1
|
ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಈ ಸಂಗತಿಗಳನ್ನು ಹೇಳಿದ ನಂತರ ಅಲ್ಲಿಂದ ಹೊರಟು ಬೋಧಿಸುವುದಕ್ಕೆ ಮತ್ತು ಉಪದೇಶಿಸುವುದಕ್ಕೆ ಗಲಿಲಾಯ ಪಟ್ಟಣಕ್ಕೆ ಹೋದನು. |
2
|
ಸ್ನಾನಿಕನಾದ ಯೋಹಾನನು ಸೆರೆಯಲ್ಲಿದ್ದನು. ಕ್ರಿಸ್ತನು ಮಾಡುತ್ತಿದ್ದ ಸಂಗತಿಗಳು ಅವನಿಗೆ ತಿಳಿಯಿತು. ಆದ್ದರಿಂದ ಯೋಹಾನನು ತನ್ನ ಕೆಲವು ಶಿಷ್ಯರನ್ನು ಯೇಸುವಿನ ಬಳಿಗೆ ಕಳುಹಿಸಿದನು. |
3
|
ಯೋಹಾನನ ಶಿಷ್ಯರು ಯೇಸುವಿಗೆ, “ಯೋಹಾನನು ಹೇಳಿದ್ದಂತೆ ಬರಬೇಕಾಗಿದ್ದವನು ನೀನೋ ಅಥವಾ ಬೇರೊಬ್ಬನಿಗಾಗಿ ನಾವು ಎದುರು ನೋಡಬೇಕೋ?” ಎಂದು ಕೇಳಿದರು. |
4
|
ಅದಕ್ಕೆ ಯೇಸು, “ನೀವು ಇಲ್ಲಿ ಕೇಳಿದ ಮತ್ತು ನೋಡಿದ ಸಂಗತಿಗಳನ್ನು ಯೋಹಾನನಿಗೆ ತಿಳಿಸಿರಿ. |
5
|
ಕುರುಡರು ದೃಷ್ಟಿ ಹೊಂದುತ್ತಾರೆ; ಕುಂಟರು ಮತ್ತೆ ನಡೆದಾಡಲು ಸಮರ್ಥರಾಗುತ್ತಾರೆ; ಕುಷ್ಟರೋಗಿಗಳು ಗುಣಹೊಂದುತ್ತಾರೆ. ಕಿವುಡರು ಕೇಳಲು ಸಮರ್ಥರಾಗುತ್ತಾರೆ; ಸತ್ತವರು ಜೀವವನ್ನು ಹೊಂದುತ್ತಾರೆ. ಮತ್ತು ಬಡಜನರಿಗೆ ಶುಭವಾರ್ತೆಯನ್ನು ಹೇಳಲಾಗುತ್ತದೆ. |
6
|
ನನ್ನನ್ನು ಸ್ವೀಕರಿಸಿಕೊಳ್ಳುವವನು ಧನ್ಯನಾಗಿದ್ದಾನೆ.” ಎಂದು ಉತ್ತರಕೊಟ್ಟನು. |
7
|
ಯೋಹಾನನ ಶಿಷ್ಯರು ಹೊರಟುಹೋಗುತ್ತಿರಲು ಯೇಸುವು ಜನರೊಡನೆ ಯೋಹಾನನನ್ನು ಕುರಿತು ಮಾತನಾಡಲು ಪ್ರಾರಂಭಿಸಿದನು. ಯೇಸು, “ನೀವು ಏನು ನೋಡಬೇಕೆಂದು ಅಡವಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ? ಇಲ್ಲ! |
8
|
ನಿಜವಾಗಿಯೂ ನೀವು ಏನನ್ನು ನೋಡುವುದಕ್ಕೆ ಹೋಗಿದ್ದಿರಿ? ನಯವಾದ ಉಡುಪನ್ನು ಹಾಕಿಕೊಂಡಿರುವ ಮನುಷ್ಯನನ್ನೋ? ಇಲ್ಲ! ನಯವಾದ ಉಡುಪನ್ನು ಹಾಕಿಕೊಂಡಿರುವ ಜನರು ರಾಜರ ಅರಮನೆಗಳಲ್ಲಿ ವಾಸಿಸುತ್ತಾರೆ. |
9
|
ಹಾಗಾದರೆ, ಏನನ್ನು ನೋಡಲು ಹೋಗಿದ್ದಿರಿ? ಒಬ್ಬ ಪ್ರವಾದಿಯನ್ನೋ? ಹೌದು! ಯೋಹಾನನು ಪ್ರವಾದಿಗಿಂತಲೂ ಹೆಚ್ಚಿನವನು ಎಂದು ನಾನು ನಿಮಗೆ ಹೇಳುತ್ತೇನೆ. |
10
|
ಯೋಹಾನನನ್ನು ಕುರಿತು ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ: ‘ಇಗೋ! ನಾನು (ದೇವರು) ನನ್ನ ದೂತನನ್ನು ನಿನಗಿಂತ ಮೊದಲು ಕಳುಹಿಸುತ್ತೇನೆ. ಅವನು ನಿನಗೆ ದಾರಿಯನ್ನು ಸಿದ್ಧಮಾಡುತ್ತಾನೆ.’ ಮಲಾಕಿ 3:1 |
11
|
“ಸ್ನಾನಿಕ ಯೋಹಾನನು ಹಿಂದೆ ಜೀವಿಸಿದ್ದವರಿಗಿಂತ ದೊಡ್ಡವನು. ಆದರೆ ಪರಲೋಕರಾಜ್ಯದಲ್ಲಿರುವ ಚಿಕ್ಕವನು ಸಹ ಯೋಹಾನನಿಗಿಂತಲೂ ಹೆಚ್ಚಿನವನಾಗಿದ್ದಾನೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. |
12
|
ಸ್ನಾನಿಕ ಯೋಹಾನನು ಬಂದ ಸಮಯದಿಂದ ಇಲ್ಲಿಯವರೆಗೂ ಪರಲೋಕರಾಜ್ಯ ಪ್ರಬಲವಾದ ಆಕ್ರಮಣಗಳಿಗೆ ಒಳಗಾಗಿದೆ. ಬಲಾತ್ಕಾರವನ್ನು ಉಪಯೋಗಿಸಿ ಜನರು ರಾಜ್ಯವನ್ನು ಪಡೆದುಕೊಳ್ಳುವುದಕ್ಕಾಗಿ ಪ್ರಯತ್ನಿಸುತ್ತಾರೆ. |
13
|
ಎಲ್ಲಾ ಪ್ರವಾದನೆಗಳು ಮತ್ತು ಮೋಶೆಯ ಧರ್ಮಶಾಸ್ತ್ರವು ಯೋಹಾನನು ಬರುವ ತನಕ ಪರಲೋಕ ರಾಜ್ಯದ ಕುರಿತಾಗಿ ಮುಂತಿಳಿಸಿದವು. |
14
|
ಧರ್ಮಶಾಸ್ತ್ರವನ್ನು ಮತ್ತು ಪ್ರವಾದಿಗಳು ಹೇಳಿದ್ದನ್ನು ನೀವು ನಂಬುವುದಾದರೆ ಈ ಯೋಹಾನನೇ ಎಲೀಯನು. ಅವನು ಬರುತ್ತಾನೆಂದು ಧರ್ಮಶಾಸ್ತ್ರವೂ ಹೇಳಿದೆ. |
15
|
ಜನರೇ, ನಾನು ಹೇಳುವುದನ್ನು ಕೇಳಿರಿ. ಆಲಿಸಿರಿ! |
16
|
“ಈ ಕಾಲದ ಜನರನ್ನು ಕುರಿತು ನಾನು ಏನು ಹೇಳಲಿ? ಅವರು ಯಾವ ರೀತಿ ಇದ್ದಾರೆ? ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಂತಿದ್ದಾರೆ. ಒಂದು ಗುಂಪಿನ ಮಕ್ಕಳು ಮತ್ತೊಂದು ಗುಂಪಿನ ಮಕ್ಕಳಿಗೆ ಹೀಗೆನ್ನುತ್ತಾರೆ: |
17
|
‘ನಾವು ನಿಮಗೋಸ್ಕರ ವಾದ್ಯ ಬಾರಿಸಿದೆವು. ನೀವು ಕುಣಿಯಲಿಲ್ಲ; ನಾವು ಶೋಕಗೀತೆ ಹಾಡಿದೆವು, ನೀವು ದುಃಖಿಸಲಿಲ್ಲ.’ |
18
|
ಇಂದಿನ ಜನರು ಈ ಮಕ್ಕಳಂತಿದ್ದಾರೆ ಎಂದು ನಾನು ಹೇಳಿದ್ದೇಕೆ? ಏಕೆಂದರೆ ಯೋಹಾನನು ಬಂದನು. ಆದರೆ ಅವನು ಬೇರೆ ಜನರಂತೆ ಊಟಮಾಡಲಿಲ್ಲ; ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ಜನರು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತಾರೆ. |
19
|
ಮನುಷ್ಯಕುಮಾರನು ಬಂದನು. ಆತನು ಬೇರೆ ಜನರಂತೆ ಊಟಮಾಡುತ್ತಾನೆ; ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ಜನರು, ‘ನೋಡಿರಿ! ಅವನು ಹೊಟ್ಟೆಬಾಕ, ಅವನು ಕುಡುಕ, ಸುಂಕವಸೂಲಿಗಾರರು ಮತ್ತು ಕೆಟ್ಟ ಜನರು ಅವನ ಸ್ನೇಹಿತರಾಗಿದ್ದಾರೆ’ ಎಂದು ಹೇಳುತ್ತಾರೆ. ಆದರೆ ಜ್ಞಾನವು ತನ್ನ ಕ್ರಿಯೆಗಳಿಂದಲೇ ತನ್ನ ಯೋಗ್ಯತೆಯನ್ನು ತೋರ್ಪಡಿಸುತ್ತದೆ.” |
20
|
ನಂತರ ಯೇಸು, ತಾನು ಯಾವ ಪಟ್ಟಣಗಳಲ್ಲಿ ಹೇರಳವಾಗಿ ಅದ್ಭುತಕಾರ್ಯಗಳನ್ನು ಮಾಡಿದ್ದನೊ ಆ ಪಟ್ಟಣಗಳನ್ನು ಖಂಡಿಸಿದನು. ಏಕೆಂದರೆ ಆ ಪಟ್ಟಣಗಳಲ್ಲಿದ್ದ ಜನರು ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳಲಿಲ್ಲ ಮತ್ತು ಪಾಪ ಮಾಡುವುದನ್ನು ನಿಲ್ಲಿಸಲಿಲ್ಲ. |
21
|
ಯೇಸು ಹೇಳಿದ್ದೇನೆಂದರೆ: “ಖೊರಾಜಿನೇ, ನಿನ್ನ ಗತಿಯನ್ನು ಏನು ಹೇಳಲಿ? ಬೆತ್ಸಾಯಿದವೇ, ನಿನ್ನ ಗತಿಯನ್ನು ಏನು ಹೇಳಲಿ! ನಾನು ನಿಮ್ಮಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆನು. ಅದೇ ಅದ್ಭುತ ಕಾರ್ಯಗಳನ್ನು ಟೈರ್, ಸೀದೋನ್ಗಳಲ್ಲಿ ಮಾಡಿದ್ದರೆ, ಅವುಗಳ ಜನರು ಬಹಳ ಕಾಲದ ಹಿಂದೆಯೇ ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳುತ್ತಿದ್ದರು; ತಮ್ಮ ಪಾಪಗಳಿಗಾಗಿ ದುಃಖಪಟ್ಟು ಗೋಣಿತಟ್ಟನ್ನು ಕಟ್ಟಿಕೊಳ್ಳುತ್ತಿದ್ದರು; ಮೈಮೇಲೆ ಬೂದಿಯನ್ನು ಹಾಕಿಕೊಳ್ಳುತ್ತಿದ್ದರು. |
22
|
ಆದರೆ ನ್ಯಾಯತೀರ್ಪಿನ ದಿನದಲ್ಲಿ ಟೈರ್, ಸೀದೋನ್ಗಳಿಗಿಂತಲೂ ನಿಮ್ಮ ಸ್ಥಿತಿಯು ಬಹಳ ದುಸ್ಥಿತಿಗೆ ಒಳಗಾಗುವುದೆಂದು ನಾನು ನಿಮಗೆ ಹೇಳುತ್ತೇನೆ. |
23
|
“ಕಪೆರ್ನೌಮೇ, ನೀನು ಪರಲೋಕಕ್ಕೆ ಎತ್ತಲ್ಪಡುವುದಾಗಿ ಯೋಚಿಸುವಿಯೋ? ಇಲ್ಲ! ನೀನು ಪಾತಾಳಕ್ಕೆ ಇಳಿಯುವೆ. ನಾನು ನಿನ್ನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ನಡೆಸಿದೆ. ಸೊದೋಮಿನಲ್ಲಿ ಆ ಅದ್ಭುತಕಾರ್ಯಗಳನ್ನು ನಡೆಸಿದ್ದರೆ ಆ ಜನರು ಪಾಪ ಮಾಡುವುದನ್ನು ನಿಲ್ಲಿಸಿಬಿಡುತ್ತಿದ್ದರು ಮತ್ತು ಇಂದಿನವರೆಗೂ ಅದು ಪಟ್ಟಣವಾಗಿಯೇ ಉಳಿದಿರುತ್ತಿತ್ತು. |
24
|
ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿನ್ನ ಪರಿಸ್ಥಿತಿ ಸೊದೋಮಿಗಿಂತಲೂ ದುಸ್ಥಿತಿಗೆ ಒಳಗಾಗುವುದು ಎಂದು ನಾನು ನಿನಗೆ ಹೇಳುತ್ತೇನೆ.” |
25
|
ಬಳಿಕ ಯೇಸು, “ಪರಲೋಕ ಭೂಲೋಕಗಳ ಪ್ರಭುವಾದ ತಂದೆಯೇ, ನಿನಗೆ ನಾನು ವಂದನೆ ಸಲ್ಲಿಸುತ್ತೇನೆ. ನಾನು ನಿನ್ನನ್ನು ಕೊಂಡಾಡುತ್ತೇನೆ. ಏಕೆಂದರೆ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಸೂಕ್ಷ್ಮಬುದ್ದಿಯುಳ್ಳವರಿಗೂ ಮರೆಮಾಡಿರುವೆ. ಆದರೆ ಚಿಕ್ಕ ಮಕ್ಕಳಂತಿರುವ ಈ ಜನರಿಗೆ ನೀನು ಗೋಚರಪಡಿಸಿರುವೆ. |
26
|
ಹೌದು ತಂದೆಯೇ, ಇದು ನಿಜವಾಗಿಯೂ ನಿನ್ನ ಚಿತ್ತವಾಗಿದ್ದುದರಿಂದ ನೀನು ಹೀಗೆ ಮಾಡಿರುವೆ. |
27
|
“ನನ್ನ ತಂದೆ ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ಯಾವನೂ ಮಗನನ್ನು ಅರಿತಿಲ್ಲ. ತಂದೆ ಮಾತ್ರ ಮಗನನ್ನು ಅರಿತಿದ್ದಾನೆ. ಯಾವನೂ ತಂದೆಯನ್ನು ಅರಿತಿಲ್ಲ. ಮಗನು ಮಾತ್ರ ತಂದೆಯನ್ನು ಅರಿತಿದ್ದಾನೆ. ಮಗನು ತಂದೆಯನ್ನು ಯಾರಿಗೆ ಪ್ರಕಟಿಸಬೇಕೆಂದು ಇಷ್ಟಪಡುತ್ತಾನೊ ಅವರು ತಂದೆಯನ್ನು ತಿಳಿದುಕೊಳ್ಳುತ್ತಾರೆ. |
28
|
“ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ. ನಾನು ನಿಮಗೆ ವಿಶ್ರಾಂತಿಯನ್ನು ಕೊಡುತ್ತೇನೆ. |
29
|
ನನ್ನ ನೊಗಕ್ಕೆ ಹೆಗಲು ಕೊಟ್ಟು ನನ್ನಿಂದ ಕಲಿತುಕೊಳ್ಳಿರಿ. ನಾನು ಸಾತ್ವಿಕನೂ ದೀನನೂ ಆಗಿರುವುದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ. |
30
|
ಹೌದು, ನಿಮಗೆ ನನ್ನ ನೊಗವು ಮೃದುವಾಗಿದೆ; ನನ್ನ ಹೊರೆಯು ಹಗುರವಾಗಿದೆ.” |
Matthew 11:17 Kannada Language Bible Words basic statistical display
COMING SOON ...