರು ನನ್ನನ್ನು ತನ್ನ ಗುರಿ ಅಭ್ಯಾಸಕ್ಕಾಗಿ ಉಪಯೋಗಿಸುತ್ತಿದ್ದಾನೆ. |
13
|
ಆತನ ಬಿಲ್ಲುಗಾರರು ನನ್ನ ಸುತ್ತಲೆಲ್ಲಾ ಇದ್ದಾರೆ. ಆತನು ನಿಷ್ಕರುಣೆಯಿಂದ ನನ್ನ ಅಂತರಂಗಗಳಿಗೆ ಬಾಣವನ್ನು ಎಸೆಯುತ್ತಾನೆ; ನೆಲದ ಮೇಲೆ ನನ್ನ ಪಿತ್ತವನ್ನು ಸುರಿಸುತ್ತಾನೆ. |
14
|
ನನ್ನ ಮೇಲೆ ಎಡಬಿಡದೆ ಆಕ್ರಮಣಮಾಡಿ ಯುದ್ಧ ವೀರನಂತೆ ನನ್ನ ಮೇಲೆ ಓಡಿಬರುವನು. |
15
|
“ನಾನು ಬಹು ದುಃಖಿತನಾಗಿದ್ದೇನೆ; ಗೋಣಿ ತಟ್ಟನ್ನು ಸುತ್ತಿಕೊಂಡಿದ್ದೇನೆ; ಸೋತುಹೋದೆನೆಂದು ಧೂಳಿನಲ್ಲಿಯೂ ಬೂದಿಯಲ್ಲಿಯೂ ಕುಳಿತುಕೊಂಡಿದ್ದೇನೆ. |
16
|
ಅತ್ತತ್ತು ನನ್ನ ಮುಖವು ಕೆಂಪಾಗಿದೆ, ನನ್ನ ಕಣ್ಣುಗಳ ಸುತ್ತಲೂ ಸುಕ್ಕುಗಟ್ಟಿ ಕಡುಕಪ್ಪಾಗಿದೆ. |
17
|
ನಾನು ಯಾರೊಡನೆಯೂ ಕ್ರೂರವಾಗಿ ವರ್ತಿಸಲಿಲ್ಲ. ನನ್ನ ವಿಜ್ಞಾಪನೆಯು ನಿರ್ಮಲವಾಗಿತ್ತು. |
18
|
“ಭೂಮಿಯೇ, ನನಗಾಗಿರುವ ಕೆಡುಕುಗಳನ್ನು ಮರೆ ಮಾಡಬೇಡ. ನ್ಯಾಯಕ್ಕಾಗಿ ನಾನಿಡುವ ಮೊರೆ ನಿಂತು ಹೋಗಲು ಅವಕಾಶಕೊಡಬೇಡ. |
19
|
“ಈಗಲೂ ಸಹ, ನನಗೆ ಸಾಕ್ಷಿನೀಡುವಾತನು ಪರಲೋಕದಲ್ಲಿದ್ದಾನೆ. ನನಗೆ ಬೆಂಬಲ ನೀಡುವಾತನು ಮೇಲೋಕದಲ್ಲಿದ್ದಾನೆ. |
20
|
ನನ್ನ ಕಣ್ಣೀರೇ ನನ್ನ ಪ್ರತಿನಿಧಿಯಾಗಿದೆ. ನನ್ನ ಕಣ್ಣು ದೇವರ ಉತ್ತರಕ್ಕಾಗಿ ಆಕಾಂಕ್ಷೆಯಿಂದ ಎದುರುನೋಡುತ್ತಿದೆ. |
21
|
ಒಬ್ಬನು ತನ್ನ ಸ್ನೇಹಿತನಿಗಾಗಿ ಬೇಡಿಕೊಳ್ಳುವಂತೆ ನನ್ನ ಕಣ್ಣೀರು ನನ್ನ ಪರವಾಗಿ ದೇವರ ಮುಂದೆ ವಾದಮಾಡುತ್ತದೆ. |
22
|
“ಯಾಕಂದರೆ ನಾನು ಮರಳಿ ಬರಲಾಗದ ಸ್ಥಳಕ್ಕೆ ಇನ್ನು ಕೆಲವೇ ವರ್ಷಗಳಲ್ಲಿ ಹೊರಟು ಹೋಗುವೆನು. |
Job 16:8 Kannada Language Bible Words basic statistical display
COMING SOON ...