Bible Languages

Indian Language Bible Word Collections

Bible Versions

Books

Matthew Chapters

Matthew 22 Verses

Bible Versions

Books

Matthew Chapters

Matthew 22 Verses

1 ಯೇಸು ಬೇರೆ ಕೆಲವು ವಿಷಯಗಳನ್ನು ಸಾಮ್ಯಗಳ ಮೂಲಕವಾಗಿ ಜನರಿಗೆ ತಿಳಿಸಿದನು:
2 “ಪರಲೋಕರಾಜ್ಯವು ತನ್ನ ಮಗನ ಮದುವೆಯನ್ನು ಸಿದ್ಧಪಡಿಸಿದ ಒಬ್ಬ ರಾಜನಿಗೆ ಹೋಲಿಕೆಯಾಗಿದೆ.
3 ಆ ರಾಜನು ಕೆಲವು ಜನರನ್ನು ಔತಣಕ್ಕೆ ಆಹ್ವಾನಿಸಿದನು. ಅಡಿಗೆ ಸಿದ್ಧವಾದ ಬಳಿಕ ರಾಜನು ತನ್ನ ಸೇವಕರ ಮೂಲಕ ಆ ಜನರಿಗೆ ತಿಳಿಸಿದನು. ಆದರೆ ಅವರು ಔತಣಕ್ಕೆ ಬರಲಿಲ್ಲ.
4 “ಆಮೇಲೆ ರಾಜನು ಇನ್ನೂ ಕೆಲವು ಸೇವಕರನ್ನು ಕರೆದು, ‘ಈ ಜನರನ್ನು ನಾನು ಆಗಲೇ ಆಹ್ವಾನಿಸಿದ್ದೇನೆ. ಆದ್ದರಿಂದ ಈಗ ಔತಣವು ಸಿದ್ಧವಾಗಿದೆ. ಅಡಿಗೆಗಾಗಿ ಕೊಬ್ಬಿದ ಎತ್ತುಗಳನ್ನು ಮತ್ತು ಕರುಗಳನ್ನು ಕೊಯ್ಸಿದ್ದೇನೆ. ಎಲ್ಲವೂ ಸಿದ್ಧವಾಗಿದೆ. ಮದುವೆ ಔತಣಕ್ಕೆ ಬನ್ನಿ ಎಂದು ಅವರಿಗೆ ತಿಳಿಸಿ’ ಎಂದು ಹೇಳಿ ಕಳುಹಿಸಿದನು.
5 “ಅಂತೆಯೇ ಸೇವಕರು ಹೋಗಿ ಆ ಜನರಿಗೆ ತಿಳಿಸಿದರು. ಆದರೆ ಅವರು ಸೇವಕರ ಮಾತಿಗೆ ಕಿವಿಗೊಡಲಿಲ್ಲ. ಒಬ್ಬನು ತನ್ನ ಹೊಲದಲ್ಲಿ ಕೆಲಸ ಮಾಡಲು ಹೊರಟುಹೋದನು. ಬೇರೊಬ್ಬನು ತನ್ನ ವ್ಯಾಪಾರಕ್ಕಾಗಿ ಹೊರಟುಹೋದನು.
6 ಇನ್ನು ಕೆಲವರು ಆ ಸೇವಕರನ್ನು ಹಿಡಿದು, ಹೊಡೆದು ಕೊಂದುಹಾಕಿದರು.
7 ಆಗ ರಾಜನು ಬಹು ಕೋಪಗೊಂಡು ತನ್ನ ಸೈನ್ಯವನ್ನು ಕಳುಹಿಸಿ ಆ ಕೊಲೆಗಾರರನ್ನು ಕೊಲ್ಲಿಸಿದನು ಮತ್ತು ಅವರ ಪಟ್ಟಣವನ್ನು ಸುಟ್ಟುಹಾಕಿಸಿದನು.
8 “ಬಳಿಕ ರಾಜನು ತನ್ನ ಸೇವಕರಿಗೆ, ‘ಮದುವೆ ಊಟ ಸಿದ್ಧವಾಗಿದೆ. ನಾನು ಆಹ್ವಾನಿಸಿದ್ದ ಜನರು ಊಟಕ್ಕೆ ಬರುವಷ್ಟು ಒಳ್ಳೆಯವರಾಗಿರಲಿಲ್ಲ.
9 ಆದ್ದರಿಂದ ಬೀದಿಯ ಮೂಲೆಮೂಲೆಗಳಿಗೆ ಹೋಗಿ ನೀವು ಕಂಡ ಜನರನ್ನೆಲ್ಲ ಔತಣಕ್ಕೆ ಆಹ್ವಾನಿಸಿರಿ’ ಎಂದನು.
10 ಅಂತೆಯೇ ಸೇವಕರು ಬೀದಿಬೀದಿಗಳಿಗೆ ಹೋಗಿ ತಾವು ಕಂಡ ಜನರನ್ನೆಲ್ಲಾ ಒಳ್ಳೆಯವರು, ಕೆಟ್ಟವರು ಎನ್ನದೆ ಒಟ್ಟುಗೂಡಿಸಿ ಊಟ ಸಿದ್ಧವಾಗಿದ್ದ ಸ್ಥಳಕ್ಕೆ ಕರೆತಂದರು. ಆ ಸ್ಥಳವು ಜನರಿಂದ ತುಂಬಿಹೋಯಿತು.
11 “ಆಗ ರಾಜನು ಜನರನ್ನೆಲ್ಲ ನೋಡಲು ಒಳಗೆ ಬಂದನು. ಮದುವೆಗೆ ಯೋಗ್ಯವಾದ ಬಟ್ಟೆಯನ್ನು ಧರಿಸಿಕೊಂಡಿಲ್ಲದ ಒಬ್ಬ ಮನುಷ್ಯನನ್ನು ರಾಜನು ಕಂಡು,
12 “ಸ್ನೇಹಿತನೇ, ನೀನು ಒಳಗೆ ಹೇಗೆ ಬಂದೆ? ನೀನು ಮದುವೆಗೆ ಯೋಗ್ಯವಾದ ಬಟ್ಟೆಯನ್ನು ಧರಿಸಿಕೊಂಡಿಲ್ಲವಲ್ಲಾ’ ಅಂದನು. ಆದರೆ ಅವನು ಉತ್ತರ ನೀಡಲಿಲ್ಲ.
13 ಆಗ ರಾಜನು ಕೆಲವು ಸೇವಕರಿಗೆ, ‘ಇವನ ಕೈಕಾಲು ಕಟ್ಟಿ ಹೊರಗೆ ಕತ್ತಲೆಯೊಳಕ್ಕೆ ಎಸೆಯಿರಿ’ ಅಂದನು. ಆ ಸ್ಥಳದಲ್ಲಿ ಜನರು ಗೋಳಾಡುತ್ತಾ ಬಾಧೆಯಿಂದ ತಮ್ಮ ಹಲ್ಲುಗಳನ್ನು ಕಡಿಯುತ್ತಿರುವರು.
14 “ಹೌದು, ಆಹ್ವಾನಿಸಲ್ಪಟ್ಟವರು ಅನೇಕರಾದರೂ ಆರಿಸಲ್ಪಟ್ಟವರು ಕೆಲವರು ಮಾತ್ರ.”
15 ಆಗ ಫರಿಸಾಯರು, ಅಲ್ಲಿಂದ ಹೊರಟು ಹೋಗಿ ಯೇಸುವಿನ ಮಾತಿನಲ್ಲಿ ತಪ್ಪು ಕಂಡುಹಿಡಿಯಲು ಉಪಾಯಗಳನ್ನು ಮಾಡಿಕೊಂಡರು.
16 ಫರಿಸಾಯರು ಯೇಸುವನ್ನು ವಂಚಿಸುವುದಕ್ಕೆ ಕೆಲವರನ್ನು ಕಳುಹಿಸಿದರು. ಅವರಲ್ಲಿ ಕೆಲವರು ಫರಿಸಾಯರ ಹಿಂಬಾಲಕರಾಗಿದ್ದರು. ಇನ್ನು ಕೆಲವರು ಯೆಹೂದ್ಯರ ರಾಜಕೀಯ ಪಂಗಡಕ್ಕೆ ಸೇರಿದವರಾಗಿದ್ದರು. ಈ ಜನರು, “ಬೋಧಕನೇ, ನೀನು ಯಥಾರ್ಥವಂತನೆಂದು ನಾವು ಬಲ್ಲೆವು. ನೀನು ದೇವರ ಮಾರ್ಗದ ಕುರಿತು ಸತ್ಯವನ್ನೇ ಬೋಧಿಸುವೆ ಎಂಬುದು ನಮಗೆ ಗೊತ್ತಿದೆ. ಬೇರೆಯವರು ನಿನ್ನ ವಿಷಯವಾಗಿ ಏನೇ ಯೋಚಿಸಿದರೂ ನೀನು ಹೆದರುವುದಿಲ್ಲ. ನೀನು ಮುಖದಾಕ್ಷಿಣ್ಯ ಮಾಡುವುದಿಲ್ಲ.
17 ಆದ್ದರಿಂದ ನಿನ್ನ ಅಭಿಪ್ರಾಯವನ್ನು ತಿಳಿಸು. ಸೀಸರನಿಗೆ ತೆರಿಗೆ ಕೊಡುವುದು ಸರಿಯೋ ಅಥವಾ ತಪ್ಪೋ?” ಎಂದು ಕೇಳಿದರು.
18 ಈ ಜನರ ಕುತಂತ್ರವು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು, “ನೀವು ಕಪಟಿಗಳು! ನನ್ನನ್ನು ತಪ್ಪಿನಲ್ಲಿ ಸಿಕ್ಕಿಸಲು ಏಕೆ ಪ್ರಯತ್ನಿಸುತ್ತೀರಿ?
19 ತೆರಿಗೆಗಾಗಿ ಕೊಡುವ ಒಂದು ನಾಣ್ಯವನ್ನು ನನಗೆ ತೋರಿಸಿರಿ” ಎಂದನು. ಜನರು ಒಂದು ಬೆಳ್ಳಿಯ ನಾಣ್ಯವನ್ನು ಆತನಿಗೆ ತೋರಿಸಿದರು.
20 ಆಗ ಆತನು “ನಾಣ್ಯದ ಮೇಲೆ ಯಾರ ಮುಖಚಿತ್ರವಿದೆ ಮತ್ತು ಯಾರ ಹೆಸರಿದೆ?” ಎಂದು ಕೇಳಿದನು.
21 ಜನರು, “ಅದು ಸೀಸರನ ಮುಖಚಿತ್ರ ಮತ್ತು ಹೆಸರು” ಎಂದು ಉತ್ತರಕೊಟ್ಟರು. ಆಗ ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಅಂದನು.
22 ಯೇಸು ಹೇಳಿದ್ದನ್ನು ಕೇಳಿದ ಆ ಜನರು ಆಶ್ಚರ್ಯಚಕಿತರಾಗಿ ಅಲ್ಲಿಂದ ಹೊರಟುಹೋದರು.
23 ಅದೇ ದಿನದಲ್ಲಿ ಕೆಲವು ಸದ್ದುಕಾಯರು ಯೇಸುವಿನ ಬಳಿಗೆ ಬಂದು, (ಯಾರಿಗೂ ಪುನರುತ್ಥಾನವಿಲ್ಲ ಎಂಬುದು ಸದ್ದುಕಾಯರ ನಂಬಿಕೆ.)
24 “ಬೋಧಕನೇ, ವಿವಾಹಿತನೊಬ್ಬನು ಮಕ್ಕಳನ್ನು ಪಡೆಯದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗಾಗಿ ಸಂತಾನ ಪಡೆಯಬೇಕೆಂದು ಮೋಶೆ ಹೇಳಿದ್ದಾನೆ.
25 ನಮ್ಮಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆಯಾಗಿ ಸತ್ತನು. ಅವನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾದನು.
26 ಬಳಿಕ ಎರಡನೆಯ ಸಹೋದರನೂ ಸತ್ತನು. ಹೀಗೆಯೇ ಮೂರನೆಯ ಸಹೋದರನಿಗೂ ಮತ್ತು ಉಳಿದೆಲ್ಲ ಸಹೋದರರಿಗೂ ಆಯಿತು.
27 ಕಡೆಯಲ್ಲಿ ಆ ಹೆಂಗಸೂ ಸತ್ತಳು.
28 ಆದರೆ ಏಳು ಮಂದಿಯೂ ಅವಳನ್ನು ಮದುವೆ ಆಗಿದ್ದರು. ಹೀಗಿರಲಾಗಿ ಅವರು ಮರಣದಿಂದ ಮೇಲೇಳುವಾಗ ಅವಳು ಯಾರ ಹೆಂಡತಿಯಾಗಿರುವಳು?” ಎಂದು ಕೇಳಿದರು.
29 ಯೇಸು, “ನೀವು ತಪ್ಪಾಗಿ ತಿಳಿದುಕೊಂಡಿರಲು ಕಾರಣವೇನೆಂದರೆ, ಪವಿತ್ರ ಗ್ರಂಥವು ಏನು ಹೇಳುತ್ತದೆ ಎಂಬುದು ನಿಮಗೆ ತಿಳಿದಿಲ್ಲ ಮತ್ತು ದೇವರ ಶಕ್ತಿಯ ಬಗ್ಗೆಯೂ ನಿಮಗೆ ಗೊತ್ತಿಲ್ಲ.
30 ಸ್ತ್ರೀಯರು ಮತ್ತು ಪುರುಷರು ಪುನರುತ್ಥಾನ ಹೊಂದಿದ ಮೇಲೆ ಮದುವೆ ಮಾಡಿಕೊಳ್ಳುವುದಿಲ್ಲ. ಅವರೆಲ್ಲರೂ ಪರಲೋಕದ ದೇವದೂತರಂತೆ ಇರುತ್ತಾರೆ.
31 ಸತ್ತವರ ಪುನರುತ್ಥಾನದ ಕುರಿತು ದೇವರು,
32 ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಎಂದು ಹೇಳಿರುವುದನ್ನು ನೀವು ಓದಿಲ್ಲವೇ? ಹೀಗಿರುವಲ್ಲಿ, ದೇವರು ಜೀವಿತರಿಗೆ ಮಾತ್ರ ದೇವರೇ ಹೊರತು ಸತ್ತವರಿಗಲ್ಲಾ” ಅಂದನು.
33 ಜನರೆಲ್ಲರೂ ಇದನ್ನು ಕೇಳಿ ಆತನ ಬೋಧನೆಗೆ ಅತ್ಯಾಶ್ಚರ್ಯಪಟ್ಟರು.
34 ಸದ್ದುಕಾಯರು ಪ್ರತಿವಾದ ಮಾಡಲಾಗದ ರೀತಿಯಲ್ಲಿ ಯೇಸು ಉತ್ತರಕೊಟ್ಟನೆಂಬುದು ಫರಿಸಾಯರಿಗೆ ತಿಳಿದು ಅವರು ಒಟ್ಟಾಗಿ ಯೇಸುವಿನ ಬಳಿಗೆ ಬಂದರು.
35 ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರವೀಣನಾಗಿದ್ದ ಫರಿಸಾಯನೊಬ್ಬನು ಯೇಸುವನ್ನು ಪರೀಕ್ಷಿಸಲು,
36 “ಬೋಧಕನೇ, ಧರ್ಮಶಾಸ್ತ್ರದಲ್ಲಿ ಅತ್ಯಂತ ಪ್ರಮುಖ ಆಜ್ಞೆ ಯಾವುದು?” ಎಂದು ಕೇಳಿದನು.
37 ಯೇಸು, “‘ನಿನ್ನ ದೇವರಾಗಿರುವ ಪ್ರಭುವನ್ನು ಪ್ರೀತಿಸಬೇಕು. ನೀನು ಆತನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.’
38 ಇದೇ ಮೊದಲನೆಯ ಮತ್ತು ಅತ್ಯಂತ ಪ್ರಮುಖವಾದ ಆಜ್ಞೆ.
39 ಎರಡನೆಯ ಆಜ್ಞೆಯು ಮೊದಲನೆಯ ಆಜ್ಞೆಯಷ್ಟೇ ಪ್ರಮುಖವಾಗಿದೆ. ‘ನೀನು ನಿನ್ನನ್ನು ಪ್ರೀತಿಸುವಂತೆಯೇ ನೆರೆಯವರನ್ನು ಪ್ರೀತಿಸಬೇಕು’ ಎಂಬುದೇ ಆ ಆಜ್ಞೆ.
40 ಇಡೀ ಧರ್ಮಶಾಸ್ತ್ರವು ಮತ್ತು ಪ್ರವಾದಿಗಳ ಎಲ್ಲಾ ಗ್ರಂಥಗಳು ಈ ಎರಡು ಆಜ್ಞೆಗಳ ಅರ್ಥವನ್ನೇ ಒಳಗೊಂಡಿವೆ” ಎಂದು ಉತ್ತರಕೊಟ್ಟನು.
41 ಫರಿಸಾಯರು ಒಟ್ಟಿಗೆ ಬಂದಿದ್ದಾಗ ಯೇಸು ಅವರಿಗೆ,
42 “ಕ್ರಿಸ್ತನ ವಿಷಯವಾಗಿ ನಿಮ್ಮ ಆಲೋಚನೆಯೇನು? ಆತನು ಯಾರ ಮಗನು?” ಎಂದು ಅವರನ್ನು ಕೇಳಿದನು. ಫರಿಸಾಯರು, “ಕ್ರಿಸ್ತನು ದಾವೀದನ ಮಗನಾಗಿದ್ದಾನೆ” ಎಂದು ಉತ್ತರಕೊಟ್ಟರು.
43 ಆಗ ಯೇಸುವು ಫರಿಸಾಯರಿಗೆ, “ಹಾಗಾದರೆ ದಾವೀದನು ಆತನನ್ನು ‘ಪ್ರಭು’ ಎಂದು ಏಕೆ ಕರೆದನು? ದಾವೀದನು ಪರಿಶುದ್ಧಾತ್ಮನ ಶಕ್ತಿಯಿಂದ ಮಾತನಾಡಿದ್ದನು. ದಾವೀದನು ಹೇಳಿದ್ದೇನೆಂದರೆ:
44 ‘ಪ್ರಭು (ದೇವರು) ನನ್ನ ಪ್ರಭುವಿಗೆ (ಕ್ರಿಸ್ತನಿಗೆ), ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು’ ಕೀರ್ತನೆ 110:1 ಎಂದು ಹೇಳಿದ್ದಾನೆ.
45 ದಾವೀದನು ಕ್ರಿಸ್ತನನ್ನು ‘ಪ್ರಭು’ ಎಂದು ಕರೆದಿದ್ದಾನೆ. ಹೀಗಿರಲು ಆತನು ದಾವೀದನಿಗೆ ಮಗನಾಗಲು ಹೇಗೆ ಸಾಧ್ಯ?” ಅಂದನು.
46 ಯೇಸುವಿನ ಪ್ರಶ್ನೆಗೆ ಉತ್ತರಕೊಡಲು ಫರಿಸಾಯರಲ್ಲಿ ಯಾರಿಗೂ ಸಾಧ್ಯವಾಗಲಿಲ್ಲ. ಅಂದಿನಿಂದ ಯೇಸುವನ್ನು ವಂಚಿಸುವುದಕ್ಕಾಗಿ ಪ್ರಶ್ನೆ ಕೇಳಲು ಯಾರೂ ಧೈರ್ಯಪಡಲಿಲ್ಲ.

Matthew 22:10 Kannada Language Bible Words basic statistical display

COMING SOON ...

×

Alert

×