1
|
“ನಿಮ್ಮಲ್ಲಿ ಯಾರಿಗಾದರೂ ಇಬ್ಬರಿಗೆ ವಾಗ್ವಾದವಿದ್ದಲ್ಲಿ ಅವರು ಅದನ್ನು ನ್ಯಾಯಸ್ಥಾನಕ್ಕೆ ತೆಗೆದುಕೊಂಡು ಹೋಗಲಿ. ಅಲ್ಲಿ ನ್ಯಾಯಾಧೀಶರು ಯಾರು ಸರಿ ಯಾರು ತಪ್ಪು ಎಂದು ತೀರ್ಮಾನಿಸುವರು. |
2
|
ನ್ಯಾಯಾಧೀಶರು ಒಬ್ಬನಿಗೆ ಕೊರಡೆ ಏಟು ಕೊಡಬೇಕೆಂದು ತೀರ್ಮಾನಿಸಿದರೆ ಅವನು ಆ ಶಿಕ್ಷೆ ಹೊಂದುವವನನ್ನು ಬೋರಲು ಮಲಗಿಸಿ ನ್ಯಾಯಾಧೀಶನ ಕಣ್ಣು ಮುಂದೆ ಅವನಿಗೆ ಕೊರಡೆ ಏಟು ಹೊಡಿಸಬೇಕು. ಅವನ ಅಪರಾಧಕ್ಕನುಸಾರವಾಗಿ ಕೊರಡೆ ಏಟುಗಳ ಸಂಖ್ಯೆಯು ಏರುವದು. |
3
|
ಒಬ್ಬನಿಗೆ ನಲವತ್ತು ಕೊರಡೆ ಏಟುಗಳಿಗಿಂತ ಹೆಚ್ಚಾಗಿ ಹೊಡೆಯಬಾರದು. ಅದಕ್ಕಿಂತ ಹೆಚ್ಚು ಹೊಡೆದರೆ ಅವನ ಪ್ರಾಣವು ನಿಮ್ಮ ದೃಷ್ಟಿಗೆ ಅಮೂಲ್ಯವಾಗಿಲ್ಲವೆಂದು ತಿಳಿದುಬರುತ್ತದೆ. |
4
|
ಕಣವನ್ನು ತುಳಿಯಲು ಎತ್ತುಗಳನ್ನು ಉಪಯೋಗಿಸುವಾಗ ಅವುಗಳು ಧಾನ್ಯ ತಿನ್ನುತ್ತವೆ ಎಂದು ಅವುಗಳ ಬಾಯಿಗಳನ್ನು ಕಟ್ಟಬಾರದು. |
5
|
“ಇಬ್ಬರು ಅಣ್ಣತಮ್ಮಂದಿರು ಜೀವಿಸುತ್ತಿರುವಾಗ ಒಬ್ಬನು ಮಕ್ಕಳಿಲ್ಲದೆ ಸತ್ತುಹೋದರೆ ಅವನ ಹೆಂಡತಿಯು ಕುಟುಂಬದಿಂದ ಹೊರಗೆ ಮದುವೆಯಾಗಬಾರದು. ಅವಳ ಮೈದುನ ಆಕೆಯನ್ನು ಮದುವೆಯಾಗಿ, ತನ್ನ ಮೈದುನ ಧರ್ಮವನ್ನು ನೆರವೇರಿಸಬೇಕು. |
6
|
ಅವಳಿಗೆ ಅವನಿಂದ ಹುಟ್ಟುವ ಮೊದಲನೆಯ ಮಗು ಅವಳ ಮೊದಲನೆಯ ಗಂಡನಿಗೆ ಸೇರಿದ್ದೆಂದು ಪರಿಗಣಿಸಲ್ಪಡಬೇಕು. ಹೀಗೆ ಸತ್ತುಹೋದ ಅಣ್ಣನ ವಂಶವು ಮುಂದುವರಿಯುವುದು. |
7
|
ಆದರೆ ಮೈದುನನು, ಸತ್ತುಹೋದ ತನ್ನ ಅಣ್ಣನ ಸ್ಥಾನವನ್ನು ತೆಗೆದುಕೊಳ್ಳಲು ಇಷ್ಟಪಡದೆಹೋದಲ್ಲಿ, ಆಕೆಯು ಊರಿನ ಹಿರಿಯರ ಬಳಿಗೆ ಹೋಗಿ ಹಿರಿಯರಿಗೆ ಹೀಗೆ ಹೇಳಬೇಕು: ‘ನನ್ನ ಮೈದುನನು ತನ್ನ ಅಣ್ಣನ ಹೆಸರನ್ನು ಇಸ್ರೇಲಿನಲ್ಲಿ ಉಳಿಸಲು ಇಷ್ಟಪಡುವುದಿಲ್ಲ.’ |
8
|
ಆಗ ಊರಿನ ಹಿರಿಯರು ಆ ಮೈದುನನನ್ನು ಕರಿಸಿ ಅವನೊಂದಿಗೆ ಮಾತನಾಡಬೇಕು. ಅವನು ತನ್ನ ನಿರ್ಧಾರವನ್ನು ಬದಲಾಯಿಸದೆ, ‘ನನಗೆ ಅವಳನ್ನು ಹೆಂಡತಿಯಾಗಿ ತೆಗೆದುಕೊಳ್ಳಲು ಇಷ್ಟವಿಲ್ಲ’ ಎಂದು ಹೇಳಿದರೆ, |
9
|
ಅವನ ಅಣ್ಣನ ಹೆಂಡತಿಯು ಮುಂದೆ ಬಂದು ಹಿರಿಯರ ಸಮ್ಮುಖದಲ್ಲಿ ಅವನ ಕಾಲಿನಿಂದ ಚಪ್ಪಲಿಗಳನ್ನು ತೆಗೆದು ಅವನ ಮುಖಕ್ಕೆ ಉಗಿಯಬೇಕು. ‘ತನ್ನ ಮೈದುನ ಧರ್ಮವನ್ನು ನೆರವೇರಿಸದೆ ತನ್ನ ಅಣ್ಣನಿಗೆ ವಂಶವನ್ನು ಕೊಡದವನಿಗೆ ಇದೇ ಗತಿ’ ಎಂದು ಹೇಳಬೇಕು. |
10
|
ಆಗ ಅವನ ಸಂತಾನವು, ‘ಚಪ್ಪಲಿ ತೆಗೆಯಲ್ಪಟ್ಟ ಸಂತಾನ’ ಎಂದು ಕರೆಯಲ್ಪಡುವುದು. |
11
|
“ಇಬ್ಬರು ಗಂಡಸರು ಜಗಳವಾಡುತ್ತಿರುವಾಗ ಒಬ್ಬನ ಹೆಂಡತಿಯು ಗಂಡನಿಗೆ ಸಹಾಯಮಾಡಲಿಕ್ಕೆ ಬಂದು ಜಗಳವಾಡುವ ಇನ್ನೊಬ್ಬ ಗಂಡಸಿನ ಗುಪ್ತಾಂಗವನ್ನು ಹಿಡಿಯಬಾರದು. |
12
|
ಅಂಥವಳ ಕೈಯನ್ನು ಕಡಿದುಹಾಕಿರಿ; ದಯೆ ತೋರಿಸಬೇಡಿ. |
13
|
“ಮೋಸದ ತೂಕದ ಕಲ್ಲುಗಳನ್ನು ಉಪಯೋಗಿಸಬೇಡಿ. |
14
|
ನಿಮ್ಮ ಮನೆಯೊಳಗೆ ಮೋಸದ ತೂಕದ ಕಲ್ಲುಗಳನ್ನಿಡಬೇಡಿ. |
15
|
ನೀವು ಸರಿಯಾದ ತೂಕದ ಕಲ್ಲುಗಳನ್ನು ಉಪಯೋಗಿಸಬೇಕು. ಆಗ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡಲಿರುವ ದೇಶದಲ್ಲಿ ಬಹುಕಾಲ ಬಾಳುವಿರಿ. |
16
|
ಮೋಸವುಳ್ಳ ತೂಕದ ಕಲ್ಲುಗಳನ್ನು ಉಪಯೋಗಿಸುವವರನ್ನು ದೇವರಾದ ಯೆಹೋವನು ದ್ವೇಷಿಸುತ್ತಾನೆ. ಹೌದು, ಆತನು ಮೋಸ ಮಾಡುವವರನ್ನು ದ್ವೇಷಿಸುತ್ತಾನೆ. |
17
|
“ನೀವು ಈಜಿಪ್ಟಿನಿಂದ ಹೊರಬರುವಾಗ ಅಮಾಲೇಕ್ಯರು ನಿಮಗೆ ಏನು ಮಾಡಿದರೆಂಬುದನ್ನು ನೆನಪಿನಲ್ಲಿಡಿರಿ. |
18
|
ಅಮಾಲೇಕ್ಯರು ದೇವರನ್ನು ಗೌರವಿಸಲಿಲ್ಲ. ನೀವು ಆಯಾಸಗೊಂಡು ಬಲಹೀನರಾಗಿದ್ದಾಗ ಅವರು ನಿಮ್ಮ ಮೇಲೆ ಬಿದ್ದರು. ನಿಮ್ಮ ಗುಂಪಿನಲ್ಲಿ ಹಿಂದೆ ಉಳಿದವರನ್ನೆಲ್ಲಾ ಕೊಂದರು. |
19
|
ಆದುದರಿಂದಲೇ ಅಮಾಲೇಕ್ಯರನ್ನು ಈ ಭೂಮುಖದಲ್ಲಿರದಂತೆ ಮಾಡಬೇಕು. ನೀವು ನಿಮ್ಮ ದೇಶವನ್ನು ಪ್ರವೇಶಿಸುವಾಗ ನೀವು ಹಾಗೆ ಮಾಡಬೇಕು. ನಿಮ್ಮ ಸುತ್ತಮುತ್ತಲಿರುವ ವೈರಿಗಳಿಂದ ದೇವರು ನಿಮಗೆ ಶಾಂತಿಯನ್ನು ಅನುಗ್ರಹಿಸುವನು. ಆದರೆ ಅಮಾಲೇಕ್ಯರನ್ನು ನಾಶಮಾಡುವ ಕಾರ್ಯವನ್ನು ಮರೆಯಬೇಡಿರಿ. |
Deuteronomy 25:1 Kannada Language Bible Words basic statistical display
COMING SOON ...