Bible Languages

Indian Language Bible Word Collections

Bible Versions

Books

Matthew Chapters

Matthew 23 Verses

Bible Versions

Books

Matthew Chapters

Matthew 23 Verses

1 ಬಳಿಕ ಯೇಸು ನೆರೆದಿದ್ದ ಜನರೊಂದಿಗೂ ತನ್ನ ಶಿಷ್ಯರೊಂದಿಗೂ ಮಾತಾಡಿ ಹೇಳಿದ್ದೇನೆಂದರೆ:
2 “ಮೋಶೆಯ ಧರ್ಮಶಾಸ್ತ್ರ ಹೇಳುವುದನ್ನು ನಿಮಗೆ ತಿಳಿಸಲು ಧರ್ಮೋಪದೇಶಕರಿಗೂ ಫರಿಸಾಯರಿಗೂ ಅಧಿಕಾರವಿದೆ.
3 ಆದ್ದರಿಂದ ನೀವು ಅವರಿಗೆ ವಿಧೇಯರಾಗಿರಬೇಕು ಮತ್ತು ಅವರು ಹೇಳಿದ್ದನ್ನೆಲ್ಲ ಕೈಕೊಂಡು ನಡೆಯಬೇಕು. ಆದರೆ ಅವರ ಜೀವಿತಗಳು ಅನುಸರಿಸತಕ್ಕ ಒಳ್ಳೆಯ ಮಾದರಿ ಜೀವಿತಗಳಲ್ಲ. ಅವರು ನಿಮಗೆ ತಿಳಿಸುವಂಥ ಸಂಗತಿಗಳನ್ನು ತಾವೇ ಅನುಸರಿಸುವುದಿಲ್ಲ.
4 ಅವರು ಬೇರೆಯವರಿಗೆ ಕಷ್ಟಕರವಾದ ನಿಯಮಗಳನ್ನು ಕೊಟ್ಟು ಅವುಗಳಿಗೆ ವಿಧೇಯರಾಗಬೇಕೆಂದು ಒತ್ತಾಯ ಮಾಡುತ್ತಾರೆ. ತಾವಾದರೊ ಆ ನಿಯಮಗಳಲ್ಲಿ ಯಾವದನ್ನಾದರೂ ಅನುಸರಿಸಲು ಪ್ರಯತ್ನಿಸುವುದಿಲ್ಲ.
5 “ತಮ್ಮನ್ನು ಬೇರೆ ಜನರು ನೋಡಲಿ ಎಂಬ ಒಂದೇ ಉದ್ದೇಶದಿಂದ ಅವರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ. ಪವಿತ್ರ ಗ್ರಂಥಗಳು ತುಂಬಿರುವ ವಿಶೇಷವಾದ ಚರ್ಮದ ಚೀಲಗಳನ್ನು ಅವರು ಕಟ್ಟಿಕೊಂಡಿರುತ್ತಾರೆ. ಅವರು ಈ ಚೀಲಗಳನ್ನು ಇನ್ನೂ ಹೆಚ್ಚುಹೆಚ್ಚು ದೊಡ್ಡದನ್ನಾಗಿ ಮಾಡುತ್ತಾರೆ. ಜನರು ನೋಡಲಿ ಎಂದು ಅವರು ತಮ್ಮ ವಿಶೇಷ ಪ್ರಾರ್ಥನೆಯ ಉಡುಪುಗಳನ್ನು ಮತ್ತಷ್ಟು ಉದ್ದ ಮಾಡುತ್ತಾರೆ.
6 ಆ ಫರಿಸಾಯರು ಮತ್ತು ಧರ್ಮೋಪದೇಶಕರು ಔತಣಗಳಲ್ಲಿ ಹಾಗೂ ಸಭಾಮಂದಿರಗಳಲ್ಲಿ ಅತಿ ಪ್ರಾಮುಖ್ಯವಾದ ಸ್ಥಾನಗಳನ್ನು ಅಪೇಕ್ಷಿಸುತ್ತಾರೆ.
7 ಮಾರುಕಟ್ಟೆಗಳಲ್ಲಿ ಜನರು ತಮಗೆ ಮರ್ಯಾದೆ ತೋರಿಸಬೇಕೆಂದು ಆಶಿಸುತ್ತಾರೆ; ಜನರಿಂದ ಉಪದೇಶಕರೆನಿಸಿಕೊಳ್ಳಲು ಇಷ್ಟಪಡುತ್ತಾರೆ.
8 “ಆದರೆ ನೀವು ಉಪದೇಶಕರೆನಿಸಿಕೊಳ್ಳಬೇಡಿ. ನೀವೆಲ್ಲರೂ ಸಹೋದರ ಸಹೋದರಿಯರು. ನಿಮಗೆ ಒಬ್ಬನೇ ಉಪದೇಶಕನು.
9 ಈ ಲೋಕದಲ್ಲಿ ಯಾರನ್ನೂ ‘ತಂದೆ’ ಎಂದು ಕರೆಯಬೇಡಿ. ನಿಮಗೆ ಒಬ್ಬನೇ ತಂದೆ. ಆತನು ಪರಲೋಕದಲ್ಲಿದ್ದಾನೆ.
10 ‘ಗುರು’ವೆಂದೂ ಕರೆಸಿಕೊಳ್ಳಬೇಡಿ. ನಿಮಗೆ ಕ್ರಿಸ್ತನೊಬ್ಬನೇ ಗುರು.
11 ಸೇವಕನಂತೆ ನಿಮಗೆ ಸೇವೆ ಮಾಡುವವನೇ ನಿಮ್ಮಲ್ಲಿ ಅತ್ಯಂತ ದೊಡ್ಡವನಾಗಿದ್ದಾನೆ.
12 ತಾನು ಬೇರೆಯವರಿಗಿಂತ ಉತ್ತಮನೆಂದು ತನ್ನನ್ನು ಭಾವಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಉನ್ನತಿಗೇರಿಸಲ್ಪಡುವನು.
13 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು, ಜನರು ಪರಲೋಕರಾಜ್ಯಕ್ಕೆ ಪ್ರವೇಶಿಸುವ ದಾರಿಯನ್ನು ನೀವು ಮುಚ್ಚಿಬಿಡುತ್ತೀರಿ. ನೀವೂ ಪ್ರವೇಶಿಸುವುದಿಲ್ಲ ಮತ್ತು ಪ್ರವೇಶಿಸುವುದಕ್ಕೆ ಪ್ರಯತ್ನಿಸುವ ಜನರಿಗೂ ಬಿಡುವುದಿಲ್ಲ.
14 [This verse may not be a part of this translation]
15 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನಿಮ್ಮ ಮಾರ್ಗಗಳನ್ನು ಹಿಂಬಾಲಿಸುವ ಒಬ್ಬನನ್ನು ಕಂಡುಕೊಳ್ಳಲು ನೀವು ಸಮುದ್ರಗಳನ್ನು ದಾಟಿ ಬೇರೆಬೇರೆ ದೇಶಗಳಲ್ಲಿ ಪ್ರಯಾಣ ಮಾಡುತ್ತೀರಿ. ಅವನನ್ನು ಕಂಡುಕೊಂಡ ಮೇಲೆ ನಿಮಗಿಂತಲೂ ಹೆಚ್ಚು ಕೆಟ್ಟವನನ್ನಾಗಿ ಮಾಡುತ್ತೀರಿ. ನೀವು ನರಕಪಾತ್ರರಾಗುವಷ್ಟು ಕೆಟ್ಟವರಾಗಿದ್ದೀರಿ.
16 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಜನರಿಗೆ ಮಾರ್ಗದರ್ಶನ ಮಾಡುತ್ತೀರಿ. ಆದರೆ ನೀವೇ ಕುರುಡರು. ‘ಒಬ್ಬನು ದೇವಾಲಯದ ಹೆಸರಿನ ಮೇಲೆ ವಾಗ್ದಾನ ಮಾಡಿದರೆ ಅದಕ್ಕೇನೂ ಬೆಲೆಯಿಲ್ಲ ಎನ್ನುತ್ತೀರಿ. ಆದರೆ ಒಬ್ಬನು ದೇವಾಲಯದಲ್ಲಿರುವ ಚಿನ್ನದ ಮೇಲೆ ವಾಗ್ದಾನ ಮಾಡಿದರೆ, ಅವನು ಅದನ್ನು ಈಡೇರಿಸಬೇಕು ಎಂದು ಹೇಳುತ್ತೀರಿ!
17 ನೀವು ಕುರುಡರಾದ ಮೂರ್ಖರು! ಯಾವುದು ಹೆಚ್ಚಿನದು? ಚಿನ್ನವೋ ಅಥವಾ ದೇವಾಲಯವೋ? ಆ ಚಿನ್ನವು ಪರಿಶುದ್ಧಗೊಂಡದ್ದು ದೇವಾಲಯದಿಂದಲೇ. ಆದ್ದರಿಂದ ದೇವಾಲಯವೇ ಹೆಚ್ಚಿನದು.
18 “ಒಬ್ಬನು ಯಜ್ಞವೇದಿಕೆಯ ಮೇಲೆ ಆಣೆಯಿಟ್ಟುಕೊಂಡರೆ ಅದಕ್ಕೇನೂ ಬೆಲೆಯಿಲ್ಲ ಎನ್ನುತ್ತೀರಿ. ಆದರೆ ಒಬ್ಬನು ಯಜ್ಞವೇದಿಕೆಯ ಮೇಲಿರುವ ಕಾಣಿಕೆಯ ಮೇಲೆ ವಾಗ್ದಾನ ಮಾಡಿದರೆ ಅವನು ಅದನ್ನು ಈಡೇರಿಸಲೇಬೇಕು ಎಂದು ಹೇಳುತ್ತೀರಿ.
19 ನೀವು ಕುರುಡರು. ನಿಮಗೇನೂ ಅರ್ಥವಾಗುವುದಿಲ್ಲ. ಯಾವುದು ಹೆಚ್ಚಿನದು? ಕಾಣಿಕೆಯೋ ಅಥವಾ ಯಜ್ಞವೇದಿಕೆಯೋ? ಕಾಣಿಕೆ ಪರಿಶುದ್ಧಗೊಂಡದ್ದು ಯಜ್ಞವೇದಿಕೆಯಿಂದಲೇ. ಆದ್ದರಿಂದ ಯಜ್ಞವೇದಿಕೆಯೇ ಹೆಚ್ಚಿನದು.
20 ಯಜ್ಞವೇದಿಕೆಯ ಮೇಲೆ ವಾಗ್ದಾನ ಮಾಡುವವನು ಯಜ್ಞವೇದಿಕೆಯ ಮತ್ತು ಅದರ ಮೇಲಿರುವ ಕಾಣಿಕೆಯ ಮೇಲೆ ವಾಗ್ದಾನ ಮಾಡಿದಂತಾಯಿತು.
21 ದೇವಾಲಯದ ಮೇಲೆ ವಾಗ್ದಾನ ಮಾಡುವವನು ನಿಜವಾಗಿಯೂ ದೇವಾಲಯದ ಮತ್ತು ಅದರೊಳಗೆ ವಾಸವಾಗಿರುವಾತನ ಮೇಲೆ ವಾಗ್ದಾನ ಮಾಡಿದಂತಾಯಿತು.
22 ಪರಲೋಕದ ಮೇಲೆ ವಾಗ್ದಾನ ಮಾಡುವವನು ದೇವರ ಸಿಂಹಾಸನದ ಮೇಲೆಯೂ ಆ ಸಿಂಹಾಸನದ ಮೇಲೆ ಕುಳಿತಿರುವಾತನ ಮೇಲೆಯೂ ವಾಗ್ದಾನ ಮಾಡಿದಂತಾಯಿತು.
23 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನಿಮ್ಮಲ್ಲಿರುವ ಪ್ರತಿಯೊಂದರಲ್ಲೂ ನಿಮ್ಮ ಪುದೀನ, ಸಬ್ಬಸ್ಸಿಗೆ ಸೊಪ್ಪು, ಜೀರಿಗೆ ಗಿಡಗಳಲ್ಲಿಯೂ ಸಹ ಹತ್ತರಲ್ಲೊಂದು ಪಾಲನ್ನು ದೇವರಿಗೆ ಕೊಡುತ್ತೀರಿ. ಆದರೆ ಧರ್ಮಶಾಸ್ತ್ರದ ಬೋಧನೆಗಳಲ್ಲಿ ನಿಜವಾಗಿಯೂ ಪ್ರಾಮುಖ್ಯವಾದ ಆಜ್ಞೆಗಳನ್ನು ಅಂದರೆ ನ್ಯಾಯವನ್ನೂ ಕರುಣೆಯನ್ನೂ ಯಥಾರ್ಥತೆಯನ್ನೂ ನೀವು ತೊರೆದುಬಿಟ್ಟಿದ್ದೀರಿ. ಈ ಆಜ್ಞೆಗಳಿಗೆ ನೀವು ಮೊದಲು ವಿಧೇಯರಾಗಿ, ಈಗ ಮಾಡುತ್ತಿರುವಂಥ ಕಾರ್ಯಗಳನ್ನು ಮಾಡಬೇಕಿತ್ತು.
24 ನೀವು ಜನರಿಗೆ ಮಾರ್ಗದರ್ಶನ ಮಾಡುತ್ತೀರಿ. ಆದರೆ ನೀವೇ ಕುರುಡರು! ತಾನು ಕುಡಿಯುವ ಪಾನೀಯದೊಳಗಿಂದ ಸಣ್ಣ ಸೊಳ್ಳೆಯನ್ನು ತೆಗೆದುಹಾಕಿ ಆಮೇಲೆ ಒಂಟೆಯನ್ನು ನುಂಗುವವನಂತೆ ನೀವಿದ್ದೀರಿ.
25 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ನಿಮ್ಮ ಪಾತ್ರೆ ಬಟ್ಟಲುಗಳ ಹೊರಭಾಗವನ್ನು ತೊಳೆದು ಸ್ವಚ್ಛಮಾಡುತ್ತೀರಿ. ಆದರೆ ಅವುಗಳ ಒಳಭಾಗವು ಮೋಸದಿಂದಲೂ ನಿಮಗೆ ತೃಪ್ತಿ ನೀಡುವ ಪದಾರ್ಥಗಳಿಂದಲೂ ತುಂಬಿವೆ.
26 ಫರಿಸಾಯರೇ, ನೀವು ಕುರುಡರು! ಮೊದಲು ಬಟ್ಟಲಿನ ಒಳಭಾಗವನ್ನು ಚೆನ್ನಾಗಿ ಶುಚಿಮಾಡಿರಿ. ಆಗ ಬಟ್ಟಲಿನ ಹೊರಭಾಗವು ನಿಜವಾಗಿಯೂ ಶುಚಿಯಾಗಿರುವುದು.
27 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ಸುಣ್ಣ ಹಚ್ಚಿದ ಸಮಾಧಿಗಳಂತಿದ್ದೀರಿ. ಆ ಸಮಾಧಿಗಳ ಹೊರಭಾಗ ಚಂದವಾಗಿ ಕಾಣುತ್ತದೆ. ಆದರೆ ಒಳಭಾಗ ಸತ್ತವರ ಎಲುಬುಗಳಿಂದಲೂ ಎಲ್ಲಾ ಬಗೆಯ ಹೊಲಸುಗಳಿಂದಲೂ ತುಂಬಿರುತ್ತದೆ.
28 ನೀವು ಅದೇ ರೀತಿ ಇದ್ದೀರಿ. ನಿಮ್ಮನ್ನು ನೋಡಿದ ಜನರು ನಿಮ್ಮನ್ನು ಒಳ್ಳೆಯವರೆಂದು ಭಾವಿಸಿಕೊಳ್ಳುತ್ತಾರೆ. ಆದರೆ ನಿಮ್ಮ ಅಂತರಂಗವು ಕಪಟದಿಂದಲೂ ದುಷ್ಟತನದಿಂದಲೂ ತುಂಬಿಕೊಂಡಿದೆ.
29 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟುತ್ತೀರಿ. ಒಳ್ಳೆಯವರಾಗಿ ಜೀವಿಸದವರ ಗೋರಿಗಳಿಗೆ ಹೋಗಿ ಗೌರವ ತೋರಿಸುತ್ತೀರಿ.
30 ‘ನಮ್ಮ ಪಿತೃಗಳ ಕಾಲದಲ್ಲಿ ನಾವು ಇದ್ದಿದ್ದರೆ ಈ ಪ್ರವಾದಿಗಳನ್ನು ಕೊಲ್ಲುವುದಕ್ಕೆ ಅವರಿಗೆ ಸಹಾಯ ಮಾಡುತ್ತಿರಲಿಲ್ಲ’ ಎಂದು ಹೇಳುತ್ತೀರಿ.
31 ಆ ಪ್ರವಾದಿಗಳನ್ನು ಕೊಂದವರ ಮಕ್ಕಳು (ಸಂತತಿಯವರು) ನೀವೇ ಎಂಬುದಕ್ಕೆ ಇದೇ ಆಧಾರವಾಗಿದೆ.
32 ನಿಮ್ಮ ಪಿತೃಗಳು ಪ್ರಾರಂಭಿಸಿದ ಆ ಪಾಪವನ್ನು ನೀವು ಪೂರ್ತಿಮಾಡುವಿರಿ!
33 “ನೀವು ಸರ್ಪಗಳು! ನೀವು ವಿಷಕರವಾದ ಹಾವುಗಳ ಕುಟುಂಬದವರು! ನೀವು ದೇವರಿಂದ ತಪ್ಪಿಸಿಕೊಳ್ಳಲಾರಿರಿ. ನೀವೆಲ್ಲರು ಅಪರಾಧಿಗಳೆಂಬ ತೀರ್ಪುಹೊಂದಿ ನರಕಕ್ಕೆ ಹೋಗುವಿರಿ!
34 ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಉಪದೇಶಕರನ್ನೂ ಕಳುಹಿಸುತ್ತೇನೆ. ನೀವು ಅವರಲ್ಲಿ ಕೆಲವರನ್ನು ಕೊಲ್ಲುವಿರಿ; ಇನ್ನು ಕೆಲವರನ್ನು ಶಿಲುಬೆಗೇರಿಸುವಿರಿ; ಇತರ ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಹೊಡೆಯುವಿರಿ; ನೀವು ಅವರನ್ನು ಊರಿಂದ ಊರಿಗೆ ಅಟ್ಟಿಬಿಡುವಿರಿ.
35 “ಆದ್ದರಿಂದ ಭೂಮಿಯ ಮೇಲೆ ಕೊಲ್ಲಲ್ಪಟ್ಟ ಎಲ್ಲಾ ಸತ್ಪುರುಷರ ಕೊಲೆಯ ಅಪರಾಧಕ್ಕೆ ನೀವು ಗುರಿಯಾಗುವಿರಿ. ಸತ್ಪುರುಷನಾದ ಹೇಬೆಲನನ್ನು ಮೊದಲುಗೊಂಡು ಬರಕೀಯನ ಮಗನಾದ ಜಕರೀಯನನ್ನು ಕೊಂದದ್ದಕ್ಕೆ ನೀವು ಅಪರಾಧಿಗಳಾಗುವಿರಿ. ಜಕರೀಯನು ದೇವಾಲಯಕ್ಕೂ ಯಜ್ಞವೇದಿಕೆಗೂ ನಡುವೆ ಕೊಲ್ಲಲ್ಪಟ್ಟನು.
36 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದಲ್ಲಿ ಜೀವಿಸುತ್ತಿರುವ ನಿಮ್ಮ ಮೇಲೆ ಈ ಅಪರಾಧಗಳೆಲ್ಲಾ ಬರುತ್ತವೆ.
37 “ಜೆರುಸಲೇಮೇ, ಜೆರುಸಲೇಮೇ! ಪ್ರವಾದಿಗಳನ್ನು ಕೊಲ್ಲುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿದ ಜನರನ್ನು ಕಲ್ಲುಗಳಿಂದ ಕೊಲ್ಲುವವಳೇ, ಅನೇಕ ಸಲ ನಿನ್ನ ಜನರಿಗೆ ನಾನು ಸಹಾಯ ಮಾಡಬೇಕೆಂದಿದ್ದೆನು. ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಸೇರಿಸಿಕೊಳ್ಳುವ ಹಾಗೆ ನಿನ್ನ ಜನರನ್ನು ಸೇರಿಸಿಕೊಳ್ಳಲು ನನಗೆ ಮನಸ್ಸಿತ್ತು. ಆದರೆ ನೀನು ಒಪ್ಪಲಿಲ್ಲ.
38 ಈಗ ನಿನ್ನ ಮನೆಯು ಸಂರ್ಪೂಣವಾಗಿ ಬರಿದಾಗಿಬಿಟ್ಟಿದೆ.
39 ನಾನು ನಿನಗೆ ಹೇಳುವುದೇನೆಂದರೆ, ‘ಪ್ರಭುವಿನ ಹೆಸರಿನಲ್ಲಿ ಬರುವಾತನನ್ನು ದೇವರು ಆಶೀರ್ವದಿಸಲಿ’ ಎಂದು ನೀನು ಹೇಳುವತನಕ ನನ್ನನ್ನು ನೋಡುವುದೇ ಇಲ್ಲ.”

Matthew 23:21 Kannada Language Bible Words basic statistical display

COMING SOON ...

×

Alert

×