English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Judges Chapters

Judges 6 Verses

1 ಇಸ್ರೇಲರು ಯೆಹೋವನಿಗೆ ವಿರೋಧವಾಗಿ ಮತ್ತೆ ದುಷ್ಕೃತ್ಯಗಳನ್ನೇ ಮಾಡಿದರು. ಆದ್ದರಿಂದ ಮಿದ್ಯಾನ್ಯರು ಇಸ್ರೇಲರ ಮೇಲೆ ಏಳುವರ್ಷ ಪ್ರಭುತ್ವ ನಡೆಸುವಂತೆ ಯೆಹೋವನು ಆಸ್ಪದ ಮಾಡಿದನು.
2 ಮಿದ್ಯಾನ್ಯರು ಬಹಳ ಬಲಶಾಲಿಗಳಾಗಿದ್ದು ಇಸ್ರೇಲರಿಗೆ ಕ್ರೂರಿಗಳಾಗಿದ್ದರು. ಆದ್ದರಿಂದ ಇಸ್ರೇಲರು ಅಡಗಿಕೊಳ್ಳುವುದಕ್ಕಾಗಿ ಬೆಟ್ಟಗಳಲ್ಲಿ ಸ್ಥಳಗಳನ್ನು ಮಾಡಿಕೊಂಡರು. ಕಂಡುಹಿಡಿಯಲಾಗದ ಸ್ಥಳಗಳಲ್ಲಿ ಅವರು ತಮ್ಮ ಆಹಾರವನ್ನು ಬಚ್ಚಿಡುತ್ತಿದ್ದರು.
3 ಪೂರ್ವದಿಂದ ಮಿದ್ಯಾನ್ಯರೂ ಅಮಾಲೇಕ್ಯರೂ ಯಾವಾಗಲೂ ಬಂದು ಇವರ ಬೆಳೆಗಳನ್ನು ನಾಶಪಡಿಸುತ್ತಿದ್ದರು.
4 ಅವರು ಈ ಪ್ರದೇಶದಲ್ಲಿ ಪಾಳೆಯಮಾಡಿಕೊಂಡು ಇಸ್ರೇಲರ ಬೆಳೆಗಳನ್ನು ನಾಶಪಡಿಸುತ್ತಿದ್ದರು. ಅವರು ಗಾಜಾ ನಗರದವರೆಗಿರುವ ಪ್ರದೇಶದಲ್ಲಿನ ಬೆಳೆಗಳನ್ನು ಹಾಳುಮಾಡಿದರು. ಅವರು ಇಸ್ರೇಲರ ಆಹಾರಕ್ಕಾಗಿ ಏನೂ ಉಳಿಸಲಿಲ್ಲ. ಅವರು ಕುರಿ, ದನ, ಕತ್ತೆಗಳನ್ನು ಸಹ ಉಳಿಸಲಿಲ್ಲ.
5 ಮಿದ್ಯಾನ್ಯರು ಬಂದು ಈ ಪ್ರದೇಶದಲ್ಲಿ ಪಾಳೆಯ ಮಾಡಿಕೊಂಡರು. ಅವರು ತಮ್ಮ ಸಂಗಡ ತಮ್ಮ ಕುಟುಂಬದವರನ್ನೂ ಪಶುಗಳನ್ನೂ ತಂದರು. ಅವರು ಮಿಡತೆಗಳ ಗುಂಪಿನಂತೆ ಅಸಂಖ್ಯರಾಗಿದ್ದರು. ಅವರು ಮತ್ತು ಅವರ ಒಂಟೆಗಳು ಅತಿದೊಡ್ಡ ಪ್ರಮಾಣದಲ್ಲಿದ್ದು ಎಣಿಸಲು ಸಾಧ್ಯವಿರಲಿಲ್ಲ. ಇವರೆಲ್ಲರೂ ಇಸ್ರೇಲರ ಪ್ರದೇಶಕ್ಕೆ ನುಗ್ಗಿ ಹಾಳುಮಾಡಿದರು.
6 ಇಸ್ರೇಲರು ಮಿದ್ಯಾನ್ಯರಿಂದಾಗಿ ತುಂಬ ಬಡವರಾಗಿ ಬಿಟ್ಟರು. ಆದ್ದರಿಂದ ಇಸ್ರೇಲರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟರು.
7 ಮಿದ್ಯಾನ್ಯರು ಕೆಟ್ಟದ್ದನ್ನೆಲ್ಲಾ ಮಾಡಿದರು. ಅದಕ್ಕಾಗಿ ಇಸ್ರೇಲರು ಸಹಾಯಕೋರಿ ಯೆಹೋವನಲ್ಲಿ ಮೊರೆಯಿಟ್ಟರು.
8 ಆದ್ದರಿಂದ ಯೆಹೋವನು ಅವರ ಹತ್ತಿರಕ್ಕೆ ಒಬ್ಬ ಪ್ರವಾದಿಯನ್ನು ಕಳುಹಿಸಿದನು. ಆ ಪ್ರವಾದಿಯು ಇಸ್ರೇಲರಿಗೆ ಹೀಗೆ ಹೇಳಿದನು: “ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಿರಿ. ನಾನು ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿ ಅಲ್ಲಿಂದ ಹೊರಗೆ ತಂದೆನು.
9 ನಾನು ನಿಮ್ಮನ್ನು ಬಲಶಾಲಿಗಳಾದ ಈಜಿಪ್ಟಿನ ಜನರಿಂದ ರಕ್ಷಿಸಿದೆ. ತರುವಾಯ ಕಾನಾನ್ಯರು ನಿಮ್ಮನ್ನು ಪೀಡಿಸಿದರು. ಆಗ ಮತ್ತೊಮ್ಮೆ ನಾನು ನಿಮ್ಮನ್ನು ರಕ್ಷಿಸಿದೆ. ನಾನು ಅವರನ್ನು ಅವರ ಪ್ರದೇಶದಿಂದ ಓಡಿಸಿ ಅದನ್ನು ನಿಮಗೆ ಕೊಟ್ಟೆ’
10 ಆಗ ನಾನು ನಿಮಗೆ, ‘ಯೆಹೋವನಾದ ನಾನೇ ನಿಮ್ಮ ದೇವರು! ಅಮೋರಿಯರ ಪ್ರದೇಶದಲ್ಲಿದ್ದರೂ ಅವರ ಸುಳ್ಳುದೇವರುಗಳನ್ನು ನೀವು ಪೂಜಿಸಕೂಡದು ಎಂದು ಹೇಳಿದ್ದೆ.’ ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ.” [*ವಚನಗಳು 7-10 ಈ ವಚನಗಳು ಅತಿ ಪ್ರಾಚೀನವಾದ ಹೀಬ್ರೂ ಗ್ರಂಥದಲ್ಲ್ಲಿ ಸಿಕ್ಕುವುದಿಲ್ಲ.]
11 ಆ ಸಮಯದಲ್ಲಿ ಯೆಹೋವನ ದೂತನು ಗಿದ್ಯೋನ ಎಂಬ ವ್ಯಕ್ತಿಯ ಬಳಿಗೆ ಬಂದನು. ಯೆಹೋವನ ದೂತನು ಒಫ್ರ ಎಂಬ ಊರಲ್ಲಿ ಏಲಾ ವೃಕ್ಷದ ಕೆಳಗೆ ಕುಳಿತುಕೊಂಡನು. ಆ ಗಿಡವು ಅಬೀಯೆಜೆರನ ಗೋತ್ರದವನಾದ ಯೋವಾಷನದಾಗಿತ್ತು. ಯೋವಾಷನು ಗಿದ್ಯೋನನ ತಂದೆ. ಗಿದ್ಯೋನನು ದ್ರಾಕ್ಷಿಯ ಆಲೆಯ ಮರೆಯಲ್ಲಿ ಗೋಧಿಯನ್ನು ಬಡಿಯುತ್ತಿದ್ದನು. ಯೆಹೋವನ ದೂತನು ಗಿದ್ಯೋನನ ಹತ್ತಿರ ಕುಳಿತುಕೊಂಡನು. ಮಿದ್ಯಾನ್ಯರಿಗೆ ಗೋಧಿ ಕಾಣಬಾರದೆಂದು ಗಿದ್ಯೋನನು ಮರೆಯಾಗಿದ್ದನು.
12 ಯೆಹೋವನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾಗಿ, “ಪರಾಕ್ರಮಶಾಲಿಯೇ, ಯೆಹೋವನು ನಿನ್ನ ಸಂಗಡ ಇದ್ದಾನೆ” ಎಂದು ಹೇಳಿದನು.
13 ಆಗ ಗಿದ್ಯೋನನು, “ಸ್ವಾಮೀ, ಯೆಹೋವನು ನಮ್ಮ ಸಂಗಡವಿದ್ದರೆ ನಮಗೆ ಇಷ್ಟೊಂದು ಕಷ್ಟಗಳೇಕೆ ಬರುತ್ತವೆ? ನಮ್ಮ ಪೂರ್ವಿಕರಿಗಾಗಿ ಆತನು ಬಹಳಷ್ಟು ಅದ್ಭುತಕಾರ್ಯಗಳನ್ನು ಮಾಡಿದ್ದನೆಂದು ನಾವು ಕೇಳಿದ್ದೇವೆ. ಆತನು ಅವರನ್ನು ಈಜಿಪ್ಟಿನಿಂದ ಹೊರಗೆ ಕರೆತಂದನೆಂದು ನಮ್ಮ ಪೂರ್ವಿಕರು ನಮಗೆ ಹೇಳಿದರು. ಆದರೆ ಈಗ ಯೆಹೋವನು ನಮ್ಮ ಕೈಬಿಟ್ಟಿದ್ದಾನೆ; ಮಿದ್ಯಾನ್ಯರು ನಮ್ಮನ್ನು ಸೋಲಿಸುವಂತೆ ಮಾಡಿದ್ದಾನೆ” ಎಂದು ಹೇಳಿದನು.
14 ಯೆಹೋವನು ಗಿದ್ಯೋನನ ಕಡೆಗೆ ತಿರುಗಿ, “ನಿನ್ನ ಬಲವನ್ನು ಉಪಯೋಗಿಸು. ಹೋಗು, ಮಿದ್ಯಾನ್ಯರಿಂದ ಇಸ್ರೇಲರನ್ನು ರಕ್ಷಿಸು. ನಾನು ಅವರನ್ನು ರಕ್ಷಿಸುವುದಕ್ಕಾಗಿ ನಿನ್ನನ್ನು ಕಳುಹಿಸುತ್ತಿದ್ದೇನೆ” ಅಂದನು.
15 ಅದಕ್ಕೆ ಗಿದ್ಯೋನನು, “ಸ್ವಾಮೀ, ಮನಸ್ಸೆ ಕುಲದಲ್ಲಿ ನನ್ನ ಕುಟುಂಬವು ಕೇವಲ ಅಲ್ಪವಾದದ್ದು. ನನ್ನ ಕುಟುಂಬದಲ್ಲಿ ನಾನು ಎಲ್ಲರಿಗಿಂತ ಚಿಕ್ಕವನು. ನಾನು ಇಸ್ರೇಲರನ್ನು ರಕ್ಷಿಸಲು ಹೇಗೆ ಸಾಧ್ಯ?” ಎಂದು ಕೇಳಿದನು.
16 ಯೆಹೋವನು ಗಿದ್ಯೋನನಿಗೆ, “ನಾನು ನಿನ್ನ ಸಂಗಡವಿದ್ದೇನೆ! ಆದ್ದರಿಂದ ನೀನು ಮಿದ್ಯಾನ್ಯರನ್ನು ಸೋಲಿಸುವೆ. ಕೇವಲ ಒಬ್ಬನೊಂದಿಗೆ ಯುದ್ಧ ಮಾಡುತ್ತಿರುವಿಯೋ ಎಂಬಂತೆ ನಿನಗೆ ಅನಿಸುತ್ತದೆ” ಎಂದು ಹೇಳಿದನು.
17 ಆಗ ಗಿದ್ಯೋನನು ಯೆಹೋವನಿಗೆ, “ನೀನು ನನಗೆ ಕೃಪೆ ತೋರಿದರೆ, ನೀನು ನಿಜವಾಗಿಯೂ ಯೆಹೋವನು ಎಂಬುದಕ್ಕೆ ನನಗೆ ಒಂದು ಗುರುತನ್ನು ಕೊಡು.
18 ದಯವಿಟ್ಟು ಇಲ್ಲಿಯೇ ಇರು. ನಾನು ಬರುವವರೆಗೆ ಎಲ್ಲಿಗೂ ಹೋಗಬೇಡ. ನಾನು ನಿನಗೆ ಕಾಣಿಕೆಯನ್ನು ತಂದು ಅರ್ಪಿಸುವುದಕ್ಕೆ ಅವಕಾಶಕೊಡು” ಎಂದು ಪ್ರಾರ್ಥಿಸಿದನು. ಅದಕ್ಕೆ, ಆತನು, “ನೀನು ಬರುವವರೆಗೂ ನಾನು ಇರುತ್ತೇನೆ” ಎಂದು ಹೇಳಿದನು.
19 ಗಿದ್ಯೋನನು ಒಳಗೆ ಹೋಗಿ ಒಂದು ಆಡಿನ ಮರಿಯನ್ನು ಬೇಯಿಸಿದನು. ಅವನು ಸುಮಾರು ಇಪ್ಪತ್ತು ಸೇರಿನಷ್ಟು ಹಿಟ್ಟನ್ನು ತೆಗೆದುಕೊಂಡು ಹುಳಿಯಿಲ್ಲದ ರೊಟ್ಟಿಯನ್ನು ಮಾಡಿದನು. ತರುವಾಯ ಗಿದ್ಯೋನನು ಆ ಮಾಂಸವನ್ನು ಒಂದು ಬುಟ್ಟಿಯಲ್ಲಿಟ್ಟನು, ಮಾಂಸ ಬೇಯಿಸಿದ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿದನು. ಗಿದ್ಯೋನನು ಆ ಮಾಂಸವನ್ನೂ ಮಾಂಸ ಬೇಯಿಸಿದ ನೀರನ್ನೂ ಹುಳಿಯಿಲ್ಲದ ರೊಟ್ಟಿಯನ್ನೂ ತೆಗೆದುಕೊಂಡು ಬಂದನು. ಗಿದ್ಯೋನನು ಏಲಾ ಮರದ ಕೆಳಗೆ ಯೆಹೋವನಿಗೆ ಆಹಾರವನ್ನು ಕೊಟ್ಟನು.
20 ದೇವದೂತನು ಗಿದ್ಯೋನನಿಗೆ, “ಆ ಮಾಂಸವನ್ನೂ ಹುಳಿಯಿಲ್ಲದ ಆ ರೊಟ್ಟಿಯನ್ನೂ ಆ ಕಲ್ಲಿನ ಮೇಲೆ ಇಡು. ಆಮೇಲೆ ಆ ನೀರನ್ನು ಅದರ ಮೇಲೆ ಸುರಿ” ಎಂದನು. ದೇವದೂತನು ಹೇಳಿದಂತೆಯೇ ಗಿದ್ಯೋನನು ಮಾಡಿದನು.
21 ಯೆಹೋವನ ದೂತನ ಕೈಯಲ್ಲಿ ಒಂದು ಕೋಲಿತ್ತು. ಯೆಹೋವನ ದೂತನು ತನ್ನ ಕೋಲಿನ ತುದಿಯಿಂದ ಮಾಂಸವನ್ನು ಮತ್ತು ರೊಟ್ಟಿಯನ್ನು ಮುಟ್ಟಿದನು. ಆಗ ಆ ಕಲ್ಲಿನಿಂದ ಬೆಂಕಿಯ ಜ್ವಾಲೆಯು ಎದ್ದಿತು! ಮಾಂಸ ಮತ್ತು ರೊಟ್ಟಿ ಸಂಪೂರ್ಣವಾಗಿ ಸುಟ್ಟುಹೋದವು! ಆಮೇಲೆ ಯೆಹೋವನ ದೂತನು ಅದೃಶ್ಯನಾದನು.
22 ತಾನು ಈವರೆಗೆ ಮಾತಾಡುತ್ತಿದ್ದದ್ದು ಯೆಹೋವನ ದೂತನೊಡನೆ ಎಂಬುದು ಗಿದ್ಯೋನನಿಗೆ ಆಗ ಅರಿವಾಯಿತು. ಗಿದ್ಯೋನನು, “ಸರ್ವಶಕ್ತನಾದ ಯೆಹೋವನೇ, ನಿನ್ನ ದೂತನನ್ನು ಮುಖಾಮುಖಿಯಾಗಿ ಕಂಡೆನು” ಎಂದು ಕೂಗಿಕೊಂಡನು.
23 “ಶಾಂತನಾಗು, ಭಯಪಡಬೇಡ, ನೀನು ಸಾಯುವುದಿಲ್ಲ” ಎಂದು ಗಿದ್ಯೋನನಿಗೆ ಯೆಹೋವನು ಹೇಳಿದನು.
24 ಗಿದ್ಯೋನನು ಯೆಹೋವನ್ನು ಆರಾಧಿಸಲು ಆ ಸ್ಥಳದಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಿದನು. ಗಿದ್ಯೋನನು ಅದಕ್ಕೆ “ಯೆಹೋವನು ಶಾಂತಿಸ್ವರೂಪನು” ಎಂದು ಹೆಸರಿಟ್ಟನು. ಆ ಯಜ್ಞವೇದಿಕೆಯು ಇಂದಿಗೂ ಅಬೀಯೆಜೆರ್ ಗೋತ್ರದವರು ವಾಸಿಸುವ ಒಫ್ರದಲ್ಲಿದೆ.
25 ಅದೇ ರಾತ್ರಿ ಯೆಹೋವನು ಗಿದ್ಯೋನನೊಂದಿಗೆ ಮಾತನಾಡಿ, “ನಿನ್ನ ತಂದೆಯ ಹೋರಿಗಳಲ್ಲಿ ಒಂದು ಚಿಕ್ಕ ಹೋರಿಯನ್ನು ಮತ್ತು ಏಳು ವರ್ಷದ ಹೋರಿಯನ್ನು ತೆಗೆದುಕೊಂಡು ಹೋಗಿ ನಿನ್ನ ತಂದೆಯು ಸುಳ್ಳುದೇವರಾದ ಬಾಳನಿಗೆ ಕಟ್ಟಿರುವ ಯಜ್ಞವೇದಿಕೆಯನ್ನು ಕೆಡವಿಬಿಡು; ಅದರ ಬಳಿಯಲ್ಲಿರುವ ಅಶೇರ ಎಂಬ ವಿಗ್ರಹಸ್ತಂಭವನ್ನು ಕಡಿದುಹಾಕು.
26 ಬಳಿಕ ನಿಮ್ಮ ದೇವರಾದ ಯೆಹೋವನಿಗಾಗಿ ಸರಿಯಾದ ಯಜ್ಞವೇದಿಕೆಯನ್ನು ಈ ಗುಡ್ಡದ ಶಿಖರದಲ್ಲಿ ಕಟ್ಟಿಸು. ಆಮೇಲೆ ಆ ಎರಡನೆಯ ಹೋರಿಯನ್ನು ಈ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸು; ಅಶೇರಸ್ತಂಭದ ಕಟ್ಟಿಗೆಯನ್ನು ಈ ಸರ್ವಾಂಗಹೋಮಕ್ಕೆ ಉಪಯೋಗಿಸು” ಎಂದು ಹೇಳಿದನು.
27 ಗಿದ್ಯೋನನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ಕರೆದುಕೊಂಡು ಹೋಗಿ ಯೆಹೋವನು ಹೇಳಿದಂತೆಯೇ ಮಾಡಿದನು. ಆದರೆ ಅವನು ತನ್ನ ಕುಟುಂಬದವರಿಗೂ ನಗರ ನಿವಾಸಿಗಳಿಗೂ ಹೆದರಿಕೊಂಡಿದ್ದರಿಂದ ಅವನು ಅದನ್ನು ಹಗಲಿನಲ್ಲಿ ಮಾಡದೆ ರಾತ್ರಿಯಲ್ಲಿ ಮಾಡಿದನು.
28 ನಗರದ ಜನರು ಮರುದಿನ ಬೆಳಿಗ್ಗೆ ಎದ್ದಾಗ ಬಾಳನ ಯಜ್ಞವೇದಿಕೆಯು ಕೆಡವಲ್ಪಟ್ಟಿರುವುದನ್ನೂ ಅಶೇರಸ್ತಂಭವು ಕಡಿದು ಹಾಕಲ್ಪಟ್ಟಿರುವುದನ್ನೂ ನೋಡಿದರು. ಅಶೇರಸ್ತಂಭವು ಬಾಳನ ಯಜ್ಞವೇದಿಕೆಯ ಪಕ್ಕದಲ್ಲಿತ್ತು. ಗಿದ್ಯೋನನು ಕಟ್ಟಿದ್ದ ಯಜ್ಞವೇದಿಕೆಯನ್ನು ಸಹ ಅವರು ನೋಡಿದರು. ಯಜ್ಞವೇದಿಕೆಯ ಮೇಲೆ ಎರಡನೆಯ ಹೋರಿಯನ್ನು ಸರ್ವಾಂಗಹೋಮವಾಗಿ ಅರ್ಪಿಸಿರುವುದನ್ನೂ ಅವರು ನೋಡಿದರು.
29 ನಗರದ ಜನರು ಒಬ್ಬರಿಗೊಬ್ಬರು, “ನಮ್ಮ ಯಜ್ಞವೇದಿಕೆಯನ್ನು ಯಾರು ಕೆಡವಿದರು? ನಮ್ಮ ಅಶೇರಸ್ತಂಭವನ್ನು ಯಾರು ಕಡಿದುಹಾಕಿದರು? ಈ ಹೊಸ ಯಜ್ಞವೇದಿಕೆಯ ಮೇಲೆ ಈ ಹೋರಿಯನ್ನು ಯಾರು ಸರ್ವಾಂಗಹೋಮ ಮಾಡಿದರು?” ಎಂಬ ಹಲವಾರು ಪ್ರಶ್ನೆಗಳನ್ನು ಕೇಳಿ ಇದೆಲ್ಲವನ್ನು ಮಾಡಿದವರು ಯಾರೆಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು. “ಯೋವಾಷನ ಮಗನಾದ ಗಿದ್ಯೋನನು ಇದನ್ನೆಲ್ಲ ಮಾಡಿದನು” ಎಂದು ಯಾರೋ ಹೇಳಿದರು.
30 ನಗರದ ಜನರು ಯೋವಾಷನಲ್ಲಿಗೆ ಬಂದು ಯೋವಾಷನಿಗೆ, “ನೀನು ನಿನ್ನ ಮಗನನ್ನು ಹೊರಗೆ ಕರೆದುಕೊಂಡು ಬಾ. ಅವನು ಬಾಳನ ಯಜ್ಞವೇದಿಕೆಯನ್ನು ಕೆಡವಿದ್ದಾನೆ. ಆ ಯಜ್ಞವೇದಿಕೆಯ ಪಕ್ಕದಲ್ಲಿದ್ದ ಅಶೇರಸ್ತಂಭವನ್ನು ಕಡಿದುಹಾಕಿದ್ದಾನೆ. ಅವನನ್ನು ನಾವು ಕೊಂದು ಬಿಡುತ್ತೇವೆ” ಅಂದರು.
31 ತನ್ನ ಸುತ್ತಲೂ ನಿಂತಿದ್ದ ಜನರಿಗೆ ಯೋವಾಷನು, “ನೀವು ಬಾಳನ ಪಕ್ಷವನ್ನು ವಹಿಸುವಿರಾ? ನೀವು ಬಾಳನನ್ನು ರಕ್ಷಿಸುವಿರಾ? ಬಾಳನ ಪಕ್ಷದವರನ್ನು ಬೆಳಗಾಗುವುದರೊಳಗೆ ಕೊಂದು ಬಿಡಲಾಗುವುದು. ಬಾಳನು ನಿಜವಾಗಿಯೂ ದೇವರಾಗಿದ್ದರೆ ಅವನ ಯಜ್ಞವೇದಿಕೆಯನ್ನು ಬೀಳಿಸುವಾಗ ಅವನು ತನ್ನ ರಕ್ಷಣೆಯನ್ನು ಏಕೆ ಮಾಡಿಕೊಳ್ಳಲಿಲ್ಲ?” ಅಂದನು.
32 ಯೋವಾಷನು, “ಗಿದ್ಯೋನನು ಬಾಳನ ಯಜ್ಞವೇದಿಕೆಯನ್ನು ಕೆಡವಿದ ಪಕ್ಷದಲ್ಲಿ ಬಾಳನು ಅವನೊಡನೆ ವಾದಿಸಲಿ” ಎಂದು ಹೇಳಿದನು. ಅಂದು ಯೋವಾಷನು ಗಿದ್ಯೋನನಿಗೆ ಯೆರುಬ್ಬಾಳ [†ಯೆರುಬ್ಬಾಳ ಇದು ಹೀಬ್ರೂ ಶಬ್ದಗಳಂತೆ ಇದೆ. ಇದರ ಅರ್ಥ “ಬಾಳನು ವಾದಿಸಲಿ” ಎಂದು, ಆ ಕ್ರಿಯಾಪದವನ್ನು “ಒಂದು ಪಕ್ಷ ವಹಿಸು” “ರಕ್ಷಿಸು” ಎಂದು ಅರ್ಥೈಸಲಾಗಿದೆ.] ಎಂಬ ಹೊಸ ಹೆಸರನ್ನು ಕೊಟ್ಟನು.
33 ಮಿದ್ಯಾನ್ಯರು, ಅಮಾಲೇಕ್ಯರು ಮತ್ತು ಪೂರ್ವ ದೇಶದ ಕೆಲವರು ಇಸ್ರೇಲರ ಮೇಲೆ ಯುದ್ಧಮಾಡಲು ಒಟ್ಟುಗೂಡಿದರು. ಅವರು ಜೋರ್ಡನ್ ನದಿಯನ್ನು ದಾಟಿಹೋಗಿ ಇಜ್ರೇಲಿನ ತಗ್ಗಿನಲ್ಲಿ ಪಾಳೆಯಮಾಡಿಕೊಂಡರು.
34 ಗಿದ್ಯೋನನ ಮೇಲೆ ಯೆಹೋವನ ಆತ್ಮವು ಬಂದಿತು; ಅವನಿಗೆ ಹೆಚ್ಚಿನ ಶಕ್ತಿಯನ್ನು ಕೊಟ್ಟಿತು. ಅಬೀಯೇಜೆರನ ಗೋತ್ರದವರನ್ನು ತನ್ನನ್ನು ಹಿಂಬಾಲಿಸಲು ಕರೆಯುವುದಕ್ಕಾಗಿ ಗಿದ್ಯೋನನು ತುತ್ತೂರಿಯನ್ನು ಊದಿದನು.
35 ಮನಸ್ಸೆ ಕುಲದ ಜನರೆಲ್ಲರನ್ನು ಕರೆಯುವುದಕ್ಕಾಗಿ ಗಿದ್ಯೋನನು ದೂತರನ್ನು ಕಳುಹಿಸಿದನು. ಆ ದೂತರು ಮನಸ್ಸೆ ಕುಲದ ಜನರಿಗೆ ತಮ್ಮ ಆಯುಧಗಳನ್ನು ತೆಗೆದುಕೊಂಡು ಯುದ್ಧಕ್ಕೆ ಸಿದ್ಧರಾಗಬೇಕೆಂದು ತಿಳಿಸಿದರು. ಗಿದ್ಯೋನನು ಆಶೇರ್, ಜೆಬುಲೂನ್ ಮತ್ತು ನಫ್ತಾಲಿ ಕುಲದವರ ಹತ್ತಿರವೂ ಸಹ ದೂತರನ್ನು ಕಳುಹಿಸಿದನು. ಆ ದೂತರು ಸಹ ಅದೇ ಸಂದೇಶವನ್ನು ತಿಳಿಸಿದರು. ಆದ್ದರಿಂದ ಆ ಕುಲಗಳವರು ಸಹ ಗಿದ್ಯೋನನನ್ನು ಮತ್ತು ಅವನ ಜನರನ್ನು ಸೇರಿಕೊಳ್ಳಲು ಹೋದರು.
36 ಆಗ ಗಿದ್ಯೋನನು ದೇವರಿಗೆ, “ಇಸ್ರೇಲಿನ ಜನರನ್ನು ರಕ್ಷಿಸಲು ನೀನು ನನಗೆ ಸಹಾಯ ಮಾಡುವುದಾಗಿ ಹೇಳಿರುವೆ. ಅದಕ್ಕೆ ಸಾಕ್ಷ್ಯವನ್ನು ಈಗ ಒದಗಿಸು.
37 ನಾನು ಕಣದಲ್ಲಿ ಕುರಿಯ ತುಪ್ಪಟವನ್ನು ಹಾಸುತ್ತೇನೆ. ನೆಲವೆಲ್ಲ ಒಣಗಿದ್ದು ಕೇವಲ ಕುರಿಯ ತುಪ್ಪಟದ ಮೇಲೆ ಇಬ್ಬನಿ ಬಿದ್ದರೆ, ನೀನು ಹೇಳಿದಂತೆಯೇ ಇಸ್ರೇಲನ್ನು ರಕ್ಷಿಸಲು ನನ್ನನ್ನು ಬಳಸುವೆ ಎಂದು ಅರಿತುಕೊಳ್ಳುವೆ” ಅಂದನು.
38 ಹಾಗೆಯೇ ಆಯಿತು. ಗಿದ್ಯೋನನು ಮರುದಿನ ಬೆಳಿಗ್ಗೆ ಬೇಗ ಎದ್ದು ಕುರಿಯ ತುಪ್ಪಟವನ್ನು ಹಿಂಡಿದನು. ಆ ಕುರಿಯ ತುಪ್ಪಟದಿಂದ ಒಂದು ಬಟ್ಟಲು ತುಂಬ ನೀರು ಬಂದಿತು.
39 ಆಗ ಗಿದ್ಯೋನನು ದೇವರಿಗೆ, “ನನ್ನ ಮೇಲೆ ಕೋಪಿಸಿಕೊಳ್ಳಬೇಡ. ನಾನು ಇನ್ನೊಂದು ಸಾಕ್ಷ್ಯವನ್ನು ಕೇಳುತ್ತೇನೆ. ಇನ್ನೊಂದು ಸಲ ಕುರಿಯ ತುಪ್ಪಟದಿಂದ ನಿನ್ನನ್ನು ಪರೀಕ್ಷಿಸುತ್ತೇನೆ. ಈ ಸಲ, ಸುತ್ತಮುತ್ತಲಿನ ಭೂಮಿಯ ಮಂಜಿನಿಂದ ಹಸಿಯಾಗಿ, ಕುರಿಯ ತುಪ್ಪಟ ಮಾತ್ರ ಒಣಗಿರಲಿ” ಎಂದು ಪ್ರಾರ್ಥಿಸಿದನು.
40 ಆ ರಾತ್ರಿ ದೇವರು ಹಾಗೆಯೇ ಮಾಡಿದನು. ಕೇವಲ ಕುರಿಯ ತುಪ್ಪಟ ಮಾತ್ರ ಒಣಗಿದಂತಿದ್ದು ಸುತ್ತಲಿರುವ ನೆಲವೆಲ್ಲಾ ಮಂಜಿನ ನೀರಿನಿಂದ ಹಸಿಯಾಗಿತ್ತು.
×

Alert

×