ಯಾಕೋಬನು ದೃಷ್ಟಿಸಿ ನೋಡಿದಾಗ, ಹೊಲದಲ್ಲಿ ಅವನಿಗೆ ಒಂದು ಬಾವಿ ಕಾಣಿಸಿತು. ಬಾವಿಯ ಸಮೀಪದಲ್ಲಿ ಮೂರು ಕುರಿಮಂದೆಗಳು ಮಲಗಿಕೊಂಡಿದ್ದವು. ಕುರಿಗಳಿಗೆ ಆ ಬಾವಿಯ ನೀರನ್ನೇ ಕುಡಿಸುತ್ತಿದ್ದರು. ಬಾವಿಯ ಮೇಲೆ ಅಗಲವಾದ ದೊಡ್ಡ ಕಲ್ಲನ್ನು ಮುಚ್ಚಲಾಗಿತ್ತು.
ಕುರಿಮಂದೆಗಳೆಲ್ಲ ಒಟ್ಟಿಗೆ ಸೇರಿದ ಮೇಲೆ, ಕುರುಬರು ಬಾವಿಯ ಮೇಲಿನ ಕಲ್ಲನ್ನು ಉರುಳಿಸುತ್ತಿದ್ದರು. ಆಮೇಲೆ ಎಲ್ಲಾ ಕುರಿಗಳು ಬಾವಿಯ ನೀರನ್ನು ಕುಡಿಯುತ್ತಿದ್ದವು. ಕುರಿಗಳು ನೀರು ಕುಡಿದಾದ ಮೇಲೆ ಕುರುಬರು ಕಲ್ಲನ್ನು ಮತ್ತೆ ಮುಚ್ಚುತ್ತಿದ್ದರು.
ಆ ಕುರುಬರು, “ಕುರಿಮಂದೆಗಳೆಲ್ಲ ಒಟ್ಟಿಗೆ ಸೇರುವವರೆಗೆ ನಾವು ಬಾವಿಯ ಮೇಲಿರುವ ಕಲ್ಲನ್ನು ತೆಗೆದು ಕುರಿಗಳಿಗೆ ನೀರು ಕುಡಿಸುವಂತಿಲ್ಲ; ಅವು ಒಟ್ಟಿಗೆ ಕೂಡಿಬಂದಾಗಲೇ ನೀರು ಕುಡಿಸುತ್ತೇವೆ” ಎಂದು ಹೇಳಿದರು.
ಲಾಬಾನನು ತನ್ನ ತಂಗಿಯ ಮಗನಾದ ಯಾಕೋಬನ ವಿಷಯವನ್ನು ಕೇಳಿ ಭೇಟಿಯಾಗಲು ಓಡಿಬಂದನು. ಲಾಬಾನನು ಅವನನ್ನು ಅಪ್ಪಿಕೊಂಡು ಮುದ್ದಿಟ್ಟು ಮನೆಗೆ ಕರೆದುಕೊಂಡು ಬಂದನು. ಯಾಕೋಬನು ನಡೆದ ಪ್ರತಿಯೊಂದನ್ನೂ ಲಾಬಾನನಿಗೆ ತಿಳಿಸಿದನು.
ಒಂದು ದಿನ ಲಾಬಾನನು ಯಾಕೋಬನಿಗೆ, “ನೀನು ಸಂಬಳ ತೆಗೆದುಕೊಳ್ಳದೆ ನನ್ನ ಬಳಿಯಲ್ಲಿ ಕೆಲಸ ಮಾಡುವುದು ಸರಿಯಲ್ಲ. ನೀನು ನನ್ನ ಸಂಬಂಧಿಕನೇ ಹೊರತು ಸೇವಕನಲ್ಲ. ನಾನು ನಿನಗೆ ಎಷ್ಟು ಸಂಬಳ ಕೊಡಲಿ?” ಎಂದು ಕೇಳಿದನು.
ಯಾಕೋಬನು ರಾಹೇಲಳನ್ನು ಪ್ರೀತಿಸಿದನು. ಯಾಕೋಬನು ಲಾಬಾನನಿಗೆ, “ನಿನ್ನ ಚಿಕ್ಕಮಗಳಾದ ರಾಹೇಲಳನ್ನು ನನಗೆ ಮದುವೆ ಮಾಡಿಕೊಡುವುದಾದರೆ ನಾನು ನಿನಗೆ ಏಳು ವರ್ಷ ಸೇವೆ ಮಾಡುವೆನು” ಎಂದು ಹೇಳಿದನು.
ಆದ್ದರಿಂದ ಯಾಕೋಬನು ಅವನೊಂದಿಗೆ ಇದ್ದುಕೊಂಡು ಏಳು ವರ್ಷಗಳವರೆಗೆ ಲಾಬಾನನ ಸೇವೆ ಮಾಡಿದನು. ಆದರೆ ಅವನು ರಾಹೇಲಳನ್ನು ತುಂಬಾ ಪ್ರೀತಿಸುತ್ತಿದ್ದುದರಿಂದ ಆ ಸಮಯವು ಅವನಿಗೆ ತುಂಬಾ ಕಡಿಮೆಯಂತೆ ಕಾಣಿಸಿತು.
ಮುಂಜಾನೆ ಯಾಕೋಬನು ಎದ್ದು ನೋಡಿದಾಗ ಅವನೊಂದಿಗೆ ಲೇಯಾ ಇದ್ದಳು. ಯಾಕೋಬನು ಲಾಬಾನನಿಗೆ, “ನೀನು ನನಗೆ ಮೋಸ ಮಾಡಿದೆ. ನಾನು ರಾಹೇಲಳನ್ನು ಮದುವೆ ಮಾಡಿಕೊಳ್ಳುವುದಕ್ಕಾಗಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿದೆ. ನೀನು ನನಗೇಕೆ ಮೋಸ ಮಾಡಿದೆ?” ಎಂದು ಕೇಳಿದನು.
ಲೇಯಳು ಒಬ್ಬ ಮಗನನ್ನು ಹೆತ್ತಳು. ಆಕೆಯು ತನ್ನೊಳಗೆ, “ಯೆಹೋವನು ನನ್ನ ದುಃಖವನ್ನು ನೋಡಿದ್ದಾನೆ. ನನ್ನ ಗಂಡನು ನನ್ನನ್ನು ಪ್ರೀತಿಸುವುದಿಲ್ಲ. ಈಗಲಾದರೊ ಅವನು ನನ್ನನ್ನು ಪ್ರೀತಿಸಬಹುದು” ಎಂದು ಹೇಳಿ ಆ ಮಗುವಿಗೆ ರೂಬೇನ್ ಎಂದು ಹೆಸರಿಟ್ಟಳು.
ಲೇಯಾ ಮತ್ತೆ ಬಸುರಾಗಿ ಮತ್ತೊಬ್ಬ ಮಗನನ್ನು ಹೆತ್ತಳು. ಆಕೆ ತನ್ನೊಳಗೆ, “ನಾನು ಗಂಡನ ಅಲಕ್ಷ್ಯಕ್ಕೆ ಗುರಿಯಾದೆನೆಂದು ಯೆಹೋವನು ತಿಳಿದು ನನಗೆ ಈ ಮಗುವನ್ನು ಕೊಟ್ಟಿದ್ದಾನೆ” ಎಂದು ಹೇಳಿ ಆ ಮಗುವಿಗೆ ಸಿಮೆಯೋನ್ ಎಂದು ಹೆಸರಿಟ್ಟಳು.
ಲೇಯಾ ಮತ್ತೆ ಬಸುರಾಗಿ ಮತ್ತೊಬ್ಬ ಗಂಡುಮಗನನ್ನು ಹೆತ್ತಳು. ಆಕೆ ತನ್ನೊಳಗೆ, “ಖಂಡಿತವಾಗಿಯೂ ನನ್ನ ಗಂಡ ನನ್ನ ಜೊತೆಗೂಡಿರುವನು. ನಾನು ಅವನಿಗೆ ಮೂರು ಗಂಡುಮಕ್ಕಳನ್ನು ಕೊಟ್ಟಿರುವೆ” ಎಂದು ಹೇಳಿ ಆ ಮಗುವಿಗೆ ಲೇವಿ ಎಂದು ಹೆಸರಿಟ್ಟಳು.
ನಂತರ ಲೇಯಾ ಮತ್ತೊಬ್ಬ ಗಂಡುಮಗನನ್ನು ಹೆತ್ತಳು. ಲೇಯಳು ತನ್ನೊಳಗೆ, “ಈಗ ನಾನು ಯೆಹೋವನನ್ನು ಸ್ತುತಿಸುವೆನು” ಎಂದು ಹೇಳಿ ಆ ಮಗುವಿಗೆ ಯೆಹೂದ ಎಂದು ಹೆಸರಿಟ್ಟಳು. ನಂತರ ಲೇಯಳಿಗೆ ಮಕ್ಕಳಾಗುವುದು ನಿಂತುಹೋಯಿತು.