1
|
ಮೊದಲನೆಯ ತಿಂಗಳಲ್ಲಿ ಇಡೀ ಇಸ್ರೇಲ್ ಸಮುದಾಯವು ಚಿನ್ ಮರುಭೂಮಿಗೆ ಬಂದಿತು. ಅವರು ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಮಿರ್ಯಾಮಳು ಸತ್ತಳು. ಆಕೆಯ ಶವವನ್ನು ಅಲ್ಲಿ ಸಮಾಧಿ ಮಾಡಲಾಯಿತು. |
2
|
ಅಲ್ಲಿ ನೀರಿಲ್ಲದಿದ್ದ ಕಾರಣ ಅವರು ಮೋಶೆ ಆರೋನರ ವಿರುದ್ಧವಾಗಿ ಸೇರಿಬಂದರು. |
3
|
ಜನರು ಮೋಶೆಯ ಸಂಗಡ ವಾದಮಾಡಿ, “ನಮ್ಮ ಸಹೋದರರು ಯೆಹೋವನ ಸನ್ನಿಧಿಯಲ್ಲಿ ಸತ್ತಾಗ ನಾವೂ ಸತ್ತುಹೋಗಿದ್ದರೆ ಎಷ್ಟೋ ಮೇಲಾಗಿತ್ತು. |
4
|
ಯೆಹೋವನ ಜನರನ್ನು ಈ ಮರುಭೂಮಿಗೆ ಯಾಕೆ ಕರೆದುಕೊಂಡು ಬಂದೆ? ನಾವು ಮತ್ತು ನಮ್ಮ ಪ್ರಾಣಿಗಳು ಇಲ್ಲಿ ಸಾಯಬೇಕೆಂದು ನೀನು ಇಚ್ಛಿಸುತ್ತೀಯೋ? |
5
|
ಈಜಿಪ್ಟಿನಿಂದ ನಮ್ಮನ್ನು ಇಲ್ಲಿಗೆ ಯಾಕೆ ಕರೆತಂದೆ? ಈ ಕೆಟ್ಟ ಸ್ಥಳಕ್ಕೆ ನಮ್ಮನ್ನು ಯಾಕೆ ಕರೆದುಕೊಂಡು ಬಂದೆ? ಇಲ್ಲಿ ಧಾನ್ಯವಾಗಲಿ ಅಂಜೂರವಾಗಲಿ ದ್ರಾಕ್ಷಿಯಾಗಲಿ ದಾಳಿಂಬೆಯಾಗಲಿ ಇಲ್ಲ, ಕುಡಿಯುವುದಕ್ಕೆ ನೀರೂ ಇಲ್ಲ” ಎಂದು ಹೇಳಿದರು. |
6
|
ಮೋಶೆ ಆರೋನರು ಜನಸಮೂಹದ ಎದುರಿನಿಂದ ದೇವದರ್ಶನಗುಡಾರದ ಪ್ರವೇಶದ್ವಾರಕ್ಕೆ ಹೋಗಿ ಅಡ್ಡಬಿದ್ದರು. ಆಗ ಯೆಹೋವನ ಮಹಿಮೆಯು ಅವರಿಗೆ ಪ್ರತ್ಯಕ್ಷವಾಯಿತು. |
7
|
ಯೆಹೋವನು ಮೋಶೆಯೊಡನೆ ಮಾತಾಡಿ, |
8
|
“ಬಳಿಕ ನೀನು ಮತ್ತು ನಿನ್ನ ಸಹೋದರನಾದ ಆರೋನನು ಜನರನ್ನು ಬಂಡೆಯ ಮುಂದೆ ಸಭೆಸೇರಿಸಿ, ಜನರ ಮುಂದೆ ಆ ಬಂಡೆಗೆ ಮಾತಾಡು. ಆಗ ನೀರು ಬಂಡೆಯಿಂದ ಹರಿಯುವುದು ಮತ್ತು ನೀರನ್ನು ಜನರಿಗೂ ಅವರ ಪಶುಗಳಿಗೂ ಕೊಡು” ಎಂದು ಹೇಳಿದನು. |
9
|
ಕೋಲು ಪವಿತ್ರಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿತ್ತು. ಯೆಹೋವನು ಹೇಳಿದಂತೆ ಮೋಶೆ ಕೋಲನ್ನು ತೆಗೆದುಕೊಂಡನು. |
10
|
ಜನರು ಬಂಡೆಯ ಮುಂದೆ ಒಟ್ಟಾಗಿ ಸೇರಿಬರಬೇಕೆಂದು ಮೋಶೆ ಆರೋನರು ಹೇಳಿದರು. ಆಗ ಮೋಶೆ, “ದ್ರೋಹಿಗಳೇ, ಈಗ ನನಗೆ ಕಿವಿಗೊಡಿರಿ. ನಿಮಗೋಸ್ಕರವಾಗಿ ಈ ಬಂಡೆಯಿಂದ ನೀರು ಹರಿಯುವಂತೆ ನಾವು ಮಾಡಬೇಕೋ?” ಎಂದು ಹೇಳಿ, |
11
|
ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ಎರಡು ಸಾರಿ ಬಂಡೆಯನ್ನು ಹೊಡೆದನು. ಬಂಡೆಯಿಂದ ನೀರು ಹರಿಯತೊಡಗಿತು. ಜನರಿಗೆ ಮತ್ತು ಪಶುಗಳಿಗೆ ಕುಡಿಯಲು ನೀರು ದೊರೆಯಿತು. |
12
|
ಆದರೆ ಯೆಹೋವನು ಮೋಶೆ ಆರೋನರಿಗೆ, “ನೀವು ನನ್ನನ್ನು ನಂಬದವರಾಗಿ ಇಸ್ರೇಲರ ಎದುರಿನಲ್ಲಿ ನನ್ನ ಪವಿತ್ರತೆಯನ್ನು ತೋರಿಸದೆ ಹೋದದ್ದರಿಂದ ಈ ಸಮುದಾಯದವರಿಗೆ ಕೊಡಲಿರುವ ದೇಶಕ್ಕೆ ನೀವು ಅವರನ್ನು ಕರೆದುಕೊಂಡು ಹೋಗುವುದಿಲ್ಲ.” ಎಂದು ಹೇಳಿದನು. |
13
|
ಇಸ್ರೇಲರು ಅಲ್ಲಿ ಯೆಹೋವನೊಡನೆ ವಾದ ಮಾಡಿದ್ದರಿಂದ ಆ ಸ್ಥಳವು “ಮೆರೀಬಾ ಬುಗ್ಗೆ” ಎಂದು ಕರೆಯಲ್ಪಟ್ಟಿತು. ಅದಲ್ಲದೆ ಯೆಹೋವನು ತಾನು ಪರಿಶುದ್ಧನು ಎಂಬುದನ್ನು ಅವರಿಗೆ ತೋರಿಸಿದ ಸ್ಥಳವು ಇದೇ. |
14
|
ಮೋಶೆಯು ಕಾದೇಶಿನಲ್ಲಿದ್ದಾಗ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನಿಮ್ಮ ಸಂಬಂಧಿಕರವಾದ ಇಸ್ರೇಲರು ಕೇಳಿಕೊಳ್ಳುವುದೇನೆಂದರೆ: ನಮಗೆ ಸಂಭವಿಸಿದ ಎಲ್ಲಾ ಕಷ್ಟಗಳು ನಿಮಗೆ ಗೊತ್ತಿದೆ. |
15
|
ನಮ್ಮ ಪೂರ್ವಿಕರು ಈಜಿಪ್ಟ್ ದೇಶಕ್ಕೆ ಇಳಿದುಹೋದದ್ದೂ ನಾವು ಅಲ್ಲಿ ಬಹುಕಾಲ ವಾಸವಾಗಿದ್ದದ್ದೂ ಈಜಿಪ್ಟಿನವರು ನಮಗೂ ನಮ್ಮ ಪೂರ್ವಿಕರಿಗೂ ಕ್ರೂರರಾಗಿದ್ದದ್ದೂ ನಿಮಗೆ ತಿಳಿದದೆ. |
16
|
ನಾವು ಯೆಹೋವನಿಗೆ ಮೊರೆಯಿಡಲಾಗಿ ಆತನು ನಮ್ಮ ಪ್ರಾರ್ಥನೆಯನ್ನು ಕೇಳಿ ದೂತನನ್ನು ಕಳುಹಿಸಿ ನಮ್ಮನ್ನು ಈಜಿಪ್ಟಿನಿಂದ ಬಿಡಿಸಿದ್ದನ್ನು ನೀವು ಬಲ್ಲಿರಿ. “ಈಗ ನಾವು ನಿಮ್ಮ ಪ್ರದೇಶದ ಗಡಿಯಲ್ಲಿರುವ ಕಾದೇಶೆಂಬ ಊರಲ್ಲಿದ್ದೇವೆ. |
17
|
ನಿಮ್ಮ ದೇಶವನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕೆಂದು ಬೇಡಿಕೊಳ್ಳುತ್ತೇವೆ. ನಾವು ಹೊಲಗಳಲ್ಲಿಯಾಗಲಿ ದ್ರಾಕ್ಷಿತೋಟಗಳಲ್ಲಿಯಾಗಲಿ ಹಾದು ಹೋಗುವುದಿಲ್ಲ. ಬಾವಿಗಳ ನೀರನ್ನು ಕುಡಿಯುವುದಿಲ್ಲ. ರಾಜಮಾರ್ಗದಲ್ಲಿಯೇ ನಡೆದು ತಮ್ಮ ದೇಶದ ಮೇರೆಗಳನ್ನು ದಾಟುವ ತನಕ ಎಡಕ್ಕಾಗಲಿ ಬಲಕ್ಕಾಗಲಿ ತಿರುಗುವುದಿಲ್ಲ” ಎಂದು ಹೇಳಿಸಿದನು. |
18
|
ಆದರೆ ಎದೋಮಿನ ಅರಸನು, “ನಮ್ಮ ದೇಶವನ್ನು ನೀವು ದಾಟಿಹೋಗಕೂಡದು. ದಾಟುವುದಾದರೆ, ನಾವು ನಿಮ್ಮ ಮೇಲೆ ಯುದ್ಧಕ್ಕೆ ಬರುತ್ತೇವೆ” ಎಂದು ಉತ್ತರ ಕೊಟ್ಟನು. |
19
|
ಅದಕ್ಕೆ ಇಸ್ರೇಲರು, “ನಾವು ರಾಜಮಾರ್ಗದಲ್ಲಿಯೇ ಹೋಗುವೆವು. ನಾವೂ ನಮ್ಮ ಪಶುಗಳೂ ನಿಮ್ಮ ನೀರನ್ನು ಕುಡಿದರೆ ಅದಕ್ಕೆ ಬೆಲೆ ಕೊಡುವೆವು. ನಮಗೆ ಕೇವಲ ನಡೆದುಕೊಂಡು ಹೋಗಲು ಅನುಮತಿ ಕೊಡಿ. ಇದೊಂದೇ ನಮ್ಮ ಚಿಕ್ಕ ಬೇಡಿಕೆ” ಎಂದು ಹೇಳಿದರು. |
20
|
ಆದರೆ ಮತ್ತೆ ಎದೋಮ್ಯರು, “ನೀವು ನಮ್ಮ ದೇಶವನ್ನು ದಾಟಿಹೋಗುವುದಕ್ಕೆ ನಾವು ಬಿಡುವುದಿಲ್ಲ” ಎಂದು ಉತ್ತರಿಸಿದರು. ಬಳಿಕ ಎದೋಮ್ಯರ ಅರಸನು ಬಲಿಷ್ಠವಾದ ದೊಡ್ಡ ಸೈನ್ಯವನ್ನು ಕೂಡಿಸಿಕೊಂಡು ಇಸ್ರೇಲರ ವಿರುದ್ಧ ಯುದ್ಧಮಾಡಲು ಹೊರಟನು. |
21
|
ಇಸ್ರೇಲರು ಅವನ ದೇಶವನ್ನು ಹಾದು ಹೋಗಲು ಎದೋಮ್ಯರ ಅರಸನು ಬಿಡಲಿಲ್ಲ. ಆಗ ಇಸ್ರೇಲರು ಬೇರೊಂದು ದಿಕ್ಕಿನಲ್ಲಿ ಹೋದರು. |
22
|
ಇಸ್ರೇಲರೆಲ್ಲರೂ ಕಾದೇಶಿನಿಂದ ಹೊರಟು ಹೋರ್ ಬೆಟ್ಟಕ್ಕೆ ಹೋದರು. |
23
|
ಹೋರ್ ಬೆಟ್ಟವು ಎದೋಮ್ಯರ ಗಡಿಯ ಬಳಿಯಲ್ಲಿ ಇತ್ತು. ಯೆಹೋವನು ಮೋಶೆ ಆರೋನರಿಗೆ, |
24
|
“ಆರೋನನು ಸತ್ತು ಪೂರ್ವಿಕರ ಬಳಿ ಸೇರುವ ಸಮಯ ಬಂದಿದೆ. ಇಸ್ರೇಲರಿಗೆ ನಾನು ವಾಗ್ದಾನ ಮಾಡಿದ ದೇಶದೊಳಗೆ ಆರೋನನು ಪ್ರವೇಶಿಸುವುದಿಲ್ಲ. ಯಾಕೆಂದರೆ ನೀವಿಬ್ಬರೂ ಮೆರೀಬಾ ಬುಗ್ಗೆಯ ಕುರಿತಾಗಿ ನಾನು ಕೊಟ್ಟ ಆಜ್ಞೆಗೆ ವಿಧೇಯರಾಗದಿದ್ದುದರಿಂದ ನಾನು ನಿಮಗೆ ಇದನ್ನು ಹೇಳುತ್ತಿದ್ದೇನೆ. |
25
|
“ಈಗ ನೀನು ಆರೋನನನ್ನೂ ಅವನ ಮಗನಾದ ಎಲ್ಲಾಜಾರನನ್ನೂ ಕರೆದುಕೊಂಡು ಹೋರ್ ಬೆಟ್ಟಕ್ಕೆ ಬಾ. |
26
|
ಆರೋನನ ಪ್ರತಿಷ್ಠಿತ ವಸ್ತ್ರಗಳನ್ನು ಅವನಿಂದ ತೆಗೆದು ಅವನ ಮಗನಾದ ಎಲ್ಲಾಜಾರನ ಮೇಲೆ ಹಾಕು. ಆರೋನನು ಅಲ್ಲಿ ಬೆಟ್ಟದ ಮೇಲೆ ಸತ್ತು ಪೂರ್ವಿಕರ ಬಳಿ ಸೇರುವನು” ಎಂದು ಹೇಳಿದನು. |
27
|
ಮೋಶೆಯು ಯೆಹೋವನ ಅಪ್ಪಣೆಗೆ ವಿಧೇಯನಾದನು. ಮೋಶೆ, ಆರೋನ ಮತ್ತು ಎಲ್ಲಾಜಾರ ಇವರು ಹೋರ್ ಬೆಟ್ಟವನ್ನು ಹತ್ತಿದರು. ಅವರು ಹೋಗುತ್ತಿರುವುದನ್ನು ಇಸ್ರೇಲರೆಲ್ಲರೂ ನೋಡಿದರು. |
28
|
ಮೋಶೆಯು ಆರೋನನ ಪ್ರತಿಷ್ಠಿತಾ ವಸ್ತ್ರಗಳನ್ನು ಅವನಿಂದ ತೆಗೆದು ಅವನ ಮಗನಾದ ಎಲ್ಲಾಜಾರನ ಮೇಲೆ ಹಾಕಿದನು. ಬಳಿಕ ಆರೋನನು ಬೆಟ್ಟದ ಮೇಲೆ ಸತ್ತನು. ಮೋಶೆ ಮತ್ತು ಎಲ್ಲಾಜಾರನು ಬೆಟ್ಟದಿಂದ ಇಳಿದು ಬಂದರು. |
29
|
ಆರೋನನು ಸತ್ತನೆಂದು ಇಸ್ರೇಲರೆಲ್ಲರಿಗೆ ತಿಳಿಯಿತು. ಆದ್ದರಿಂದ ಇಸ್ರೇಲಿನಲ್ಲಿ ಪ್ರತಿಯೊಬ್ಬನೂ ಆರೋನನಿಗಾಗಿ ಮೂವತ್ತು ದಿನಗಳವರೆಗೆ ಶೋಕಿಸಿದನು. |
Numbers 20:25 Kannada Language Bible Words basic statistical display
COMING SOON ...