1
|
ದೇವಮನುಷ್ಯನಾದ ಮೋಶೆಯು ತಾನು ಸಾಯುವ ಮೊದಲು ಇಸ್ರೇಲರನ್ನು ಆಶೀರ್ವದಿಸಿದನು. |
2
|
ಮೋಶೆಯು ಹೇಳಿದ್ದೇನೆಂದರೆ: “ಸೇಯೀರ್ನಲ್ಲಿ ಮುಂಜಾನೆಯ ಬೆಳಕು ಪ್ರಕಾಶಿಸುವಂತೆ ಪಾರಾನ್ ಬೆಟ್ಟಗಳ ಮೇಲಿನಿಂದ ಬೆಳಕು ಪ್ರಕಾಶಿಸುವಂತೆ ಯೆಹೋವನು ಸೀನಾಯಿ ಬೆಟ್ಟದಿಂದ ಬಂದನು. ಆತನು ಹತ್ತು ಸಾವಿರ ಪರಿಶುದ್ಧರೊಂದಿಗೆ ಬಂದನು. ಆತನ ಬಲಶಾಲಿಗಳಾದ ಸೈನಿಕರು ಆತನೊಂದಿಗಿದ್ದರು. |
3
|
ಹೌದು, ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆ. ಪವಿತ್ರ ಜನರೆಲ್ಲರೂ ಆತನ ಕೈಗಳಲ್ಲಿರುವರು. ಆತನ ಕಾಲ ಬಳಿಯಲ್ಲಿ ಕುಳಿತುಕೊಂಡು ಬೋಧನೆಯನ್ನು ಕೇಳುವರು. |
4
|
ಮೋಶೆಯು ಧರ್ಮಶಾಸ್ತ್ರವನ್ನು ಯಾಕೋಬನ ವಂಶದವರಿಗೆ ಕೊಟ್ಟನು. |
5
|
ಆಗ ಇಸ್ರೇಲಿನ ಜನರು ತಮ್ಮ ನಾಯಕರೊಂದಿಗೆ ಒಟ್ಟಾಗಿ ಸೇರಿದರು. ಯೆಹೋವನು ತಾನೇ ಯೆಶುರೂನಿನಲ್ಲಿ ಅರಸನಾದನು. |
6
|
“ರೂಬೇನನು ನಾಶವಾಗದೆ ಉಳಿಯಲಿ, ಆದರೆ ಅವನ ಕುಲದವರಲ್ಲಿ ಕೆಲವೇ ಮಂದಿ ಇರುವರು.” |
7
|
ಯೆಹೂದನ ವಿಷಯವಾಗಿ ಮೋಶೆ ಹೇಳಿದ ಮಾತುಗಳು: “ಯೆಹೋವನೇ, ಯೆಹೂದದ ನಾಯಕನು ಸಹಾಯಕ್ಕಾಗಿ ಮೊರೆಯಿಡುವಾಗ ಅದನ್ನು ಆಲಿಸಿ ಅವನ ಜನರ ಬಳಿಗೆ ಕರೆದುಕೊಂಡು ಬಂದು ಅವರೊಂದಿಗೆ ಸೇರಿಸು. ಅವನನ್ನು ಬಲಗೊಳಿಸಿ ಶತ್ರುಗಳೊಂದಿಗೆ ಯುದ್ಧಮಾಡಲು ಸಹಾಯಿಸು.” |
8
|
ಲೇವಿಯ ವಿಷಯವಾಗಿ ಮೋಶೆ ಹೇಳಿದ ಮಾತುಗಳು: “ಲೇವಿಯು ನಿನ್ನ ನಿಜವಾದ ಹಿಂಬಾಲಕ. ಅವನು ಊರೀಮ್ತುಮ್ಮೀಮ್ ಇಟ್ಟುಕೊಂಡಿರುವನು. ಮಸ್ಸಾದಲ್ಲಿ ಲೇವಿಯರನ್ನು ನೀನು ಪರೀಕ್ಷಿಸಿದೆ. ಮೆರೀಬ ಬುಗ್ಗೆಯ ಬಳಿ ಅವರು ನಿನ್ನವರೆಂದು ನಿನಗೆ ಖಚಿತವಾಯಿತು. |
9
|
ಯೆಹೋವನೇ, ಅವರು ನಿನಗಾಗಿ ಚಿಂತಿಸಿದರು; ಸ್ವಂತ ಸಂಸಾರಕ್ಕಿಂತಲೂ ಹೆಚ್ಚಾಗಿ ನಿನ್ನನ್ನು ಪ್ರೀತಿಸಿದರು; ಅವರು ನಿನಗಾಗಿ ತಮ್ಮ ತಂದೆತಾಯಿಗಳನ್ನು ನಿರ್ಲಕ್ಷಿಸಿದರು; ಒಡಹುಟ್ಟಿದವರನ್ನೂ ಗುರುತಿಸಲಿಲ್ಲ. ಅವರು ತಮ್ಮ ಮಕ್ಕಳಿಗೆ ಪ್ರಾಮುಖ್ಯತೆಯನ್ನು ಕೊಡಲಿಲ್ಲ; ಅವರು ನಿನ್ನ ಕಟ್ಟಳೆಗಳನ್ನು ಅನುಸರಿಸಿ ಒಡಂಬಡಿಕೆಯನ್ನು ಕಾಪಾಡಿದರು. |
10
|
ಅವರು ಯಾಕೋಬ ವಂಶದವರಿಗೆ ನಿನ್ನ ವಿಧಿನಿಯಮಗಳನ್ನು ಕಲಿಸುವರು; ನಿನ್ನ ಕಟ್ಟಳೆಗಳನ್ನು ಇಸ್ರೇಲರಿಗೆ ಬೋಧಿಸುವರು. ಅವರು ನಿನ್ನ ಸನ್ನಿಧಾನದಲ್ಲಿ ಧೂಪಹಾಕುವರು. ಬಲಿಪೀಠದಲ್ಲಿ ನಿನಗೆ ಯಜ್ಞಾರ್ಪಣೆ ಮಾಡುವರು. |
11
|
ಯೆಹೋವನೇ, ಲೇವಿಯರಿಗೆ ಇರುವಂಥದನ್ನು ಆಶೀರ್ವದಿಸು; ಅವರು ಮಾಡಿದ್ದೆಲ್ಲಾ ನಿನಗೆ ಮೆಚ್ಚಿಕೆಯಾಗಲಿ. ಅವರ ಮೇಲೆ ಬೀಳುವವರನ್ನು ನಾಶಮಾಡು, ಅವರ ವೈರಿಗಳನ್ನು ಸೋಲಿಸು; ಅವರು ಮತ್ತೆ ಲೇವಿಯರ ಮೇಲೆ ಬೀಳದಂತೆ ಮಾಡು.” |
12
|
ಬೆನ್ಯಾಮೀನನ ವಿಷಯವಾಗಿ ಮೋಶೆಯು ಹೇಳಿದ್ದೇನೆಂದರೆ: “ಯೆಹೋವನು ಬೆನ್ಯಾಮೀನನನ್ನು ಪ್ರೀತಿಸುತ್ತಾನೆ. ಬೆನ್ಯಾಮೀನನು ಆತನ ಬಳಿಯಲ್ಲಿ ಸುರಕ್ಷಿತವಾಗಿ ವಾಸಮಾಡುತ್ತಾನೆ. ಯೆಹೋವನು ಅವನನ್ನು ಯಾವಾಗಲೂ ಸಂರಕ್ಷಿಸುತ್ತಾನೆ. ಅವನ ಪ್ರಾಂತ್ಯದಲ್ಲಿ ಯೆಹೋವನು ವಾಸಿಸುವನು.” |
13
|
ಯೋಸೇಫನ ಪ್ರಾಂತ್ಯವನ್ನು ಯೆಹೋವನು ಆಶೀರ್ವದಿಸಲಿ: “ಯೆಹೋವನೇ, ಅವರಿಗೆ ಆಕಾಶದಿಂದ ಮಳೆ ಸುರಿಸು, ನೆಲದಿಂದ ಬುಗ್ಗೆಯು ಹೊರಬರಲಿ; |
14
|
ಸೂರ್ಯನು ಅವರಿಗೆ ಒಳ್ಳೆಯ ಫಲಗಳನ್ನು ಕೊಡಲಿ; ಪ್ರತಿ ತಿಂಗಳು ಒಳ್ಳೆಯ ಫಲಗಳನ್ನು ಕೊಡಲಿ. |
15
|
ಬೆಟ್ಟಗುಡ್ಡಗಳು ಉತ್ತಮವಾದ ಫಲಗಳನ್ನು ಫಲಿಸಲಿ. |
16
|
ಭೂಮಿಯು ಒಳ್ಳೆಯದನ್ನು ಯೋಸೇಫನಿಗೆ ಕೊಡಲಿ. ಯೋಸೇಫನು ತನ್ನ ಸಹೋದರರಿಂದ ಬೇರ್ಪಡಿಸಿಕೊಂಡಿರುವನು. ಆದುದರಿಂದ ಉರಿಯುವ ಪೊದೆಯಲ್ಲಿರುವ ಯೆಹೋವನು ಉತ್ತಮವಾದವುಗಳನ್ನು ಯೋಸೇಫನಿಗೆ ಕೊಡಲಿ. |
17
|
ಯೋಸೇಫನು ಬಲಶಾಲಿಯಾದ ಗೂಳಿಯಂತಿದ್ದಾನೆ. ಅವನ ಇಬ್ಬರು ಮಕ್ಕಳು ಗೂಳಿಯ ಕೊಂಬುಗಳಂತೆ ಬೇರೆಯವರನ್ನು ದೂಡಿ ಲೋಕದ ಅಂಚಿಗೆ ತಳ್ಳಿಬಿಡುತ್ತಾರೆ. ಮನಸ್ಸೆಯೊಂದಿಗೆ ಸಾವಿರಗಟ್ಟಲೆ ಜನರಿದ್ದಾರೆ. ಎಫ್ರಾಯೀಮನೊಂದಿಗೆ ಹತ್ತು ಸಾವಿರಗಟ್ಟಲೆ ಜನರಿದ್ದಾರೆ.” |
18
|
ಮೋಶೆಯು ಜೆಬುಲೂನ್ ವಿಷಯವಾಗಿ ಹೇಳಿದ್ದೇನೆಂದರೆ: “ಜೆಬುಲೂನನೇ, ನೀನು ಹೊರಗೆ ಹೋಗುವಾಗ ಸಂತೋಷವಾಗಿರು. ಇಸ್ಸಾಕಾರನೇ, ನೀನು ನಿನ್ನ ಗುಡಾರದೊಳಗಿರುವಾಗ ಸಂತೋಷದಿಂದಿರು. |
19
|
ಅವರು ತಮ್ಮ ಪರ್ವತಗಳಿಗೆ ಜನರನ್ನು ಕರೆಯುವರು. ಅಲ್ಲಿ ಅವರು ಉತ್ತಮ ಯಜ್ಞವನ್ನು ಅರ್ಪಿಸುವರು. ಸಮುದ್ರದಿಂದ ಐಶ್ವರ್ಯವನ್ನು ತೆಗೆಯುವರು. ಸಮುದ್ರ ದಡದಿಂದ ನಿಕ್ಷೇಪವನ್ನೆತ್ತುವರು.” |
20
|
ಗಾದನಿಗೆ ಮೋಶೆಯು ಹೇಳಿದ್ದೇನೆಂದರೆ: “ಗಾದನಿಗೆ ವಿಸ್ತಾರವಾದ ಪ್ರಾಂತ್ಯವನ್ನು ಕೊಟ್ಟ ದೇವರಿಗೆ ಸ್ತೋತ್ರ. ಗಾದನು ಸಿಂಹದಂತಿರುವನು; ಹೊಂಚುಹಾಕುತ್ತಾ ಕಾಯುತ್ತಾ ಇರುವನು. ಫಕ್ಕನೆ ಪ್ರಾಣಿಯ ಮೇಲೆ ಹಾರಿ ಅದನ್ನು ಸೀಳಿಬಿಡುವನು. |
21
|
ಅದರ ಒಳ್ಳೆಯ ಭಾಗವನ್ನು ತನಗೆ ಆರಿಸಿಕೊಳ್ಳುವನು. ರಾಜನ ಭಾಗವನ್ನು ತಾನಿಟ್ಟುಕೊಳ್ಳುವನು. ಜನರ ನಾಯಕರು ಆತನ ಬಳಿಗೆ ಬರುವರು. ಯೆಹೋವನು ಒಳ್ಳೆಯದೆಂದು ಹೇಳುವ ಕಾರ್ಯಗಳನ್ನು ಮಾಡುವನು. ಇಸ್ರೇಲ್ ಜನರಿಗೆ ಸರಿಯಾದ ಕಾರ್ಯವನ್ನೇ ಮಾಡುವನು.” |
22
|
ಮೋಶೆಯು ದಾನನ ವಿಷಯವಾಗಿ ಹೀಗೆ ಹೇಳಿದನು: “ದಾನನು ಪ್ರಾಯದಸಿಂಹದ ಮರಿ; ಅವನು ಬಾಷಾನಿನಿಂದ ನೆಗೆಯುವನು.” |
23
|
ಮೋಶೆಯು ನಫ್ತಾಲಿಯ ವಿಷಯವಾಗಿ ಹೇಳಿದ ಮಾತುಗಳು: “ನಫ್ತಾಲಿಯೇ, ನಿನಗೆ ಉತ್ತಮವಾದ ವಸ್ತುಗಳು ಅಧಿಕವಾಗಿ ದೊರೆಯುತ್ತವೆ. ಯೆಹೋವನು ನಿನ್ನನ್ನು ನಿಜವಾಗಿಯೂ ಆಶೀರ್ವದಿಸುವನು. ಗಲಿಲಾಯದ ಬಳಿಯಲ್ಲಿರುವ ಪ್ರಾಂತ್ಯವು ನಿನಗೆ ದೊರಕುವದು.” |
24
|
ಆಶೇರನ ವಿಷಯವಾಗಿ ಮೋಶೆಯ ಮಾತುಗಳು: “ಮಕ್ಕಳಲ್ಲಿ, ಆಶೇರನೇ ಹೆಚ್ಚಾಗಿ ಆಶೀರ್ವದಿಸಲ್ಪಟ್ಟವನು. ಅವನ ಅಣ್ಣತಮ್ಮಂದಿರೊಳಗೆ ಅವನೇ ಅಚ್ಚುಮೆಚ್ಚಿನವನಾಗಲಿ. ಎಣ್ಣೆಯಲ್ಲಿ ಅವನು ತನ್ನ ಕಾಲುಗಳನ್ನು ತೊಳೆಯಲಿ. |
25
|
ನಿನ್ನ ಬಾಗಿಲುಗಳಲ್ಲಿ ಬೀಗವಿರುವದು. ಅವು ಕಬ್ಬಿಣದಿಂದಲೂ ಹಿತ್ತಾಳೆಯಿಂದಲೂ ಮಾಡಲ್ಪಟ್ಟಿವೆ. ನಿನ್ನ ಜೀವಮಾನ ಕಾಲವೆಲ್ಲಾ ನೀನು ಬಲಶಾಲಿಯಾಗಿರುವೆ.” |
26
|
“ಯೆಶುರೂನೇ, ನಮ್ಮ ದೇವರ ಹಾಗೆ ಬೇರೆ ದೇವರುಗಳಿಲ್ಲ. ಆತನು ಮೋಡಗಳ ಮೇಲೆ ಮಹಿಮಾರೂಢನಾಗಿ ಸವಾರಿ ಮಾಡುತ್ತಾ ಆಕಾಶದಿಂದ ನಿನಗೆ ಸಹಾಯಕ್ಕೆ ಬರುವನು. |
27
|
ಆತನು ನಿರಂತರಕ್ಕೂ ಜೀವಿಸುವವನಾಗಿದ್ದಾನೆ. ಆತನೇ ನಿಮ್ಮ ಆಶ್ರಯಸ್ಥಾನ. ಆತನ ಸಾಮರ್ಥ್ಯ ಸದಾಕಾಲವಿರುವದು. ಆತನು ನಿಮ್ಮನ್ನು ಸಂರಕ್ಷಿಸಿ ಕಾಪಾಡುವನು; ನಿಮ್ಮ ದೇಶವನ್ನು ಬಿಟ್ಟುಹೋಗಲು ಜನರನ್ನು ದೂಡುವನು; ‘ವೈರಿಗಳನ್ನು ನಾಶಮಾಡಿರಿ’ ಎಂದು ಹೇಳುವನು. |
28
|
ಇಸ್ರೇಲ್ ಸುರಕ್ಷಿತವಾಗಿ ಜೀವಿಸುವುದು. ಯಾಕೋಬನ ಬಾವಿ ಅವರ ವಶದಲ್ಲಿದೆ. ಧಾನ್ಯದ ಮತ್ತು ದ್ರಾಕ್ಷಾರಸದ ದೇಶವು ಅವರಿಗೆ ದೊರಕುತ್ತದೆ. ಆ ದೇಶಕ್ಕೆ ಅಧಿಕವಾಗಿ ಮಳೆ ಸುರಿಯುವುದು. |
29
|
ಇಸ್ರೇಲೇ, ನೀವು ಆಶೀರ್ವದಿಸಲ್ಪಟ್ಟವರು. ನಿಮ್ಮ ದೇಶದ ಹಾಗೆ ಯಾವ ದೇಶವೂ ಇರದು. ಯೆಹೋವನು ನಿಮ್ಮನ್ನು ರಕ್ಷಿಸಿದನು. ಆತನು ನಿಮ್ಮನ್ನು ಕಾಪಾಡುವ ಬಲವಾದ ಗುರಾಣಿ. ಆತನು ನಿಮಗೆ ಶಕ್ತಿಯುತವಾದ ಖಡ್ಗ. ವೈರಿಗಳು ನಿಮಗೆ ಭಯಪಡುವರು. ನೀವು ಅವರ ಪವಿತ್ರ ಸ್ಥಳವನ್ನು ತುಳಿದುಬಿಡುವಿರಿ!” |
Deuteronomy 33:4 Kannada Language Bible Words basic statistical display
COMING SOON ...