1
|
ಯೆಹೋವನ ಧರ್ಮಶಾಸ್ತ್ರದಲ್ಲಿ ಅನುಸರಿಸುತ್ತಾ ಪವಿತ್ರರಾಗಿ ಜೀವಿಸುವವರು ಧನ್ಯರಾಗಿದ್ದಾರೆ. |
2
|
ಆತನ ಒಡಂಬಡಿಕೆಗೆ ಸಂಪೂರ್ಣಹೃದಯದಿಂದ ವಿಧೇಯರಾಗುವವರು ಧನ್ಯರು. |
3
|
ಅವರು ಕೆಟ್ಟದ್ದನ್ನು ಮಾಡದ ಆತನಿಗೆ ವಿಧೇಯರಾಗಿರುವರು. |
4
|
ಯೆಹೋವನೇ, ನಮಗೆ ಆಜ್ಞೆಗಳನ್ನು ಕೊಟ್ಟವನೂ ನೀನೇ. ಅವುಗಳಿಗೆ ಸಂಪೂರ್ಣವಾಗಿ ವಿಧೇಯರಾಗಬೇಕೆಂದು ನಮಗೆ ಹೇಳಿದವನೂ ನೀನೇ. |
5
|
ನಿನ್ನ ಕಟ್ಟಳೆಗಳಿಗೆ ನಾನು ಯಾವಾಗಲೂ ವಿಧೇಯನಾಗಿದ್ದರೆ, |
6
|
ನಿನ್ನ ಆಜ್ಞೆಗಳನ್ನು ಕಲಿಯುವಾಗ ನನಗೆ ನಾಚಿಕೆಯಾಗದು. |
7
|
ನಾನು ನಿನ್ನ ನ್ಯಾಯವನ್ನೂ ನೀತಿಯನ್ನೂ ಕಲಿತಂತೆಲ್ಲಾ ನಿನ್ನನ್ನು ಕೊಂಡಾಡುವೆನು. |
8
|
ನಾನು ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿದ್ದೇನೆ. ದಯವಿಟ್ಟು ನನ್ನನ್ನು ಕೈಬಿಡಬೇಡ! |
9
|
ಯೌವನಸ್ಥನು ಪವಿತ್ರನಾಗಿ ಜೀವಿಸುವುದು ಯಾವುದರಿಂದ? ನಿನ್ನ ಆಜ್ಞೆಗಳಿಗೆ ವಿಧೇಯನಾಗುವುದರಿಂದಲೇ. |
10
|
ನಾನು ಪೂರ್ಣಹೃದಯದಿಂದ ದೇವರ ಸೇವೆಮಾಡುವೆ; ದೇವರೇ, ನಿನ್ನ ಆಜ್ಞೆಗಳಿಗೆ ವಿಧೇಯನಾಗಲು ನನಗೆ ಸಹಾಯಮಾಡು. |
11
|
ನಾನು ನಿನಗೆ ವಿರೋಧವಾಗಿ ಪಾಪಮಾಡದಂತೆ ನಿನ್ನ ಉಪದೇಶಗಳನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. |
12
|
ಯೆಹೋವನೇ, ನಿನಗೆ ಸ್ತೋತ್ರವಾಗಲಿ. ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು. |
13
|
ನನ್ನ ತುಟಿಗಳು ನಿನ್ನ ಜ್ಞಾನದ ನಿರ್ಧಾರಗಳ ಕುರಿತು ವರ್ಣಿಸುತ್ತವೆ. |
14
|
ಸಕಲ ಸಂಪತ್ತಿನಲ್ಲಿ ಹೇಗೋ ಹಾಗೆಯೇ ನಿನ್ನ ಒಡಂಬಡಿಕೆಯನ್ನು ಅಭ್ಯಾಸ ಮಾಡುವುದರಲ್ಲಿ ಆನಂದಿಸುವೆನು. |
15
|
ನಾನು ನಿನ್ನ ನಿಯಮಗಳನ್ನು ಚರ್ಚಿಸುವೆನು ನಿನ್ನ ಜೀವಮಾರ್ಗವನ್ನು ಅನುಸರಿಸುವೆನು. |
16
|
ನಾನು ನಿನ್ನ ಕಟ್ಟಳೆಗಳಲ್ಲಿ ಆನಂದಿಸುವೆನು, ನಿನ್ನ ಮಾತುಗಳನ್ನು ಮರೆಯುವುದಿಲ್ಲ. |
17
|
ನಿನ್ನ ಸೇವಕನಾದ ನನಗೆ ದಯೆತೋರು. ಆಗ ನಾನು ಜೀವದಿಂದಿದ್ದು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು. |
18
|
ನನ್ನ ಕಣ್ಣುಗಳನ್ನು ತೆರೆ, ಆಗ ನಾನು ನಿನ್ನ ಉಪದೇಶಗಳನ್ನು ಕಾಣುವೆ; ನೀನು ಮಾಡಿದ ಅದ್ಭುತ ಕಾರ್ಯಗಳ ಕುರಿತು ಓದುವೆ. |
19
|
ನಾನು ಈ ದೇಶದಲ್ಲಿ ಅಪರಿಚಿತನಾಗಿದ್ದೇನೆ. ನಿನ್ನ ಆಜ್ಞೆಗಳನ್ನು ನನಗೆ ಮರೆಮಾಡಬೇಡ. |
20
|
ನಿನ್ನ ನಿರ್ಧಾರಗಳನ್ನು ತಿಳಿದುಕೊಳ್ಳಲು ಯಾವಾಗಲೂ ನಾನು ಹಂಬಲಿಸುತ್ತಿದ್ದೇನೆ. |
21
|
ನೀನು ಗರ್ವಿಷ್ಠರನ್ನು ಖಂಡಿಸುವೆ. ನಿನ್ನ ಆಜ್ಞೆಗಳಿಗೆ ವಿಧೇಯರಾಗದ ಅವರು ಶಾಪಗ್ರಸ್ತರಾಗಿದ್ದಾರೆ. |
22
|
ನನ್ನನ್ನು ಅವಮಾನಕ್ಕೂ ನಾಚಿಕೆಗೂ ಗುರಿಮಾಡಬೇಡ. ನಾನು ನಿನ್ನ ಒಡಂಬಡಿಕೆಗೆ ವಿಧೇಯನಾಗಿದ್ದೇನೆ. |
23
|
ನಾಯಕರುಗಳು ಸಹ ನನ್ನನ್ನು ದೂಷಿಸಿದರು. ನಾನು ನಿನ್ನ ಸೇವಕ, ನಾನು ನಿನ್ನ ಕಟ್ಟಳೆಗಳನ್ನು ಧ್ಯಾನಿಸುವೆ. |
24
|
ನಿನ್ನ ಒಡಂಬಡಿಕೆಯು ನನಗೆ ಉತ್ತಮ ಸ್ನೇಹಿತನಂತಿದೆ. ಅದು ನನಗೆ ಬುದ್ಧಿಮಾತನ್ನು ಹೇಳಿ ಕೊಡುವುದು. |
25
|
ನನಗೆ ಸಾವು ಸಮೀಪಿಸಿದೆ. ಯೆಹೋವನೇ, ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು. |
26
|
ನನ್ನ ಜೀವಿತದ ಬಗ್ಗೆ ನಿನ್ನೊಂದಿಗೆ ಹೇಳಿಕೊಂಡೆ. ಆಗ ನೀನು ನನಗೆ ಉತ್ತರಿಸಿದೆ. ಈಗ ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು. |
27
|
ನಿನ್ನ ಕಟ್ಟಳೆಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು. ನೀನು ಮಾಡಿದ ಅದ್ಭುತಕಾರ್ಯಗಳನ್ನು ನನಗೆ ತಿಳಿಯಪಡಿಸು. |
28
|
ನಾನು ದುಃಖಗೊಂಡಿರುವೆ ಮತ್ತು ಆಯಾಸಗೊಂಡಿರುವೆ. ನೀನು ನನ್ನನ್ನು ಜ್ಞಾಪಿಸಿಕೊಂಡು ಮತ್ತೆ ಬಲಗೊಳಿಸು. |
29
|
ಮೋಸಮಾರ್ಗದಲ್ಲಿ ಜೀವಿಸಲು ನನ್ನನ್ನು ಬಿಡಬೇಡ. ನಿನ್ನ ಉಪದೇಶಗಳಿಂದ ಮಾರ್ಗದರ್ಶನ ಮಾಡು. |
30
|
ನಾನು ಸತ್ಯಮಾರ್ಗವನ್ನು ಆರಿಸಿಕೊಂಡಿದ್ದೇನೆ. ನಿನ್ನ ಜ್ಞಾನದ ನಿರ್ಧಾರಗಳನ್ನು ಎಚ್ಚರಿಕೆಯಿಂದ ತಿಳಿದುಕೊಳ್ಳುವೆನು. |
31
|
ನಿನ್ನ ಒಡಂಬಡಿಕೆಗೆ ಅಂಟಿಕೊಂಡಿದ್ದೇನೆ. ನನ್ನನ್ನು ನಿರಾಶೆಗೊಳಿಸಬೇಡ. |
32
|
ನಿನ್ನ ಆಜ್ಞೆಗಳಿಗೆ ಹರ್ಷದಿಂದ ವಿಧೇಯನಾಗುವೆನು. ನಿನ್ನ ಆಜ್ಞೆಗಳು ನನ್ನನ್ನು ಉಲ್ಲಾಸಗೊಳಿಸುತ್ತವೆ. |
33
|
ಯೆಹೋವನೇ, ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು, ಆಗ ಅವುಗಳನ್ನು ಅನುಸರಿಸುವೆನು. |
34
|
ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು. ಆಗ ನಿನ್ನ ಉಪದೇಶಗಳಿಗೆ ಸಂಪೂರ್ಣವಾಗಿ ವಿಧೇಯನಾಗುವೆನು. |
35
|
ನಿನ್ನ ಆಜ್ಞೆಗಳ ಮಾರ್ಗದಲ್ಲಿ ನನ್ನನ್ನು ನಡೆಸು. ಆ ಮಾರ್ಗವೇ ನನಗೆ ಬಹು ಇಷ್ಟ. |
36
|
ಐಶ್ವರ್ಯದ ಮೇಲೆ ಮನಸ್ಸಿಡದೆ ನಿನ್ನ ಒಡಂಬಡಿಕೆಯ ಬಗ್ಗೆ ಧ್ಯಾನಿಸಲು ನನಗೆ ಸಹಾಯಮಾಡು. |
37
|
ನಿಷ್ಪ್ರಯೋಜಕವಾದವುಗಳ ಮೇಲೆ ದೃಷ್ಟಿಸದಂತೆ ನನ್ನನ್ನು ಕಾಪಾಡು. ನಿನ್ನ ಮಾರ್ಗದಲ್ಲಿ ಜೀವಿಸಲು ನನಗೆ ಸಹಾಯಮಾಡು. |
38
|
ನಿನ್ನ ಸೇವಕನಾದ ನನಗೆ ನೀನು ಮಾಡಿದ ವಾಗ್ದಾನಗಳನ್ನು ನೆರವೇರಿಸು. ಆಗ ಜನರು ನಿನ್ನನ್ನು ಗೌರವಿಸುವರು. |
39
|
ಅವಮಾನವನ್ನು ನನ್ನಿಂದ ತೊಲಗಿಸು. ನಾನು ಅದಕ್ಕೆ ಹೆದರಿಕೊಂಡಿದ್ದೇನೆ. ನಿನ್ನ ಜ್ಞಾನದ ನಿರ್ಧಾರಗಳು ಒಳ್ಳೆಯವುಗಳಾಗಿವೆ. |
40
|
ಇಗೋ, ನಿನ್ನ ಆಜ್ಞೆಗಳನ್ನು ಪ್ರೀತಿಸುವೆನು. ನನಗೆ ಒಳ್ಳೆಯವನಾಗಿದ್ದು ನನ್ನನ್ನು ಉಜ್ಜೀವನಗೊಳಿಸು. |
41
|
ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು. ನಿನ್ನ ವಾಗ್ದಾನದೆತೆ ನನ್ನನ್ನು ರಕ್ಷಿಸು. |
42
|
ನನ್ನನ್ನು ಗೇಲಿಮಾಡುವ ಜನರಿಗೆ ಆಗ ನಾನು ಉತ್ತರ ಕೊಡುವೆನು. ಯೆಹೋವನೇ, ನಿನ್ನ ಮಾತುಗಳಲ್ಲೇ ನಾನು ಭರವಸವಿಟ್ಟಿದ್ದೇನೆ. |
43
|
ನಿನ್ನ ಸತ್ಯೋಪದೇಶಗಳನ್ನು ನಾನು ಯಾವಾಗಲೂ ಮಾತಾಡುವಂತಾಗಲಿ. ನಿನ್ನ ಜ್ಞಾನದ ನಿರ್ಧಾರಗಳನ್ನೇ ನಾನು ಆಶ್ರಯಿಸಿಕೊಂಡಿದ್ದೇನೆ. |
44
|
ನಿನ್ನ ಉಪದೇಶಗಳನ್ನು ಎಂದೆಂದಿಗೂ ಅನುಸರಿಸುವೆನು. |
45
|
ಯಾಕಂದರೆ, ನಿನ್ನ ನಿಯಮಗಳಿಗೆ ವಿಧೇಯನಾಗಲು ನಾನು ಬಹಳವಾಗಿ ಪ್ರಯತ್ನಿಸುತ್ತಿರುವುದರಿಂದ ಯಾರ ಹಂಗಿಲ್ಲದೆ ನಡೆಯುವೆನು. |
46
|
ರಾಜರುಗಳ ಮುಂದೆಯೂ ಯೆಹೋವನ ಒಡಂಬಡಿಕೆಯ ಕುರಿತು ಚರ್ಚಿಸುವೆನು, ನಾಚಿಕೆಪಡುವುದಿಲ್ಲ. |
47
|
ನಿನ್ನ ಆಜ್ಞೆಗಳಲ್ಲಿ ಆನಂದಿಸುವೆನು; ಅವು ನನಗೆ ಇಷ್ಟವಾಗಿವೆ. |
48
|
ನಿನ್ನ ಆಜ್ಞೆಗಳನ್ನು ಕೊಂಡಾಡುವೆನು, ಅವುಗಳನ್ನು ಧ್ಯಾನಿಸುವೆನು. ಅವು ನನಗೆ ಇಷ್ಟವಾಗಿವೆ. |
49
|
ನಿನ್ನ ವಾಗ್ದಾನವನ್ನು ನನಗೋಸ್ಕರ ನೆನಪು ಮಾಡಿಕೋ. ಆ ವಾಗ್ದಾನವೇ ನನ್ನ ನಿರೀಕ್ಷೆಯಾಗಿದೆ. |
50
|
ಸಂಕಟಪಡುತ್ತಿರುವಾಗ ನೀನು ನನ್ನನ್ನು ಸಂತೈಸಿದೆ. ನಿನ್ನ ನುಡಿಗಳು ನನ್ನನ್ನು ಉಜ್ಜೀವನಗೊಳಿಸಲಿ. |
51
|
ಗರ್ವಿಷ್ಠರು ನನ್ನನ್ನು ಗೇಲಿಮಾಡುತ್ತಲೇ ಇದ್ದರು. ನಾನಾದರೊ ನಿನ್ನ ಉಪದೇಶಗಳನ್ನು ಅನುಸರಿಸುತ್ತಲೇ ಇದ್ದೆನು. |
52
|
ನಿನ್ನ ಜ್ಞಾನದ ನಿರ್ಧಾರಗಳನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವೆ. ಅವು ನನ್ನನ್ನು ಸಂತೈಸುತ್ತವೆ. |
53
|
ನಿನ್ನ ಉಪದೇಶಗಳನ್ನು ಅನುಸರಿಸದ ದುಷ್ಟರನ್ನು ನಾನು ಕಾಣುವಾಗ ಬಹುಕೋಪಗೊಳ್ಳುವೆ. |
54
|
ನನಗಂತೂ, ನಿನ್ನ ಕಟ್ಟಳೆಗಳು ನನ್ನ ಮನೆಯಲ್ಲಿ ಹಾಡುಗಳಾಗಿವೆ. |
55
|
ರಾತ್ರಿಯಲ್ಲಿ ನಾನು ನಿನ್ನ ಹೆಸರನ್ನೂ ನಿನ್ನ ಉಪದೇಶಗಳನ್ನೂ ಜ್ಞಾಪಿಸಿಕೊಳ್ಳುವೆ. |
56
|
ಯಾಕಂದರೆ, ನಾನು ನಿನ್ನ ನಿಯಮಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು. |
57
|
ಯೆಹೋವನೇ, ನನ್ನ ಪಾಲು ನೀನೇ; ನಿನ್ನ ಆಜ್ಞೆಗಳಿಗೆ ವಿಧೇಯನಾಗುವುದೇ ನನ್ನ ಕರ್ತವ್ಯವೆಂದು ನಿರ್ಧರಿಸಿರುವೆ. |
58
|
ನಿನ್ನನ್ನೇ ಸಂಪೂರ್ಣವಾಗಿ ಆಶ್ರಯಿಸಿಕೊಂಡಿದ್ದೇನೆ. ನಿನ್ನ ವಾಗ್ದಾನದಂತೆ ನನಗೆ ಕರುಣೆತೋರು. |
59
|
ನನ್ನ ಜೀವಿತದ ಕುರಿತು ಎಚ್ಚರಿಕೆಯಿಂದ ಆಲೋಚಿಸಿ ನಿನ್ನ ಕಟ್ಟಳೆಗಳನ್ನು ಅನುಸರಿಸಲು ನಿರ್ಧರಿಸಿದ್ದೇನೆ. |
60
|
ನಿನ್ನ ಆಜ್ಞೆಗಳಿಗೆ ವಿಧೇಯನಾಗಲು ತಡಮಾಡದೆ ಬೇಗನೆ ಹಿಂತಿರುಗಿದೆನು. |
61
|
ಗುಂಪಾಗಿ ಸೇರಿದ್ದ ದುಷ್ಟರು ನನ್ನನ್ನು ದೂಷಿಸಿದರೂ ನಿನ್ನ ಉಪದೇಶಗಳನ್ನು ನಾನು ಮರೆಯಲಿಲ್ಲ. |
62
|
ನಿನ್ನ ಒಳ್ಳೆಯ ನಿರ್ಧಾರಗಳಿಗಾಗಿ ಕೃತಜ್ಞತೆ ಸಲ್ಲಿಸಲು ನಾನು ಮಧ್ಯರಾತ್ರಿಯಲ್ಲಿ ಎದ್ದೇಳುವೆನು. |
63
|
ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ನಾನು ಸ್ನೇಹಿತನಾಗಿದ್ದೇನೆ. ನಿನ್ನ ನಿಯಮಗಳಿಗೆ ವಿಧೇಯರಾಗುವ ಪ್ರತಿಯೊಬ್ಬರಿಗೂ ನಾನು ಸ್ನೇಹಿತನಾಗಿದ್ದೇನೆ. |
64
|
ನಿನ್ನ ಶಾಶ್ವತ ಪ್ರೀತಿಯು ಭೂಮಿಯನ್ನು ತುಂಬಿಕೊಂಡಿದೆ. ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು. |
65
|
ಯೆಹೋವನೇ, ನಿನ್ನ ವಾಗ್ದಾನಕ್ಕೆ ತಕ್ಕಂತೆ ನಿನ್ನ ಸೇವಕನಿಗೆ ಒಳ್ಳೆಯದನ್ನೇ ಮಾಡಿರುವೆ. |
66
|
ಜ್ಞಾನದ ನಿರ್ಧಾರಗಳನ್ನು ಮಾಡಲು ನನಗೆ ಜ್ಞಾನವನ್ನು ಕೊಡು. ನಾನು ನಿನ್ನ ಆಜ್ಞೆಗಳಲ್ಲಿ ಭರವಸವಿಟ್ಟಿರುವೆ. |
67
|
ನಾನು ಸಂಕಟಪಡುವುದಕ್ಕಿಂತ ಮೊದಲು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದೆ; ಈಗಲಾದರೊ ನಾನು ನಿನ್ನ ಆಜ್ಞೆಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು. |
68
|
ನೀನು ಒಳ್ಳೆಯವನೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ ಆಗಿರುವೆ. ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು. |
69
|
ಗರ್ವಿಷ್ಠರು ನನಗೆ ವಿರೋಧವಾಗಿ ಸುಳ್ಳು ಹೇಳಿದರು. ನಾನಾದರೋ ನಿನ್ನ ಆಜ್ಞೆಗಳಿಗೆ ಪೂರ್ಣಹೃದಯದಿಂದ ವಿಧೇಯನಾಗಿರುವೆ. |
70
|
ಅವರು ಬಹು ಮೂಢರು. ನಾನಾದರೊ ನಿನ್ನ ಉಪದೇಶಗಳನ್ನು ಕಲಿಯುವುದರಲ್ಲಿ ಆನಂದಿಸುವೆ. |
71
|
ನಿನ್ನ ಕಟ್ಟಳೆಗಳನ್ನು ಕಲಿಯಲು ನಾನು ಪಟ್ಟ ಪ್ರಯಾಸವು ಒಳ್ಳೆಯದಾಯಿತು. |
72
|
ನಿನ್ನ ಉಪದೇಶಗಳು ನನಗೆ ಒಳ್ಳೆಯದಾಗಿವೆ. ಅವು ಹತ್ತುಸಾವಿರ ಬೆಳ್ಳಿಬಂಗಾರಗಳ ನಾಣ್ಯಗಳಿಗಿಂತಲೂ ಅಮೂಲ್ಯವಾಗಿವೆ. |
73
|
ನಿನ್ನ ಕೈಗಳು ನನ್ನನ್ನು ರೂಪಿಸಿದವು. ನಿನ್ನ ಆಜ್ಞೆಗಳನ್ನು ಕಲಿತುಕೊಳ್ಳಲು ನನಗೆ ಸಹಾಯಿಸು. |
74
|
ನಾನು ನಿನ್ನ ವಾಕ್ಯದಲ್ಲಿ ಭರವಸವಿಟ್ಟಿರುವುದರಿಂದ ನಿನ್ನ ಭಕ್ತರು ನನ್ನನ್ನು ಕಂಡಾಗ ಸಂತೋಷಿಸಲಿ. |
75
|
ಯೆಹೋವನೇ ನಿನ್ನ ತೀರ್ಪುಗಳು ನ್ಯಾಯವಾದವುಗಳೆಂದು ನನಗೆ ತಿಳಿದಿದೆ. ನೀನು ನನ್ನನ್ನು ಶಿಕ್ಷಿಸಿದ್ದು ನನ್ನ ದೃಷ್ಟಿಯಲ್ಲಿ ನ್ಯಾಯವಾಗಿತ್ತು. |
76
|
ಈಗ, ನಿನ್ನ ಶಾಶ್ವತ ಪ್ರೀತಿಯಿಂದ ನನ್ನನ್ನು ಸಂತೈಸು. ನಿನ್ನ ವಾಗ್ದಾನದಂತೆ ನನ್ನನ್ನು ಸಂತೈಸು. |
77
|
ನನ್ನನ್ನು ಸಂತೈಸಿ ಉಜ್ಜೀವನಗೊಳಿಸು; ನಾನು ನಿನ್ನ ಉಪದೇಶಗಳಲ್ಲಿಯೇ ಆನಂದಿಸುತ್ತಿರುವೆ. |
78
|
ಗರ್ವಿಷ್ಠರಿಗೆ ಅವಮಾನವಾಗಲಿ; ಅವರು ನನ್ನ ಬಗ್ಗೆ ಸುಳ್ಳು ಹೇಳಿದ್ದಾರೆ. ನಾನಾದರೋ ನಿನ್ನ ನಿಯಮಳನ್ನು ಧ್ಯಾನಿಸುವೆನು. |
79
|
ನಿನ್ನ ಭಕ್ತರು ನನ್ನ ಬಳಿಗೆ ಹಿಂತಿರುಗಿಬರಲಿ. ನಿನ್ನ ಒಡಂಬಡಿಕೆಯನ್ನು ಅವರು ಕಲಿತುಕೊಳ್ಳಲಿ. |
80
|
ನಾನು ನಿನ್ನ ಕಟ್ಟಳೆಗಳಿಗೆ ಪೂರ್ಣವಾಗಿ ವಿಧೇಯನಾಗಿರುವಂತೆ ಮಾಡು. ಆಗ ನನಗೆ ಅವಮಾನವಾಗುವುದಿಲ್ಲ. |
81
|
ನಿನ್ನ ರಕ್ಷಣೆಗಾಗಿ ಕಾಯುತ್ತಾ ಸಾಯುವಂತಾಗಿದ್ದೇನೆ. ನಿನ್ನ ವಾಕ್ಯಗಳಲ್ಲಿಯೇ ಭರವಸವಿಟ್ಟಿದ್ದೇನೆ. |
82
|
ನಿನ್ನ ವಾಗ್ದಾನಗಳಿಗಾಗಿ ಎದುರು ನೋಡುತ್ತಾ ನನ್ನ ಕಣ್ಣುಗಳು ಆಯಾಸಗೊಳ್ಳುತ್ತಿವೆ. ನೀನು ಯಾವಾಗ ನನ್ನನ್ನು ಸಂತೈಸುವೆ? |
83
|
ಬಿಸಾಕಲ್ಪಟ್ಟ ದ್ರಾಕ್ಷಾರಸದ ಬುದ್ದಲಿಯಂತಿದ್ದೇನೆ, ಆದರೂ ನಾನು ನಿನ್ನ ಕಟ್ಟಳೆಗಳನ್ನು ಮರೆಯುವುದಿಲ್ಲ. |
84
|
ನಾನು ಇನ್ನೆಷ್ಟುಕಾಲ ಬದುಕಲಿ? ನನ್ನನ್ನು ಹಿಂಸಿಸುವವರನ್ನು ಯಾವಾಗ ದಂಡಿಸುವಿ? |
85
|
ನಿನ್ನ ಕಟ್ಟಳೆಗಳಿಗೆ ವಿರೋಧವಾಗಿ ಗರ್ವಿಷ್ಠರು ನನಗೆ ಗುಂಡಿಗಳನ್ನು ಅಗೆದಿದ್ದಾರೆ. |
86
|
ನಿನ್ನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ. ಆವರಾದರೊ ನನ್ನನ್ನು ನಿಷ್ಕಾರಣವಾಗಿ ಹಿಂಸಿಸುತ್ತಾರೆ; ನನಗೆ ಸಹಾಯಮಾಡು! |
87
|
ಅವರು ನನ್ನನ್ನು ನಾಶಮಾಡಿಯೇ ಬಿಟ್ಟಿದ್ದರು. ನಾನಾದರೊ ನಿನ್ನ ನಿಯಮಗಳನ್ನು ಮರೆತುಬಿಡಲೇ ಇಲ್ಲ. |
88
|
ನಿನ್ನ ಶಾಶ್ವತ ಪ್ರೀತಿಯನ್ನು ತೋರಿ ನನ್ನನ್ನು ಉಜ್ಜೀವಿಸಮಾಡು. ಆಗ, ನಾನು ನಿನ್ನ ಕಟ್ಟಳೆಗಳಿಗೆ ವಿಧೇಯನಾಗುವೆನು. |
89
|
ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟಿದೆ. |
90
|
ನಿನ್ನ ನಂಬಿಗಸ್ತಿಕೆಯು ತಲತಲಾಂತರಕ್ಕೂ ಇರುವುದು. ನೀನು ಭೂಮಿಯನ್ನು ಸೃಷ್ಟಿಸಿದೆ; ಅದು ಇಂದಿಗೂ ಸ್ಥಿರವಾಗಿ ನಿಂತಿದೆ. |
91
|
ನಿನ್ನ ಆಜ್ಞೆಗಳಿಗನುಸಾರವಾಗಿ ಅದು ಸ್ಥಿರವಾಗಿಯೇ ಇದೆ. ಅವುಗಳೆಲ್ಲಾ ಸೇವಕರಂತೆ ನಿನ್ನ ಆಜ್ಞೆಗಳಿಗೆ ವಿಧೇಯವಾಗಿವೆ. |
92
|
ನಿನ್ನ ಉಪದೇಶಗಳು ನನಗೆ ಆನಂದಕವಾಗಿವೆ; ಇಲ್ಲವಾಗಿದ್ದರೆ ಸಂಕಟವು ನನ್ನನ್ನು ನಾಶಮಾಡಿಬಿಡುತ್ತಿತ್ತು. |
93
|
ನಾನು ನಿನ್ನ ಆಜ್ಞೆಗಳನ್ನು ಮರೆಯುವುದೇ ಇಲ್ಲ. ಯಾಕಂದರೆ ನಾನು ಬದುಕಿರುವುದು ಅವುಗಳಿಂದಲೇ. |
94
|
ನಾನು ನಿನ್ನವನು, ನನ್ನನ್ನು ರಕ್ಷಿಸು! ನಿನ್ನ ಆಜ್ಞೆಗಳಿಗೆ ಆಸಕ್ತಿಯಿಂದ ವಿಧೇಯನಾಗಿದ್ದೇನೆ. |
95
|
ದುಷ್ಟರು ನನ್ನನ್ನು ನಾಶಮಾಡಲು ಪ್ರಯತ್ನಿಸಿದರು, ಆದರೆ ನಿನ್ನ ಒಡಂಬಡಿಕೆಯು ನನ್ನನ್ನು ಜ್ಞಾನಿಯನ್ನಾಗಿ ಮಾಡಿತು. |
96
|
ನಿನ್ನ ಧರ್ಮಶಾಸ್ತ್ರದ ಹೊರತು ಬೇರೆಲ್ಲವುಗಳಿಗೂ ಮೇರೆಯಿದೆ. |
97
|
ನಿನ್ನ ಉಪದೇಶಗಳು ನನಗೆ ಪ್ರಿಯಾವಾಗಿವೆ; ದಿನವೆಲ್ಲಾ ಅವುಗಳನ್ನೇ ಧ್ಯಾನಿಸುವೆನು. |
98
|
ನಿನ್ನ ಆಜ್ಞೆಗಳು ನನ್ನನ್ನು ನನ್ನ ಶತ್ರುಗಳಿಗಿಂತಲೂ ಹೆಚ್ಚು ಜ್ಞಾನಿಯನ್ನಾಗಿ ಮಾಡುತ್ತವೆ. ಅವು ಯಾವಾಗಲೂ ನನ್ನೊಂದಿಗಿವೆ. |
99
|
ನಿನ್ನ ಒಡಂಬಡಿಕೆಯನ್ನು ನಾನು ಧ್ಯಾನಿಸುತ್ತಿರುವುದರಿಂದ ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ. |
100
|
ನಾನು ನಿನ್ನ ಆಜ್ಞೆಗಳನ್ನು ಅನುಸರಿಸುವುದರಿಂದ ಹಿರಿಯರಿಗಿಂತ ವಿವೇಕಿಯಾಗಿದ್ದೇನೆ. |
101
|
ನನ್ನ ಪಾದಗಳು ಕೆಟ್ಟದಾರಿಗೆ ಹೋಗದಂತೆ ನನ್ನನ್ನು ಕಾಪಾಡು, ಆಗ, ನಾನು ನಿನ್ನ ವಾಕ್ಯವನ್ನೇ ಅನುಸರಿಸುವೆನು. |
102
|
ನೀನೇ ನನ್ನ ಉಪಾಧ್ಯಾಯ. ಆದ್ದರಿಂದ ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿಯೇ ಇರುವೆನು. |
103
|
ನಿನ್ನ ನುಡಿಗಳು ನನ್ನ ಬಾಯಲ್ಲಿ ಜೇನಿಗಿಂತಲೂ ಸಿಹಿಯಾಗಿವೆ. |
104
|
ನಿನ್ನ ಉಪದೇಶಗಳು ನನ್ನನ್ನು ಜ್ಞಾನಿಯನ್ನಾಗಿ ಮಾಡುತ್ತವೆ, ಆದ್ದರಿಂದ ನಾನು ದುರುಪದೇಶಗಳನ್ನು ದ್ವೇಷಿಸುವೆನು. |
105
|
ನಿನ್ನ ವಾಕ್ಯವು ನನ್ನ ಪಾಲಿಗೆ ದೀಪವೂ ದಾರಿಗೆ ಬೆಳಕೂ ಆಗಿದೆ. |
106
|
ನಿನ್ನ ವಿಧಿನಿಯಮಗಳು ಒಳ್ಳೆಯವೇ. ಅವುಗಳಿಗೆ ವಿಧೇಯನಾಗಿರುವುದಾಗಿ ಪ್ರಮಾಣಮಾಡಿದ್ದೇನೆ, ಅದನ್ನು ನೆರವೇರಿಸುವೆನು. |
107
|
ಯೆಹೋವನೇ, ನಾನು ಬಹುಕಾಲ ಸಂಕಟಪಟ್ಟಿದ್ದೇನೆ; ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು. |
108
|
ಯೆಹೋವನೇ, ನನ್ನ ಸ್ತೋತ್ರವನ್ನು ಸ್ವೀಕರಿಸು. ನಿನ್ನ ವಿಧಿನಿಯಮಗಳನ್ನು ನನಗೆ ಉಪದೇಶಿಸು. |
109
|
ನನ್ನ ಪ್ರಾಣವು ಯಾವಾಗಲೂ ಅಪಾಯದಲ್ಲಿದೆ. ಆದರೂ ನಾನು ನಿನ್ನ ಉಪದೇಶಗಳನ್ನು ಮರೆತುಬಿಟ್ಟಿಲ್ಲ. |
110
|
ದುಷ್ಟರು ನನಗೆ ಬಲೆಯೊಡ್ಡಿದ್ದಾರೆ. ನಾನಾದರೋ ನಿನ್ನ ವಿಧಿನಿಯಮಗಳಿಗೆ ಅವಿಧೇಯನಾಗಲಿಲ್ಲ. |
111
|
ನಿನ್ನ ಕಟ್ಟಳೆಗಳನ್ನು ಎಂದೆಂದಿಗೂ ನಿತ್ಯಸ್ವಾಸ್ತ್ಯವನ್ನಾಗಿ ಆರಿಸಿಕೊಂಡಿದ್ದೇನೆ. ಅವು ನನ್ನ ಹೃದಯಕ್ಕೆ ಆನಂದಕರವಾಗಿವೆ. |
112
|
ನಿನ್ನ ಕಟ್ಟಳೆಗಳಿಗೆಲ್ಲಾ ಯಾವಾಗಲೂ ವಿಧೇಯನಾಗಿರಲು ಮನಸ್ಸು ಮಾಡಿದ್ದೇನೆ. |
113
|
ನಿನಗೆ ಪೂರ್ಣವಾಗಿ ನಂಬಿಗಸ್ತರಾಗಿಲ್ಲದವರನ್ನು ದ್ವೇಷಿಸುವೆನು. ನಾನಾದರೋ ನಿನ್ನ ಉಪದೇಶಗಳನ್ನು ಪ್ರೀತಿಸುವೆನು. |
114
|
ನನ್ನ ಆಶ್ರಯವೂ ಗುರಾಣಿಯೂ ನೀನೇ. ಯೆಹೋವನೇ, ನಿನ್ನ ವಾಕ್ಯದಲ್ಲಿ ಭರವಿಸವಿಟ್ಟಿರುವೆ. |
115
|
ಕೆಡುಕರನ್ನು ನನ್ನ ಬಳಿಗೆ ಬರಗೊಡಿಸಬೇಡ. ಆಗ ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು. |
116
|
ನಿನ್ನ ವಾಗ್ದಾನಕ್ಕನುಸಾರವಾಗಿ ನನಗೆ ಸಹಾಯಮಾಡು, ಆಗ ನಾನು ಬದುಕಿಕೊಳ್ಳುವೆ. ನಾನು ನಿನ್ನಲ್ಲಿ ಭರವಸವಿಟ್ಟಿರುವೆ, ನನ್ನನ್ನು ನಿರಾಶೆಗೊಳಿಸಬೇಡ. |
117
|
ನನಗೆ ಸಹಾಯಮಾಡು, ಆಗ ನಾನು ರಕ್ಷಿಸಲ್ಪಡುವೆನು. ನಾನು ನಿನ್ನ ಕಟ್ಟಳೆಗಳನ್ನು ಯಾವಾಗಲೂ ಕಲಿಯುತ್ತಿರುವೆನು. |
118
|
ನಿನ್ನ ಕಟ್ಟಳೆಗಳನ್ನು ಅನುಸರಿಸದವರನ್ನು ನೀನು ತಳ್ಳಿಬಿಡುವೆ. ಯಾಕಂದರೆ, ಅವರು ನಿನಗೆ ದ್ರೋಹ ಮಾಡಿದರು. |
119
|
ಭೂಮಿಯ ಮೇಲಿರುವ ದುಷ್ಟರನ್ನು ನೀನು ಕಸದಂತೆ ಕಾಣುವೆ. ಆದ್ದರಿಂದ ನಾನು ನಿನ್ನ ಒಡಂಬಡಿಕೆಯನ್ನು ಸದಾಕಾಲ ಪ್ರೀತಿಸುವೆನು. |
120
|
ನಾನು ನಿನ್ನಲ್ಲಿ ಭಯವುಳ್ಳವನಾಗಿದ್ದೇನೆ. ನಾನು ನಿನ್ನ ಕಟ್ಟಳೆಗಳಿಗೂ ಭಯಭಕ್ತಿಯಿಂದಿರುವೆನು. |
121
|
ನ್ಯಾಯ ನೀತಿಗಳುಳ್ಳ ಕಾರ್ಯಗಳನ್ನೇ ನಾನು ಮಾಡಿರುವೆ, ಕೆಡುಕರಿಗೆ ನನ್ನನ್ನು ಒಪ್ಪಿಸಿಕೊಡಬೇಡ. |
122
|
ನಿನ್ನ ಸೇವಕನಾದ ನನಗೆ ಸಹಾಯಮಾಡುವುದಾಗಿ ವಾಗ್ದಾನಮಾಡು. ನನಗೆ ಕೇಡುಮಾಡಲು ಆ ಗರ್ವಿಷ್ಠರಿಗೆ ಅವಕಾಶಕೊಡಬೇಡ. |
123
|
ನಿನ್ನ ರಕ್ಷಣೆಗಾಗಿಯೂ ನಿನ್ನ ಒಳ್ಳೆಯ ಮಾತಿಗಾಗಿಯೂ ಎದುರುನೋಡುತ್ತಾ ನನ್ನ ಕಣ್ಣುಗಳು ಆಯಾಸಗೊಂಡಿವೆ. |
124
|
ನಿನ್ನ ಸೇವಕನಾದ ನನಗೆ ನಿನ್ನ ಶಾಶ್ವತ ಪ್ರೀತಿಯನ್ನು ತೋರಿಸು. ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು. |
125
|
ನಾನು ನಿನ್ನ ಸೇವಕ, ನಿನ್ನ ಒಡಂಬಡಿಕೆಯನ್ನು ಗ್ರಹಿಸಿಕೊಳ್ಳಲು ನನಗೆ ಬೇಕಾದ ವಿವೇಕವನ್ನು ದಯಪಾಲಿಸು. |
126
|
ಯೆಹೋವನೇ, ನಿನ್ನ ಕಾರ್ಯಾಚರಣೆಗೆ ಇದು ತಕ್ಕ ಸಮಯವಾಗಿದೆ. ಜನರು ನಿನ್ನ ಧರ್ಮಶಾಸ್ತ್ರವನ್ನು ಮೀರಿದ್ದಾರೆ. |
127
|
ನಾನು ನಿನ್ನ ಆಜ್ಞೆಗಳನ್ನು ಬಂಗಾರಕ್ಕಿಂತಲೂ ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಸುವೆನು. |
128
|
ನಾನು ನಿನ್ನ ಆಜ್ಞೆಗಳಿಗೆಲ್ಲಾ ಎಚ್ಚರಿಕೆಯಿಂದ ವಿಧೇಯನಾಗುವೆನು. ನಾನು ಸುಳ್ಳು ಉಪದೇಶಗಳನ್ನು ದ್ವೇಷಿಸುವೆನು. |
129
|
ನಿನ್ನ ಕಟ್ಟಳೆಗಳು ಆಶ್ಚರ್ಯಕರವಾಗಿವೆ. ಪೂರ್ಣ ಹೃದಯದಿಂದ ಅವುಗಳನ್ನು ಅನುಸರಿಸುವೆನು. |
130
|
ಜನರು ನಿನ್ನ ವಾಕ್ಯವನ್ನು ಅರ್ಥಮಾಡಿಕೊಂಡಾಗ ಅದು ಅವರಿಗೆ ನೀತಿಮಾರ್ಗವನ್ನು ತೋರಿಸುವ ಬೆಳಕಿನಂತಿರುವುದು. ನಿನ್ನ ವಾಕ್ಯವು ಸಾಮಾನ್ಯರನ್ನೂ ಜ್ಞಾನಿಗಳನ್ನಾಗಿ ಮಾಡುತ್ತದೆ. |
131
|
ನಿನ್ನ ಆಜ್ಞೆಗಳನ್ನು ಕಲಿತುಕೊಳ್ಳಲು ನನಗೆ ನಿಜವಾಗಿಯೂ ಇಷ್ಟ. ನಾನು ಏದುಸಿರುಬಿಡುತ್ತಾ ಲವಲವಿಕೆಯಿಂದ ನಿನ್ನ ಆಜ್ಞೆಗಳಿಗಾಗಿ ಕಾಯುತ್ತಿದ್ದೇನೆ. |
132
|
ನನ್ನನ್ನು ನೋಡಿ ಕರುಣಿಸು. ನಿನ್ನ ಹೆಸರನ್ನು ಪ್ರೀತಿಸುವವರಿಗೆ ಯೋಗ್ಯವಾದುವುಗಳನ್ನು ಮಾಡು. |
133
|
ನಿನ್ನ ವಾಗ್ದಾನಕ್ಕನುಸಾರವಾಗಿ ನನಗೆ ಮಾರ್ಗದರ್ಶನ ನೀಡು. ಯಾವ ಕೇಡೂ ನನಗೆ ಸಂಭವಿಸದಿರಲಿ. |
134
|
ಕೆಡುಕರಿಂದ ನನ್ನನ್ನು ರಕ್ಷಿಸು. ಆಗ ನಾನು ನಿನ್ನ ನಿಯಮಗಳಿಗೆ ವಿಧೇಯನಾಗುವೆನು. |
135
|
ನಿನ್ನ ಸೇವಕನ ಮೇಲೆ ಕರುಣೆಯಿರಲಿ, ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು. |
136
|
ಜನರು ನಿನ್ನ ಉಪದೇಶಗಳಿಗೆ ವಿಧೇಯರಾಗದಿರುವುದರಿಂದ ನನ್ನ ಕಣ್ಣೀರು ಗೋಳಾಟದಿಂದ ನದಿಯಾಗಿ ಹರಿಯುತ್ತಿದೆ. |
137
|
ಯೆಹೋವನೇ, ನೀನು ನೀತಿಸ್ವರೂಪನಾಗಿರುವೆ. ನಿನ್ನ ತೀರ್ಪುಗಳು ನ್ಯಾಯವಾಗಿವೆ. |
138
|
ನೀನು ನೀತಿಯ ಕಟ್ಟಳೆಗಳನ್ನೇ ಕೊಟ್ಟಿರುವೆ. ಅವು ನಂಬಿಕೆಗೆ ಯೋಗ್ಯವಾಗಿವೆ. |
139
|
ನನ್ನ ಅಭಿಮಾನವು ನನ್ನನ್ನು ದಹಿಸುತ್ತಿದೆ. ಯಾಕಂದರೆ ನನ್ನ ವೈರಿಗಳು ನಿನ್ನ ಆಜ್ಞೆಗಳನ್ನು ಮರೆತುಬಿಟ್ಟಿದ್ದರಿಂದ ನನಗೆ ಬೇಸರವಾಗಿದೆ. |
140
|
ನಿನ್ನ ವಾಗ್ದಾನಗಳು ಪರೀಕ್ಷಿಸಲ್ಪಟ್ಟಿವೆ. ಅವು ನನಗೆ ಪ್ರಿಯವಾಗಿವೆ. |
141
|
ನಾನು ಅಲ್ಪನೂ ತಿರಸ್ಕೃತನೂ ಆಗಿದ್ದೇನೆ. ಆದರೂ ನಾನು ನಿನ್ನ ನಿಯಮಗಳನ್ನು ಮರೆಯುವುದಿಲ್ಲ. |
142
|
ನಿನ್ನ ನೀತಿಯು ಶಾಶ್ವತವಾದದ್ದು. ನಿನ್ನ ಉಪದೇಶಗಳು ನಂಬಿಕೆಗೆ ಯೋಗ್ಯವಾಗಿವೆ. |
143
|
ಕಷ್ಟಸಂಕಟಗಳು ನನಗೆ ಬಂದಿದ್ದವು. ನಿನ್ನ ಆಜ್ಞೆಗಳು ನನಗೆ ಆನಂದಕರವಾಗಿವೆ. |
144
|
ನಿನ್ನ ಕಟ್ಟಳೆಗಳು ಸದಾಕಾಲ ನೀತಿಯ ಕಟ್ಟಳೆಗಳಾಗಿವೆ. ಅವುಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು, ಆಗ ಬದುಕಿಕೊಳ್ಳುವೆನು. |
145
|
ಯೆಹೋವನೇ, ಪೂರ್ಣಹೃದಯದಿಂದ ನಿನಗೆ ಮೊರೆಯಿಟ್ಟಿದ್ದೇನೆ; ಸದುತ್ತರವನ್ನು ದಯಪಾಲಿಸು. ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು. |
146
|
ನಾನು ನಿನಗೇ ಮೊರೆಯಿಟ್ಟಿದ್ದೇನೆ. ನನ್ನನ್ನು ರಕ್ಷಿಸು! ನಿನ್ನ ಕಟ್ಟಳೆಗಳಿಗೆ ವಿಧೇಯನಾಗುತ್ತೇನೆ. |
147
|
ಸೂರ್ಯೋದಯದಲ್ಲಿ ಎದ್ದು ನಿನಗೆ ಮೊರೆಯಿಟ್ಟೆನು. ನಿನ್ನ ವಾಕ್ಯದಲ್ಲಿ ಭರವಸವಿಟ್ಟಿದ್ದೇನೆ. |
148
|
ನಿನ್ನ ವಾಕ್ಯವನ್ನು ಧ್ಯಾನಿಸುವುದಕ್ಕಾಗಿ ರಾತ್ರಿಯಲ್ಲಿ ಬಹು ಹೊತ್ತಿನವರೆಗೆ ಎಚ್ಚರವಾಗಿದ್ದೆನು. |
149
|
ಯೆಹೋವನೇ, ನಿನ್ನ ಪೂರ್ಣ ಪ್ರೀತಿಯಿಂದ ನನಗೆ ಕಿವಿಗೊಡು. ನಿನ್ನ ನಿಯಮಗಳಿಗನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು. |
150
|
ಜನರು ನನಗೆ ವಿರೋಧವಾಗಿ ಸಂಚುಗಳನ್ನು ಮಾಡುತ್ತಿದ್ದಾರೆ. ಅವರು ನಿನ್ನ ಉಪದೇಶಗಳನ್ನು ಅನುಸರಿಸುವುದಿಲ್ಲ. |
151
|
ಯೆಹೋವನೇ, ನೀನು ನನಗೆ ಸಮೀಪವಾಗಿರುವೆ. ನಿನ್ನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ. |
152
|
ನಿನ್ನ ಉಪದೇಶಗಳು ಶಾಶ್ವತವಾಗಿವೆ. ಅದನ್ನು ನಾನು ಬಹುಕಾಲದ ಹಿಂದೆಯೇ ನಿನ್ನ ಒಡಂಬಡಿಕೆಯ ಮೂಲಕ ಕಲಿತುಕೊಂಡೆ. |
153
|
ನನ್ನ ಕಷ್ಟವನ್ನು ನೋಡಿ ನನ್ನನ್ನು ಬಿಡಿಸು. ನಾನು ನಿನ್ನ ಉಪದೇಶಗಳನ್ನು ಮರೆತಿಲ್ಲ. |
154
|
ವ್ಯಾಜ್ಯದಲ್ಲಿ ನನ್ನ ಪರವಾಗಿ ಹೋರಾಡಿ ನನ್ನನ್ನು ರಕ್ಷಿಸು. ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು. |
155
|
ದುಷ್ಟರು ನಿನ್ನ ಕಟ್ಟಳೆಗಳನ್ನು ಅನುಸರಿಸದ ಕಾರಣ ಅವರಿಗೆ ಜಯವಾಗುವುದಿಲ್ಲ. |
156
|
ಯೆಹೋವನೇ, ನೀನು ಎಷ್ಟೋ ಕರುಣೆಯುಳ್ಳವನು. ನಿನ್ನ ಚಿತ್ತಾನುಸಾರವಾಗಿ ನನ್ನನ್ನು ಉಜ್ಜೀವನಗೊಳಿಸು. |
157
|
ಅನೇಕ ವೈರಿಗಳು ನನಗೆ ಕೇಡು ಮಾಡಬೇಕೆಂದಿದ್ದಾರೆ. ನಾನಾದರೋ ನಿನ್ನ ಕಟ್ಟಳೆಗಳನ್ನು ಅನುಸರಿಸುತ್ತಲೇ ಇದ್ದೇನೆ. |
158
|
ನಿನ್ನ ವಾಕ್ಯಕ್ಕೆ ವಿಧೇಯರಾಗದ ಆ ದ್ರೋಹಿಗಳನ್ನು ನೋಡಿದರೆ ನನಗೆ ಅಸಹ್ಯವಾಗುತ್ತದೆ. |
159
|
ಯೆಹೋವನೇ, ನಿನ್ನ ನಿಯಮಗಳಿಗೆ ಆಸಕ್ತಿಯಿಂದ ವಿಧೇಯನಾಗಿದ್ದೇನೆ. ನಿನ್ನ ಶಾಶ್ವತ ಪ್ರೀತಿಗನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು. |
160
|
ನಿನ್ನ ವಾಕ್ಯಗಳೆಲ್ಲಾ ಸತ್ಯವಾಗಿವೆ. ನಿನ್ನ ನೀತಿಯ ಕಟ್ಟಳೆಗಳು ಶಾಶ್ವತವಾಗಿವೆ. |
161
|
ಅಧಿಪತಿಗಳು ನಿಷ್ಕಾರಣವಾಗಿ ನನ್ನ ಮೇಲೆ ಆಕ್ರಮಣ ಮಾಡಿದರು. ನಾನಾದರೋ ನಿನ್ನ ಧರ್ಮಶಾಸ್ತ್ರವೊಂದಕ್ಕೇ ಭಯಪಡುವೆನು, ಅದೊಂದನ್ನೇ ಗೌರವಿಸುವೆನು. |
162
|
ಮಹಾಭಂಡಾರವನ್ನು ಕಂಡುಕೊಂಡವನಂತೆ ನಾನು ನಿನ್ನ ವಾಕ್ಯದಲ್ಲಿ ಸಂತೋಷಿಸುವೆನು. |
163
|
ನಾನು ಸುಳ್ಳುಗಳನ್ನು ದ್ವೇಷಿಸುವೆನು! ಅವು ನನಗೆ ಅಸಹ್ಯವಾಗಿವೆ. ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ. |
164
|
ನಿನ್ನ ನೀತಿಯ ವಿಧಿನಿಯಮಗಳಿಗಾಗಿ ನಾನು ದಿನಕ್ಕೆ ಏಳು ಸಲ ನಿನ್ನನ್ನು ಕೊಂಡಾಡುವೆನು. |
165
|
ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣ ಸಮಾಧಾನವಿರುವುದು. ಅವರನ್ನು ಯಾವುದೂ ಬೀಳಿಸಲಾರದು. |
166
|
ಯೆಹೋವನೇ, ನಿನ್ನ ರಕ್ಷಣೆಗಾಗಿ ಕಾಯ್ದುಕೊಂಡಿದ್ದೇನೆ. ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗಿದ್ದೇನೆ. |
167
|
ನಾನು ನಿನ್ನ ಕಟ್ಟಳೆಗಳನ್ನು ಅನುಸರಿಸಿದೆನು. ಅವು ನನಗೆ ಬಹು ಪ್ರಿಯವಾಗಿವೆ. |
168
|
ನಾನು ನಿನ್ನ ಒಡಂಬಡಿಕೆಗೂ ನಿನ್ನ ನಿಯಮಗಳಿಗೂ ವಿಧೇಯನಾಗಿದ್ದೇನೆ. ನನ್ನ ನಡತೆಯೆಲ್ಲಾ ನಿನಗೆ ಗೊತ್ತಿದೆ. |
169
|
ಯೆಹೋವನೇ, ನನ್ನ ಕೂಗಿಗೆ ಕಿವಿಗೊಡು. ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಜ್ಞಾನಿಯನ್ನಾಗಿ ಮಾಡು. |
170
|
ನನ್ನ ಪ್ರಾರ್ಥನೆಗೆ ಕಿವಿಗೊಡು. ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ರಕ್ಷಿಸು. |
171
|
ನೀನು ನಿನ್ನ ಕಟ್ಟಳೆಗಳನ್ನು ನನಗೆ ಕಲಿಸಿಕೊಟ್ಟದ್ದರಿಂದ ಸ್ತುತಿಗೀತೆಗಳು ನನ್ನಿಂದ ಹೊರಡುತ್ತವೆ. |
172
|
ನನ್ನ ನಾಲಿಗೆಯು ನಿನ್ನ ವಾಕ್ಯವನ್ನು ಗಾಯನ ಮಾಡಲಿ. ನಿನ್ನ ಆಜ್ಞೆಗಳೆಲ್ಲಾ ನೀತಿಯ ಆಜ್ಞೆಗಳಾಗಿವೆ. |
173
|
ನಾನು ನಿನ್ನ ನಿಯಮಗಳನ್ನು ಅನುಸರಿಸಲು ನಿರ್ಧರಿಸಿರುವುದರಿಂದ ಕೈಚಾಚಿ ಸಹಾಯಮಾಡು. |
174
|
ನಿನ್ನಲ್ಲಿ ರಕ್ಷಣೆಗಾಗಿ ಪ್ರಾರ್ಥಿಸುವೆ. ನಿನ್ನ ಉಪದೇಶಗಳು ನನ್ನನ್ನು ಸಂತೋಷಗೊಳಿಸುತ್ತವೆ. |
175
|
ನಾನು ಜೀವದಿಂದಿದ್ದು ನಿನ್ನನ್ನು ಕೊಂಡಾಡುವಂತೆ ಮಾಡು. ನಿನ್ನ ನಿಯಮಗಳು ನನಗೆ ಸಹಾಯಮಾಡಲಿ. |
176
|
ನಾನು ಕಳೆದುಹೋದ ಕುರಿಯಂತೆ ಅಲೆದಾಡುತ್ತಿದ್ದೇನೆ. ನನಗೋಸ್ಕರ ಹುಡುಕುತ್ತಾ ಬಾ. ನಿನ್ನ ಸೇವಕನಾದ ನಾನು ನಿನ್ನ ಆಜ್ಞೆಗಳನ್ನು ಮರೆತು ಬಿಟ್ಟಿಲ್ಲ. |
Psalms 119:158 Kannada Language Bible Words basic statistical display
COMING SOON ...