ಒಂದು ದಿನ ಗಿಲ್ಯಾದ್ ಕುಲದ ಕುಟುಂಬಗಳ ನಾಯಕರು ಮೋಶೆಯೊಡನೆಯೂ ಇತರ ಇಸ್ರೇಲರ ಕುಟುಂಬಗಳ ನಾಯಕರೊಡನೆಯೂ ಮಾತಾಡುವುದಕ್ಕೆ ಬಂದರು. (ಗಿಲ್ಯಾದನು ಮಾಕೀರನ ಮಗ; ಮಾಕೀರನು ಮನಸ್ಸೆಯ ಮಗ; ಮನಸ್ಸೆಯು ಯೋಸೇಫನ ಮಗ.)
ಅವರು, “ಸ್ವಾಮೀ, ಚೀಟುಹಾಕಿ ಇಸ್ರೇಲರಿಗೆ ದೇಶವನ್ನು ಹಂಚಿಕೊಡಬೇಕೆಂದು ಯೆಹೋವನು ನಿಮಗೆ ಆಜ್ಞಾಪಿಸಿದ್ದಾನೆ. ಅದಲ್ಲದೆ ನಮ್ಮ ಸಂಬಂಧಿಕನಾದ ಚಲ್ಪಹಾದನ ಭೂಮಿಯನ್ನು ಅವನ ಹೆಣ್ಣುಮಕ್ಕಳಿಗೆ ಕೊಡಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ.
ಹೀಗಿರಲು ಅವರು ಇಸ್ರೇಲರ ಬೇರೆ ಯಾವ ಕುಲದವರನ್ನಾದರೂ ಮದುವೆಯಾದರೆ ಅವರ ಸ್ವಾಸ್ತ್ಯವು ನಮ್ಮ ಪೂರ್ವಿಕರ ಕುಲದಿಂದ ತೆಗೆಯಲ್ಪಟ್ಟು, ಅವರು ಮದುವೆಯ ಮೂಲಕ ಸೇರಿಕೊಳ್ಳುವ ಕುಲಕ್ಕೆ ಹೋಗುವುದು. ಇದರಿಂದ ನಮ್ಮ ಸ್ವಾಸ್ತ್ಯಕ್ಕೆ ನಷ್ಟವುಂಟಾಗುವುದು.
ಇಸ್ರೇಲರ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗಬಾರದು. ಇಸ್ರೇಲರೆಲ್ಲರೂ ತಮ್ಮ ಪೂರ್ವಿಕರಿಂದ ಸ್ವಾಸ್ತ್ಯವಾಗಿ ಪಡೆದುಕೊಂಡ ತಮ್ಮ ಗೋತ್ರದ ಭೂಮಿಯನ್ನು ತಮ್ಮ ಸ್ವಾಧೀನದಲ್ಲೇ ಇಟ್ಟುಕೊಂಡಿರಬೇಕು.