“ಇಸ್ರೇಲರು ಹೊಸ ಸ್ಥಳಕ್ಕೆ ಪ್ರಯಾಣ ಮಾಡುವಾಗ ಆರೋನನೂ ಅವನ ಪುತ್ರರೂ ದೇವದರ್ಶನಗುಡಾರದೊಳಕ್ಕೆ ಹೋಗಿ, ಮಹಾ ಪವಿತ್ರ ಸ್ಥಳವನ್ನು ಮರೆಮಾಡುವ ತೆರೆಯನ್ನು ಇಳಿಸಿ, ಅದನ್ನು ಒಡಂಬಡಿಕೆಯ ಪವಿತ್ರ ಪೆಟ್ಟಿಗೆಗೆ ಹೊದಿಸಬೇಕು.
ಬಳಿಕ ಅವರು ಇವುಗಳಿಗೆಲ್ಲ ಶ್ರೇಷ್ಠವಾದ ತೊಗಲಿನಿಂದ ಮಾಡಿದ ಹೊದಿಕೆಯನ್ನು ಹೊದಿಸಬೇಕು. ಆಮೇಲೆ ಅವರು ನೀಲಿಬಟ್ಟೆಯನ್ನು ತೊಗಲಿನ ಮೇಲೆ ಹಾಸಿ ಪವಿತ್ರ ಪೆಟ್ಟಿಗೆಯ ಬಳೆಗಳಲ್ಲಿ ಹೊರುವ ಕೋಲುಗಳನ್ನು ಸೇರಿಸಬೇಕು.”
“ಬಳಿಕ ಅವರು ಪವಿತ್ರ ಮೇಜಿನ ಮೇಲೆ ನೀಲಿಬಟ್ಟೆಯನ್ನು ಹಾಸಬೇಕು. ಪಾನದ್ರವ್ಯಾರ್ಪಣೆಗಳಿಗಾಗಿ ತಟ್ಟೆಗಳನ್ನೂ ಚಮಚಗಳನ್ನೂ ಬಟ್ಟಲುಗಳನ್ನೂ ಹೂಜೆಗಳನ್ನೂ ವಿಶೇಷ ರೊಟ್ಟಿಯನ್ನೂ ಮೇಜಿನ ಮೇಲೆ ಇಡಬೇಕು.
“ಆಮೇಲೆ ದೀಪಸ್ತಂಭಕ್ಕೂ ಅದರ ದೀಪಗಳಿಗೂ ದೀಪಗಳ ಉಪಕರಣಗಳಿಗೂ ಬೂದಿ ತೆಗೆಯುವ ಅಗ್ಗಿಷ್ಠಿಕೆಗೂ ಮತ್ತು ಅದಕ್ಕಾಗಿ ಉಪಯೋಗಿಸುವ ಎಲ್ಲಾ ಎಣ್ಣೆಯ ಪಾತ್ರೆಗಳಿಗೂ ನೀಲಿಬಟ್ಟೆಯನ್ನು ಹೊದಿಸಬೇಕು.
“ಬಳಿಕ ಆರಾಧನೆಗಾಗಿ ಪವಿತ್ರಸ್ಥಳದಲ್ಲಿ ಉಪಯೋಗಿಸಲ್ಪಡುವ ಎಲ್ಲಾ ವಿಶೇಷ ವಸ್ತುಗಳನ್ನು ಒಟ್ಟಾಗಿ ಸೇರಿಸಬೇಕು. ಅವುಗಳನ್ನು ನೀಲಿಬಟ್ಟೆಯಿಂದ ಮುಚ್ಚಬೇಕು. ಬಳಿಕ ಅವುಗಳಿಗೆ ಶ್ರೇಷ್ಠವಾದ ತೊಗಲನ್ನು ಹೊದಿಸಬೇಕು. ಅವರು ಈ ವಸ್ತುಗಳನ್ನು ಹೊರುವುದಕ್ಕಾಗಿ ಚೌಕಟ್ಟಿಗೆ ಕಟ್ಟಬೇಕು.
ಬಳಿಕ ಅವರು ವೇದಿಕೆಯಲ್ಲಿ ಆರಾಧನೆಗಾಗಿ ಉಪಯೋಗಿಸಲ್ಪಡುವ ಎಲ್ಲಾ ವಸ್ತುಗಳನ್ನು ಒಟ್ಟಾಗಿ ಸೇರಿಸಬೇಕು. ಅವುಗಳು ಯಾವುವೆಂದರೆ, ಅಗ್ಗಿಷ್ಟಿಗೆಗಳು, ಮುಳ್ಳುಚಮಚಗಳು, ಸಲಿಕೆಗಳು ಮತ್ತು ಬೋಗುಣಿಗಳು. ಅವರು ಇವುಗಳನ್ನು ತಾಮ್ರದ ವೇದಿಕೆಯ ಮೇಲೆ ಇಡಬೇಕು. ಬಳಿಕ ಅವರು ಶ್ರೇಷ್ಠವಾದ ತೊಗಲಿನ ಹೊದಿಕೆಯನ್ನು ಇವುಗಳಿಗೆಲ್ಲ ಹೊದಿಸಿ, ಹೊರುವ ಕೋಲುಗಳನ್ನು ವೇದಿಕೆಯ ಬಳೆಗಳಲ್ಲಿ ಸೇರಿಸಬೇಕು.
“ಇಸ್ರೇಲರು ಪ್ರಯಾಣಮಾಡುವ ಸಮಯದಲ್ಲಿ ಆರೋನನು ಮತ್ತು ಅವನ ಪುತ್ರರು ಪವಿತ್ರವಸ್ತುಗಳಿಗೂ ಪವಿತ್ರ ಉಪಕರಣಗಳಿಗೂ ಹೊದಿಸಿದ ನಂತರ, ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಹೋಗಬಹುದು. ಈ ರೀತಿ ಅವರು ಪವಿತ್ರವಸ್ತುಗಳನ್ನು ಮುಟ್ಟಬಾರದು; ಅವರು ಮುಟ್ಟಿದರೆ ಸಾಯುತ್ತಾರೆ.
“ಮಹಾಯಾಜಕನಾದ ಆರೋನನ ಮಗನಾದ ಎಲ್ಲಾಜಾರನು ಇಡೀ ಪವಿತ್ರ ಗುಡಾರವನ್ನು ಮತ್ತು ಎಲ್ಲಾ ಪವಿತ್ರಸ್ಥಳವನ್ನು ಮತ್ತು ಅದರೊಳಗಿರುವ ಎಲ್ಲಾ ಪಾತ್ರೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದಾನೆ. ದೀಪದ ಎಣ್ಣೆಗೂ ಪರಿಮಳಧೂಪಕ್ಕೂ ದೈನಂದಿನ ಧಾನ್ಯಸಮರ್ಪಣೆಗೂ ಅಭಿಷೇಕತೈಲಕ್ಕೂ ಅವನು ಜವಾಬ್ದಾರನಾಗಿದ್ದಾನೆ.”
ಅವರು ಮಹಾ ಪರಿಶುದ್ಧ ವಸ್ತುಗಳ ಹತ್ತಿರ ಬಂದಾಗ ಸಾಯದಂತೆ ನೀವು ಅವರ ವಿಷಯದಲ್ಲಿ ಮಾಡಬೇಕಾದದ್ದೇನೆಂದರೆ, ಆರೋನನೂ ಅವನ ಪುತ್ರರೂ ಒಳಗೆ ಬಂದು, ಪ್ರತಿಯೊಬ್ಬ ಕೆಹಾತ್ಯನು ಮಾಡಬೇಕಾದ ಕೆಲಸವನ್ನು ಮತ್ತು ಹೊತ್ತುಕೊಂಡು ಹೋಗಬೇಕಾದದ್ದನ್ನು ತೋರಿಸಲಿ.
(22-23) “ನೀನು ಗೇರ್ಷೋನ್ಯರನ್ನು ಕುಟುಂಬಗಳಿಗನುಸಾರವಾಗಿ ಮತ್ತು ಕುಲಗಳಿಗನುಸಾರವಾಗಿ ಲೆಕ್ಕಿಸು. ಅಲ್ಲದೆ ದೇವದರ್ಶನಗುಡಾರದ ಸೇವೆಯನ್ನು ಮಾಡಲು ಯೋಗ್ಯರಾದ ಗಂಡಸರನ್ನು ಪಟ್ಟಿಮಾಡು. ಅವರ ವಯಸ್ಸು ಮೂವತ್ತರಿಂದ ಐವತ್ತು ವರ್ಷದೊಳಗಿರಬೇಕು.
ಅವರು ಪವಿತ್ರ ಗುಡಾರದ ಬಟ್ಟೆಗಳನ್ನು, ದೇವದರ್ಶನಗುಡಾರ ಮತ್ತು ಅದರ ಹೊದಿಕೆ, ಅದರ ಮೇಲಿರುವ ಶ್ರೇಷ್ಠವಾದ ತೊಗಲಿನ ಹೊದಿಕೆ ಮತ್ತು ದೇವದರ್ಶನಗುಡಾರದಲ್ಲಿರುವ ಪ್ರವೇಶದ್ವಾರದ ಪರದೆಯನ್ನು ವರ್ಗಾಯಿಸಬೇಕು.
ಅಂಗಳದ ಪರದೆಗಳನ್ನು, ಪವಿತ್ರ ಗುಡಾರವನ್ನು ಮತ್ತು ವೇದಿಕೆಯ ಸುತ್ತಲೂ ಇರುವ ಅಂಗಳ ಪ್ರವೇಶದ್ವಾರದ ಪರದೆಯನ್ನು, ಅವುಗಳ ಹಗ್ಗಗಳನ್ನು ಮತ್ತು ಇವುಗಳ ಎಲ್ಲಾ ಉಪಕರಣಗಳನ್ನು ವರ್ಗಾಯಿಸಬೇಕು.
ಗೇರ್ಷೋನ್ಯರು ಮಾಡುವ ಎಲ್ಲಾ ಕೆಲಸಗಳನ್ನು ಅಂದರೆ ವರ್ಗಾವಣೆಗಾಗಿ ಸಾಮಾನುಗಳನ್ನು ಕಟ್ಟುವುದರಲ್ಲಿಯೂ ವರ್ಗಾವಣೆ ಮಾಡುವುದರಲ್ಲಿಯೂ ಆರೋನ ಮತ್ತು ಅವನ ಪುತ್ರರು ಮಾರ್ಗದರ್ಶನ ನೀಡುವರು. ಗೇರ್ಷೋನ್ಯರು ವರ್ಗಾಯಿಸುವ ಎಲ್ಲವನ್ನು ಅವರೇ ಕಾಯಬೇಕೆಂಬ ಜವಾಬ್ದಾರಿಕೆಯನ್ನು ನೀನು ಅವರಿಗೆ ಕೊಡು.
ಈ ಕೆಳಕಂಡ ವಸ್ತುಗಳನ್ನು ಮೆರಾರೀಯರು ವರ್ಗಾವಣೆಗಾಗಿ ಕಟ್ಟುವರು, ವರ್ಗಾಯಿಸುವರು ಮತ್ತು ಕಾವಲುಕಾಯುವರು: ಪವಿತ್ರ ಡೇರೆಯ ಚೌಕಟ್ಟುಗಳು, ಅದರ ಅಡ್ಡಪಟ್ಟಿಗಳು, ಅದರ ಸ್ತಂಭಗಳು, ಅದರ ಗದ್ದಿಗೇಕಲ್ಲುಗಳು,
ಅಂಗಳದ ಸ್ತಂಭಗಳು ಮತ್ತು ಅವುಗಳ ಗದ್ದಿಗೇಕಲ್ಲುಗಳು, ಅಗುಳಿಗಳು, ಹಗ್ಗಗಳು ಮತ್ತು ಅವರ ಕೆಲಸಕ್ಕೆ ಬೇಕಾದ ಎಲ್ಲಾ ಉಪಕರಣಗಳು. ಅವರು ವರ್ಗಾಯಿಸಬೇಕಾದ ಮತ್ತು ಕಾವಲುಕಾಯಬೇಕಾದ ವಸ್ತುಗಳನ್ನು ನೀನು ಹೆಸರೆಸರಾಗಿ ಅವರಿಗೆ ವಹಿಸಿಕೊಡಬೇಕು.
(34-35) ಮೋಶೆ ಆರೋನರೂ, ಸಮುದಾಯದ ಪ್ರಧಾನರೂ ಕುಲ ಮತ್ತು ಕುಟುಂಬಗಳಿಗನುಗುಣವಾಗಿ ಕೆಹಾತ್ಯರಲ್ಲಿ ಮೂವತ್ತು ವರ್ಷದಿಂದ ಮೊದಲುಗೊಂಡು ಐವತ್ತು ವರ್ಷದೊಳಗಿರುವ ಗಂಡಸರನ್ನು ಲೆಕ್ಕಿಸಿದರು. ದೇವದರ್ಶನಗುಡಾರಕ್ಕೋಸ್ಕರ ಸೇವೆಯ ದಳದಲ್ಲಿ ಕೆಲಸ ಮಾಡಲು ಯೋಗ್ಯರಾದ ಗಂಡಸರನ್ನೇ ಅವರು ಲೆಕ್ಕಿಸಿದರು.
(38-39) ಗೇರ್ಷೋನ್ಯರಲ್ಲಿಯೂ ಮೂವತ್ತು ವರ್ಷ ಮೊದಲುಗೊಂಡು ಐವತ್ತು ವರ್ಷದೊಳಗಿರುವ ಮತ್ತು ದೇವದರ್ಶನಗುಡಾರಕ್ಕೋಸ್ಕರ ಸೇವೆಯ ದಳದಲ್ಲಿ ಕೆಲಸ ಮಾಡಲು ಯೋಗ್ಯರಾದ ಗಂಡಸರನ್ನು ಕುಲ ಮತ್ತು ಕುಟುಂಬಗಳಿಗನುಗುಣವಾಗಿ ಲೆಕ್ಕಿಸಲಾಯಿತು.
(42-43) ಮೆರಾರೀಯರಲ್ಲಿಯೂ ಮೂವತ್ತರಿಂದ ಐವತ್ತು ವರ್ಷದ ಒಳಗಿರುವ ಮತ್ತು ದೇವದರ್ಶನ ಗುಡಾರಕ್ಕೋಸ್ಕರ ಸೇವೆಯ ದಳದಲ್ಲಿ ಕೆಲಸಮಾಡಲು ಯೋಗ್ಯರಾದ ಗಂಡಸರನ್ನು ಕುಲ ಮತ್ತು ಕುಟುಂಬಗಳಿಗೆ ಅನುಗುಣವಾಗಿ ಲೆಕ್ಕಿಸಲಾಯಿತು.
ಮೂವತ್ತರಿಂದ ಐವತ್ತು ವರ್ಷದೊಳಗಿರುವ ಮತ್ತು ದೇವದರ್ಶನಗುಡಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ವರ್ಗಾವಣೆಗಾಗಿ ಕಟ್ಟುವುದಕ್ಕೂ ವರ್ಗಾವಣೆಯ ಕೆಲಸಕ್ಕೂ ಯೋಗ್ಯರಾದ ಎಲ್ಲಾ ಗಂಡಸರನ್ನು ಲೆಕ್ಕಿಸಿದರು.
ಹೀಗೆ ಯೆಹೋವನು ಮೋಶೆಗೆ ಆಜ್ಞಾಪಿಸಿದ ಮೇರೆಗೆ ಅವನಿಂದ ಪ್ರತಿಯೊಬ್ಬನೂ ಲೆಕ್ಕಿಸಲ್ಪಟ್ಟನು. ಪ್ರತಿಯೊಬ್ಬನಿಗೂ ವರ್ಗಾವಣೆಗಾಗಿ ವಸ್ತುಗಳನ್ನು ಕಟ್ಟುವ ಮತ್ತು ವರ್ಗಾವಣೆ ಕೆಲಸದ ಕರ್ತವ್ಯಗಳನ್ನು ಗೊತ್ತುಪಡಿಸಲಾಯಿತು. ಯೆಹೋವನು ಆಜ್ಞಾಪಿಸಿದ ಮೇರೆಗೆ ಇದು ಮಾಡಲ್ಪಟ್ಟಿತು.