Bible Languages

Indian Language Bible Word Collections

Bible Versions

Books

Matthew Chapters

Matthew 2 Verses

Bible Versions

Books

Matthew Chapters

Matthew 2 Verses

1 ಹೆರೋದನು ರಾಜನಾಗಿದ್ದ ಕಾಲದಲ್ಲಿ ಯೇಸು ಜುದೇಯದ ಬೆತ್ಲೆಹೇಮ್ ಎಂಬ ಊರಲ್ಲಿ ಹುಟ್ಟಿದನು. ಯೇಸು ಹುಟ್ಟಿದ ಮೇಲೆ, ಪೂರ್ವದೇಶದ ಕೆಲವು ಜ್ಞಾನಿಗಳು ಜೆರುಸಲೇಮಿಗೆ ಬಂದರು.
2 ಆ ಜ್ಞಾನಿಗಳು ಜನರಿಗೆ, “ಯೆಹೂದ್ಯರ ರಾಜನು ಹುಟ್ಟಿದ್ದಾನಲ್ಲವೇ? ಆತನೆಲ್ಲಿ? ಆತನು ಹುಟ್ಟಿದನೆಂದು ಸೂಚಿಸುವ ನಕ್ಷತ್ರ ಪೂರ್ವದಲ್ಲಿ ಉದಯಿಸಿದ್ದನ್ನು ಕಂಡು ಆತನನ್ನು ಆರಾಧಿಸಲು ಬಂದೆವು” ಅಂದರು.
3 ಯೆಹೂದ್ಯರ ಈ ಹೊಸ ರಾಜನ ವಿಷಯ ತಿಳಿದಾಗ ಹೆರೋದನು ಮತ್ತು ಜೆರುಸಲೇಮಿನ ಜನರೆಲ್ಲರೂ ಗಲಿಬಿಲಿಗೊಂಡರು.
4 ಕೂಡಲೇ, ಹೆರೋದನು ಎಲ್ಲಾ ಮಹಾಯಾಜಕರನ್ನೂ ಧರ್ಮೋಪದೇಶಕರನ್ನೂ ಸಭೆ ಸೇರಿಸಿ, “ಕ್ರಿಸ್ತನು ಹುಟ್ಟಬೇಕಾಗಿದ್ದ ಸ್ಥಳ ಯಾವುದು?” ಎಂದು ಕೇಳಿದನು.
5 ಅವರು, “ಜುದೇಯದ ಬೆತ್ಲೆಹೇಮ್ ಎಂಬ ಊರಲ್ಲಿ ಹುಟ್ಟುವನು. ಏಕೆಂದರೆ ಪ್ರವಾದಿಯು ಪವಿತ್ರ ಗ್ರಂಥದಲ್ಲಿ ಹೀಗೆಂದು ಬರೆದಿದ್ದಾನೆ:
6 ‘ಯಹೂದ ಪ್ರಾಂತ್ಯದಲ್ಲಿರುವ ಬೆತ್ಲೆಹೇಮೇ, ಯಹೂದವನ್ನು ಆಳುವವರಲ್ಲಿ ನೀನು ಪ್ರಾಮುಖ್ಯವಾಗಿರುವೆ. ಹೌದು, ಅಧಿಪತಿಯೊಬ್ಬನು ನಿನ್ನೊಳಗಿಂದ ಬರುವನು. ನನ್ನ ಜನರಾದ ಇಸ್ರೇಲರನ್ನು ಆತನೇ ಮುನ್ನಡೆಸುವನು’ ಎಂದು ಉತ್ತರ ಕೊಟ್ಟರು. ಮೀಕ 5:2
7 ಆಗ ಹೆರೋದನು ಪೂರ್ವ ದೇಶದ ಜ್ಞಾನಿಗಳನ್ನು ರಹಸ್ಯವಾಗಿ ಕರೆಯಿಸಿ, ಅವರು ಆ ನಕ್ಷತ್ರವನ್ನು ಕಂಡ ಸರಿಯಾದ ಸಮಯವನ್ನು ಅವರಿಂದ ತಿಳಿದುಕೊಂಡನು.
8 ಹೆರೋದನು ಆ ಜ್ಞಾನಿಗಳಿಗೆ, “ನೀವು ಹೋಗಿ ಚೆನ್ನಾಗಿ ವಿಚಾರಣೆ ಮಾಡಿ ಆ ಮಗು ಎಲ್ಲಿದೆ ಎಂಬುದನ್ನು ತಿಳಿದುಕೊಂಡು ನಂತರ ಬಂದು ನನಗೆ ತಿಳಿಸಿರಿ. ಆಗ ನಾನೂ ಹೋಗಿ ಆತನನ್ನು ಆರಾಧಿಸುವೆನು” ಎಂದು ಹೇಳಿ ಅವರನ್ನು ಬೆತ್ಲೆಹೇಮಿಗೆ ಕಳುಹಿಸಿಕೊಟ್ಟನು.
9 ಆ ಜ್ಞಾನಿಗಳು ಅರಸನ ಮಾತನ್ನು ಕೇಳಿ ಅಲ್ಲಿಂದ ಹೊರಟಾಗ, ಪೂರ್ವ ದಿಕ್ಕಿನಲ್ಲಿ ಉದಯಿಸಿದ ನಕ್ಷತ್ರವನ್ನು ಮತ್ತೆ ಕಂಡರು. ಅವರು ಆ ನಕ್ಷತ್ರವನ್ನೇ ಹಿಂಬಾಲಿಸಿದರು. ಆ ನಕ್ಷತ್ರ ಅವರ ಮುಂದೆ ಚಲಿಸುತ್ತಾ ಹೋಗಿ ಮಗುವಿದ್ದ ಸ್ಥಳದ ಮೇಲೆ ನಿಂತುಕೊಂಡಿತು.
10 ಅವರು ಆ ನಕ್ಷತ್ರವನ್ನು ನೋಡಿ ಅತ್ಯಂತ ಸಂತೋಷಪಟ್ಟರು.
11 ಅವರು ಆ ಮನೆಗೆ ಬಂದಾಗ, ಮಗುವನ್ನು ತಾಯಿ ಮರಿಯಳ ಬಳಿ ಕಂಡು, ಅದಕ್ಕೆ ಸಾಷ್ಟಾಂಗವೆರಗಿ ಆರಾಧಿಸಿದರು. ಅಲ್ಲದೆ ತಾವು ಮಗುವಿಗಾಗಿ ತಂದಿದ್ದ ಕಾಣಿಕೆಗಳನ್ನು ತೆರೆದು ಚಿನ್ನ, ಧೂಪ ಮತ್ತು ಸುಗಂಧ ದ್ರವ್ಯಗಳನ್ನು ನೀಡಿದರು.
12 ಆದರೆ ದೇವರು ಜ್ಞಾನಿಗಳಿಗೆ ಕನಸಿನಲ್ಲಿ, “ನೀವು ಹೆರೋದನ ಬಳಿಗೆ ಹಿಂತಿರುಗಿ ಹೋಗಕೂಡದು” ಎಂದು ಎಚ್ಚರಿಸಿದನು. ಆದ್ದರಿಂದ ಅವರು ಬೇರೊಂದು ಮಾರ್ಗದ ಮೂಲಕ ತಮ್ಮ ದೇಶಕ್ಕೆ ಹೊರಟುಹೋದರು.
13 ಜ್ಞಾನಿಗಳು ಹೊರಟುಹೋದ ನಂತರ ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ಎದ್ದೇಳು! ಮಗುವನ್ನು ಮತ್ತು ಅದರ ತಾಯಿಯನ್ನು ಕರೆದುಕೊಂಡು ಈಜಿಪ್ಟಿಗೆ ಓಡಿಹೋಗು. ಹೆರೋದನು ಮಗುವನ್ನು ಹುಡುಕಲು ಪ್ರಾರಂಭಿಸುವನು. ಅವನು ಮಗುವನ್ನು ಕೊಲ್ಲಬೇಕೆಂದಿದ್ದಾನೆ. “ಅಪಾಯವಿಲ್ಲ’ ಎಂದು ನಾನು ನಿನಗೆ ಹೇಳುವ ತನಕ ನೀನು ಈಜಿಪ್ಟಿನಲ್ಲೇ ಇರು” ಎಂದು ಹೇಳಿದನು.
14 ಕೂಡಲೇ, ಯೋಸೇಫನು ಎದ್ದು ಮಗು ಮತ್ತು ಅದರ ತಾಯಿಯೊಂದಿಗೆ ಈಜಿಪ್ಟಿಗೆ ರಾತ್ರಿ ಸಮಯದಲ್ಲಿ ಹೊರಟುಹೋದನು.
15 ಹೆರೋದನು ಸಾಯುವ ತನಕ ಯೋಸೇಫನು ಈಜಿಪ್ಟಿನಲ್ಲೇ ಇದ್ದನು. “ನಾನು ನನ್ನ ಮಗನನ್ನು ಈಜಿಪ್ಟಿನೊಳಗಿಂದ ಕರೆದೆ” ಎಂದು ಪ್ರವಾದಿಯ ಮೂಲಕ ಪ್ರಭು ಹೇಳಿದ್ದ ಮಾತು ಇದರಿಂದ ನೆರವೇರಿತು.
16 ಜ್ಞಾನಿಗಳು ತನಗೆ ಮೋಸಮಾಡಿದರೆಂಬುದು ತಿಳಿದಾಗ ಹೆರೋದನು ಬಹಳ ಕೋಪಗೊಂಡನು. ಆ ಮಗು ಹುಟ್ಟಿದ ಸಮಯವನ್ನು ಹೆರೋದನು ಜ್ಞಾನಿಗಳಿಂದ ತಿಳಿದುಕೊಂಡಿದ್ದನು. ಆ ಮಗು ಹುಟ್ಟಿ ಎರಡು ವರ್ಷಗಳಾಗಿದ್ದವು. ಆದ್ದರಿಂದ ಹೆರೋದನು ಬೆತ್ಲೆಹೇಮಿನಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಎರಡು ವರ್ಷದ ಮತ್ತು ಅವರಿಗಿಂತ ಚಿಕ್ಕವರಾದ ಗಂಡುಮಕ್ಕಳನ್ನೆಲ್ಲಾ ಕೊಲ್ಲಬೇಕೆಂದು ಆಜ್ಞಾಪಿಸಿದನು.
17 ಹೀಗೆ ದೇವರು ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿದ ಈ ಮಾತು ನೆರವೇರಿತು:
18 “ರಾಮದಲ್ಲಿ ಬೊಬ್ಬೆಯು ಕೇಳಿಸಿತು. ಅದು ಬಹು ಗೋಳಾಟದ ಮತ್ತು ದುಃಖದ ಬೊಬ್ಬೆಯಾಗಿತ್ತು. ರಾಹೇಲಳು ತನ್ನ ಮಕ್ಕಳಿಗಾಗಿ ಅಳುವಳು; ಅವರು ಸತ್ತುಹೋದದ್ದಕ್ಕಾಗಿ ಸಮಾಧಾನ ಹೊಂದಲೊಲ್ಲಳು.” ಯೆರೆಮೀಯ 31:15
19 ಹೆರೋದನು ಸತ್ತನಂತರ, ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡನು. ಯೋಸೇಫನು ಈಜಿಪ್ಟಿನಲ್ಲಿ ಇರುವಾಗಲೇ ಇದು ಸಂಭವಿಸಿತು.
20 ದೇವದೂತನು ಅವನಿಗೆ, “ಎದ್ದೇಳು! ಮಗುವನ್ನು ಮತ್ತು ಅದರ ತಾಯಿಯನ್ನು ಕರೆದುಕೊಂಡು ಇಸ್ರೇಲಿಗೆ ಹೋಗು. ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದವರು ಸತ್ತುಹೋದರು” ಎಂದು ಹೇಳಿದನು.
21 ಆದ್ದರಿಂದ ಯೋಸೇಫನು ಮಗುವನ್ನು ಮತ್ತು ಮಗುವಿನ ತಾಯಿಯನ್ನು ಕರೆದುಕೊಂಡು ಇಸ್ರೇಲಿಗೆ ಹೋದನು.
22 ಆದರೆ ಹೆರೋದನು ಸತ್ತನಂತರ ಅವನ ಮಗನಾದ ಅರ್ಖೆಲಾಯನು ಯಹೂದದ ರಾಜನಾಗಿದ್ದಾನೆ ಎಂಬುದನ್ನು ಕೇಳಿ ಅಲ್ಲಿಗೆ ಹೋಗಲು ಭಯಪಟ್ಟನು. ಕನಸಿನಲ್ಲಿ ತನಗೆ ಕೊಟ್ಟ ಎಚ್ಚರಿಕೆಯಂತೆ ಅವನು ಆ ಸ್ಥಳವನ್ನು ಬಿಟ್ಟು ಗಲಿಲಾಯ ಪ್ರದೇಶಕ್ಕೆ ಹೋಗಿ,
23 ನಜರೇತ್ ಎಂಬ ಊರಲ್ಲಿ ವಾಸಿಸಿದನು. “ಕ್ರಿಸ್ತನನ್ನು ‘ನಜರೇತಿನವನು’ ಎಂದು ಕರೆಯುತ್ತಾರೆ” ಎಂದು ದೇವರು ಪ್ರವಾದಿಗಳ ಮೂಲಕ ಹೇಳಿದ್ದು ಹೀಗೆ ನೆರವೇರಿತು.

Matthew 2:1 Kannada Language Bible Words basic statistical display

COMING SOON ...

×

Alert

×