1
|
ಆಗ ಇಸ್ರೇಲಿನ ಕುಲಗಳವರೆಲ್ಲಾ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು, “ನಾವೆಲ್ಲಾ ಒಂದೇ ಕುಲದವರಾಗಿದ್ದೇವೆ. |
2
|
ಹಿಂದಿನ ದಿನಗಳಲ್ಲಿ, ಸೌಲನು ರಾಜನಾಗಿದ್ದಾಗಲೂ ನಮ್ಮನ್ನು ಯುದ್ಧದಲ್ಲಿ ಮುನ್ನಡೆಸಿದವನು ನೀನೇ. ಯೆಹೋವನು ನಿನ್ನನ್ನು ಕುರಿತು, ‘ನೀನು ನನ್ನ ಜನರಾದ ಇಸ್ರೇಲರ ನಾಯಕನೂ ಪಾಲಕನೂ ಆಗಿರುವೆ’ ಎಂದು ಹೇಳಿದ್ದಾನೆ” ಎಂದರು. |
3
|
ರಾಜನಾದ ದಾವೀದನಿದ್ದ ಹೆಬ್ರೋನಿಗೆ ಇಸ್ರೇಲಿನ ಎಲ್ಲಾ ನಾಯಕರೂ ಬಂದರು. ಹೆಬ್ರೋನಿನಲ್ಲಿ ರಾಜನಾದ ದಾವೀದನು ಯೆಹೋವನ ಸನ್ನಿಧಿಯಲ್ಲಿ ಈ ನಾಯಕರೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಆಗ ನಾಯಕರು ದಾವೀದನನ್ನು ಇಸ್ರೇಲಿನ ರಾಜನನ್ನಾಗಿ ಅಭಿಷೇಕಿಸಿದರು. |
4
|
ದಾವೀದನು ಆಳುವುದಕ್ಕೆ ಪ್ರಾರಂಭಿಸಿದಾಗ ಅವನಿಗೆ ಮೂವತ್ತು ವರ್ಷ ವಯಸ್ಸಾಗಿತ್ತು. ಅವನು ನಲವತ್ತು ವರ್ಷಗಳ ಕಾಲ ಆಳಿದನು. |
5
|
ಅವನು ಏಳು ವರ್ಷ ಆರು ತಿಂಗಳ ಕಾಲ ಹೆಬ್ರೋನಿನಲ್ಲಿದ್ದು ಯೆಹೂದ್ಯರನ್ನು ಆಳಿದನು. ಅವನು ಮೂವತ್ತಮೂರು ವರ್ಷ ಜೆರುಸಲೇಮಿನಲ್ಲಿದ್ದು ಸಮಸ್ತ ಇಸ್ರೇಲನ್ನು ಮತ್ತು ಯೆಹೂದವನ್ನು ಆಳಿದನು. |
6
|
ದಾವೀದನು ಯೆಬೂಸಿಯರಿಗೆ ವಿರುದ್ಧವಾಗಿ ಜೆರುಸಲೇಮಿಗೆ ತನ್ನ ಜನರೊಂದಿಗೆ ಹೋದನು. (ಯೆಬೂಸಿಯರು ಆ ದೇಶದ ಮೂಲನಿವಾಸಿಗಳು.) ಯೆಬೂಸಿಯರು ದಾವೀದನಿಗೆ, “ನೀನು ನಮ್ಮ ನಗರದೊಳಕ್ಕೆ ಬರಲಾಗದು. ಕುರುಡರು ಮತ್ತು ಕುಂಟರು ಸಹ ನಿನ್ನನ್ನು ತಡೆಯಬಲ್ಲರು” ಎಂದು ಹೇಳಿದರು. (ದಾವೀದನು ಅವರ ನಗರದೊಳಕ್ಕೆ ಪ್ರವೇಶಿಸಲು ಸಮರ್ಥನಲ್ಲವೆಂದು ಅವರು ಈ ರೀತಿ ಹೇಳಿದರು. |
7
|
ಆದರೆ ದಾವೀದನು ಚೀಯೋನ್ ಕೋಟೆಯನ್ನು ವಶಪಡಿಸಿಕೊಂಡನು. ಈ ಕೋಟೆಗೆ ದಾವೀದ ನಗರವೆಂದು ಹೆಸರಾಯಿತು.) |
8
|
ದಾವೀದನು ತನ್ನ ಜನರಿಗೆ ಅಂದು, “ನೀವು ಯೆಬೂಸಿಯರನ್ನು ಸೋಲಿಸಬೇಕೆಂದಿದ್ದರೆ ಜಲಮಾರ್ಗದ ಮೂಲಕ ಹೋಗಿ ಶತ್ರುಗಳಾದ ‘ಕುಂಟರು ಮತ್ತು ಕುರುಡರನ್ನು ಎದುರಿಸಿ” ಎಂದು ಹೇಳಿದನು. ಆದುದರಿಂದಲೇ “ಕುರುಡರು ಮತ್ತು ಕುಂಟರು ಮನೆಯೊಳಕ್ಕೆ ಬರಲಾಗದು” ಎಂಬ ನಾಣ್ಣುಡಿ ಉಂಟಾಯಿತು. |
9
|
ದಾವೀದನು ಕೋಟೆಯಲ್ಲಿ ನೆಲೆಸಿದ್ದನು. ಅವನು ಆ ಕೋಟೆಗೆ “ದಾವೀದನ ನಗರ”ವೆಂದು ಕರೆದನು. ದಾವೀದನು ಮಿಲ್ಲೋವನ್ನು ಕಟ್ಟಿಸಿದನು. ಅವನು ನಗರದಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿದನು. |
10
|
ಸರ್ವಶಕ್ತನಾದ ಯೆಹೋವನು ದಾವೀದನೊಂದಿಗೆ ಇದ್ದುದರಿಂದ ಅವನು ಬಲಶಾಲಿಯಾಗುತ್ತಲೇ ಇದ್ದನು. |
11
|
ತೂರಿನ ರಾಜನಾದ ಹೀರಾಮನು ದಾವೀದನ ಬಳಿಗೆ ಸಂದೇಶಕರನ್ನು ಕಳುಹಿಸಿದನು. ಹೀರಾಮನು ದೇವದಾರು ಮರಗಳನ್ನು, ಬಡಗಿಗಳನ್ನು ಮತ್ತು ಕಲ್ಲಿನಲ್ಲಿ ಕೆತ್ತನೆ ಮಾಡುವ ಶಿಲ್ಪಿಗಳನ್ನೂ ಸಹ ಕಳುಹಿಸಿದನು. ಅವರು ದಾವೀದನಿಗಾಗಿ ಒಂದು ಮನೆಯನ್ನು ಕಟ್ಟಿದರು. |
12
|
ಯೆಹೋವನು ನಿಜವಾಗಿಯೂ ತನ್ನನ್ನು ಇಸ್ರೇಲಿನ ರಾಜನನ್ನಾಗಿ ಮಾಡಿದ್ದಾನೆಂಬುದನ್ನೂ ಆತನು ತನ್ನ ಜನರಾದ ಇಸ್ರೇಲರಿಗಾಗಿ ನನ್ನ ರಾಜ್ಯವನ್ನು ಸ್ಥಿರಪಡಿಸಿದ್ದಾನೆಂತಲೂ ದಾವೀದನು ಇದರ ಮೂಲಕ ತಿಳಿದುಕೊಂಡನು. |
13
|
ದಾವೀದನು ಹೆಬ್ರೋನಿನಿಂದ ಜೆರುಸಲೇಮಿಗೆ ಹೋದನು. ದಾವೀದನಿಗೆ ಜೆರುಸಲೇಮಿನಲ್ಲಿ ಅನೇಕ ಪತ್ನಿಯರೂ ಉಪಪತ್ನಿಯರೂ ಇದ್ದರು. ಜೆರುಸಲೇಮಿನಲ್ಲಿ ದಾವೀದನಿಗೆ ಅನೇಕ ಮಕ್ಕಳು ಹುಟ್ಟಿದರು. |
14
|
ಜೆರುಸಲೇಮಿನಲ್ಲಿ ದಾವೀದನಿಗೆ ಹುಟ್ಟಿದ ಗಂಡುಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್, |
15
|
ಇಬ್ಹಾರ್, ಎಲೀಷೂವ, ನೆಫೆಗ್, ಯಾಫೀಯ, |
16
|
ಎಲೀಷಾಮ, ಎಲ್ಯಾದ, ಎಲೀಫೆಲೆಟ್. |
17
|
ಇಸ್ರೇಲರು ದಾವೀದನನ್ನು ತಮ್ಮ ರಾಜನನ್ನಾಗಿ ಅಭಿಷೇಕಿಸಿದ್ದಾರೆಂಬುದು ಫಿಲಿಷ್ಟಿಯರಿಗೆ ತಿಳಿದಾಗ, ಫಿಲಿಷ್ಟಿಯರೆಲ್ಲ ದಾವೀದನನ್ನು ಹಿಡಿಯಲು ಹಾಗೂ ಅವನನ್ನು ಕೊಲ್ಲಲು ಹೋದರು. ಆದರೆ ಈ ಸುದ್ದಿಯು ದಾವೀದನಿಗೆ ತಿಳಿಯಿತು. ಅವನು ಕೋಟೆಗೆ ಹೊರಟು ಹೋದನು. |
18
|
ಫಿಲಿಷ್ಟಿಯರು ಬಂದು ರೆಫಾಯೀಮ್ ಕಣಿವೆಯಲ್ಲಿ ಪಾಳೆಯವನ್ನು ಮಾಡಿದರು. |
19
|
ದಾವೀದನು ಯೆಹೋವನಿಗೆ “ಫಿಲಿಷ್ಟಿಯರ ವಿರುದ್ಧ ಹೋರಾಡಲು ನಾನು ಹೋಗಬಹುದೇ? ಫಿಲಿಷ್ಟಿಯರನ್ನು ಸೋಲಿಸಲು ನೀನು ಸಹಾಯ ಮಾಡುವೆಯಾ?” ಎಂದು ಕೇಳಿದನು. ಯೆಹೋವನು ದಾವೀದನಿಗೆ, “ಹೋಗು, ಫಿಲಿಷ್ಟಿಯರನ್ನು ಸೋಲಿಸಲು ನಾನು ಖಂಡಿತವಾಗಿಯೂ ನಿನಗೆ ಸಹಾಯ ಮಾಡುತ್ತೇನೆ” ಎಂದು ಹೇಳಿದನು. |
20
|
ಆಗ ದಾವೀದನು ಬಾಳ್ಪೆರಾಚೀಮ್ಗೆ ಬಂದನು. ಅಲ್ಲಿ ಅವನು ಫಿಲಿಷ್ಟಿಯರನ್ನು ಸೋಲಿಸಿದನು. ದಾವೀದನು, “ಕಟ್ಟೆಯೊಡೆದ ಪ್ರವಾಹವು ನುಗ್ಗಿ ನಾಶಮಾಡುವಂತೆ ಯೆಹೋವನು ನನ್ನ ಶತ್ರುಗಳನ್ನು ನನ್ನ ಎದುರಿನಲ್ಲೇ ನಾಶಪಡಿಸಿದನು” ಎಂದನು. ಆದುದರಿಂದ ಅವನು ಆ ಸ್ಥಳಕ್ಕೆ “ಬಾಳ್ಪೆರಾಚೀಮ್” ಎಂದು ಹೆಸರಿಟ್ಟನು. |
21
|
ಫಿಲಿಷ್ಟಿಯರು ತಮ್ಮ ದೇವರ ವಿಗ್ರಹಗಳನ್ನು ಬಾಳ್ಪೆರಾಚೀಮ್ನಲ್ಲಿಯೇ ಬಿಟ್ಟುಹೋದರು. ದಾವೀದನು ಮತ್ತು ಅವನ ಜನರು ಈ ವಿಗ್ರಹಗಳನ್ನು ತೆಗೆದುಕೊಂಡು ಹೋದರು. |
22
|
ಫಿಲಿಷ್ಟಿಯರು ಮತ್ತೆ ರೆಫಾಯೀಮ್ ಕಣಿವೆಗೆ ಬಂದು ಪಾಳೆಯವನ್ನು ಮಾಡಿದರು. |
23
|
ದಾವೀದನು ಯೆಹೋವನಿಗೆ ಪ್ರಾರ್ಥಿಸಿದನು. ಈ ಸಮಯದಲ್ಲಿ ಯೆಹೋವನು ದಾವೀದನಿಗೆ, “ಅಲ್ಲಿಗೆ ಹೋಗಬೇಡ. ಅವರ ಸೈನ್ಯವನ್ನು ಸುತ್ತಿಕೊಂಡು ಹಿಂದಿನಿಂದ ಅವರನ್ನು ಸಮೀಪಿಸು. ಬಾಲ್ಯಾಮ್ ಮರಗಳಿರುವ ಮತ್ತೊಂದು ಕಡೆಯಿಂದ ಅವರ ಮೇಲೆ ಆಕ್ರಮಣ ಮಾಡು. |
24
|
ಮರಗಳ ತುದಿಯಲ್ಲಿರುವ ನಿಮಗೆ ಫಿಲಿಷ್ಟಿಯರು ಯುದ್ಧಕ್ಕೆ ಹೊರಡುವುದು ಕೇಳಿಸುತ್ತದೆ. ಆಗ ನೀನು ತ್ವರಿತಗತಿಯಿಂದ ಕಾರ್ಯನಿರತನಾಗು. ಆಗ ಯೆಹೋವನಾದ ನಾನು ನಿನಗಾಗಿ ಅದೇ ಸಮಯದಲ್ಲಿ ಫಿಲಿಷ್ಟಿಯರನ್ನು ಸೋಲಿಸಲು ನಿಮ್ಮ ಮುಂದೆ ನಾನು ಹೋಗುತ್ತೇನೆ” ಎಂದು ಹೇಳಿದನು. |
25
|
ಯೆಹೋವನು ಆಜ್ಞಾಪಿಸಿದಂತೆಯೇ ದಾವೀದನು ಮಾಡಿದನು. ಅವನು ಫಿಲಿಷ್ಟಿಯರನ್ನು ಸೋಲಿಸಿ ಗೆಬದಿಂದ ಗೆಜೆರಿನವರೆಗೆ ಅವರನ್ನು ಅಟ್ಟಿಸಿಕೊಂಡು ಹೋಗಿ ದಾರಿಯುದ್ದಕ್ಕೂ ಅವರನ್ನು ಕೊಂದನು. |
2-Samuel 5:1 Kannada Language Bible Words basic statistical display
COMING SOON ...