Bible Languages

Indian Language Bible Word Collections

Bible Versions

Books

Matthew Chapters

Matthew 26 Verses

Bible Versions

Books

Matthew Chapters

Matthew 26 Verses

1 ಯೇಸು ಈ ಸಂಗತಿಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ, ತನ್ನ ಶಿಷ್ಯರಿಗೆ,
2 “ನಾಳಿದ್ದು ಪಸ್ಕಹಬ್ಬವೆಂಬುದು ನಿಮಗೆ ತಿಳಿದಿದೆ. ಅಂದು ಮನುಷ್ಯಕುಮಾರನನ್ನು ಶಿಲುಬೆಗೇರಿಸಲು ವೈರಿಗಳಿಗೆ ಒಪ್ಪಿಸುವರು” ಎಂದನು.
3 ಇತ್ತ ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯ ನಾಯಕರು, ಪ್ರಧಾನಯಾಜಕನ ಭವನದಲ್ಲಿ ಸಭೆ ಸೇರಿದರು. ಪ್ರಧಾನಯಾಜಕನ ಹೆಸರು ಕಾಯಫ.
4 ಆ ಸಭೆಯಲ್ಲಿ ಅವರು ಯೇಸುವನ್ನು ಉಪಾಯದಿಂದ ಬಂಧಿಸಿ ಕೊಲ್ಲಲು ಸಮಾಲೋಚಿಸಿದರು.
5 ಆದರೆ ಸಭಿಕರು, “ನಾವು ಪಸ್ಕಹಬ್ಬದ ಕಾಲದಲ್ಲಿ ಯೇಸುವನ್ನು ಬಂಧಿಸಲು ಸಾಧ್ಯವಿಲ್ಲ. ಏಕೆಂದರೆ ಜನರು ಕೋಪಗೊಂಡು ದಂಗೆ ಏಳಬಹುದು” ಎಂದು ಹೇಳಿದರು.
6 ಯೇಸು ಬೆಥಾನಿಯಲ್ಲಿದ್ದಾಗ ಸಿಮೋನ ಎಂಬ ಕುಷ್ಠರೋಗಿಯ ಮನೆಯಲ್ಲಿದ್ದನು.
7 ಆಗ ಸ್ತ್ರೀಯೊಬ್ಬಳು ಬಹು ಬೆಲೆಬಾಳುವ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು ಊಟಕ್ಕೆ ಕುಳಿತ್ತಿದ್ದ ಯೇಸುವಿನ ತಲೆಯ ಮೇಲೆ ಆ ಸುಗಂಧ ತೈಲವನ್ನು ಸುರಿದಳು.
8 ಇದನ್ನು ನೋಡಿದ ಶಿಷ್ಯರು ಆ ಸ್ತ್ರೀಯ ಮೇಲೆ ಕೋಪಗೊಂಡು, “ಆ ಸುಗಂಧ ತೈಲವನ್ನು ಏಕೆ ಹಾಳು ಮಾಡಿದೆ?
9 ಅದನ್ನು ಬಹಳ ಹಣಕ್ಕೆ ಮಾರಿ ಬಡ ಜನರಿಗೆ ಕೊಡಬಹುದಾಗಿತ್ತಲ್ಲಾ” ಎಂದರು.
10 ಆದರೆ ಈ ಘಟನೆಗೆ ಕಾರಣವನ್ನು ತಿಳಿದಿದ್ದ ಯೇಸು ತನ್ನ ಶಿಷ್ಯರಿಗೆ, “ಈ ಸ್ತ್ರೀಗೆ ಏಕೆ ತೊಂದರೆ ಕೊಡುತ್ತೀರಿ? ಆಕೆಯು ನನಗೆ ಬಹಳ ಒಳ್ಳೆಯ ಕಾರ್ಯವನ್ನು ಮಾಡಿದಳು.
11 ಬಡಜನರು ನಿಮ್ಮೊಂದಿಗೆ ಯಾವಾಗಲೂ ಇರುತ್ತಾರೆ. ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ.
12 ನಾನು ಸತ್ತನಂತರ ನನ್ನನ್ನು ಸಮಾಧಿಗೆ ಸಿದ್ಧಪಡಿಸುವುದಕ್ಕಾಗಿ ಈ ಸ್ತ್ರೀಯು ನನ್ನ ದೇಹದ ಮೇಲೆ ಸುಗಂಧ ತೈಲವನ್ನು ಸುರಿದಳು.
13 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರಪಂಚದಾದ್ಯಂತ ಎಲ್ಲೆಲ್ಲಿ ಸುವಾರ್ತೆಯನ್ನು ತಿಳಿಸಲಾಗುವುದೋ ಅಲ್ಲೆಲ್ಲಾ ಈ ಕಾರ್ಯವನ್ನು ಈಕೆಯ ನೆನಪಿಗಾಗಿ ತಿಳಿಸಲಾಗುವುದು” ಎಂದು ಹೇಳಿದನು.
14 ನಂತರ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು ಮಹಾಯಾಜಕರ ಬಳಿಗೆ ಹೋಗಿ,
15 “ಯೇಸುವನ್ನು ನಿಮಗೆ ಹಿಡಿದುಕೊಟ್ಟರೆ ನೀವು ನನಗೆ ಎಷ್ಟು ಹಣ ಕೊಡುವಿರಿ?” ಎಂದು ಕೇಳಿದನು. ಮಹಾಯಾಜಕರು ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಯೂದನಿಗೆ ಕೊಟ್ಟರು.
16 ಅಂದಿನಿಂದ ಯೇಸುವನ್ನು ಹಿಡಿದುಕೊಡಲು ಯೂದನು ಸಮಯ ಕಾಯುತ್ತಿದ್ದನು.
17 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಂದು ಶಿಷ್ಯರು ಯೇಸುವಿನ ಬಳಿಗೆ ಬಂದು, “ನಾವು ನಿನಗಾಗಿ ಪಸ್ಕಹಬ್ಬದ ಊಟವನ್ನು ಎಲ್ಲಿ ಸಿದ್ಧಪಡಿಸಬೇಕು?” ಎಂದು ಕೇಳಿದರು.
18 ಅದಕ್ಕೆ ಯೇಸು, “ನೀವು ನಗರಕ್ಕೆ ಹೋಗಿ ನಾನು ಸೂಚಿಸುವ ವ್ಯಕ್ತಿಯನ್ನು ಭೇಟಿಮಾಡಿ ಅವನಿಗೆ, ‘ಆರಿಸಿಕೊಂಡ ಸಮಯ ಸಮೀಪಿಸಿತು. ನಾನು ಪಸ್ಕಹಬ್ಬದ ಊಟವನ್ನು ನಿನ್ನ ಮನೆಯಲ್ಲಿ ನನ್ನ ಶಿಷ್ಯರೊಂದಿಗೆ ಮಾಡುತ್ತೇನೆ ಎಂದು ಉಪದೇಶಕನು ಹೇಳುತ್ತಾನೆ’ ಎಂಬುದಾಗಿ ತಿಳಿಸಿರಿ” ಎಂದು ಉತ್ತರಕೊಟ್ಟನು.
19 ಯೇಸು ಹೇಳಿದಂತೆಯೇ ಶಿಷ್ಯರು ಮಾಡಿ ಪಸ್ಕಹಬ್ಬದ ಊಟವನ್ನು ಏರ್ಪಡಿಸಿದರು.
20 ಸಾಯಂಕಾಲದಲ್ಲಿ ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರೊಂದಿಗೆ ಊಟಕ್ಕೆ ಕುಳಿತಿದ್ದನು.
21 ಅವರೆಲ್ಲರೂ ಊಟ ಮಾಡುತ್ತಿದ್ದಾಗ ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇಲ್ಲಿರುವ ಹನ್ನೆರಡು ಮಂದಿಯಲ್ಲಿ ಒಬ್ಬನು ನನ್ನನ್ನು ವೈರಿಗಳಿಗೆ ಒಪ್ಪಿಸುತ್ತಾನೆ” ಎಂದು ಹೇಳಿದನು.
22 ಶಿಷ್ಯರು ಇದನ್ನು ಕೇಳಿ ಬಹಳ ದುಃಖಪಟ್ಟರು. ಪ್ರತಿಯೊಬ್ಬ ಶಿಷ್ಯನು ಯೇಸುವಿಗೆ, “ಪ್ರಭುವೇ, ನಿಜವಾಗಿಯೂ ನಾನಲ್ಲ!” ಎಂದು ಹೇಳಿದರು.
23 ಯೇಸು, “ಬಟ್ಟಲಲ್ಲಿ ನನ್ನ ಸಂಗಡ ತನ್ನ ಕೈಗಳನ್ನು ಅದ್ದುವವನೇ, ನನಗೆ ವಿರೋಧವಾಗಿದ್ದಾನೆ.
24 ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಮನುಷ್ಯಕುಮಾರನು ಹೊರಟು ಹೋಗಿ ಮರಣ ಹೊಂದುತ್ತಾನೆ. ಆದರೆ ಆತನನ್ನು ಕೊಲ್ಲಲು ಒಪ್ಪಿಸುವವನಿಗೆ ಬಹಳ ಕೇಡಾಗುತ್ತದೆ. ಅವನು ಹುಟ್ಟದೆ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದು ಹೇಳಿದನು.
25 ಆಗ, ಯೇಸುವನ್ನು ಆತನ ಶತ್ರುಗಳಿಗೆ ಒಪ್ಪಿಸಿಕೊಡಲಿದ್ದ ಯೂದನು, “ಗುರುವೇ, ನಿನಗೆ ವಿರೋಧವಾಗಿರುವವನು ನಾನಲ್ಲ ತಾನೇ?” ಎಂದನು. ಅದಕ್ಕೆ ಯೇಸು, “ಹೌದು, ಅವನು ನೀನೇ?” ಎಂದು ಉತ್ತರಿಸಿದನು.
26 ಅವರು ಊಟಮಾಡುತ್ತಿದ್ದಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ” ಎಂದು ಹೇಳಿ ತನ್ನ ಶಿಷ್ಯರಿಗೆ ಕೊಟ್ಟನು.
27 ನಂತರ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರಸಲ್ಲಿಸಿ, “ನೀವೆಲ್ಲರೂ ಇದನ್ನು ಕುಡಿಯಿರಿ.
28 ಇದು ಹೊಸ ಒಡಂಬಡಿಕೆಯನ್ನು ಸ್ಥಾಪಿಸುವ ನನ್ನ ರಕ್ತ. ಇದು ಅನೇಕ ಜನರ ಪಾಪಗಳ ಕ್ಷಮೆಗಾಗಿ ಸುರಿಸಲ್ಪಡುವ ರಕ್ತ.
29 ನಾನು ನನ್ನ ತಂದೆಯ ರಾಜ್ಯದಲ್ಲಿ ಮತ್ತೆ ಒಟ್ಟಾಗಿ ಸೇರಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ತನಕ ಅದನ್ನು ಇನ್ನು ಕುಡಿಯುವುದೇ ಇಲ್ಲ” ಎಂದು ಹೇಳಿ ಜನರಿಗೆ ಕುಡಿಯಲು ಕೊಟ್ಟನು.
30 ಆಗ ಶಿಷ್ಯರೆಲ್ಲರೂ ಪಸ್ಕಹಬ್ಬದ ಹಾಡನ್ನು ಹಾಡಿದರು. ಬಳಿಕ ಅವರು ಆಲಿವ್ ಗುಡ್ಡಕ್ಕೆ ಹೋದರು.
31 ಆಗ ಯೇಸು ತನ್ನ ಶಿಷ್ಯರಿಗೆ, “ಇಂದು ರಾತ್ರಿ ನೀವೆಲ್ಲರೂ ನನ್ನ ದೆಸೆಯಿಂದ ನಿಮ್ಮ ವಿಶ್ವಾಸವನ್ನು ಕಳೆದುಕೊಳ್ಳುವಿರಿ. ‘ನಾನು ಕುರುಬನನ್ನು ಕೊಲ್ಲುವೆನು, ಆಗ ಕುರಿಗಳೆಲ್ಲಾ ಚದರಿಹೋಗುತ್ತವೆ’ ಜೆಕರ್ಯ 13:7 ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
32 ಆದರೆ ನಾನು ಸತ್ತಮೇಲೆ ಜೀವಂತನಾಗಿ ಎದ್ದುಬರುವೆನು. ನಂತರ ನಾನು ಗಲಿಲಾಯಕ್ಕೆ ಹೋಗುವೆನು. ನೀವು ಅಲ್ಲಿಗೆ ಹೋಗುವುದಕ್ಕಿಂತ ಮುಂಚೆಯೇ ನಾನು ಅಲ್ಲಿರುವೆನು” ಎಂದು ಹೇಳಿದನು.
33 ಪೇತ್ರನು, “ಉಳಿದ ಶಿಷ್ಯರೆಲ್ಲರೂ ನಿನ್ನ ದೆಸೆಯಿಂದ ತಮ್ಮ ವಿಶ್ವಾಸವನ್ನು ಕಳೆದುಕೊಳ್ಳಬಹುದು. ಆದರೆ ನಾನು ಮಾತ್ರ ಹಾಗೆ ಮಾಡುವುದಿಲ್ಲ” ಎಂದು ಉತ್ತರ ಕೊಟ್ಟನು.
34 ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಇಂದು ರಾತ್ರಿ ಕೋಳಿ ಕೂಗುವುದಕ್ಕಿಂತ ಮೊದಲು ನೀನು ನನ್ನ ವಿಷಯದಲ್ಲಿ ಆತನು ನನಗೆ ಗೊತ್ತೇ ಇಲ್ಲ ಎಂಬುದಾಗಿ ಮೂರು ಸಲ ಹೇಳುವೆ” ಅಂದನು.
35 ಆದರೆ ಪೇತ್ರನು, “ನಾನು ನಿನ್ನೊಂದಿಗೆ ಸತ್ತರೂ ಸರಿ, ನಿನ್ನನ್ನು ನಿರಾಕರಿಸುವುದಿಲ್ಲ” ಅಂದನು. ಉಳಿದ ಶಿಷ್ಯರು ಸಹ ಅದೇ ರೀತಿ ಹೇಳಿದರು.
36 ಅನಂತರ ಯೇಸು ತನ್ನ ಶಿಷ್ಯರೊಂದಿಗೆ ಗೆತ್ಸೆಮನೆ ಎಂಬ ಸ್ಥಳಕ್ಕೆ ಹೋದನು. ಯೇಸು ತನ್ನ ಶಿಷ್ಯರಿಗೆ, “ನಾನು ಅಲ್ಲಿಗೆ ಹೋಗಿ, ಪ್ರಾರ್ಥಿಸಿ ಬರುವ ತನಕ ಇಲ್ಲಿಯೇ ಇರಿ’ ಎಂದು ಹೇಳಿದನು.
37 ಯೇಸುವು ಪೇತ್ರನನ್ನು ಮತ್ತು ಜೆಬೆದಾಯನ ಇಬ್ಬರು ಮಕ್ಕಳನ್ನು ತನ್ನೊಂದಿಗೆ ಕರೆದುಕೊಂಡು ಹೋದನು. ಆಗ ಯೇಸು ಬಹಳ ದುಃಖದಿಂದ ಮನಗುಂದಿದವನಾಗಿ
38 ಅವರಿಗೆ, “ನನ್ನ ಆತ್ಮವು ದುಃಖದಿಂದ ತುಂಬಿಹೋಗಿದೆ. ನನ್ನ ಹೃದಯವು ದುಃಖದಿಂದ ಒಡೆದುಹೋಗುವಂತಿದೆ. ನೀವು ನನ್ನೊಂದಿಗೆ ಎಚ್ಚರವಾಗಿದ್ದು ಇಲ್ಲೇ ಇರಿ” ಎಂದು ಹೇಳಿದನು.
39 ಬಳಿಕ ಯೇಸು ಅವರಿಂದ ಸ್ವಲ್ಪದೂರ ಹೋಗಿ ನೆಲದ ಮೇಲೆ ಬೋರಲಬಿದ್ದು, “ನನ್ನ ತಂದೆಯೇ, ಸಾಧ್ಯವಿದ್ದರೆ, ಸಂಕಟದ ಈ ಪಾತ್ರೆಯನ್ನು ನನಗೆ ಕೊಡಬೇಡ. ಆದರೆ ನನ್ನ ಇಷ್ಟದಂತಲ್ಲ. ನಿನ್ನ ಇಷ್ಟದಂತೆಯೇ ಮಾಡು” ಎಂದು ಪ್ರಾರ್ಥಿಸಿದನು.
40 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದನು. ಅವರು ನಿದ್ರಿಸುತ್ತಿರುವುದನ್ನು ಕಂಡು ಆತನು ಪೇತ್ರನಿಗೆ, “ನೀವು ನನ್ನೊಂದಿಗೆ ಒಂದು ಗಂಟೆಯ ಕಾಲ ಎಚ್ಚರವಾಗಿರಲು ಸಾಧ್ಯವಿಲ್ಲವೇ?
41 ನೀವು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ. ಮನಸ್ಸೇನೊ ಸಿದ್ಧವಾಗಿದೆ ಆದರೆ ದೇಹಕ್ಕೆ ಬಲಸಾಲದು” ಎಂದು ಹೇಳಿದನು.
42 ಯೇಸು ಎರಡನೆ ಸಲ ಸ್ಪಲ್ಪದೂರ ಹೋಗಿ ಪ್ರಾರ್ಥಿಸುತ್ತಾ, “ನನ್ನ ತಂದೆಯೇ, ಸಂಕಟದ ಈ ಪಾತ್ರೆಯನ್ನು ನನ್ನಿಂದ ತೆಗೆದುಕೊಳ್ಳಲು ಸಾಧ್ಯವಿಲ್ಲದಿದ್ದರೆ ಮತ್ತು ನಾನು ಅದನ್ನು ನೆರವೇರಿಸಲೇಬೇಕಿದ್ದರೆ, ನಿನ್ನ ಇಷ್ಟದಂತೆಯೇ ಆಗಲಿ” ಎಂದನು.
43 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದಾಗ ಅವರು ಮತ್ತೆ ನಿದ್ರೆ ಮಾಡುತ್ತಿರುವುದನ್ನು ಕಂಡನು. ಅವರ ಕಣ್ಣುಗಳು ಬಹಳ ಆಯಾಸಗೊಂಡಿದ್ದವು.
44 ಆದ್ದರಿಂದ ಯೇಸು ಮತ್ತೊಮ್ಮೆ ಅವರನ್ನು ಬಿಟ್ಟು ಸ್ವಲ್ಪ ದೂರ ಹೋಗಿ ಮೂರನೆ ಸಲ ಅದೇ ರೀತಿ ಪ್ರಾರ್ಥಿಸಿದನು.
45 ಬಳಿಕ ಯೇಸು ತನ್ನ ಶಿಷ್ಯರ ಬಳಿಗೆ ಹಿಂದಿರುಗಿ, “ನೀವು ಇನ್ನೂ ನಿದ್ರೆ ಮಾಡುತ್ತಾ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೀರಾ? ಪಾಪಿಷ್ಠರಾದ ಜನರಿಗೆ ಮನುಷ್ಯಕುಮಾರನನ್ನು ಒಪ್ಪಿಸುವ ಕಾಲ ಸಮೀಪಿಸಿದೆ.
46 ನಾವು ಹೋಗಬೇಕು. ಎದ್ದೇಳಿ! ನನ್ನನ್ನು ವೈರಿಗಳಿಗೆ ಒಪ್ಪಿಸುವ ಮನುಷ್ಯನು ಇಲ್ಲಿಯೇ ಬರುತ್ತಿದ್ದಾನೆ” ಎಂದು ಹೇಳಿದನು.
47 ಯೇಸು ಮಾತಾಡುತ್ತಿರವಷ್ಟರಲ್ಲೇ ಯೂದನು ಅಲ್ಲಿಗೆ ಬಂದನು. ಯೂದನು ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದನು. ಮಹಾಯಾಜಕರು ಮತ್ತು ಹಿರಿಯ ನಾಯಕರು ಕಳುಹಿಸಿದ್ದ ಅನೇಕ ಜನರು ಅವನೊಂದಿಗಿದ್ದರು. ಅವರು ಕತ್ತಿ ಮತ್ತು ದೊಣ್ಣೆಗಳನ್ನು ಹಿಡಿದುಕೊಂಡಿದ್ದರು.
48 ಯೇಸು ಯಾರೆಂಬುದನ್ನು ತಿಳಿದುಕೊಳ್ಳಲು ಯೂದನು ಅವರಿಗೆ ಒಂದು ಗುರುತು ಹೇಳಿಕೊಟ್ಟಿದ್ದನು.
49 ಅಂತೆಯೇ ಯೂದನು ಯೇಸುವಿನ ಬಳಿಗೆ ಹೋಗಿ, “ಗುರುವೇ, ನಮಸ್ಕಾರ” ಎಂದು ಹೇಳಿ ಆತನಿಗೆ ಮುದ್ದಿಟ್ಟನು.
50 ಆಗ ಯೇಸು, “ಸ್ನೇಹಿತನೇ, ನೀನು ಮಾಡಲು ಬಂದ ಕೆಲಸ ಇದೆಯೋ?” ಎಂದನು. ಕೂಡಲೇ ಆ ಜನರು ಬಂದು ಯೇಸುವನ್ನು ಹಿಡಿದು, ಬಂಧಿಸಿದರು.
51 ಆಗ ಯೇಸುವಿನ ಶಿಷ್ಯರಲ್ಲೊಬ್ಬನು ತನ್ನ ಖಡ್ಗವನ್ನು ಹೊರಕ್ಕೆ ಸೆಳೆದು ಮಹಾಯಾಜಕನ ಸೇವಕನಿಗೆ ಹೊಡೆದು ಅವನ ಕಿವಿಯನ್ನು ಕತ್ತರಿಸಿಬಿಟ್ಟನು.
52 ಯೇಸು ಅವನಿಗೆ, “ನಿನ್ನ ಖಡ್ಗವನ್ನು ಒರೆಗೆ ಹಾಕು. ಕತ್ತಿಯನ್ನು ಬಳಸುವ ಜನರು ಕತ್ತಿಯಿಂದಲೇ ಸಾಯುತ್ತಾರೆ.
53 ನಾನು ನನ್ನ ತಂದೆಯನ್ನು ಕೇಳಿದ್ದರೆ, ಆತನು ನನಗೆ ದೇವದೂತರ ಹನ್ನೆರಡು ಸೇನಾದಳಗಳನ್ನು ನೀಡುತ್ತಿದ್ದನೆಂಬುದು ನಿನಗೆ ಗೊತ್ತೇ ಇದೆ.
54 ಆದರೆ ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ಇದು ಈ ರೀತಿಯಲ್ಲೇ ಆಗಬೇಕಾಗಿದೆ” ಎಂದು ಹೇಳಿದನು.
55 ನಂತರ ಯೇಸು ಆ ಜನರಿಗೆ, “ನೀವು ಅಪರಾಧಿಯನ್ನು ಬಂಧಿಸುವವರಂತೆ ಕತ್ತಿ ಮತ್ತು ದೊಣ್ಣೆಗಳನ್ನು ಹಿಡಿದುಕೊಂಡು ಇಲ್ಲಿಗೆ ಬಂದಿದ್ದೀರಿ. ನಾನು ಪ್ರತಿದಿನವೂ ದೇವಾಲಯದಲ್ಲಿ ಕುಳಿತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಅಲ್ಲಿ ಬಂಧಿಸಲೇ ಇಲ್ಲ.
56 ಆದರೆ ಪ್ರವಾದಿಗಳು ಬರೆದಿರುವುದೆಲ್ಲಾ ನೆರವೇರುವುದಕ್ಕಾಗಿ ಇದೆಲ್ಲಾ ಆಯಿತು” ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.
57 ಬಳಿಕ ಯೇಸುವನ್ನು ಬಂಧಿಸಿದ್ದವರು ಆತನನ್ನು ಪ್ರಧಾನ ಯಾಜಕನಾದ ಕಾಯಫನ ಮನೆಗೆ ಕರೆದೊಯ್ದರು. ಅಲ್ಲಿ ಧರ್ಮೋಪದೇಶಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ಒಟ್ಟಿಗೆ ಸೇರಿದ್ದರು.
58 ಯೇಸುವಿಗೆ ಏನಾಗುತ್ತದೊ ಎಂಬುದನ್ನು ನೋಡಲು ಪೇತ್ರನು ಆತನನ್ನು ದೂರದಿಂದ ಹಿಂಬಾಲಿಸುತ್ತಾ ಪ್ರಧಾನಯಾಜಕನ ಭವನದ ಅಂಗಳದೊಳಗೆ ಬಂದು ಕಾವಲುಗಾರರೊಂದಿಗೆ ಕುಳಿತುಕೊಂಡನು.
59 ಮಹಾಯಾಜಕರು ಮತ್ತು ಯೆಹೂದ್ಯರ ಸಮಿತಿಯವರು ಯೇಸುವಿಗೆ ಮರಣದಂಡನೆ ವಿಧಿಸಲು ಅಗತ್ಯವಾದ ಸುಳ್ಳುಸಾಕ್ಷಿಗಳನ್ನು ಹುಡುಕಿದರು.
60 ಅನೇಕರು ಬಂದು, ಯೇಸುವಿನ ವಿಷಯವಾಗಿ ಸುಳ್ಳು ಸಂಗತಿಗಳನ್ನು ಹೇಳಿದರು. ಆದರೆ ಯೇಸುವನ್ನು ಕೊಲ್ಲಲು ಬಲವಾದ ಕಾರಣವೊಂದೂ ಸಮಿತಿಗೆ ಸಿಗಲಿಲ್ಲ. ಆಗ ಇಬ್ಬರು ಬಂದು,
61 “ಈ ಮನುಷ್ಯನು, ‘ನಾನು ದೇವರ ಆಲಯವನ್ನು ಕೆಡವಿ ಅದನ್ನು ಮತ್ತೆ ಮೂರು ದಿನಗಳಲ್ಲಿ ನಿರ್ಮಿಸುತ್ತೇನೆ’ ಎಂದು ಹೇಳಿದನು” ಎಂಬುದಾಗಿ ತಿಳಿಸಿದರು.
62 ಪ್ರಧಾನಯಾಜಕನು ಎದ್ದುನಿಂತು ಯೇಸುವಿಗೆ, “ಈ ಜನರು ನಿನ್ನ ಮೇಲೆ ಹೊರಿಸಿರುವ ಆಪಾದನೆಗಳ ಬಗ್ಗೆ ನೀನು ಏನಾದರೂ ಹೇಳಬೇಕೆಂದಿರುವೆಯಾ? ಇವರು ಹೇಳುತ್ತಿರುವುದೆಲ್ಲಾ ನಿಜವೇ?” ಎಂದು ಕೇಳಿದನು.
63 ಆದರೆ ಯೇಸು ಮೌನವಾಗಿದ್ದನು. ಪ್ರಧಾನಯಾಜಕನು ಮತ್ತೆ ಯೇಸುವಿಗೆ, “ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ಕೇಳುತ್ತಿದ್ದೇನೆ, ನೀನು ದೇವಕುಮಾರನಾದ ಕ್ರಿಸ್ತನೋ? ನಮಗೆ ತಿಳಿಸು” ಎಂದನು.
64 ಯೇಸು, “ಹೌದು, ನೀನು ಹೇಳಿದಂತೆ ಆತನೇ ನಾನು. ಆದರೆ ನಿನಗೆ ಹೇಳುವುದೇನೆಂದರೆ, ಇನ್ನು ಮೇಲೆ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ಕುಳಿತಿರುವುದನ್ನೂ ಆಕಾಶದ ಮೋಡಗಳ ಮೇಲೆ ಕುಳಿತು ಬರುವುದನ್ನೂ ನೀವು ಕಾಣುವಿರಿ” ಎಂದು ಹೇಳಿದನು.
65 ಪ್ರಧಾನಯಾಜಕನು ಇದನ್ನು ಕೇಳಿ ಬಹಳ ಕೋಪಗೊಂಡು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಈ ಮನುಷ್ಯನು ದೇವದೂಷಣೆ ಮಾಡಿದ್ದಾನೆ. ನಮಗೆ ಇನ್ನು ಯಾವ ಸಾಕ್ಷಿಗಳ ಅಗತ್ಯವೂ ಇಲ್ಲ. ಇವನು ಮಾಡಿದ ದೇವದೂಷಣೆಯನ್ನು ನೀವೇ ಕೇಳಿದಿರಿ.
66 ನಿಮ್ಮ ತೀರ್ಮಾನವೇನು?” ಎಂದು ಕೇಳಿದನು. ಯೆಹೂದ್ಯರು, “ಇವನು ಅಪರಾಧಿ. ಇವನು ಸಾಯಲೇಬೇಕು” ಎಂದು ಉತ್ತರಕೊಟ್ಟರು.
67 ನಂತರ ಜನರು ಅಲ್ಲಿಯೇ ಯೇಸುವಿನ ಮುಖದ ಮೇಲೆ ಉಗುಳಿದರು. ಮುಷ್ಠಿಯಿಂದ ಆತನನ್ನು ಗುದ್ದಿದರು. ಆತನ ಕೆನ್ನೆಗೆ ಹೊಡೆದರು.
68 ಅವರು “ಕ್ರಿಸ್ತನೇ, ನಮಗೆ ಪ್ರವಾದನೆ ಹೇಳು! ನಿನಗೆ ಹೊಡೆದವರ್ಯಾರು?” ಎಂದು ಅಪಹಾಸ್ಯ ಮಾಡಿದರು.
69 ಇತ್ತ ಪೇತ್ರನು ಅಂಗಳದಲ್ಲಿ ಕುಳಿತಿದ್ದನು. ಸೇವಕಿಯೊಬ್ಬಳು ಪೇತ್ರನ ಬಳಿಗೆ ಬಂದು, “ನೀನು ಸಹ ಗಲಿಲಾಯದ ಯೇಸುವಿನೊಂದಿಗಿದ್ದವನು” ಎಂದು ಹೇಳಿದಳು.
70 ಆದರೆ ಪೇತ್ರನು, ಅಲ್ಲಿದ್ದ ಜನರೆಲ್ಲರ ಎದುರಿನಲ್ಲಿ ಆಕೆಗೆ, “ನೀನು ಏನು ಹೇಳುತ್ತಿರುವೆಯೊ ನನಗೆ ಗೊತ್ತೇ ಇಲ್ಲ” ಎಂದು ನಿರಾಕರಿಸಿದನು.
71 ಬಳಿಕ ಪೇತ್ರನು ಅಲ್ಲಿಂದ ಎದ್ದು ಹೆಬ್ಬಾಗಿಲ ಬಳಿಗೆ ಬಂದಾಗ ಮತ್ತೊಬ್ಬ ಸೇವಕಿಯು ಅವನನ್ನು ನೋಡಿ ಅಲ್ಲಿದ್ದ ಜನರಿಗೆ, “ಈ ಮನುಷ್ಯನು ನಜರೇತಿನ ಯೇಸುವಿನೊಂದಿಗಿದ್ದನು” ಎಂದು ಹೇಳಿದಳು.
72 ಆಗ ಪೇತ್ರನು, “ನಾನು ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ. ನನಗೆ ಯೇಸುವೆಂಬ ಮನುಷ್ಯನು ತಿಳಿದೇ ಇಲ್ಲ!” ಎಂದು ನಿರಾಕರಿಸಿದನು.
73 ಸ್ವಲ್ಪ ಸಮಯದ ತರುವಾಯ, ಅಲ್ಲಿ ನಿಂತಿದ್ದ ಕೆಲವು ಜನರು ಪೇತ್ರನ ಸಮೀಪಕ್ಕೆ ಹೋಗಿ, “ಯೇಸುವನ್ನು ಹಿಂಬಾಲಿಸಿಕೊಂಡು ಬಂದ ಜನರಲ್ಲಿ ನೀನೂ ಒಬ್ಬನಾಗಿರುವೆ ಎಂಬುದನ್ನು ನೀನು ಮಾತಾಡುವ ರೀತಿಯೇ ತೋರಿಸುತ್ತದೆ” ಎಂದು ಹೇಳಿದರು.
74 ಆಗ ಪೇತ್ರನು ಶಪಿಸಿಕೊಳ್ಳತೊಡಗಿ, “ನಾನು ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಯೇಸುವೆಂಬ ಮನುಷ್ಯನು ನನಗೆ ತಿಳಿದೇ ಇಲ್ಲ!” ಎಂದು ಹೇಳಿದನು. ಆ ಕೂಡಲೇ ಕೋಳಿ ಕೂಗಿತು.
75 ಆತನು ಯಾರೋ ನನಗೆ ಗೊತ್ತೇ ಇಲ್ಲ ಎಂಬುದಾಗಿ ಕೋಳಿ ಕೂಗುವುದಕ್ಕಿಂತ ಮುಂಚೆ ನೀನು ಮೂರು ಸಲ ಹೇಳುವೆ” ಎಂದು ತನಗೆ ಯೇಸು ಹೇಳಿದ್ದ ಮಾತನ್ನು ಪೇತ್ರನು ನೆನಪು ಮಾಡಿಕೊಂಡು ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.

Matthew 26:1 Kannada Language Bible Words basic statistical display

COMING SOON ...

×

Alert

×