Indian Language Bible Word Collections
Psalms 78:8
Psalms Chapters
Psalms 78 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Psalms Chapters
Psalms 78 Verses
1
ನನ್ನ ಜನರೇ, ನನ್ನ ಉಪದೇಶಗಳಿಗೆ ಕಿವಿಗೊಡಿರಿ; ನನ್ನ ನುಡಿಗಳನ್ನು ಲಾಲಿಸಿರಿ.
2
ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು; ಪೂರ್ವಕಾಲದ ಗೂಡಾರ್ಥಗಳನ್ನು ಹೊರಪಡಿಸುವೆನು.
3
ನಾವು ಅವುಗಳನ್ನು ಕಿವಿಯಾರೆ ಕೇಳಿದ್ದೇವೆ. ನಮ್ಮ ಪೂರ್ವಿಕರೇ ಅವುಗಳನ್ನು ನಮಗೆ ಹೇಳಿದರು.
4
ನಾವು ಅವುಗಳನ್ನು ಮರೆಯುವುದೇ ಇಲ್ಲ. ನಮ್ಮ ಜನರು ಕೊನೆಯ ತಲೆಮಾರಿನವರೆಗೂ ಅವುಗಳನ್ನು ಹೇಳುತ್ತಲೇ ಇರುವರು. ನಾವೆಲ್ಲರೂ ಯೆಹೋವನ ಪರಾಕ್ರಮವನ್ನೂ ಅದ್ಭುತಕಾರ್ಯಗಳನ್ನೂ ಹೇಳುತ್ತಾ ಕೊಂಡಾಡುವೆವು.
5
ಆತನು ಯಾಕೋಬನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು. ಆತನು ಇಸ್ರೇಲರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು. ಆತನು ನಮ್ಮ ಪೂರ್ವಿಕರಿಗೆ ಆಜ್ಞೆಗಳನ್ನು ಕೊಟ್ಟನು. ನಿಮ್ಮ ಸಂತತಿಗಳವರಿಗೆ ಧರ್ಮಶಾಸ್ತ್ರವನ್ನು ಉಪದೇಶಿಸಿರಿ ಎಂದು ಆತನು ನಮ್ಮ ಪೂರ್ವಿಕರಿಗೆ ಹೇಳಿದನು.
6
ಹೊಸ ತಲೆಮಾರುಗಳವರು ಬೆಳೆದು ದೊಡ್ಡವರಾದಾಗ ತಮ್ಮ ಮಕ್ಕಳಿಗೆ ಅವುಗಳನ್ನು ಹೇಳಿಕೊಡುವರು. ಹೀಗೆ ಜನರು ಕೊನೆಯ ತಲೆಮಾರಿನವರೆಗೂ ಧರ್ಮಶಾಸ್ತ್ರವನ್ನು ತಿಳಿದಿರುವರು.
7
ಆಗ ಅವರೆಲ್ಲರೂ ದೇವರಲ್ಲಿ ಭರವಸೆ ಇಡುವರು. ದೇವರ ಮಹತ್ಕಾರ್ಯಗಳನ್ನು ಅವರು ಮರೆಯುವುದೇ ಇಲ್ಲ. ಅವರು ಜಾಗ್ರತೆಯಿಂದ ದೇವರ ಆಜ್ಞೆಗಳಿಗೆ ವಿಧೇಯರಾಗುವರು.
8
ಜನರು ತಮ್ಮ ಮಕ್ಕಳಿಗೆ ದೇವರ ಆಜ್ಞೆಗಳನ್ನು ಉಪದೇಶಿಸಿದರೆ, ಮಕ್ಕಳು ತಮ್ಮ ಪೂರ್ವಿಕರಂತಾಗುವುದಿಲ್ಲ. ಅವರ ಪೂರ್ವಿಕರು ದೇವರಿಗೆ ವಿಮುಖರಾಗಿ ಆತನಿಗೆ ವಿಧೇಯರಾಗಲಿಲ್ಲ. ಅವರು ಮೊಂಡರಾಗಿದ್ದರು. ಅವರು ದೇವರಿಗೆ ನಂಬಿಗಸ್ತರಾಗಿರಲಿಲ್ಲ.
9
ಎಫ್ರಾಯೀಮ್ ಕುಲದವರು ಬಿಲ್ಲುಗಳಿಂದ ಸುಸಜ್ಜಿತರಾಗಿದ್ದರು. ಆದರೆ ಅವರು ಯುದ್ಧದಿಂದ ಓಡಿಹೋದರು.
10
ದೇವರೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಅವರು ಪಾಲಿಸಲಿಲ್ಲ. ಅವರು ಆತನ ಉಪದೇಶಗಳಿಗೆ ವಿಧೇಯರಾಗಲಿಲ್ಲ.
11
ದೇವರ ಮಹತ್ಕಾರ್ಯಗಳನ್ನೂ ಆತನು ಅವರಿಗೆ ತೋರಿಸಿದ ಸೂಚಕಕಾರ್ಯಗಳನ್ನೂ ಎಫ್ರಾಯಿಮಿನ ಜನರು ಮರೆತುಬಿಟ್ಟರು.
12
ಈಜಿಪ್ಟಿನ ಸೋನ್ ಪ್ರದೇಶದಲ್ಲಿ ಅವರ ಪೂರ್ವಿಕರಿಗೆ ದೇವರು ತನ್ನ ಮಹಾಶಕ್ತಿಯನ್ನು ತೋರಿಸಿದನು.
13
ದೇವರು ಕೆಂಪು ಸಮುದ್ರವನ್ನು ಇಬ್ಭಾಗಮಾಡಿ ಅವರನ್ನು ದಾಟಿಸಿದನು. ಅವರ ಎರಡು ಕಡೆಗಳಲ್ಲಿ ನೀರು ಬಲವಾದ ಗೋಡೆಯಂತೆ ನಿಂತುಕೊಂಡಿತು.
14
ಹಗಲಿನಲ್ಲಿ ಮೋಡದಿಂದಲೂ ಇರುಳಿನಲ್ಲಿ ಬೆಂಕಿಯ ಬೆಳಕಿನಿಂದಲೂ ಅವರನ್ನು ಮುನ್ನಡೆಸಿದನು.
15
ದೇವರು ಅರಣ್ಯದಲ್ಲಿ ಬಂಡೆಯನ್ನು ಸೀಳಿ ಅವರಿಗೆ ಸಾಗರದಿಂದಲೋ ಎಂಬಂತೆ ನೀರನ್ನು ಸಮೃದ್ಧಿಕರವಾಗಿ ಒದಗಿಸಿದನು.
16
ಆತನು ಬಂಡೆಯಿಂದ ನೀರನ್ನು ನದಿಯಂತೆ ಬರಮಾಡಿದನು.
17
ಆದರೂ ಅವರು ಅರಣ್ಯದಲ್ಲಿ ಮಹೋನ್ನತನಾದ ಆತನ ವಿರೋಧವಾಗಿ ಪಾಪಮಾಡುತ್ತಾ ಬಂದರು.
18
ಬಳಿಕ ಅವರು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ಇಷ್ಟಪದಾರ್ಥವನ್ನು ಕೇಳಿ ದೇವರನ್ನೇ ಪರೀಕ್ಷೆಗೊಡ್ಡಿದರು.
19
ಅವರು ಆತನಿಗೆ ವಿರೋಧವಾಗಿ ಮಾತಾಡಿ, “ದೇವರು ನಮಗೆ ಅರಣ್ಯದಲ್ಲಿ ಆಹಾರವನ್ನು ಕೊಡಬಲ್ಲನೇ?
20
ಆತನು ಬಂಡೆಯನ್ನು ಹೊಡೆದಾಗ ನೀರು ಪ್ರವಾಹದಂತೆ ಹೊರಬಂದದ್ದೇನೊ ನಿಜ! ಆದರೆ ಆತನು ನಮಗೆ ರೊಟ್ಟಿಯನ್ನೂ ಮಾಂಸವನ್ನೂ ಕೊಡಬಲ್ಲನೇ!” ಎಂದು ಹೇಳಿದರು.
21
ಆ ಜನರು ಹೇಳಿದ್ದನ್ನು ಕೇಳಿ ಯೆಹೋವನು ಕೋಪಗೊಂಡನು. ಆತನು ಯಾಕೋಬ್ಯರ ಮೇಲೆಯೂ ಇಸ್ರೇಲರ ಮೇಲೆಯೂ ಕೋಪಗೊಂಡನು.
22
ಯಾಕೆಂದರೆ ಜನರು ಆತನಲ್ಲಿ ಭರವಸೆ ಇಡಲಿಲ್ಲ. ದೇವರು ತಮ್ಮನ್ನು ರಕ್ಷಿಸಬಲ್ಲನೆಂದು ಅವರು ನಂಬಲಿಲ್ಲ.
23
ಆಗ ಆತನು ಉನ್ನತದಲ್ಲಿರುವ ಮೇಘಗಳನ್ನು ತೆರೆದನು, ಅವರ ಆಹಾರಕ್ಕಾಗಿ ಮನ್ನವನ್ನು ಮಳೆಗರೆಸಿದನು.
24
ಆಕಾಶದ ದ್ವಾರಗಳು ತೆರೆದು ಆಕಾಶದ ಉಗ್ರಾಣದಿಂದ ಧಾನ್ಯವು ಸುರಿದಂತೆ ಮನ್ನವು ಸುರಿಯಿತು.
25
ಜನರು ದೇವದೂತರ ಆಹಾರವನ್ನು ತಿಂದರು. ಅವರನ್ನು ತೃಪ್ತಿಗೊಳಿಸುವುದಕ್ಕಾಗಿ ಆತನು ಆಹಾರವನ್ನು ಹೇರಳವಾಗಿ ಒದಗಿಸಿದನು.
26
ಬಳಿಕ ಯೆಹೋವನು ಪೂರ್ವದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು. ಆಗ ಲಾವಕ್ಕಿಗಳು ಮಳೆಯಂತೆ ಅವರಿದ್ದಲ್ಲಿಗೆ ಬಂದು ಬಿದ್ದವು.
27
ಆತನು ತೇಮಾನಿನಿಂದ ಗಾಳಿಬೀಸುವಂತೆ ಮಾಡಿದಾಗ ಪಕ್ಷಿಗಳು ಸಮುದ್ರದ ಮರಳಿನಷ್ಟು ಅವರಿದ್ದಲ್ಲಿ ಬಂದು ಬಿದ್ದವು.
28
ಪಕ್ಷಿಗಳು ಪಾಳೆಯದ ಮಧ್ಯಭಾಗದಲ್ಲಿ, ಆ ಜನರ ಗುಡಾರಗಳ ಸುತ್ತಲೆಲ್ಲಾ ಬಿದ್ದವು.
29
ಅವರಿಗೆ ತಿನ್ನಲು ಹೇರಳವಾಗಿತ್ತು. ಆದರೆ ತಮ್ಮ ಆಸೆಗಳೇ ತಮ್ಮನ್ನು ಪಾಪಕ್ಕೆ ನಡೆಸುವಂತೆ ಅವರು ಮಾಡಿದರು.
30
ಅವರು ತಮ್ಮ ಆಸೆಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲಿಲ್ಲ. ಆ ಲಾವಕ್ಕಿಗಳ ರಕ್ತವನ್ನು ಪೂರ್ತಿಯಾಗಿ ತೆಗೆಯುವ ಮೊದಲೇ ಅವುಗಳ ಮಾಂಸವನ್ನು ತಿಂದುಬಿಟ್ಟರು.
31
ಆಗ ಆತನು ಅವರ ಮೇಲೆ ಬಹು ಕೋಪಗೊಂಡು, ಅವರಲ್ಲಿ ಅನೇಕರನ್ನು ಕೊಂದುಹಾಕಿದನು. ದೃಢಕಾಯರಾಗಿದ್ದ ಅನೇಕ ಯುವಕರಿಗೆ ಆತನು ಸಾವನ್ನು ಬರಮಾಡಿದನು.
32
ಆದರೂ ಅವರು ಪಾಪಮಾಡುತ್ತಾ ಬಂದರು. ಆತನ ಅದ್ಭುತಕಾರ್ಯಗಳನ್ನು ಅವರು ನಂಬದೆ ಹೋದರು.
33
ಆದ್ದರಿಂದ ಆತನು ಆಪತ್ತುಗಳನ್ನು ಬರಮಾಡಿ ಅವರ ಅಯೋಗ್ಯ ಜೀವಿತಗಳನ್ನು ಉಸಿರಿನಂತೆ ಅಂತ್ಯಗೊಳಿಸಿದನು.
34
ಅವರಲ್ಲಿ ಕೆಲವರನ್ನು ದೇವರು ಕೊಂದಾಗಲೆಲ್ಲಾ, ಉಳಿದವರು ಆತನ ಕಡೆಗೆ ತಿರುಗಿಕೊಂಡು ಓಡಿ ಬರುತ್ತಿದ್ದರು.
35
ದೇವರೇ ತಮ್ಮ ಆಶ್ರಯಸ್ಥಾನವೆಂಬುದನ್ನೂ ಮಹೋನ್ನತನಾದ ದೇವರೇ ತಮ್ಮ ರಕ್ಷಕನೆಂಬುದನ್ನೂ ಅವರು ಜ್ಞಾಪಿಸಿಕೊಳ್ಳುತ್ತಿದ್ದರು.
36
ಆದರೆ ಅವರು ಯಥಾರ್ಥವಾಗಿರದೆ ಸುಳ್ಳಾಡಿದರು.
37
ಅವರ ಹೃದಯಗಳು ಆತನಲ್ಲಿ ನೆಲೆಗೊಂಡಿರಲಿಲ್ಲ. ಆತನ ಒಡಂಬಡಿಕೆಗೆ ಅವರು ನಂಬಿಗಸ್ತರಾಗಿರಲಿಲ್ಲ.
38
ಆದರೆ ಆತನು ಅವರಿಗೆ ಕರುಣೆತೋರಿ ಅವರ ಪಾಪಗಳನ್ನು ಕ್ಷಮಿಸಿದನು. ಆತನು ಅವರನ್ನು ನಾಶಮಾಡಲಿಲ್ಲ. ಅನೇಕ ಸಲ ಆತನು ತನ್ನ ಕೋಪವನ್ನು ತಡೆಯುತ್ತಾ ಬಂದನು; ತಾನು ಬಹು ಕೋಪಗೊಳ್ಳದಂತೆ ನೋಡಿಕೊಂಡನು.
39
ಅವರು ಕೇವಲ ಮನುಷ್ಯರೆಂಬುದನ್ನು ಆತನು ಜ್ಞಾಪಿಸಿಕೊಂಡನು. ಜನರಾದರೋ ಬೀಸಿದ ನಂತರ ಹಿಂತಿರುಗಿ ಬಾರದ ಗಾಳಿಯಂತಿದ್ದಾರೆ.
40
ಅಯ್ಯೋ, ಅವರು ಅರಣ್ಯದಲ್ಲಿ ಆತನಿಗೆ ವಿರುದ್ಧವಾಗಿ ಅನೇಕ ಸಲ ದಂಗೆಎದ್ದರು. ಆತನನ್ನು ಬಹಳವಾಗಿ ನೋಯಿಸಿದರು.
41
ಪದೇಪದೇ ಅವರು ಆತನ ತಾಳ್ಮೆಯನ್ನು ಪರೀಕ್ಷಿಸಿದರು. ಅವರು ಇಸ್ರೇಲರ ಪರಿಶುದ್ಧನನ್ನು ಬಹಳವಾಗಿ ನೋಯಿಸಿದರು.
42
ಅವರು ಆತನ ಶಕ್ತಿಯನ್ನು ಮರೆತುಬಿಟ್ಟರು. ಅನೇಕ ಸಲ ಆತನು ತಮ್ಮನ್ನು ಶತ್ರುಗಳಿಂದ ರಕ್ಷಿಸಿದ್ದನ್ನು ಅವರು ಮರೆತುಬಿಟ್ಟರು.
43
ಈಜಿಪ್ಟಿನಲ್ಲಿಯೂ ಸೋನ್ ಬಯಲುಗಳಲ್ಲಿಯೂ ಮಾಡಿದ ಅದ್ಭುತಕಾರ್ಯಗಳನ್ನು ಅವರು ಮರೆತುಬಿಟ್ಟರು.
44
ಆತನು ನದಿಗಳನ್ನು ರಕ್ತವನ್ನಾಗಿ ಪರಿವರ್ತಿಸಿದನು! ಈಜಿಪ್ಟಿನವರಿಗೆ ನೀರನ್ನು ಕುಡಿಯಲಾಗಲಿಲ್ಲ.
45
ಆತನು ಹಿಂಡುಹಿಂಡು ಹುಳಗಳನ್ನು ಕಳುಹಿಸಿದನು; ಅವು ಈಜಿಪ್ಟಿನ ಜನರನ್ನು ಕಚ್ಚಿದವು. ಆತನು ಕಪ್ಪೆಗಳನ್ನು ಕಳುಹಿಸಿದನು; ಅವು ಈಜಿಪ್ಟಿನವರ ಜೀವಿತಗಳನ್ನು ಹಾಳುಮಾಡಿದವು.
46
ಆತನು ಅವರ ಬೆಳೆಗಳನ್ನು ಜಿಟ್ಟೆಹುಳಗಳಿಗೂ ಇತರ ಗಿಡಗಳನ್ನು ಮಿಡತೆಗಳಿಗೂ ಕೊಟ್ಟನು.
47
ಈಜಿಪ್ಟ್ ಜನರ ದ್ರಾಕ್ಷಾಲತೆಗಳನ್ನು ನಾಶಮಾಡಲು ಆತನು ಆಲಿಕಲ್ಲು ಮಳೆ ಸುರಿಸಿದನು; ಅವರ ಮರಗಳನ್ನು ನಾಶಮಾಡಲು ಮಂಜುಮಳೆಯನ್ನು ಸುರಿಸಿದನು.
48
ಆತನು ಅವರ ದನಕರುಗಳನ್ನು ಆಲಿಕಲ್ಲಿನಿಂದಲೂ ಅವರ ಕುರಿಹಿಂಡುಗಳನ್ನು ಸಿಡಿಲಿನಿಂದಲೂ ಕೊಂದುಹಾಕಿದನು.
49
ಆತನು ಈಜಿಪ್ಟ್ ಜನರಿಗೆ ತನ್ನ ಭಯಂಕರವಾದ ಕೋಪವನ್ನು ತೋರಿದನು. ಆತನು ತನ್ನ ಸಂಹಾರ ದೂತರನ್ನು ಅವರಿಗೆ ವಿರೋಧವಾಗಿ ಕಳುಹಿಸಿದನು.
50
ಆತನು ತನ್ನ ಕೋಪವನ್ನು ತೋರಿಸಿದನು. ಅವರಲ್ಲಿ ಯಾರೂ ಬದುಕದಂತೆ ಆತನು ಮಾಡಿದನು. ಮರಣಕರವಾದ ರೋಗದಿಂದ ಅವರಿಗೆ ಸಾವನ್ನು ಬರಮಾಡಿದನು.
51
ಈಜಿಪ್ಟಿನವರ ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ಆತನು ಕೊಂದುಹಾಕಿದನು. ಹಾಮನ ಕುಲಕ್ಕೆ ಸೇರಿದ ಪ್ರತಿಯೊಬ್ಬ ಚೊಚ್ಚಲ ಮಗನನ್ನು ಆತನು ಕೊಂದುಹಾಕಿದನು.
52
ಬಳಿಕ ಆತನು ಕುರುಬನಂತೆ ಇಸ್ರೇಲನ್ನು ನಡೆಸಿದನು. ಆತನು ತನ್ನ ಜನರನ್ನು ಕುರಿಗಳಂತೆ ಅರಣ್ಯದಲ್ಲಿ ನಡೆಸಿದನು.
53
ಆತನು ಅವರಿಗೆ ಮಾರ್ಗದರ್ಶನ ಮಾಡುತ್ತಾ ಸುರಕ್ಷಿತವಾಗಿ ಮುನ್ನಡೆಸಿದನು. ಆತನ ಜನರು ಯಾವುದಕ್ಕೂ ಭಯಪಡುವ ಅಗತ್ಯವಿರಲಿಲ್ಲ. ಅವರ ಶತ್ರುಗಳನ್ನು ಆತನು ಕೆಂಪು ಸಮುದ್ರದಲ್ಲಿ ಮುಳುಗಿಸಿದನು.
54
ಆತನು ತನ್ನ ಜನರನ್ನು ತನ್ನ ಪವಿತ್ರನಾಡಿಗೂ ತನ್ನ ಭುಜಬಲದಿಂದ ತೆಗೆದುಕೊಂಡ ಪರ್ವತಕ್ಕೂ ನಡೆಸಿದನು.
55
ಆ ನಾಡಿನ ಜನಾಂಗಗಳನ್ನು ಆತನು ಬಲವಂತವಾಗಿ ಹೊರಗಟ್ಟಿದನು. ಆತನು ಇಸ್ರೇಲಿನ ಪ್ರತಿಯೊಂದು ಕುಲಕ್ಕೂ ಆ ನಾಡಿನಲ್ಲಿ ಪಾಲುಕೊಟ್ಟನು; ಆ ನಾಡಿನ ಮನೆಗಳಲ್ಲಿ ಅವರನ್ನು ನೆಲೆಗೊಳಿಸಿದನು.
56
ಆದರೆ ಇಸ್ರೇಲರು ಮಹೋನ್ನತನಾದ ದೇವರನ್ನು ಪರೀಕ್ಷಿಸಿ ಆತನನ್ನು ಬಹಳವಾಗಿ ನೋಯಿಸಿದರು. ಅವರು ಆತನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ.
57
ಇಸ್ರೇಲರು ಆತನಿಗೆ ವಿಮುಖರಾದರು; ತಮ್ಮ ಪೂರ್ವಿಕರಂತೆಯೇ ಆತನಿಗೆ ವಿರೋಧವಾಗಿ ತಿರುಗಿದರು. ತಿರುಗುಬಾಣದಂತೆ ತಮ್ಮ ದಿಕ್ಕನ್ನು ಬದಲಾಯಿಸಿಕೊಂಡರು.
58
ಇಸ್ರೇಲರು ಎತ್ತರವಾದ ಸ್ಥಳಗಳನ್ನು ನಿರ್ಮಿಸಿ, ಆತನನ್ನು ಕೋಪಗೊಳಿಸಿದರು. ಸುಳ್ಳುದೇವರುಗಳ ವಿಗ್ರಹಗಳನ್ನು ರೂಪಿಸಿ ಆತನನ್ನು ರೇಗಿಸಿದರು.
59
ದೇವರು ಇದನ್ನು ತಿಳಿದು ಬಹು ಕೋಪಗೊಂಡನು, ಆತನು ಇಸ್ರೇಲರನ್ನು ಸಂಪೂರ್ಣವಾಗಿ ತಿರಸ್ಕರಿಸಿದನು!
60
ಶೀಲೋವಿನಲ್ಲಿದ್ದ ತನ್ನ ಪವಿತ್ರ ಗುಡಾರವನ್ನು ಆತನು ತೊರೆದುಬಿಟ್ಟನು. ಅವರ ಮಧ್ಯದಲ್ಲಿ ಆತನು ವಾಸಮಾಡಿದ್ದು ಆ ಗುಡಾರದಲ್ಲಿಯೇ.
61
ಆತನು ತನ್ನ ಜನರನ್ನು ಇತರ ಜನಾಂಗಗಳ ವಶಕ್ಕೆ ಕೊಟ್ಟನು. ಶತ್ರುಗಳು ಆತನ “ಸುಂದರವಾದ ಆಭರಣವನ್ನು” ತೆಗೆದುಕೊಂಡರು.
62
ಆತನು ತನ್ನ ಜನರಿಗೆ ವಿರೋಧವಾಗಿ ತನ್ನ ಕೋಪವನ್ನು ತೋರಿದನು. ಯುದ್ಧದಲ್ಲಿ ಅವರಿಗೆ ಮರಣವಾಗುವಂತೆ ಮಾಡಿದನು.
63
ಯುವಕರು ಬೆಂಕಿಯ ಪಾಲಾದರು. ಅವರಿಗೆ ನಿಶ್ಚಿತಾರ್ಥವಾಗಿದ್ದ ಕನ್ಯೆಯರು ವಿವಾಹಗೀತೆಯನ್ನು ಹಾಡಲಿಲ್ಲ.
64
ಯಾಜಕರು ಕತ್ತಿಯಿಂದ ಕೊಲ್ಲಲ್ಪಟ್ಟರು, ಆದರೆ ವಿಧವೆಯರು ಅವರಿಗಾಗಿ ಗೋಳಾಡಲಿಲ್ಲ.
65
ಕೊನೆಗೆ, ನಿದ್ದೆಯಿಂದ ಎಚ್ಚರಗೊಳ್ಳುತ್ತಿರುವ ಮನುಷ್ಯನಂತೆಯೂ ಅಮಲಿಳಿದು ಎಚ್ಚರಗೊಳ್ಳುತ್ತಿರುವ ಸೈನಿಕನಂತೆಯೂ ನಮ್ಮ ಯೆಹೋವನು ಎದ್ದನು.
66
ಆತನು ತನ್ನ ಶತ್ರುಗಳನ್ನು ಸದೆಬಡಿದು ಸೋಲಿಸಿದನು. ಆತನು ತನ್ನ ಶತ್ರುಗಳನ್ನು ಸೋಲಿಸಿ ಅವರನ್ನು ನಿತ್ಯನಿಂದೆಗೆ ಗುರಿಮಾಡಿದನು.
67
ಆದರೆ ಆತನು ಯೋಸೇಫನ ಕುಲವನ್ನು ತಿರಸ್ಕರಿಸಿದನು. ಎಫ್ರಾಯೀಮನ ಕುಲವನ್ನೂ ಆತನು ಆರಿಸಿಕೊಳ್ಳಲಿಲ್ಲ.
68
ಆತನು ಯೆಹೂದಕುಲವನ್ನೇ ಆರಿಸಿಕೊಂಡನು. ಆತನು ತನ್ನ ಪ್ರಿಯ ಚೀಯೋನ್ ಪರ್ವತವನ್ನೇ ಆರಿಸಿಕೊಂಡನು.
69
ಆತನು ತನ್ನ ಪವಿತ್ರಾಲಯವನ್ನು ಆ ಪರ್ವತದ ಮೇಲೆ ಕಟ್ಟಿ ಅದನ್ನು ಭೂಮಿಯಂತೆ ಶಾಶ್ವತಗೊಳಿಸಿದನು.
70
ಆತನು ದಾವೀದನನ್ನು ತನ್ನ ವಿಶೇಷ ಸೇವಕನನ್ನಾಗಿ ಆರಿಸಿಕೊಂಡನು. ದಾವೀದನು ಕುರಿಹಟ್ಟಿಗಳನ್ನು ಕಾಯುತ್ತಿದ್ದನು.
71
ಆತನು ದಾವೀದನಿಗೆ ಕುರಿಗಳನ್ನು ಪರಿಪಾಲನೆ ಮಾಡುವ ಕೆಲಸದಿಂದ ತೆಗೆದುಹಾಕಿ ತನ್ನ ಜನರಾದ ಯಾಕೋಬ್ಯರನ್ನೂ ತನ್ನ ಆಸ್ತಿಯಾದ ಇಸ್ರೇಲರನ್ನೂ ಪರಿಪಾಲಿಸುವ ಉದ್ಯೋಗವನ್ನು ಕೊಟ್ಟನು.
72
ದಾವೀದನು ಯಥಾರ್ಥಹೃದಯದಿಂದಲೂ ಬಹು ವಿವೇಕದಿಂದಲೂ ಇಸ್ರೇಲರನ್ನು ನಡೆಸಿದನು.