1
|
ಅದೇ ದಿನದಲ್ಲಿ ಯೇಸು ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತುಕೊಂಡನು. |
2
|
ಅನೇಕ ಜನರು ಯೇಸುವಿನ ಸುತ್ತಲೂ ನೆರೆದರು. ಆಗ ಯೇಸು ದೋಣಿಯೊಳಕ್ಕೆ ಹೋಗಿ ಕುಳಿತುಕೊಂಡನು. ಜನರೆಲ್ಲರೂ ದಡದಲ್ಲಿ ನಿಂತಿದ್ದರು. |
3
|
ಆಗ ಯೇಸು ಸಾಮ್ಯಗಳ ಮೂಲಕ ಅನೇಕ ವಿಷಯಗಳನ್ನು ಅವರಿಗೆ ಬೋಧಿಸಿದನು. ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು: “ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೋದನು. |
4
|
ಅವನು ಬೀಜ ಬಿತ್ತುವಾಗ ಕೆಲವು ಬೀಜಗಳು ರಸ್ತೆಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಬೀಜಗಳನ್ನೆಲ್ಲ ತಿಂದುಬಿಟ್ಟವು. |
5
|
ಕೆಲವು ಬೀಜಗಳು ಬಂಡೆಯ ನೆಲದಲ್ಲಿ ಬಿದ್ದವು. ಅಲ್ಲಿಯ ನೆಲದಲ್ಲಿ ಸಾಕಷ್ಟು ಮಣ್ಣಿಲ್ಲದಿದ್ದುದರಿಂದ ಬೀಜಗಳು ಬೇಗ ಮೊಳೆತವು. |
6
|
ಆದರೆ ಬಿಸಿಲೇರಿದಾಗ ಆ ಮೊಳಕೆಗಳು ಒಣಗಿಹೋದವು. ಏಕೆಂದರೆ ಅವುಗಳಿಗೆ ಆಳವಾದ ಬೇರಿರಲಿಲ್ಲ. |
7
|
ಬೇರೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು ಒಳ್ಳೆಯ ಗಿಡಗಳು ಬೆಳೆಯುವುದನ್ನು ತಡೆದುಬಿಟ್ಟವು. |
8
|
ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಅವು ಬೆಳೆದು ಕಾಳುಬಿಟ್ಟವು. ಕೆಲವು ಗಿಡಗಳು ನೂರರಷ್ಟು, ಕೆಲವು ಗಿಡಗಳು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಕಾಳುಬಿಟ್ಟವು. |
9
|
ನನಗೆ ಕಿವಿಗೊಡುವ ಜನರೇ, ಲಾಲಿಸಿರಿ!” |
10
|
ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀನು ಸಾಮ್ಯಗಳ ಮೂಲಕ ಜನರಿಗೆ ಉಪದೇಶಿಸುವುದೇಕೆ?” ಎಂದು ಕೇಳಿದರು. |
11
|
ಯೇಸು, “ಪರಲೋಕ ರಾಜ್ಯದ ರಹಸ್ಯವಾದ ಸತ್ಯಗಳನ್ನು ನೀವು ಮಾತ್ರ ತಿಳಿದುಕೊಳ್ಳಬಲ್ಲಿರಿ. ಈ ಸತ್ಯಗಳ ರಹಸ್ಯವು ಬೇರೆ ಜನರಿಗೆ ತಿಳಿಯಲಾರದು. |
12
|
ಸ್ವಲ್ಪ ಜ್ಞಾನವನ್ನು ಹೊಂದಿರುವವನು ಇನ್ನೂ ಹೆಚ್ಚು ಜ್ಞಾನವನ್ನು ಪಡೆದುಕೊಂಡು ಸಾಕಷ್ಟು ಜ್ಞಾನವಂತನಾಗುವನು. ಆದರೆ ಜ್ಞಾನವನ್ನು ಹೊಂದಿಲ್ಲದವನು ತನಗಿರುವ ಸ್ವಲ್ಪ ಜ್ಞಾನವನ್ನೂ ಕಳೆದುಕೊಳ್ಳುವನು. |
13
|
ಈ ಕಾರಣದಿಂದಲೇ ನಾನು ಈ ಸಾಮ್ಯಗಳ ಮೂಲಕ ಇವರಿಗೆ ಬೋಧಿಸುತ್ತೇನೆ. ಈ ಜನರು ನೋಡಿದರೂ ಕಾಣುವುದಿಲ್ಲ, ಕೇಳಿದರೂ ಗ್ರಹಿಸುವುದಿಲ್ಲ. |
14
|
ಇಂಥವರ ಬಗ್ಗೆ ಯೆಶಾಯನು ಹೇಳಿದ್ದೇನೆಂದರೆ: ‘ನೀವು ಆಲಿಸುತ್ತೀರಿ, ಕೇಳುತ್ತೀರಿ, ಆದರೆ ನಿಮಗೆ ಅರ್ಥವಾಗುವುದಿಲ್ಲ. ನೀವು ದೃಷ್ಟಿಸಿ ನೋಡುತ್ತೀರಿ, ಆದರೆ ನಿಮಗೆ ಕಾಣುವುದನ್ನು ಅರ್ಥಮಾಡಿಕೊಳ್ಳುವುದಿಲ್ಲ. |
15
|
ಹೌದು, ಇವರ ಮನಸ್ಸುಗಳು ಕಠಿಣವಾಗಿವೆ. ಕಿವಿ ಮಂದವಾಗಿವೆ, ಕಣ್ಣು ಮಬ್ಬಾಗಿವೆ. ಅವರು ತಮ್ಮ ಕಣ್ಣುಗಳಿಂದ ನೋಡದಂತೆಯೂ ತಮ್ಮ ಕಿವಿಗಳಿಂದ ಕೇಳದಂತೆಯೂ ತಮ್ಮ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದಂತೆಯೂ ನನ್ನ ಕಡೆಗೆ ತಿರುಗಿಕೊಳ್ಳದಂತೆಯೂ ನನ್ನಿಂದ ಗುಣ ಹೊಂದದಂತೆಯೂ ಹೀಗಾಯಿತು.’ ಯೆಶಾಯ 6:9-10 |
16
|
ನೀವಾದರೋ ಧನ್ಯರು. ನಿಮಗೆ ಕಾಣುವ ಸಂಗತಿಗಳನ್ನೂ ನಿಮಗೆ ಹೇಳುವ ವಿಷಯಗಳನ್ನೂ ಅರ್ಥಮಾಡಿಕೊಳ್ಳಬಲ್ಲಿರಿ. |
17
|
ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ಈಗ ನೋಡುವ ಸಂಗತಿಗಳನ್ನು ನೋಡಲು ಮತ್ತು ಈಗ ನೀವು ಕೇಳುವ ಸಂಗತಿಗಳನ್ನು ಕೇಳಲು ಅನೇಕ ಪ್ರವಾದಿಗಳು ಮತ್ತು ಒಳ್ಳೆಯ ಜನರು ಅಪೇಕ್ಷಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ. |
18
|
“ಹೀಗಿರಲು ಒಕ್ಕಲಿಗನ ಕುರಿತಾದ ಸಾಮ್ಯದ ಅರ್ಥವನ್ನು ಲಾಲಿಸಿರಿ. |
19
|
“ಮಗ್ಗುಲಲ್ಲಿ ಬಿದ್ದ ಬೀಜ ಅಂದರೇನು? ಪರಲೋಕ ರಾಜ್ಯವನ್ನು ಕುರಿತು ಬೋಧಿಸಿದ್ದನ್ನು ಕೇಳಿ ಅದನ್ನು ಅರ್ಥಮಾಡಿಕೊಳ್ಳದೆ ಇರುವ ಮನುಷ್ಯನೇ ಬೀಜ ಬಿದ್ದ ದಾರಿ ಮಗ್ಗುಲಾಗಿರುವನು. ಕೆಡುಕನು (ಸೈತಾನನು) ಬಂದು ಆ ಮನುಷ್ಯನ ಹೃದಯದಲ್ಲಿ ಬಿತ್ತಿದ್ದ ಬೀಜಗಳನ್ನು ತೆಗೆದು ಹಾಕುತ್ತಾನೆ. |
20
|
“ಬಂಡೆನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದ ಕೂಡಲೇ ಅದನ್ನು ಸಂತೋಷದಿಂದ ಅಂಗೀಕರಿಸುವ ಮನುಷ್ಯನೇ ಬೀಜ ಬಿದ್ದ ಬಂಡೆನೆಲವಾಗಿರುವನು. |
21
|
ಆದರೆ ಆ ಮನುಷ್ಯನು ಬೋಧನೆಯನ್ನು ತನ್ನ ಜೀವಿತದಲ್ಲಿ ಬೇರೂರಿಸಿಕೊಳ್ಳುವುದಿಲ್ಲ. ಅವನು ಆ ಬೋಧನೆಯನ್ನು ಸ್ವಲ್ಪಕಾಲ ಮಾತ್ರ ಅನುಸರಿಸುವನು. ಆ ಬೋಧನೆಯನ್ನು ಅಂಗೀಕರಿಸಿದ್ದರಿಂದ ತನಗೆ ಕಷ್ಟವಾಗಲಿ ಹಿಂಸೆಯಾಗಲಿ ಬಂದಾಗ ಅದನ್ನು ಬೇಗನೆ ಬಿಟ್ಟುಬಿಡುವನು. |
22
|
“ಮುಳ್ಳುಗಿಡಗಳ ನಡುವೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದರೂ ಜೀವನದ ಚಿಂತೆಗಳಿಂದ ಮತ್ತು ಹಣದ ಮೇಲಿನ ಪ್ರೀತಿಯಿಂದ ಬೋಧನೆಯನ್ನು ತನ್ನಲ್ಲಿ ಬೆಳೆಯದಂತೆ ಮಾಡುವವನೇ ಬೀಜ ಬಿದ್ದ ಮುಳ್ಳುಗಿಡಗಳ ನೆಲವಾಗಿರವನು. ಆದ್ದರಿಂದ ಬೋಧನೆಯು ಆ ಮನುಷ್ಯನ ಜೀವಿತದಲ್ಲಿ ಫಲ ಕೊಡುವುದಿಲ್ಲ. |
23
|
“ಒಳ್ಳೆಯ ನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿ ಅದನ್ನು ಅರ್ಥಮಾಡಿಕೊಂಡ ವ್ಯಕ್ತಿಯೇ ಬೀಜ ಬಿದ್ದ ಒಳ್ಳೆಯ ನೆಲವಾಗಿರುವನು. ಆ ಮನುಷ್ಯನು ಬೆಳೆದು ಕೆಲವು ಸಾರಿ ನೂರರಷ್ಟು ಕೆಲವು ಸಾರಿ ಅರವತ್ತರಷ್ಟು ಮತ್ತು ಕೆಲವು ಸಾರಿ ಮೂವತ್ತರಷ್ಟು ಫಲ ಕೊಡುವನು” ಎಂದು ಹೇಳಿದನು. |
24
|
ಬಳಿಕ ಯೇಸು ಅವರಿಗೆ ಇನ್ನೊಂದು ಸಾಮ್ಯದ ಮೂಲಕ ಬೋಧಿಸಿದನು. ಅದೇನೆಂದರೆ: “ಪರಲೋಕರಾಜ್ಯ ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ರೈತನಂತಿದೆ. |
25
|
ಆ ರಾತ್ರಿ ಜನರೆಲ್ಲರೂ ನಿದ್ರಿಸುತ್ತಿದ್ದಾಗ ಅವನ ವೈರಿ ಬಂದು ಗೋಧಿಯ ನಡುವೆ ಹಣಜಿಯನ್ನು ಬಿತ್ತಿ ಹೊರಟುಹೋದನು. |
26
|
ಬಳಿಕ ಗೋಧಿ ಬೆಳೆದು ತೆನೆಬಿಟ್ಟಿತು. ಅದರೊಡನೆ ಹಣಜಿ ಸಹ ಬೆಳೆಯಿತು. |
27
|
ಆಗ ಆ ರೈತನ ಸೇವಕರು ಅವನ ಬಳಿಗೆ ಬಂದು, ‘ನಿನ್ನ ಹೊಲದಲ್ಲಿ ನೀನು ಒಳ್ಳೆಯ ಬೀಜ ಬಿತ್ತಿದೆ. ಹಣಜಿ ಎಲ್ಲಿಂದ ಬಂತು?’ ಎಂದು ಕೇಳಿದರು. |
28
|
“ಆ ಮನುಷ್ಯನು, ‘ಒಬ್ಬ ವೈರಿ ಹಣಜಿಯನ್ನು ಬಿತ್ತಿದ್ದಾನೆ’ ಎಂದು ಉತ್ತರಕೊಟ್ಟನು. “ಆ ಸೇವಕರು ‘ನಾವು ಹೋಗಿ ಹಣಜಿಗಳನ್ನು ಕೀಳಬೇಕೆ?’ ಎಂದು ಕೇಳಿದರು. |
29
|
“ಆ ಮನುಷ್ಯನು, ‘ಬೇಡ, ಏಕೆಂದರೆ ನೀವು ಹಣಜಿಗಳನ್ನು ಕೀಳುವಾಗ ಗೋಧಿಯನ್ನು ಸಹ ಕೀಳಬಹುದು. |
30
|
ಸುಗ್ಗಿಕಾಲದವರೆಗೆ ಹಣಜಿಯೂ ಗೋಧಿಯೂ ಒಟ್ಟಿಗೆ ಬೆಳೆಯಲಿ. ಸುಗ್ಗಿಕಾಲದ ಸಮಯದಲ್ಲಿ ನಾನು ಕೆಲಸದವರಿಗೆ, ಮೊದಲು ಹಣಜಿಗಳನ್ನು ಕೂಡಿಸಿ ಅದನ್ನು ಸುಡುವುದಕ್ಕಾಗಿ ಹೊರೆ ಕಟ್ಟಿ, ನಂತರ ಗೋಧಿಯನ್ನು ಕೂಡಿಸಿ ಅದನ್ನು ನನ್ನ ಕಣಜಕ್ಕೆ ತನ್ನಿರಿ ಎಂದು ಹೇಳುವೆನು’ ಎಂದು ಉತ್ತರಕೊಟ್ಟನು.” |
31
|
ನಂತರ ಯೇಸು ಜನರಿಗೆ ಮತ್ತೊಂದು ಸಾಮ್ಯವನ್ನು ಹೇಳಿದನು: “ಪರಲೋಕರಾಜ್ಯ ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ತನ್ನ ಹೊಲದಲ್ಲಿ ಬಿತ್ತಿದನು. |
32
|
ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣ ಬೀಜವಾಗಿದೆ. ಆದರೆ ಅದು ಬೆಳೆದಾಗ ತೋಟದ ಗಿಡಗಳಿಗಿಂತಲೂ ದೊಡ್ಡದಾಗಿರುವುದು. ಅದು ಮರವಾದಾಗ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಮಾಡಿಕೊಳ್ಳುವಷ್ಟು ದೊಡ್ಡದಾಗಿರುತ್ತದೆ.” |
33
|
ಬಳಿಕ ಯೇಸು ಜನರಿಗೆ ಇನ್ನೊಂದು ಸಾಮ್ಯವನ್ನು ಹೇಳಿದನು: “ಪರಲೋಕರಾಜ್ಯವು ಒಬ್ಬ ಸ್ತ್ರೀ ರೊಟ್ಟಿ ಮಾಡುವುದಕ್ಕೆ ಒಂದು ದೊಡ್ಡ ಬೋಗುಣಿಯ ಹಿಟ್ಟಿಗೆ ಬೆರೆಸಿದ ಹುಳಿಗೆ ಹೋಲಿಕೆಯಾಗಿದೆ. ಆ ಹುಳಿಯು ನಾದಿದ ಹಿಟ್ಟನ್ನೆಲ್ಲಾ ಉಬ್ಬಿಸಿತು. “ |
34
|
ಯೇಸು ಇವುಗಳನ್ನೆಲ್ಲ ಸಾಮ್ಯಗಳ ಮೂಲಕ ಹೇಳಿದನು. ಆತನು ಉಪದೇಶಿಸುವಾಗಲೆಲ್ಲಾ ಸಾಮ್ಯಗಳನ್ನು ಉಪಯೋಗಿಸುತ್ತಿದ್ದನು. |
35
|
ಪ್ರವಾದಿ ಹೇಳಿದ್ದ ಈ ಮಾತು ಇದರಿಂದ ನೆರವೇರಿತು: “ನಾನು ಸಾಮ್ಯಗಳ ಮೂಲಕ ಉಪದೇಶಿಸುತ್ತೇನೆ. ಲೋಕ ಉಂಟಾದಂದಿನಿಂದ ಮರೆಯಾಗಿದ್ದ ಸಂಗತಿಗಳನ್ನು ನಾನು ಹೇಳುತ್ತೇನೆ.” ಕೀರ್ತನೆ 78:2 |
36
|
ನಂತರ ಯೇಸು ಜನರನ್ನು ಬಿಟ್ಟು ಮನೆಯೊಳಕ್ಕೆ ಹೋದನು. ಆತನ ಶಿಷ್ಯರು ಆತನ ಬಳಿಗೆ ಬಂದು, “ಹೊಲದಲ್ಲಿರುವ ಹಣಜಿಯನ್ನು ಕುರಿತಾದ ಸಾಮ್ಯದ ಅರ್ಥವನ್ನು ನಮಗೆ ವಿವರಿಸು” ಅಂದರು. |
37
|
ಯೇಸು ಹೀಗೆ ಉತ್ತರಿಸಿದನು: “ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತುವವನೇ ಮನುಷ್ಯಕುಮಾರನು. |
38
|
ಆ ಹೊಲ ಈ ಲೋಕವಾಗಿದೆ. ಒಳ್ಳೆಯ ಕಾಳುಗಳೇ ಪರಲೋಕ ರಾಜ್ಯಕ್ಕೆ ಸೇರಿದ ದೇವರಮಕ್ಕಳು. ಕೆಡುಕನಿಗೆ ಸಂಬಂಧಪಟ್ಟವರೇ ಹಣಜಿಗಳು. |
39
|
ಹಣಜಿಯನ್ನು ಬಿತ್ತಿದ ವೈರಿಯೇ ಸೈತಾನ. ಸುಗ್ಗಿಕಾಲ ಅಂದರೆ ಲೋಕದ ಅಂತ್ಯಕಾಲ. ಕೂಡಿಸುವ ಕೆಲಸಗಾರರೇ ದೇವದೂತರು. |
40
|
“ಹಣಜಿಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. ಈ ಲೋಕದ ಅಂತ್ಯದಲ್ಲಿ ಆಗುವಂಥದ್ದು ಇದೇ. |
41
|
ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು. ಆತನ ದೂತರು ಪಾಪಕ್ಕೆ ಕಾರಣರಾದ ಮತ್ತು ಕೇಡುಮಾಡುವ ಜನರನ್ನೆಲ್ಲ ಕೂಡಿಸುವರು; ಅವರನ್ನು ಆತನ ರಾಜ್ಯದಿಂದ ಹೊರಗೆ ಹಾಕಿ |
42
|
ಬೆಂಕಿಯ ಸ್ಥಳಕ್ಕೆ ಎಸೆದುಬಿಡುವರು. ಅಲ್ಲಿ ಅವರು ಗೋಳಾಡುತ್ತಾ ನೋವಿನಿಂದ ತಮ್ಮ ಹಲ್ಲುಗಳನ್ನು ಕಡಿಯುವರು. |
43
|
ಒಳ್ಳೆಯವರಾದರೋ ಸೂರ್ಯನಂತೆ ಪ್ರಕಾಶಿಸುತ್ತಾ ತಮ್ಮ ತಂದೆಯ ರಾಜ್ಯದಲ್ಲಿರುವರು. ನನಗೆ ಕಿವಿಗೊಡುವ ಜನರೇ, ಆಲಿಸಿರಿ! |
44
|
“ಪರಲೋಕರಾಜ್ಯವು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಂದು ದಿನ ಒಬ್ಬನು ಆ ನಿಧಿಯನ್ನು ಕಂಡು ಬಹಳ ಸಂತೋಷದಿಂದ ಅದನ್ನು ಹೊಲದಲ್ಲಿ ಅಡಗಿಸಿಟ್ಟನು. ಬಳಿಕ ಅವನು ತನ್ನ ಆಸ್ತಿಯನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು. |
45
|
“ಪರಲೋಕರಾಜ್ಯವು ಶ್ರೇಷ್ಠವಾದ ಮುತ್ತುಗಳನ್ನು ಹುಡುಕುವ ಒಬ್ಬ ವ್ಯಾಪಾರಿಯಂತಿದೆ. |
46
|
ಒಂದು ದಿನ ಆ ವ್ಯಾಪಾರಿಗೆ ಬಹು ಅಮೂಲ್ಯವಾದ ಒಂದು ಮುತ್ತು ಸಿಕ್ಕಿತು. ಆಗ ಅವನು ತನ್ನ ಆಸ್ತಿಯನ್ನೆಲ್ಲಾ ಮಾರಿ ಆ ಮುತ್ತನ್ನು ಕೊಂಡುಕೊಂಡನು. |
47
|
“ಪರಲೋಕರಾಜ್ಯವು ಸರೋವರದೊಳಗೆ ಬೀಸಿದ ಬಲೆಯಂತಿದೆ. ಆ ಬಲೆಗೆ ಅನೇಕ ಜಾತಿಯ ಮೀನುಗಳು ಸಿಕ್ಕಿಕೊಂಡವು. |
48
|
ಆಗ ಆ ಬಲೆಯು ತುಂಬಿಹೋಯಿತು. ಬೆಸ್ತರು ಆ ಬಲೆಯನ್ನು ದಡಕ್ಕೆ ಎಳೆದುಕೊಂಡು ಬಂದು ಒಳ್ಳೆಯ ಮೀನುಗಳನ್ನೆಲ್ಲಾ ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಡಿದರು. |
49
|
ಈ ಪ್ರಪಂಚದ ಅಂತ್ಯದಲ್ಲಿ ಅದೇ ರೀತಿ ಆಗುವುದು. ದೇವದೂತರು ಬಂದು ಒಳ್ಳೆಯ ಜನರಿಂದ ಕೆಟ್ಟಜನರನ್ನು ಬೇರೆ ಮಾಡುವರು. |
50
|
ದೇವದೂತರು ಕೆಟ್ಟಜನರನ್ನು ಬೆಂಕಿಯ ಸ್ಥಳದೊಳಕ್ಕೆ ಎಸೆಯುವರು. ಆ ಸ್ಥಳದಲ್ಲಿ ಜನರು ಗೋಳಾಡುತ್ತಾ ನೋವಿನಿಂದ ತಮ್ಮ ಹಲ್ಲುಗಳನ್ನು ಕಡಿಯುವರು.” |
51
|
ಯೇಸು ತನ್ನ ಶಿಷ್ಯರಿಗೆ, “ನೀವು ಈ ವಿಷಯಗಳನ್ನೆಲ್ಲಾ ಅರ್ಥಮಾಡಿಕೊಂಡಿರೋ?” ಎಂದು ಕೇಳಿದನು. ಅದಕ್ಕೆ ಶಿಷ್ಯರು, “ನಾವು ಅರ್ಥಮಾಡಿಕೊಂಡೆವು” ಎಂದು ಉತ್ತರಕೊಟ್ಟರು. |
52
|
ಆಗ ಯೇಸು ತನ್ನ ಶಿಷ್ಯರಿಗೆ, “ಹೀಗಿರಲಾಗಿ ಪರಲೋಕರಾಜ್ಯದ ವಿಷಯವಾಗಿ ಬೋಧಿಸಿದಂಥ ಪ್ರತಿಯೊಬ್ಬ ಧರ್ಮೋಪದೇಶಕನು ಒಂದು ಮನೆಯ ಯಜಮಾನನಂತಿದ್ದಾನೆ. ಆ ಮನುಷ್ಯನು ಹೊಸವಸ್ತುಗಳನ್ನೂ ಹಳೆವಸ್ತುಗಳನ್ನೂ ಆ ಮನೆಯಲ್ಲಿ ಶೇಖರಿಸಿಕೊಂಡು ಅವುಗಳನ್ನು ಹೊರಗೆ ತರುವನು” ಎಂದನು. |
53
|
ಯೇಸು ಈ ಸಾಮ್ಯಗಳ ಮೂಲಕ ಬೋಧಿಸಿದ ನಂತರ ಅಲ್ಲಿಂದ ತನ್ನ ಸ್ವಂತ ಊರಿಗೆ ಹೋದನು. |
54
|
ಯೇಸು ಸಭಾಮಂದಿರದಲ್ಲಿ ಬೋಧಿಸಿದಾಗ ಜನರು ಬೆರಗಾಗಿ, “ಈ ಜ್ಞಾನವನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವ ಈ ಶಕ್ತಿಯನ್ನು ಎಲ್ಲಿಂದ ಪಡೆದುಕೊಂಡನು? |
55
|
ಇವನು ಕೇವಲ ಆ ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಳು. ಯಾಕೋಬ, ಯೋಸೇಫ, ಸಿಮೋನ ಮತ್ತು ಯೂದ ಇವನ ಸಹೋದರರು. |
56
|
ಅವನ ಸಹೋದರಿಯರೆಲ್ಲರೂ ನಮ್ಮಲ್ಲಿ ಇದ್ದಾರೆ. ಹೀಗಿರಲು ಇವನು ಈ ಜ್ಞಾನವನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವ ಈ ಶಕ್ತಿಯನ್ನು ಎಲ್ಲಿಂದ ಪಡೆದುಕೊಂಡನು?” ಎಂದು ಮಾತಾಡಿಕೊಂಡು, |
57
|
ಆತನನ್ನು ಸ್ವೀಕರಿಸಿಕೊಳ್ಳಲಿಲ್ಲ. ಯೇಸು ಅವರಿಗೆ, “ಪ್ರವಾದಿಗೆ ಪರಜನರು ಮರ್ಯಾದೆ ಸಲ್ಲಿಸುತ್ತಾರೆ; ಆದರೆ ಸ್ವಂತ ಊರಿನವರಾಗಲಿ ಸ್ವಂತ ಮನೆಯವರಾಗಲಿ ಮರ್ಯಾದೆ ಕೊಡುವುದಿಲ್ಲ” ಎಂದು ಹೇಳಿದನು. |
58
|
ಆ ಜನರ ಅವಿಶ್ವಾಸದ ಕಾರಣ ಆತನು ಅಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಲಿಲ್ಲ. |
Matthew 13:43 Kannada Language Bible Words basic statistical display
COMING SOON ...