Bible Languages

Indian Language Bible Word Collections

Bible Versions

Books

2 Samuel Chapters

2 Samuel 22 Verses

Bible Versions

Books

2 Samuel Chapters

2 Samuel 22 Verses

1 ಯೆಹೋವನು ದಾವೀದನನ್ನು ಸೌಲನಿಂದ ಮತ್ತು ಅವನ ಇತರ ಎಲ್ಲಾ ಶತ್ರುಗಳಿಂದ ರಕ್ಷಿಸಿದನು. ಆ ಸಮಯದಲ್ಲಿ ದಾವೀದನು ಈ ಹಾಡನ್ನು ರಚಿಸಿ ಹಾಡಿದನು:
2 ಯೆಹೋವನು ನನ್ನ ಬಂಡೆ; ನನ್ನ ಕೋಟೆ; ನನ್ನ ವಿಮೋಚಕ.
3 ನಾನು ಸಹಾಯಕ್ಕಾಗಿ ದೇವರ ಬಳಿಗೆ ಓಡಿಹೋಗುತ್ತೇನೆ. ಆತನೇ ನನ್ನ ಆಶ್ರಯಗಿರಿ. ಯೆಹೋವನು ನನ್ನ ಗುರಾಣಿ. ಆತನ ಶಕ್ತಿಯು ನನ್ನನ್ನು ರಕ್ಷಿಸುತ್ತದೆ. ಆತನು ನಾನು ಅಡಗಿಕೊಳ್ಳುವ ಸ್ಥಳ; ಬೆಟ್ಟಗಳ ಮೇಲಿರುವ ನನ್ನ ಸುರಕ್ಷಿತ ಸ್ಥಳ; ಆತನು ನನ್ನನ್ನು ಕ್ರೂರ ಶತ್ರುಗಳಿಂದ ರಕ್ಷಿಸುವನು!
4 ಯೆಹೋವನು ಸ್ತೋತ್ರಕ್ಕೆ ಅರ್ಹನಾಗಿದ್ದಾನೆ. ನಾನು ಸಹಾಯಕ್ಕಾಗಿ ಆತನನ್ನು ಕರೆಯುವೆನು. ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುವನು.
5 ಸಾವಿನ ಅಲೆಗಳು ನನ್ನನ್ನು ಸುತ್ತುವರೆದಿವೆ; ತೊಂದರೆಗಳು ಪ್ರವಾಹದಂತೆ ನುಗ್ಗಿಬಂದಿವೆ. ಅವೆಲ್ಲ ನನ್ನಲ್ಲಿ ಭೀತಿಯನ್ನು ಉಂಟುಮಾಡಿವೆ.
6 ಪಾತಾಳದ ಪಾಶಗಳು ನನ್ನನ್ನು ಸುತ್ತುವರೆದಿವೆ; ಮರಣಕರವಾದ ಉರುಲುಗಳು ನನ್ನೆದುರಿನಲ್ಲಿವೆ.
7 ನಾನು ಅವುಗಳಲ್ಲಿ ಸಿಲುಕಿಕೊಂಡಿದ್ದಾಗ ಯೆಹೋವನಿಗೆ ಪ್ರಾರ್ಥಿಸಿದೆನು. ಹೌದು, ನನ್ನ ದೇವರಿಗೆ ನಾನು ಮೊರೆಯಿಟ್ಟೆನು; ತನ್ನ ಆಲಯದಲ್ಲಿದ್ದ ಆತನಿಗೆ ನನ್ನ ಸ್ವರ ಕೇಳಿಸಿತು; ಸಹಾಯಕ್ಕಾಗಿ ನಾನಿಟ್ಟ ಮೊರೆಗೆ ಆತನು ಕಿವಿಗೊಟ್ಟನು.
8 ಆಗ ಭೂಮಿಯು ಗಡಗಡನೆ ನಡುಗಿತು. ಆಕಾಶದ ಅಡಿಪಾಯಗಳು ಅಲುಗಾಡಿದವು. ಏಕೆಂದರೆ ಯೆಹೋವನಿಗೆ ಸಿಟ್ಟೇರಿತ್ತು!
9 ಆತನ ಮೂಗಿನ ಹೊಳ್ಳೆಗಳಿಂದ ಹೊಗೆಯು ಹೊರಬಂದಿತು. ಬೆಂಕಿಕಿಡಿಯ ಜ್ವಾಲೆಗಳು ಆತನ ಬಾಯಿಂದ ಹೊರಬಂದವು; ದಹಿಸುವ ಬೆಂಕಿಯು ಆತನ ಬಾಯೊಳಗಿಂದ ಬಂದಿತು.
10 ಆತನು ಆಕಾಶವನ್ನು ಇಬ್ಭಾಗಮಾಡಿ ಕೆಳಗಿಳಿದು ಬಂದನು! ಆತನ ಕಾಲುಗಳ ಕೆಳಗೆ ಕತ್ತಲೆ ಕವಿದಿತ್ತು.
11 ಆತನು ಕೆರೂಬಿಗಳ ಮೇಲೆ ಕುಳಿತು, ಹಾರಿದನು. ಹೌದು, ಗಾಳಿಯ ರೆಕ್ಕೆಗಳಲ್ಲಿ ಆತನು ಕುಳಿತು ಹಾರುವುದನ್ನು ಜನರು ನೋಡಿದರು!
12 ಆತನು ಕಾರ್ಮೋಡಗಳನ್ನೇ ತನ್ನ ಸುತ್ತಲೂ ಗುಡಾರದಂತಾಗಿಸಿಕೊಂಡನು. ಆತನು ಆಕಾಶದ ನೀರನ್ನು, ಗುಡುಗುವ ದೊಡ್ಡ ಮೋಡಗಳನ್ನು ತನ್ನ ಸುತ್ತಲೂ ಕವಿಸಿಕೊಂಡನು.
13 ಉರಿಯುವ ಕಲ್ಲಿದ್ದಲಿನಂತಿದ್ದ ಕಿಡಿಗಳು ಆತನ ಸುತ್ತಲೂ ಇದ್ದ ಬೆಳಕಿನಿಂದ ಬಂದವು.
14 ಯೆಹೋವನು ಆಕಾಶದಿಂದ ಗುಡುಗಿದನು! ಸರ್ವೋನ್ನತನಾದ ದೇವರು ತನ್ನ ಸ್ವರ ಕೇಳುವಂತೆ ಮಾಡಿದನು.
15 ಆತನಿಂದ ಹೊರಟ ಬಾಣಗಳು ಶತ್ರುಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿದವು. ಆತನು ಸಿಡಿಲನ್ನು ಉಂಟುಮಾಡಿದನು, ಜನರು ಭೀತಿಯಿಂದ ಓಡಿಹೋದರು.
16 ಯೆಹೋವನೇ, ನೀನು ಗದರಿಸಿದಾಗ ನಿನ್ನ ಬಾಯಿಂದ ಪ್ರಬಲವಾದ ಗಾಳಿಯು ಬೀಸಿತು; ನೀರು ಹಿಂದಕ್ಕೆ ತಳ್ಳಲ್ಪಟ್ಟಿತು. ಸಮುದ್ರದ ತಳವೂ ಭೂಮಿಯ ಅಸ್ತಿವಾರಗಳು ಕಣ್ಣಿಗೆ ಗೋಚರವಾದವು.
17 ಆತನು ಮೇಲಿನ ಲೋಕದಿಂದ ಕೆಳಗಿಳಿದನು. ಆತನು ನನ್ನನ್ನು ಹಿಡಿದುಕೊಂಡು ನನ್ನನ್ನು ನೀರಿನಡಿಯಿಂದ ಮೇಲಕ್ಕೆತ್ತಿದನು.
18 ನನ್ನನ್ನು ದ್ವೇಷಿಸುತ್ತಿದ್ದ ಶತ್ರುಗಳಿಂದ ಆತನೇ ರಕ್ಷಿಸಿದನು. ನನ್ನ ಶತ್ರುಗಳು ನನಗಿಂತಲೂ ಬಹಳ ಬಲಿಷ್ಠರೂ ಸೊಕ್ಕಿದವರೂ ಆಗಿದ್ದರು. ಅವರ ಕೈಯಿಂದ ಆತನೇ ನನ್ನನ್ನು ರಕ್ಷಿಸಿದನು.
19 ಶತ್ರುಗಳು ನನಗೆ ಮುತ್ತಿಗೆ ಹಾಕಿದಾಗ ನಾನು ತೊಂದರೆಯಲ್ಲಿದ್ದೆನು. ಆದರೆ ನನಗೆ ಯೆಹೋವನು ಸಹಾಯ ಮಾಡಿದನು.
20 ಆತನು ನನ್ನನ್ನು ಸುರಕ್ಷಿತವಾದ ಸ್ಥಳಕ್ಕೆ ತಂದನು. ಆತನು ನನ್ನನ್ನು ಪ್ರೀತಿಸಿ ರಕ್ಷಿಸಿದನು.
21 ಯೆಹೋವನು ನನಗೆ ಪ್ರತಿಫಲ ಕೊಡುವನು, ಏಕೆಂದರೆ ನಾನು ನೀತಿಗನುಸಾರವಾಗಿ ಮಾಡಿದೆನು. ಆತನು ನನಗೆ ಕೊಡುಗೆಗಳನ್ನು ಕೊಡುವನು, ಏಕೆಂದರೆ ನನ್ನ ಕೈಗಳು ದುಷ್ಟತನದಿಂದ ಮುಕ್ತವಾಗಿವೆ.
22 ಏಕೆಂದರೆ ಆತನ ಮಾರ್ಗಕ್ಕೆ ನಾನು ವಿಧೇಯನಾಗಿದ್ದೇನೆ! ನನ್ನ ದೇವರ ವಿರುದ್ಧ ನಾನು ಪಾಪವನ್ನು ಮಾಡಲಿಲ್ಲ.
23 ನಾನು ಯೆಹೋವನ ಆಜ್ಞೆಗಳನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವೆನು. ನಾನು ಆತನ ಕಟ್ಟಳೆಗಳನ್ನು ಪಾಲಿಸುವೆನು!
24 ನಾನು ದೋಷಿಯಲ್ಲವೆಂಬುದು ಆತನಿಗೆ ತಿಳಿದಿದೆ. ನಾನು ಪಾಪದಲ್ಲಿ ಬೀಳದಂತೆ ಎಚ್ಚರಿಕೆ ವಹಿಸಿದೆನು.
25 ನಾನು ಒಳ್ಳೆಯದನ್ನೇ ಮಾಡಿದೆನು. ಯೆಹೋವನ ದೃಷ್ಟಿಯಲ್ಲಿ ನಾನು ತಪ್ಪೇನೂ ಮಾಡಲಿಲ್ಲ, ಆದ್ದರಿಂದ ಆತನು ನನಗೆ ಪ್ರತಿಫಲ ಕೊಡುವನು!
26 ನಿನ್ನನ್ನು ಪ್ರೀತಿಸುವವರನ್ನು ನೀನು ಪ್ರೀತಿಸುತ್ತಿ. ನಿನ್ನ ಮುಂದೆ ದೋಷವಿಲ್ಲದವನಾಗಿ ನಡೆಯುವವನಿಗೆ ನಿರ್ದೋಷಿಯಾಗಿರುತ್ತಿ.
27 ನೀನು ಪರಿಶುದ್ಧರಿಗೆ ಪರಿಶುದ್ಧನಾಗಿರುವೆ; ಮೋಸಗಾರರಿಗೆ ಜಾಣನಾಗಿರುವೆ.
28 ನೀನು ದೀನರನ್ನು ಮೇಲಕ್ಕೆತ್ತುವೆ; ಗರ್ವಿಷ್ಠರನ್ನಾದರೊ ತುಳಿದುಬಿಡುವೆ.
29 ಯೆಹೋವನೇ, ನನ್ನ ದೀಪವು ನೀನೇ. ಯೆಹೋವನು ನನಗೆ ಬೆಳಕು ಕೊಟ್ಟು ನನ್ನ ಸುತ್ತಲಿನ ಅಂಧಕಾರವನ್ನು ಪ್ರಕಾಶಮಯವಾಗುವಂತೆ ಮಾಡುವನು.
30 ನಿನ್ನ ಸಹಾಯದಿಂದಲೇ, ನಾನು ವೈರಿಗಳ ಮೇಲೆ ಬೀಳುವೆನು. ನಿನ್ನ ಸಹಾಯದಿಂದಲೇ ನಾನು ಶತ್ರುಗಳ ಗೋಡೆಗಳನ್ನು ಹತ್ತಬಲ್ಲೆನು.
31 ದೇವರ ಶಕ್ತಿಯು ಪರಿಪೂರ್ಣವಾದದ್ದು. ಯೆಹೋವನ ಮಾತು ಪರೀಕ್ಷಿಸಲ್ಪಟ್ಟದ್ದು; ಆತನು ತನ್ನಲ್ಲಿ ಭರವಸೆಯಿಟ್ಟವರನ್ನು ಸಂರಕ್ಷಿಸುತ್ತಾನೆ.
32 ಯೆಹೋವನ ಹೊರತು ಬೇರೆ ದೇವರಿಲ್ಲ. ನಮ್ಮ ದೇವರ ಹೊರತು ಬೇರೆ ಬಂಡೆಯಿಲ್ಲ.
33 ದೇವರು ನನ್ನ ಬಲವೂ ಕೋಟೆಯೂ ಆಗಿದ್ದಾನೆ. ಆತನು ನನ್ನ ಮಾರ್ಗವನ್ನು ದೋಷವಿಲ್ಲದ್ದಾಗಿ ಮಾಡುತ್ತಾನೆ.
34 ನಾನು ಉನ್ನತ ಪ್ರದೇಶಗಳಲ್ಲಿ ನಿಲ್ಲುವಂತೆ ಆತನು ನನ್ನ ಕಾಲುಗಳನ್ನು ಜಿಂಕೆಯ ಕಾಲುಗಳಂತೆ ಮಾಡುತ್ತಾನೆ.
35 ಆತನು ಯುದ್ಧಕ್ಕಾಗಿ ನನ್ನನ್ನು ತರಬೇತುಗೊಳಿಸುವನು. ಆದುದರಿಂದ ನನ್ನ ತೋಳುಗಳು ಹಿತ್ತಾಳೆಯ ಬಿಲ್ಲನ್ನೂ ಬಗ್ಗಿಸಬಲ್ಲವು.
36 ದೇವರೇ, ನೀನು ನನ್ನನ್ನು ಸಂರಕ್ಷಿಸಿ ಜಯಹೊಂದಲು ನನಗೆ ಸಹಾಯಮಾಡಿರುವೆ. ನನ್ನ ಶತ್ರುವನ್ನು ಸೋಲಿಸಲು ನೀನು ನನಗೆ ಸಹಾಯ ಮಾಡಿರುವೆ.
37 ನನ್ನ ಕಾಲುಗಳನ್ನೂ ಕೀಲುಗಳನ್ನೂ ಬಲಗೊಳಿಸು; ಆಗ ನಾನು ಎಡವದೆ ವೇಗವಾಗಿ ನಡೆಯಬಲ್ಲೆನು.
38 ನಾನು ನನ್ನ ಶತ್ರುಗಳನ್ನು ಅಟ್ಟಿಸಿಕೊಂಡು ಹೋದೆನು. ನಾನು ಅವರನ್ನು ನಾಶಗೊಳಿಸಿದೆನು! ನಾನು ನನ್ನ ಶತ್ರುಗಳನ್ನು ನಾಶಗೊಳಿಸುವ ತನಕ ಹಿಂದಿರುಗುವುದಿಲ್ಲ.
39 ನಾನು ನನ್ನ ಶತ್ರುಗಳನ್ನು ನಾಶಗೊಳಿಸಿದೆನು! ನಾನು ಅವರನ್ನು ಸಂಪೂರ್ಣವಾಗಿ ನಾಶಗೊಳಿಸಿದೆನು. ಅವರು ಮತ್ತೆ ಮೇಲೇಳುವುದಿಲ್ಲ. ಹೌದು, ನನ್ನ ಶತ್ರುಗಳು ನನ್ನ ಪಾದಗಳ ಕೆಳಗೆ ಬಿದ್ದಿದ್ದಾರೆ.
40 ದೇವರೇ, ನೀನು ನನ್ನನ್ನು ಯುದ್ಧಕ್ಕಾಗಿ ಬಲಪಡಿಸಿರುವೆ. ನನ್ನ ಶತ್ರುಗಳನ್ನು ನನಗೆ ಅಧೀನರಾಗುವಂತೆ ಮಾಡಿರುವೆ.
41 ನನ್ನ ಶತ್ರುಗಳು ಓಡಿಹೋಗಲು ನೀನೇ ಕಾರಣ. ಆದ್ದರಿಂದಲೇ ನನ್ನನ್ನು ದ್ವೇಷಿಸಿದ ಜನರನ್ನು ನಾನು ನಾಶ ಮಾಡಿದೆನು.
42 ನನ್ನ ಶತ್ರುಗಳು ಸಹಾಯಕ್ಕಾಗಿ ನೋಡಿದರು. ಆದರೆ ಅವರನ್ನು ರಕ್ಷಿಸಲು ಅಲ್ಲಿ ಯಾರೂ ಇರಲಿಲ್ಲ. ಅವರು ಯೆಹೋವನ ಕಡೆಗೂ ನೋಡಿದರು; ಆದರೆ ಆತನು ಅವರಿಗೆ ಉತ್ತರ ಕೊಡಲಿಲ್ಲ.
43 ನಾನು ನನ್ನ ಶತ್ರುಗಳನ್ನು ತುಂಡುತುಂಡಾಗಿ ಕತ್ತರಿಸಿಹಾಕಿದೆ. ಅವರು ನೆಲದ ಮೇಲಿನ ಧೂಳಿನಂತಾದರು. ನನ್ನ ಶತ್ರುಗಳನ್ನು ರಸ್ತೆಯಲ್ಲಿನ ಮಣ್ಣಿನಂತಾಗುವವರೆಗೆ ತುಳಿದುಬಿಟ್ಟೆನು.
44 ಜನರು ನನ್ನ ವಿರುದ್ಧ ವಾದಿಸಿದಾಗ ನೀನು ನನ್ನನ್ನು ರಕ್ಷಿಸಿದೆ. ನೀನು ನನ್ನನ್ನು ಜನಾಂಗಗಳಿಗೆ ಅಧಿಪತಿಯನ್ನಾಗಿ ಮಾಡಿದೆ. ನಾನು ತಿಳಿಯದ ಜನರೂ ನನ್ನ ಸೇವೆಮಾಡುತ್ತಾರೆ!
45 ಅನ್ಯದೇಶದ ಜನರೂ ನನಗೆ ವಿಧೇಯರಾಗಿರುವರು! ಅವರು ನನ್ನ ಬಗ್ಗೆ ಕೇಳಿದಾಗ, ತಕ್ಷಣವೇ ನನಗೆ ವಿಧೇಯರಾಗುವರು! ಆ ಪರದೇಶಿಯರು ನನಗೆ ಭಯಪಡುವರು.
46 ಅನ್ಯದೇಶದ ಜನರು ಭಯಗೊಳ್ಳುವರು; ತಾವು ಅಡಗಿದ್ದ ಸ್ಥಳಗಳಿಂದ ನಡುಗುತ್ತಾ ಹೊರ ಬರುವರು.
47 ಯೆಹೋವನು ಜೀವಸ್ವರೂಪನಾಗಿದ್ದಾನೆ. ನನ್ನ ಬಂಡೆಗೆ ಸ್ತೋತ್ರವಾಗಲಿ. ಯೆಹೋವನು ಮಹೋನ್ನತನು! ನನ್ನನ್ನು ರಕ್ಷಿಸುವ ಬಂಡೆಯಾದಾತನಿಗೆ ಸ್ತುತಿಯುಂಟಾಗಲಿ.
48 ನನ್ನ ಶತ್ರುಗಳನ್ನು ನನಗಾಗಿ ದಂಡಿಸುವ ದೇವರು ಆತನೇ. ಆತನು ಜನರನ್ನು ನನ್ನ ಅಧೀನತೆಗೆ ಒಳಪಡಿಸುವನು.
49 ನನ್ನ ಶತ್ರುಗಳಿಂದ ನನ್ನನ್ನು ಸ್ವತಂತ್ರನಾಗಿಸುವವನು ದೇವರೇ. ಹೌದು, ನೀನು ನನ್ನನ್ನು ನನ್ನ ಶತ್ರುಗಳಿಂದ ತಪ್ಪಿಸಿ ಮೇಲಕ್ಕೇರಿಸುವೆ. ನನ್ನನ್ನು ಹಿಂಸಿಸಬೇಕೆನ್ನುವ ಮನುಷ್ಯನಿಂದ ನೀನು ನನಗೆ ರಕ್ಷಣೆ ನೀಡುವೆ.
50 ಯೆಹೋವನೇ, ಈ ಕಾರಣದಿಂದಲೇ ನಾನು ಪರಜನರ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು. ಈ ಕಾರಣದಿಂದಲೇ ನಿನ್ನ ಹೆಸರಿನ ಮೇಲೆ ಹಾಡುಗಳನ್ನು ಹಾಡುವೆನು.
51 ಆತನು ತಾನು ನೇಮಿಸಿದ ರಾಜನಿಗೆ ಸಹಾಯಮಾಡಿ ಯುದ್ಧಗಳಲ್ಲಿ ಜಯ ದಯಪಾಲಿಸುವನು. ಆತನು ನನ್ನ ರಕ್ಷಣಾ ದುರ್ಗವಾಗಿದ್ದಾನೆ. ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಪ್ರೀತಿಯನ್ನು ಮತ್ತು ದಯೆಯನ್ನು ತೋರುವನು. ದಾವೀದನಿಗೆ ಮತ್ತು ಅವನ ಸಂತತಿಯವರಿಗೆ ಆತನು ಎಂದೆಂದಿಗೂ ಕೃಪೆ ತೋರಿಸುವವನಾಗಿದ್ದಾನೆ.

2-Samuel 22:1 Kannada Language Bible Words basic statistical display

COMING SOON ...

×

Alert

×