(ಮಾರ್ಕ 8:11-13; ಲೂಕ 12:54-56) ಫರಿಸಾಯರು ಮತ್ತು ಸದ್ದುಕಾಯರು ಯೇಸುವಿನ ಬಳಿಗೆ ಬಂದರು. ಅವರು ಯೇಸುವನ್ನು ಪರೀಕ್ಷಿಸಲು, “ನೀನು ದೇವರಿಂದ ಬಂದವನೆಂಬುದನ್ನು ನಿರೂಪಿಸಲು ಒಂದು ಅದ್ಭುತಕಾರ್ಯವನ್ನು ಮಾಡಿ ತೋರಿಸು” ಎಂದು ಕೇಳಿದರು.
ಬೆಳಿಗ್ಗೆ ಸೂರ್ಯೋದಯವನ್ನು ಗಮನಿಸುತ್ತೀರಿ. ಆಕಾಶವು ಕಪ್ಪಾಗಿದ್ದರೆ ಅಥವಾ ಕೆಂಪಾಗಿದ್ದರೆ, ಈ ದಿನ ಮಳೆ ಬರುತ್ತದೆ ಎಂದು ಹೇಳುತ್ತೀರಿ. ಇವುಗಳು ಹವಾಮಾನದ ಗುರುತುಗಳಾಗಿವೆ. ನೀವು ಈ ಗುರುತುಗಳನ್ನು ಕಂಡು ಅವುಗಳ ಅರ್ಥವನ್ನು ತಿಳಿದುಕೊಳ್ಳುತ್ತೀರಿ. ಅದೇ ರೀತಿಯಲ್ಲಿ ಈಗ ನೀವು ನೋಡುತ್ತಿರುವ ಇಂದಿನ ಸಂಗತಿಗಳು ಸಹ ಗುರುತುಗಳಾಗಿವೆ. ಆದರೆ ನಿಮಗೆ ಈ ಗುರುತುಗಳ ಅರ್ಥವು ಗೊತ್ತಿಲ್ಲ.
ಕೆಟ್ಟವರಾದ ಮತ್ತು ಪಾಪಿಗಳಾದ ಜನರು ಸೂಚನೆಗಾಗಿ ಒಂದು ಅದ್ಭುತಕಾರ್ಯವನ್ನು ಅಪೇಕ್ಷಿಸುತ್ತಾರೆ. ಅವರಿಗೆ ಯೋನನಲ್ಲಾದ ಸೂಚಕಕಾರ್ಯವೊಂದೇ [*ಯೋನನಲ್ಲಾದ ಸೂಚಕಕಾರ್ಯ ಯೋನನು ಮೂರು ದಿನಗಳ ಕಾಲ ಒಂದು ದೊಡ್ಡ ಮೀನಿನಲ್ಲಿದ್ದುದು ಯೇಸು ಮೂರು ದಿನ ಸಮಾಧಿಯಲ್ಲಿದ್ದಂತೆ.] ಹೊರತು ಬೇರೆ ಯಾವ ಸೂಚಕಕಾರ್ಯವೂ ದೊರೆಯುವುದಿಲ್ಲ” ಎಂದು ಉತ್ತರಕೊಟ್ಟನು. ಬಳಿಕ ಯೇಸು ಆ ಸ್ಥಳವನ್ನು ಬಿಟ್ಟು ಹೊರಟುಹೋದನು.
ಶಿಷ್ಯರು ಈ ವಿಷಯವನ್ನು ಚರ್ಚಿಸುತ್ತಿರುವುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಯೇಸು ಅವರಿಗೆ, “ರೊಟ್ಟಿ ಇಲ್ಲವಲ್ಲಾ ಎಂಬ ವಿಷಯದಲ್ಲಿ ನೀವು ಮಾತಾಡಿಕೊಳ್ಳುತ್ತಿರುವುದೇಕೆ? ಅಲ್ಪ ವಿಶ್ವಾಸಿಗಳೇ,
ನೀವಿನ್ನೂ ಅರ್ಥಮಾಡಿಕೊಳ್ಳಲಿಲ್ಲವೇ? ಐದು ರೊಟ್ಟಿಗಳಿಂದ ಐದು ಸಾವಿರ ಜನರಿಗೆ ಊಟ ಮಾಡಿಸಿದ್ದು ನಿಮಗೆ ನೆನಪಿಲ್ಲವೇ? ಜನರು ಊಟ ಮಾಡಿದ ಮೇಲೆ ನೀವು ಅನೇಕ ಬುಟ್ಟಿಗಳಲ್ಲಿ ರೊಟ್ಟಿಗಳನ್ನು ತುಂಬಿಸಿದ್ದು ನಿಮಗೆ ನೆನಪಿಲ್ಲವೇ?
ಏಳು ರೊಟ್ಟಿಗಳ ತುಂಡುಗಳನ್ನು ನಾಲ್ಕು ಸಾವಿರ ಜನರಿಗೆ ಊಟ ಮಾಡಿಸಿದ್ದು ನಿಮಗೆ ನೆನಪಿಲ್ಲವೇ? ಜನರು ತಿಂದು ಮುಗಿಸಿದ ಮೇಲೆ ನೀವು ಅನೇಕ ಬುಟ್ಟಿಗಳಲ್ಲಿ ರೊಟ್ಟಿಗಳನ್ನು ತುಂಬಿಸಿದ್ದು ನಿಮಗೆ ನೆನಪಿಲ್ಲವೇ?
ಆದ್ದರಿಂದ ನಾನು ನಿಮಗೆ ಹೇಳಿದ್ದು ರೊಟ್ಟಿಯ ಕುರಿತಲ್ಲ. ನೀವು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲವೇಕೆ? ಫರಿಸಾಯರು ಮತ್ತು ಸದ್ದುಕಾಯರ ಹುಳಿಗೆ (ಕೆಟ್ಟ ಪ್ರಭಾವಕ್ಕೆ) ಒಳಗಾಗದಂತೆ ನೀವು ಎಚ್ಚರಿಕೆಯಿಂದಿರಬೇಕೆಂದು ನಾನು ನಿಮ್ಮನ್ನು ಎಚ್ಚರಿಸಿದೆನು” ಅಂದನು.
ಆಗ ಶಿಷ್ಯರು ಯೇಸು ಹೇಳಿದ್ದನ್ನು ಅರ್ಥಮಾಡಿಕೊಂಡರು. ಆತನು ಅವರಿಗೆ ರೊಟ್ಟಿಯಲ್ಲಿ ಬೆರೆಸಿದ್ದ ಹುಳಿಯನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಹೇಳಲಿಲ್ಲ. ಫರಿಸಾಯರು ಮತ್ತು ಸದ್ದುಕಾಯರ ಬೋಧನೆಯ ಪ್ರಭಾವಕ್ಕೆ ಒಳಗಾಗದಂತೆ ಎಚ್ಚರಿಕೆಯಾಗಿರಬೇಕೆಂದು ಹೇಳಿದ್ದನು.
(ಮಾರ್ಕ 8:27-30; ಲೂಕ 9:18-21) ಯೇಸು ಫಿಲಿಪ್ಪನ ಸೆಜರೇಯ ಎಂಬ ಪ್ರಾಂತ್ಯಕ್ಕೆ ಹೋದನು. ಯೇಸು ತನ್ನ ಶಿಷ್ಯರಿಗೆ, “ಮನುಷ್ಯಕುಮಾರನಾದ ನನ್ನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದನು.
ಶಿಷ್ಯರು, “ಕೆಲವರು ‘ಸ್ನಾನಿಕ ಯೋಹಾನ’ನೆಂದು ಹೇಳುತ್ತಾರೆ. ಇನ್ನು ಕೆಲವರು ‘ಎಲೀಯ’ನೆಂದು ಹೇಳುತ್ತಾರೆ. ಮತ್ತೆ ಕೆಲವರು ‘ಯೆರೆಮೀಯ’ನೆಂದು ಇಲ್ಲವೆ ‘ಪ್ರವಾದಿಗಳಲ್ಲಿ ಒಬ್ಬ’ನೆಂದು ಹೇಳುತ್ತಾರೆ” ಎಂದು ಉತ್ತರಕೊಟ್ಟರು.
ಆದ್ದರಿಂದ ನಾನು ನಿನಗೆ ಹೇಳುವುದೇನೆಂದರೆ, ನೀನೇ ಪೇತ್ರ. [‡ಪೇತ್ರ ಅಂದರೆ “ಬಂಡೆ.” ಇದು ಪದ ಬಳಕೆಯ “ಶ್ಲೇಚ್ಛೆಯಾಗಿದೆ.”] ನಾನು ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುತ್ತೇನೆ. ಪಾತಾಳಲೋಕದ ಬಲವು ನನ್ನ ಸಭೆಯನ್ನು ಸೋಲಿಸಲಾರದು.
ಪರಲೋಕರಾಜ್ಯದ ಬೀಗದ ಕೈಗಳನ್ನು ನಾನು ನಿನಗೆ ಕೊಡುತ್ತೇನೆ. ನೀನು ಭೂಲೋಕದಲ್ಲಿ ನೀಡುವ ನ್ಯಾಯತೀರ್ಪು ದೇವರ ನ್ಯಾಯತೀರ್ಪಾಗಿರುತ್ತದೆ. ನೀನು ಭೂಲೋಕದಲ್ಲಿ ನೀಡುವ ಕ್ಷಮೆಯು ದೇವರ ಕ್ಷಮೆಯಾಗಿರುತ್ತದೆ” ಎಂದು ಉತ್ತರಿಸಿದನು.
(ಮಾರ್ಕ 8:31-9:1; ಲೂಕ 9:22-27) ಆ ಸಮಯದಲ್ಲಿ ಯೇಸು ತಾನು ಜೆರುಸಲೇಮಿಗೆ ಹೋಗಬೇಕೆಂದು ಮತ್ತು ಅಲ್ಲಿ ಯೆಹೂದ್ಯರ ಹಿರಿಯ ನಾಯಕರಿಂದಲೂ ಮಹಾಯಾಜಕರಿಂದಲೂ ಮತ್ತು ಧರ್ಮೋಪದೇಶಕರಿಂದಲೂ ತಾನು ಅನೇಕ ಕಷ್ಟಗಳನ್ನು ಅನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಸತ್ತವರೊಳಗಿಂದ ಜೀವಂತವಾಗಿ ಎದ್ದುಬರಬೇಕಾಗಿದೆ ಎಂದು ತನ್ನ ಶಿಷ್ಯರಿಗೆ ವಿವರಿಸಿ ಹೇಳಿದನು.
ಬಳಿಕ ಯೇಸು ತನ್ನ ಶಿಷ್ಯರಿಗೆ, “ನನ್ನನ್ನು ಹಿಂಬಾಲಿಸಲು ಅಪೇಕ್ಷಿಸುವವನು ತನಗೆ ಇಷ್ಟವಾದದ್ದನ್ನು ತ್ಯಜಿಸಬೇಕು. ಅವನು ತನಗೆ ಕೊಟ್ಟಿರುವ ಶಿಲುಬೆಯನ್ನು (ಸಂಕಟ) ಸ್ವೀಕರಿಸಿಕೊಂಡು ನನ್ನನ್ನು ಹಿಂಬಾಲಿಸಬೇಕು.