1
|
ಎರಡು ವರ್ಷಗಳ ನಂತರ ಫರೋಹನಿಗೆ ಒಂದು ಕನಸಾಯಿತು. ಫರೋಹನು ಕನಸಿನಲ್ಲಿ ನೈಲ್ ನದಿಯ ತೀರದಲ್ಲಿ ನಿಂತಿದ್ದನು. |
2
|
ಆಗ ಕೊಬ್ಬಿದ ಮತ್ತು ಲಕ್ಷಣವಾಗಿದ್ದ ಏಳು ಹಸುಗಳು ನದಿಯೊಳಗಿಂದ ಬಂದು ಹುಲ್ಲನ್ನು ಮೇಯುತ್ತಿದ್ದವು. |
3
|
ಬಳಿಕ ಬಡಕಲಾಗಿದ್ದ ಮತ್ತು ಕುರೂಪವಾಗಿದ್ದ ಏಳು ಹಸುಗಳು ನದಿಯೊಳಗಿಂದ ಬಂದು ಲಕ್ಷಣವಾಗಿದ್ದ ಏಳು ಹಸುಗಳ ಪಕ್ಕದಲ್ಲಿ ನಿಂತುಕೊಂಡವು. |
4
|
ಕುರೂಪವಾಗಿದ್ದ ಏಳು ಹಸುಗಳು ಲಕ್ಷಣವಾಗಿದ್ದ ಏಳು ಹಸುಗಳನ್ನು ತಿಂದುಬಿಟ್ಟವು. ಆಗ ಫರೋಹನಿಗೆ ಎಚ್ಚರವಾಯಿತು. |
5
|
ಫರೋಹನು ಮತ್ತೆ ಮಲಗಿಕೊಂಡನು. ಅವನಿಗೆ ಎರಡನೆಯ ಕನಸಾಯಿತು. ಪುಷ್ಟಿಯುಳ್ಳ ಏಳು ತೆನೆಗಳು ಒಂದೇ ಗಿಡದಲ್ಲಿ ಹುಟ್ಟಿದವು. |
6
|
ಆಮೇಲೆ ಅದೇ ಸಸಿಯ ಮೇಲೆ ಬಿಸಿಗಾಳಿಯಿಂದ ಬತ್ತಿಹೋಗಿದ್ದ ಏಳು ತೆನೆಗಳು ಹುಟ್ಟಿದವು. |
7
|
ಬತ್ತಿಹೋಗಿದ್ದ ತೆನೆಗಳು ಪುಷ್ಟಿಯಾಗಿದ್ದ ತೆನೆಗಳನ್ನು ತಿಂದುಬಿಟ್ಟವು. ಫರೋಹನು ಎಚ್ಚರಗೊಂಡಾಗ ಅದು ಕೇವಲ ಕನಸೆಂದು ತಿಳಿದುಕೊಂಡನು. |
8
|
ಮರುದಿನ ಮುಂಜಾನೆ ಈ ಕನಸುಗಳ ಬಗ್ಗೆ ತುಂಬ ಚಿಂತೆಗೊಳಗಾಗಿ ಈಜಿಪ್ಟಿನಲ್ಲಿದ್ದ ಎಲ್ಲಾ ಮಂತ್ರಗಾರರನ್ನೂ ಎಲ್ಲಾ ವಿದ್ವಾಂಸರನ್ನೂ ಕರೆಯಿಸಿ ಕನಸುಗಳನ್ನು ತಿಳಿಸಿದನು. ಆದರೆ ಅವರಲ್ಲಿ ಯಾರಿಗೂ ಕನಸುಗಳ ಅರ್ಥವನ್ನು ತಿಳಿಸುವುದಕ್ಕಾಗಲಿ ವಿವರಿಸುವುದಕ್ಕಾಗಲಿ ಆಗಲಿಲ್ಲ. |
9
|
ಆಗ ಪಾನದಾಯಕನು ಯೋಸೇಫನನ್ನು ಜ್ಞಾಪಿಸಿಕೊಂಡು ಫರೋಹನಿಗೆ, “ನನಗೆ ಸಂಭವಿಸಿದ್ದು ನನ್ನ ನೆನಪಿಗೆ ಬರುತ್ತಿದೆ. |
10
|
ನೀವು ನನ್ನ ಮೇಲೆ ಮತ್ತು ಭಕ್ಷ್ಯಗಾರನ ಮೇಲೆ ಕೋಪಗೊಂಡು ನಮ್ಮನ್ನು ಸೆರೆಮನೆಗೆ ಹಾಕಿಸಿದಿರಿ. |
11
|
ಒಂದು ರಾತ್ರಿ ನಮ್ಮಿಬ್ಬರಿಗೂ ಕನಸಾಯಿತು. ಆ ಕನಸುಗಳಿಗೆ ಬೇರೆಬೇರೆಯ ಅರ್ಥಗಳಿದ್ದವು. |
12
|
ನಮ್ಮ ಜೊತೆಯಲ್ಲಿ ಒಬ್ಬ ಇಬ್ರಿಯ ಯುವಕನಿದ್ದನು. ಅವನು ಕಾವಲುಗಾರರ ಅಧಿಕಾರಿಯ ಸೇವಕನಾಗಿದ್ದನು. ನಾವು ಅವನಿಗೆ ನಮ್ಮ ಕನಸುಗಳನ್ನು ತಿಳಿಸಿದೆವು. ಅವನು ನಮಗೆ ಅವುಗಳನ್ನು ವಿವರಿಸಿ ನಮ್ಮ ಕನಸಿನ ಅರ್ಥವನ್ನು ತಿಳಿಸಿದನು. |
13
|
ಅವನು ಹೇಳಿದ ಅರ್ಥಕ್ಕೆ ಸರಿಯಾಗಿ ನನಗೆ ಆಯಿತು; ಮೊದಲಿನ ಉದ್ಯೋಗವು ದೊರೆಯಿತು; ಅವನು ಭಕ್ಷ್ಯಗಾರನನ್ನು ಕುರಿತು ತಿಳಿಸಿದಂತೆಯೇ ಅವನಿಗೆ ಮರಣದಂಡನೆ ಆಯಿತು” ಎಂದು ಹೇಳಿದನು. |
14
|
ಆಗ ಫರೋಹನು ಯೋಸೇಫನನ್ನು ಸೆರೆಮನೆಯಿಂದ ಕರೆಸಿದನು. ಯೋಸೇಫನು ಕ್ಷೌರಮಾಡಿಕೊಂಡು ಶುದ್ಧವಾದ ಬಟ್ಟೆಗಳನ್ನು ಹಾಕಿಕೊಂಡು ಹೋಗಿ ಫರೋಹನ ಮುಂದೆ ನಿಂತುಕೊಂಡನು. |
15
|
ಫರೋಹನು ಯೋಸೇಫನಿಗೆ, “ನನಗೆ ಒಂದು ಕನಸಾಯಿತು. ಆದರೆ ಅದರ ಅರ್ಥವನ್ನು ತಿಳಿಸಬಲ್ಲವರು ಇಲ್ಲಿ ಯಾರೂ ಇಲ್ಲ. ನೀನು ಕನಸುಗಳ ಅರ್ಥವನ್ನು ಹೇಳಬಲ್ಲೆ ಎಂಬುದಾಗಿ ನಿನ್ನ ಬಗ್ಗೆ ಕೇಳಿದೆ” ಎಂದು ಹೇಳಿದನು. |
16
|
ಯೋಸೇಫನು, “ಕನಸುಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ನನ್ನಲ್ಲಿಲ್ಲ. ಆ ಶಕ್ತಿಯನ್ನು ಹೊಂದಿರುವವನು ದೇವರೊಬ್ಬನೆ. ಆದರೆ ದೇವರು ಫರೋಹನಿಗೋಸ್ಕರ ಅರ್ಥವನ್ನು ತಿಳಿಸುವನು” ಎಂದು ಹೇಳಿದನು. |
17
|
ಆಗ ಫರೋಹನು ಯೋಸೇಫನಿಗೆ, “ನನ್ನ ಕನಸಿನಲ್ಲಿ, ನಾನು ನೈಲ್ ನದಿಯ ತೀರದಲ್ಲಿ ನಿಂತುಕೊಂಡಿದ್ದೆನು. |
18
|
ಕೊಬ್ಬಿದ ಮತ್ತು ಲಕ್ಷಣವಾಗಿದ್ದ ಏಳು ಹಸುಗಳು ನದಿಯೊಳಗಿಂದ ಬಂದು ಹುಲ್ಲನ್ನು ಮೇಯುತ್ತಿದ್ದವು. |
19
|
ಆಗ ಬಡಕಲಾಗಿದ್ದ ಮತ್ತು ಕುರೂಪವಾಗಿದ್ದ ಏಳು ಹಸುಗಳು ನದಿಯೊಳಗಿಂದ ಬಂದು ನಿಂತುಕೊಂಡವು. ಅಂಥಾ ಬಡಕಲು ಹಸುಗಳನ್ನು ನಾನು ಈಜಿಪ್ಟಿನಲ್ಲಿ ಎಂದೂ ನೋಡಿಲ್ಲ. |
20
|
ಬಡಕಲಾಗಿದ್ದ ಆ ಹಸುಗಳು ಮೊದಲು ಬಂದ ಲಕ್ಷಣವಾದ ಏಳು ಹಸುಗಳನ್ನು ತಿಂದುಬಿಟ್ಟವು. |
21
|
ಅವು ಏಳು ಹಸುಗಳನ್ನು ತಿಂದ ಮೇಲೆಯೂ ತಿಂದಂತೆ ಕಾಣುತ್ತಿರಲಿಲ್ಲ; ಅವು ಮೊದಲಿನಂತೆಯೇ ಬಡಕಲಾಗಿದ್ದವು ಮತ್ತು ಕುರೂಪವಾಗಿದ್ದವು. ಆಗ ನನಗೆ ಎಚ್ಚರವಾಯಿತು. |
22
|
“ನನಗಾದ ಎರಡನೆಯ ಕನಸು ಇಂತಿದೆ: ಒಂದೇ ಗಿಡದಲ್ಲಿ ಪುಷ್ಟಿಯಾದ ಏಳು ತೆನೆಗಳು ಹುಟ್ಟಿದವು. |
23
|
ಬಳಿಕ ಅದೇ ಗಿಡದಲ್ಲಿ ಮೇಲೆ ಬಿಸಿಗಾಳಿಯಿಂದ ಬತ್ತಿ ಹೋಗಿದ್ದ ಏಳು ತೆನೆಗಳು ಹುಟ್ಟಿದವು. |
24
|
ಬತ್ತಿಹೋಗಿದ್ದ ತೆನೆಗಳು ಪುಷ್ಟಿಯಾದ ಏಳು ತೆನೆಗಳನ್ನು ತಿಂದುಬಿಟ್ಟವು. “ನಾನು ಈ ಕನಸುಗಳನ್ನು ಮಂತ್ರಗಾರರಿಗೂ ವಿದ್ವಾಂಸರಿಗೂ ತಿಳಿಸಿದೆನು. ಆದರೆ ಅವರಲ್ಲಿ ಯಾರೂ ನನಗೆ ಈ ಕನಸುಗಳ ಅರ್ಥವನ್ನು ವಿವರಿಸಲಾಗಲಿಲ್ಲ. ಅವುಗಳ ಅರ್ಥವೇನು?” ಎಂದು ಕೇಳಿದನು. |
25
|
ಆಗ ಯೋಸೇಫನು ಫರೋಹನಿಗೆ, “ಆ ಎರಡು ಕನಸುಗಳ ಅರ್ಥವು ಒಂದೇ. ಮುಂದೆ ನಡೆಯಲಿರುವುದನ್ನು ದೇವರು ತಮಗೆ ತಿಳಿಸಿದ್ದಾನೆ. |
26
|
ಒಳ್ಳೆಯ ಏಳು ಹಸುಗಳೇ ಏಳು ವರ್ಷಗಳು. ಒಳ್ಳೆಯ ಏಳು ತೆನೆಗಳೇ ಏಳು ವರ್ಷಗಳು. ಎರಡು ಕನಸುಗಳೂ ಒಂದೇ ಅರ್ಥವನ್ನು ಹೊಂದಿವೆ. |
27
|
ಬಡಕಲಾದ ಮತ್ತು ಕುರೂಪವಾದ ಏಳು ಹಸುಗಳು ಮತ್ತು ಕೆಟ್ಟುಹೋದ ಕಾಳಿನ ಏಳು ತೆನೆಗಳು, ದೇಶಕ್ಕೆ ಬರುವ ಏಳು ವರ್ಷಗಳ ಬರಗಾಲವನ್ನು ಸೂಚಿಸುತ್ತವೆ. ಈ ಏಳು ವರ್ಷಗಳು ಒಳ್ಳೆಯ ವರ್ಷಗಳ ನಂತರ ಬರುತ್ತವೆ. |
28
|
ಮುಂದೆ ನಡೆಯಲಿರುವುದನ್ನು ದೇವರು ನಿಮಗೆ ತಿಳಿಸಿದ್ದಾನೆ. ನಾನು ಹೇಳಿದಂತೆಯೇ ಸಂಭವಿಸುವುದು. |
29
|
ನಿಮಗೆ ಏಳು ವರ್ಷಗಳ ಕಾಲ ಒಳ್ಳೆಯ ಬೆಳೆಯಾಗುವುದು; ಈಜಿಪ್ಟ್ ದೇಶದಲ್ಲೆಲ್ಲಾ ಊಟಕ್ಕೆ ಬೇಕಾದಷ್ಟು ಆಹಾರವಿರುವುದು. |
30
|
ಆದರೆ ಆ ಏಳು ವರ್ಷಗಳಾದ ಮೇಲೆ ದೇಶದಲ್ಲೆಲ್ಲಾ ಏಳು ವರ್ಷಗಳವರೆಗೆ ಬರಗಾಲವಿರುವುದು. ಆಗ ಈಜಿಪ್ಟಿನ ಜನರು ತಾವು ಮೊದಲು ಬೆಳೆದ ಆಹಾರವನ್ನೆಲ್ಲಾ ಮರೆತುಬಿಡುವರು. ಈ ಕ್ಷಾಮವು ದೇಶವನ್ನು ನಾಶಮಾಡುವುದು. |
31
|
ಮೊದಲಿನ ಸಮೃದ್ಧಿಯ ಗುರುತೇ ಜನರಿಗೆ ಕಾಣಸಿಗದು. |
32
|
“ಫರೋಹನೇ, ಒಂದೇ ವಿಷಯದ ಮೇಲೆ ಎರಡು ಕನಸುಗಳಾಗಿರುವುದರಿಂದ ದೇವರು ಇದನ್ನು ನಿಶ್ಚಯವಾಗಿಯೂ ಬೇಗನೆ ಬರಮಾಡಲಿದ್ದಾನೆ. |
33
|
ಆದ್ದರಿಂದ ತಾವು ತುಂಬ ಬುದ್ಧಿವಂತನೂ ವಿವೇಕಿಯೂ ಆಗಿರುವ ಒಬ್ಬನನ್ನು ಆರಿಸಿಕೊಂಡು ಅವನನ್ನು ಈಜಿಪ್ಟ್ ದೇಶದ ಮೇಲೆ ಆಡಳಿತಾಧಿಕಾರಿಯನ್ನಾಗಿ ನೇಮಿಸಬೇಕು. |
34
|
ಅಲ್ಲದೆ ಜನರಿಂದ ಆಹಾರವನ್ನು ಶೇಖರಿಸುವುದಕ್ಕಾಗಿ ತಾವು ಸಂಗ್ರಹಕರನ್ನು ನೇಮಿಸಿ ಒಳ್ಳೆಯ ಏಳು ವರ್ಷಗಳಲ್ಲಿ ಪ್ರತಿಯೊಬ್ಬ ಬೆಳೆಗಾರನಿಂದಲೂ ಬೆಳೆಯ ಐದನೆ ಒಂದು ಭಾಗವನ್ನು ಕಂದಾಯ ರೂಪದಲ್ಲಿ ವಸೂಲಿ ಮಾಡಬೇಕು. |
35
|
ಸಂಗ್ರಹಕಾರರ ಮೂಲಕ ಆಹಾರ ಪದಾರ್ಥಗಳನ್ನೂ ದವಸಧಾನ್ಯಗಳನ್ನೂ ಶೇಖರಿಸಿ ನಿಮ್ಮ ಉಗ್ರಾಣಗಳಲ್ಲಿಟ್ಟು ನೋಡಿಕೊಳ್ಳಬೇಕು. |
36
|
ಉಗ್ರಾಣಗಳಲ್ಲಿ ಸಾಕಷ್ಟು ಆಹಾರವಿರುವುದರಿಂದ ಈಜಿಪ್ಟಿನವರು ಬರಗಾಲದ ಏಳು ವರ್ಷಗಳಲ್ಲಿ ಆಹಾರವಿಲ್ಲದೆ ಸಾಯುವುದಿಲ್ಲ” ಎಂದು ಹೇಳಿದನು. |
37
|
ಇದು ಫರೋಹನಿಗೂ ಅವನ ಎಲ್ಲಾ ಸೇವಕರಿಗೂ ಒಳ್ಳೆಯದಾಗಿ ಕಂಡುಬಂತು. |
38
|
ಫರೋಹನು ತನ್ನ ಸೇವಕರಿಗೆ, “ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಯೋಸೇಫನಿಗಿಂತಲೂ ಉತ್ತಮನಾದ ವ್ಯಕ್ತಿಯನ್ನು ಕಂಡುಕೊಳ್ಳಲು ಸಾಧ್ಯವೇ? ದೇವರಾತ್ಮನೇ ಇವನ ಸಂಗಡವಿದ್ದಾನೆ” ಎಂದು ಹೇಳಿದನು. |
39
|
ಫರೋಹನು ಯೋಸೇಫನಿಗೆ, “ದೇವರು ನಿನಗೆ ಈ ಎಲ್ಲಾ ವಿಷಯಗಳನ್ನು ತೋರಿಸಿರುವುದರಿಂದ ನಿನಗಿಂತ ಬುದ್ಧಿವಂತನೂ ವಿವೇಕಿಯೂ ಇಲ್ಲವೇ ಇಲ್ಲ. |
40
|
ಆದ್ದರಿಂದ ನಾನು ನಿನ್ನನ್ನು ದೇಶದ ರಾಜ್ಯಪಾಲನನ್ನಾಗಿ ನೇಮಿಸುವೆನು; ಜನರು ನಿನ್ನ ಆಜ್ಞೆಗಳಿಗೆಲ್ಲಾ ವಿಧೇಯರಾಗುವರು. ಈ ದೇಶದಲ್ಲಿ ನಿನಗೆ ಅಧಿಪತಿಯಾಗಿರುವವನು ನಾನೊಬ್ಬನೆ” ಎಂದು ಹೇಳಿದನು. |
41
|
ಫರೋಹನು ಯೋಸೇಫನಿಗೆ, “ನಾನು ನಿನ್ನನ್ನು ಈಜಿಪ್ಟ್ ದೇಶಕ್ಕೆಲ್ಲ ರಾಜ್ಯಪಾಲನನ್ನಾಗಿ ನೇಮಿಸುವೆನು” ಎಂದು ಹೇಳಿ |
42
|
ರಾಜಮುದ್ರೆಯನ್ನು ಹೊಂದಿದ್ದ ತನ್ನ ಉಂಗುರವನ್ನು ಕೊಟ್ಟನು; ಧರಿಸಿಕೊಳ್ಳಲು ಒಳ್ಳೆಯ ನಾರುಬಟ್ಟೆಯ ನಿಲುವಂಗಿಯನ್ನು ಕೊಟ್ಟನು; ಕೊರಳಿಗೆ ಚಿನ್ನದ ಸರವನ್ನು ಹಾಕಿದನು. |
43
|
ಫರೋಹನು ಯೋಸೇಫನಿಗೆ ಎರಡನೆಯ ರಾಜರಥವನ್ನು ಸಂಚಾರಕ್ಕಾಗಿ ಕೊಟ್ಟನು. ವಿಶೇಷಕಾವಲುಗಾರರು ಅವನ ರಥದ ಮುಂದೆ ನಡೆದುಹೋಗುತ್ತಾ “ಪ್ರಜೆಗಳೇ, ಯೋಸೇಫನಿಗೆ ತಲೆಬಾಗಿ ನಮಸ್ಕರಿಸಿರಿ” ಎಂದು ಪ್ರಕಟಿಸಿದರು. ಹೀಗೆ ಯೋಸೇಫನು ಈಜಿಪ್ಟಿಗೆಲ್ಲಾ ರಾಜ್ಯಪಾಲನಾದನು. |
44
|
ಫರೋಹನು ಅವನಿಗೆ, “ನಾನು ರಾಜ ಫರೋಹ. ಆದ್ದರಿಂದ ನನಗೆ ಇಷ್ಟವಾದದ್ದನ್ನು ಮಾಡುವೆನು. ಆದರೆ ನಿನ್ನ ಅಪ್ಪಣೆಯಿಲ್ಲದೆ ಈಜಿಪ್ಟಿನ ಬೇರೆ ಯಾರೂ ಕೈಯೆತ್ತಲೂ ಸಾಧ್ಯವಿಲ್ಲ, ಕಾಲನ್ನು ಚಲಿಸಲೂ ಸಾಧ್ಯವಿಲ್ಲ” ಎಂದು ಹೇಳಿದನು. |
45
|
ಫರೋಹನು ಯೋಸೇಫನಿಗೆ, ಸಾಫ್ನತ್ಪನ್ನೇಹ ಎಂಬ ಹೆಸರನ್ನು ಕೊಟ್ಟನು. ಇದಲ್ಲದೆ ಫರೋಹನು ಯೋಸೇಫನಿಗೆ ಆಸನತ್ ಎಂಬಾಕೆಯನ್ನು ಮದುವೆ ಮಾಡಿಸಿದನು. ಆಕೆ ಓನ್ ನಗರದ ಆಚಾರ್ಯನಾಗಿದ್ದ ಪೋಟೀಫೆರನ ಮಗಳು. ಹೀಗೆ ಯೋಸೇಫನು ಈಜಿಪ್ಟ್ ದೇಶಕ್ಕೆಲ್ಲಾ ರಾಜ್ಯಪಾಲನಾದನು. |
46
|
ಯೋಸೇಫನು ಈಜಿಪ್ಟ್ ರಾಜನ ಸೇವೆಯನ್ನು ಪ್ರಾರಂಭಿಸಿದಾಗ ಮೂವತ್ತು ವರ್ಷದವನಾಗಿದ್ದನು. ಯೋಸೇಫನು ಈಜಿಪ್ಟ್ ದೇಶದಲ್ಲೆಲ್ಲಾ ಸಂಚರಿಸಿದನು. |
47
|
ಏಳು ಒಳ್ಳೆಯ ವರ್ಷಗಳಲ್ಲಿ ದೇಶದಲ್ಲಿ ಬೆಳೆಯು ಚೆನ್ನಾಗಿ ಬೆಳೆಯಿತು. |
48
|
ಈಜಿಪ್ಟಿನಲ್ಲಿ ಯೋಸೇಫನು ಆ ಏಳು ವರ್ಷಗಳ ಕಾಲದಲ್ಲಿ ಆಹಾರವನ್ನು ಸಂಗ್ರಹಿಸಿ ನಗರಗಳ ಉಗ್ರಾಣಗಳಲ್ಲಿಟ್ಟನು. ಪ್ರತಿಯೊಂದು ನಗರದ ಸುತ್ತುಮುತ್ತಲಿನ ಹೊಲಗಳಲ್ಲಿ ಬೆಳೆದ ದವಸಧಾನ್ಯವನ್ನು ಆಯಾ ನಗರಗಳಲ್ಲಿ ಕೂಡಿಸಿಟ್ಟನು. |
49
|
ಯೋಸೇಫನು ಬಹಳ ದವಸಧಾನ್ಯಗಳನ್ನು ಸಂಗ್ರಹಿಸಿದ್ದರಿಂದ ಸಮುದ್ರದ ಮರಳಿನ ರಾಶಿಯೆಂಬಂತೆ ತೋರಿತು; ಲೆಕ್ಕಿಸುವುದಕ್ಕೂ ಅಸಾಧ್ಯವಾಯಿತು. |
50
|
ಯೋಸೇಫನ ಹೆಂಡತಿ ಆಸನತ್ ಓನ್ ನಗರದಲ್ಲಿ ಆಚಾರ್ಯನಾಗಿದ್ದ ಪೋಟೀಫೆರನ ಮಗಳು. ಬರಗಾಲದ ಮೊದಲನೆಯ ವರ್ಷ ಬರುವುದಕ್ಕಿಂತ ಮೊದಲೇ ಯೋಸೇಫನಿಗೆ ಆಸನತಳಲ್ಲಿ ಇಬ್ಬರು ಗಂಡುಮಕ್ಕಳು ಹುಟ್ಟಿದರು. |
51
|
ಮೊದಲನೆಯ ಮಗನು ಹುಟ್ಟಿದಾಗ, “ನನ್ನ ಎಲ್ಲಾ ಕಷ್ಟಗಳನ್ನೂ ನನ್ನ ತಂದೆಯ ಮನೆಯವರನ್ನೂ ಮರೆತುಬಿಡುವಂತೆ ದೇವರು ನನಗೆ ಸಹಾಯ ಮಾಡಿದನು” ಎಂದು ಹೇಳಿ ಯೋಸೇಫನು ಆ ಮಗುವಿಗೆ, ‘ಮನಸ್ಸೆ’ ಎಂದು ಹೆಸರಿಟ್ಟನು. |
52
|
ಎರಡನೆ ಮಗನು ಹುಟ್ಟಿದಾಗ, “ನನಗೆ ಕಷ್ಟ ಬಂದ ದೇಶದಲ್ಲೇ ದೇವರು ನನ್ನನ್ನು ಅಭಿವೃದ್ಧಿಪಡಿಸಿದನು” ಎಂದು ಹೇಳಿ, ಆ ಮಗುವಿಗೆ, ‘ಎಫ್ರಾಯೀಮ್’ ಎಂದು ಹೆಸರಿಟ್ಟನು. |
53
|
ಈಜಿಪ್ಟಿನಲ್ಲಿ ಸಮೃದ್ಧಿಕರವಾದ ಏಳು ವರ್ಷಗಳು ಮುಗಿದ ಮೇಲೆ |
54
|
ಯೋಸೇಫನು ಹೇಳಿದ್ದಂತೆಯೇ ಕ್ಷಾಮದ ಏಳು ವರ್ಷಗಳು ಆರಂಭಗೊಂಡವು. ಕ್ಷಾಮವು ಸುತ್ತಮುತ್ತಲಿನ ಪ್ರದೇಶಗಳಿಗೆಲ್ಲಾ ಹಬ್ಬಿಕೊಂಡಿತು. ಈಜಿಪ್ಟಿನಲ್ಲಿ ಮಾತ್ರ ಆಹಾರ ದೊರಕುತ್ತಿತ್ತು. |
55
|
ಬರಗಾಲವು ಪ್ರಾರಂಭವಾದಾಗ ಜನರು ಆಹಾರಕ್ಕಾಗಿ ಫರೋಹನನ್ನು ಬೇಡಿಕೊಂಡರು. ಫರೋಹನು ಈಜಿಪ್ಟಿನ ಜನರಿಗೆ, “ಯೋಸೇಫನನ್ನು ಕೇಳಿರಿ; ಅವನು ಹೇಳಿದಂತೆ ಮಾಡಿರಿ” ಎಂದು ಹೇಳಿದನು. |
56
|
ಎಲ್ಲೆಲ್ಲಿಯೂ ಬರಗಾಲವಾದಾಗ, ಯೋಸೇಫನು ಉಗ್ರಾಣಗಳನ್ನು ತೆಗೆಸಿ ದವಸಧಾನ್ಯಗಳನ್ನು ಜನರಿಗೆ ಮಾರಾಟ ಮಾಡಿಸಿದನು. ಈಜಿಪ್ಟಿನಲ್ಲಿ ಬರವು ಭೀಕರವಾಗಿತ್ತು. |
57
|
ಭೂಲೋಕದಲ್ಲೆಲ್ಲಾ ಕ್ಷಾಮವು ಭಯಂಕರವಾಗಿದ್ದುದರಿಂದ ಎಲ್ಲಾ ದೇಶಗಳವರು ಯೋಸೇಫನಿಂದ ಆಹಾರವನ್ನು ಪಡೆದುಕೊಳ್ಳುವುದಕ್ಕಾಗಿ ಈಜಿಪ್ಟಿಗೆ ಬಂದರು. |
Genesis 41:37 Kannada Language Bible Words basic statistical display
COMING SOON ...