1
|
ಯೇಸು ಈ ಸಂಗತಿಗಳನ್ನು ಹೇಳಿದ ಬಳಿಕ ಗಲಿಲಾಯದಿಂದ ಹೊರಟು ಜೋರ್ಡನ್ ನದಿಯ ಮತ್ತೊಂದು ತೀರದಲ್ಲಿದ್ದ ಜುದೇಯ ಪ್ರಾಂತ್ಯಕ್ಕೆ ಬಂದನು. |
2
|
ಯೇಸುವನ್ನು ಅನೇಕ ಜನರು ಹಿಂಬಾಲಿಸಿದರು. ಯೇಸು ಅಲ್ಲಿ ರೋಗಿಗಳನ್ನು ಗುಣಪಡಿಸಿದನು. |
3
|
ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು ಆತನನ್ನು ತಪ್ಪಿನಲ್ಲಿ ಸಿಕ್ಕಿಸುವುದಕ್ಕಾಗಿ, “ತನ್ನದೇ ಆದ ಯಾವ ಕಾರಣಕ್ಕಾಗಲಿ ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಸರಿಯೇ?” ಎಂದು ಕೇಳಿದರು. |
4
|
ಯೇಸು, “ನೀವು ನಿಜವಾಗಿಯೂ ಇದನ್ನು ಪವಿತ್ರಗ್ರಂಥದಲ್ಲಿ ಓದಿದ್ದೀರಿ. ದೇವರು ಪ್ರಪಂಚವನ್ನು ಸೃಷ್ಟಿಸಿದಾಗ, ‘ಮನುಷ್ಯರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ಸೃಷ್ಟಿಸಿದನು. |
5
|
ಆದಕಾರಣ ದೇವರು, ‘ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗುವರು.’ ಎಂದು ಹೇಳಿದನು. |
6
|
ಆದ್ದರಿಂದ ಇವರಿಬ್ಬರು ಇನ್ನು ಮೇಲೆ ಇಬ್ಬರಲ್ಲ, ಒಬ್ಬರೇ. ಅವರಿಬ್ಬರನ್ನು ದೇವರೇ ಒಟ್ಟಿಗೆ ಕೂಡಿಸಿದ್ದಾನೆ. ಆದ್ದರಿಂದ ಯಾವ ಮನುಷ್ಯನೂ ಅವರನ್ನು ಪ್ರತ್ಯೇಕಿಸಬಾರದು” ಎಂದು ಉತ್ತರಕೊಟ್ಟನು. |
7
|
ಫರಿಸಾಯರು, “ಹಾಗಾದರೆ ಒಬ್ಬ ಪುರುಷನು ವಿವಾಹ ವಿಚ್ಛೇದನ ಪತ್ರವನ್ನು ಬರೆದುಕೊಟ್ಟು ಬಿಟ್ಟುಬಿಡಬಹುದೆಂದು ಮೋಶೆಯು ಹೇಳಿದ್ದೇಕೆ?” ಎಂದು ಕೇಳಿದರು. |
8
|
ಯೇಸು, “ನೀವು ದೇವರ ಬೋಧನೆಯನ್ನು ಸ್ವೀಕರಿಸದಿದ್ದ ಕಾರಣ ನಿಮ್ಮ ಹೆಂಡತಿಯರನ್ನು ಬಿಟ್ಟುಬಿಡುವುದಕ್ಕೆ ಮೋಶೆ ಅವಕಾಶಕೊಟ್ಟನು. ಆದರೆ ಹೆಂಡತಿಯನ್ನು ಬಿಟ್ಟುಬಿಡುವುದಕ್ಕೆ ಆರಂಭದಲ್ಲಿ ಅವಕಾಶ ಇರಲಿಲ್ಲ. |
9
|
ನಾನು ನಿಮಗೆ ಹೇಳುವುದೇನೆಂದರೆ, ತನ್ನ ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ವ್ಯಭಿಚಾರಿಯಾಗುತ್ತಾನೆ. ಮೊದಲಿನ ಹೆಂಡತಿಯು ಬೇರೊಬ್ಬನೊಡನೆ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ ಮಾತ್ರ ಅವನು ಆಕೆಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆ ಆಗಬಹುದು” ಎಂದು ಉತ್ತರಿಸಿದನು. |
10
|
ಶಿಷ್ಯರು ಯೇಸುವಿಗೆ, “ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡಲು ಇದೊಂದೇ ಕಾರಣವಾಗಿದ್ದರೆ ಮದುವೆ ಆಗದಿರುವುದೇ ಉತ್ತಮ” ಎಂದರು. |
11
|
ಅದಕ್ಕೆ ಯೇಸು, “ಮದುವೆಯ ವಿಷಯವಾದ ಈ ಸತ್ಯವನ್ನು ಪ್ರತಿಯೊಬ್ಬರೂ ಸ್ವೀಕರಿಸಲು ಸಾಧ್ಯವಿಲ್ಲ. ಇದನ್ನು ಸ್ವೀಕರಿಸಲು ದೇವರು ಯಾರನ್ನು ಸಮರ್ಥರನ್ನಾಗಿ ಮಾಡಿದ್ದಾನೊ ಅವರಿಗೆ ಮಾತ್ರ ಸಾಧ್ಯ. |
12
|
ಕೆಲವರು ಮದುವೆ ಆಗದಿರಲು ಬೇರೆಬೇರೆ ಕಾರಣಗಳಿವೆ. ಹುಟ್ಟಿದಂದಿನಿಂದಲೇ ಕೆಲವರು ನಪುಂಸಕರಾಗಿರುತ್ತಾರೆ. ಇನ್ನು ಕೆಲವರು ಬೇರೆಯವರಿಂದ ನಪುಂಸಕರಾಗಿ ಮಾಡಲ್ಪಡುತ್ತಾರೆ. ಬೇರೆ ಕೆಲವರು ಪರಲೋಕರಾಜ್ಯಕ್ಕೋಸ್ಕರ ಮದುವೆಯನ್ನು ತೊರೆದುಬಿಡುತ್ತಾರೆ. ಆದರೆ ಮದುವೆ ಆಗುವಂಥವನು ಮದುವೆ ವಿಷಯವಾದ ಈ ಬೋಧನೆಯನ್ನು ಸ್ವೀಕರಿಸಬೇಕು” ಎಂದು ಉತ್ತರಕೊಟ್ಟನು. |
13
|
ಬಳಿಕ ಜನರು ಯೇಸುವಿನ ಬಳಿಗೆ ಬಂದು ತಮ್ಮ ಚಿಕ್ಕ ಮಕ್ಕಳನ್ನು ತಂದು ಅವರಿಗಾಗಿ ಪ್ರಾರ್ಥಿಸಬೇಕೆಂದು ಆತನನ್ನು ಬೇಡಿಕೊಂಡರು. ಇದನ್ನು ಕಂಡ ಶಿಷ್ಯರು ಚಿಕ್ಕ ಮಕ್ಕಳನ್ನು ಆತನ ಬಳಿಗೆ ತರಕೂಡದೆಂದು ಗದರಿಸಿದರು. |
14
|
ಆದರೆ ಯೇಸು, “ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ. ಅವರಿಗೆ ಅಡ್ಡಿ ಮಾಡಬೇಡಿ. ಏಕೆಂದರೆ ಪರಲೋಕರಾಜ್ಯ ಈ ಚಿಕ್ಕ ಮಕ್ಕಳಂಥವರದೇ” ಎಂದನು. |
15
|
ನಂತರ ಯೇಸು ತನ್ನ ಕೈಗಳನ್ನು ಮಕ್ಕಳ ಮೇಲೆ ಇಟ್ಟು ಆಶೀರ್ವದಿಸಿದನು. ಬಳಿಕ ಅಲ್ಲಿಂದ ಹೊರಟು ಹೋದನು. |
16
|
ಒಬ್ಬನು ಯೇಸುವಿನ ಬಳಿಗೆ ಬಂದು, “ಬೋಧಕನೇ ನಾನು ನಿತ್ಯಜೀವ ಹೊಂದಲು ಯಾವ ಒಳ್ಳೆಯ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು. |
17
|
ಯೇಸು, “ಒಳ್ಳೆಯದನ್ನು ಕುರಿತು ನೀನು ನನ್ನನ್ನು ಕೇಳುವುದೇಕೆ? ದೇವರೊಬ್ಬನೇ ಒಳ್ಳೆಯವನು. ಆದರೆ ನೀನು ನಿತ್ಯಜೀವವನ್ನು ಹೊಂದಬೇಕೆಂದಿದ್ದರೆ ಈ ಆಜ್ಞೆಗಳಿಗೆ ವಿಧೇಯನಾಗು” ಎಂದು ಉತ್ತರ ಕೊಟ್ಟನು. |
18
|
ಆ ಮನುಷ್ಯನು, “ಯಾವ ಆಜ್ಞೆಗಳು?” ಎಂದು ಕೇಳಿದನು. ಯೇಸು “ಕೊಲೆಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. |
19
|
ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು, ಮತ್ತು ನಿನ್ನನ್ನು ನೀನು ಪ್ರೀತಿಸುವಂತೆ ಬೇರೆಯವರನ್ನೂ ಪ್ರೀತಿಸಬೇಕು” ಎಂದು ಉತ್ತರಕೊಟ್ಟನು. |
20
|
ಆ ಯುವಕನು, “ನಾನು ಇವೆಲ್ಲವುಗಳಿಗೆ ವಿಧೇಯನಾಗಿದ್ದೇನೆ. ನಾನು ಬೇರೆ ಏನಾದರೂ ಮಾಡಬೇಕೇ?” ಎಂದು ಕೇಳಿದನು. |
21
|
ಯೇಸು, “ನೀನು ಸಂಪೂರ್ಣನಾಗಬೇಕೆಂದಿದ್ದರೆ ಹೋಗಿ ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ಆಗ ನಿನಗೆ ಪರಲೋಕದಲ್ಲಿ ದೊಡ್ಡ ಭಂಡಾರ ಇರುವುದು. ನಂತರ ಬಂದು ನನ್ನನ್ನು ಹಿಂಬಾಲಿಸು!” ಎಂದು ಉತ್ತರ ಕೊಟ್ಟನು. |
22
|
ಇದನ್ನು ಕೇಳಿದಾಗ ಅವನು ಬಹಳ ದುಃಖದಿಂದ ಹೊರಟು ಹೋದನು. ಏಕೆಂದರೆ ಅವನು ದೊಡ್ಡ ಐಶ್ವರ್ಯವಂತನಾಗಿದ್ದನು. |
23
|
ಆಗ ಯೇಸು ತನ್ನ ಶಿಷ್ಯರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಐಶ್ವರ್ಯವಂತನು ಪರಲೋಕರಾಜ್ಯಕ್ಕೆ ಪ್ರವೇಶಿಸುವುದು ಬಹಳ ಕಷ್ಟಕರ. |
24
|
ಹೌದು, ಐಶ್ವರ್ಯವಂತನು ದೇವರ ರಾಜ್ಯ ಪ್ರವೇಶಿಸುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಸುಳುವುದು ಸುಲಭ ಎಂದು ನಾನು ನಿಮಗೆ ಹೇಳುತ್ತೇನೆ” ಎಂದನು. |
25
|
ಶಿಷ್ಯರು ಇದನ್ನು ಕೇಳಿ ಬಹಳ ಆಶ್ಚರ್ಯದಿಂದ, “ಹಾಗಾದರೆ ಯಾರು ರಕ್ಷಣೆ ಹೊಂದಬಲ್ಲರು?” ಎಂದು ಕೇಳಿದರು. |
26
|
ಯೇಸು ತನ್ನ ಶಿಷ್ಯರ ಕಡೆಗೆ ದೃಷ್ಟಿಸಿ, “ಇದು ಮನುಷ್ಯರಿಗೆ ಅಸಾಧ್ಯವಾದ ಕಾರ್ಯ. ಆದರೆ ದೇವರಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು. |
27
|
ಪೇತ್ರನು ಯೇಸುವಿಗೆ, “ನಾವು ನಮಗಿದ್ದ ಪ್ರತಿಯೊಂದನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು. ನಮಗೆ ಏನು ದೊರಕುವುದು” ಎಂದನು. |
28
|
ಯೇಸು ಶಿಷ್ಯರಿಗೆ ಇಂತೆಂದನು: “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಹೊಸ ಲೋಕವು ಸೃಷ್ಟಿಸಲ್ಪಟ್ಟಾಗ ಮನುಷ್ಯಕುಮಾರನು ತನ್ನ ಮಹಾಸಿಂಹಾಸನದ ಮೇಲೆ ಕುಳಿತುಕೊಳ್ಳುವನು. ನನ್ನನ್ನು ಹಿಂಬಾಲಿಸಿದ ನೀವೆಲ್ಲರೂ ಸಿಂಹಾಸನಗಳ ಮೇಲೆ ಕುಳಿತು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯ ತೀರಿಸುವಿರಿ. |
29
|
ನನ್ನನ್ನು ಹಿಂಬಾಲಿಸಲು ತಮ್ಮ ಮನೆಗಳನ್ನು, ಸಹೋದರ ಸಹೋದರಿಯರನ್ನು, ತಂದೆತಾಯಿಗಳನ್ನು, ಮಕ್ಕಳನ್ನು ಇಲ್ಲವೇ ಆಸ್ತಿಯನ್ನು ತ್ಯಜಿಸಿದ ಪ್ರತಿಯೊಬ್ಬರು ತಾವು ಬಿಟ್ಟವುಗಳಿಗಿಂತ ಹೆಚ್ಚಾಗಿ ಪಡೆಯುತ್ತಾರೆ. ಅಲ್ಲದೆ ನಿತ್ಯಜೀವವನ್ನೂ ಹೊಂದಿಕೊಳ್ಳುತ್ತಾರೆ. |
30
|
ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು. |
Matthew 19:3 Kannada Language Bible Words basic statistical display
COMING SOON ...